ಉಜಿರೆ: ಇತ್ತೀಚಿನ ದಿನಮಾನಗಳಲ್ಲಿ ಮಾನವ ಸಂಘರ್ಷಕ್ಕೆ ಸಾಹಿತ್ಯ ಅಧ್ಯಯನವು ಮದ್ದಾಗಿ ಕಾರ್ಯನಿರ್ವಹಿಸಬಲ್ಲದು ಎಂದು ಮೂಡುಬಿದಿರೆಯ ಎಕ್ಸಲೆಂಟ್ ಪಿ.ಯು. ಕಾಲೇಜಿನ ಭಾಷಾ ವಿಭಾಗದ ಮುಖ್ಯಸ್ಥ ವಿಕ್ರಂ ನಾಯಕ್ ಅಭಿಪ್ರಾಯಪಟ್ಟರು.
ಅವರು ಉಜಿರೆಯ ಎಸ್.ಡಿ.ಎಂ. ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ವತಿಯಿಂದ ಆಯೋಜಿಸಲಾಗಿದ್ದ ಸಾಹಿತ್ಯ ಸಂಘಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.
ಸಾಹಿತ್ಯ ಕ್ಷೇತ್ರವು ಸದಾ ವೈವಿಧ್ಯತೆಯ ಆಗರವಾಗಿದ್ದು, ಓದುಗರಲ್ಲಿ ವಿಮರ್ಶಾ ಭಾವವನ್ನು ಜಾಗೃತಗೊಳಿಸುತ್ತದೆ. ಇಂಗ್ಲಿಷ್ ಸಾಹಿತ್ಯವಂತೂ ತನ್ನ ಒಡಲಲ್ಲಿ ಅಪಾರವಾದ ಜ್ಞಾನಭಂಡಾರವನ್ನು ಅಡಕವಾಗಿರಿಸಿಕೊಂಡಿದೆ. ಅದರ ಸದುಪಯೋಗವನ್ನು ಪ್ರತಿಯೋರ್ವ ನಾಗರಿಕನೂ ಪಡೆದುಕೊಳ್ಳಬೇಕು ಎಂದು ಹೇಳಿದರು.
ಉದ್ಘಾಟನೆ ನೆರವೇರಿಸಿದ ಉಜಿರೆ ಎಸ್.ಡಿ.ಎಂ. ಪದವಿ ಕಾಲೇಜಿನ ಇಂಗ್ಲಿಷ್ ವಿಭಾಗ ಮುಖ್ಯಸ್ಥ ಪ್ರೊ. ಗಜಾನನ ಆರ್. ಭಟ್ ವಿಭಾಗದ ಭಿತ್ತಿಪತ್ರಿಕೆ ಬಿಡುಗಡೆಗೊಳಿಸಿದರು. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳ ಸಮ್ಮಿಲನದಲ್ಲಿ ಜರಗಿದ ಕಾರ್ಯಕ್ರಮದಲ್ಲಿ, ಸಂಘದ ಕಾರ್ಯನೀತಿಗಳಿಗೆ ಬದ್ಧರಾಗಿರುತ್ತೇವೆಂದು ವಿದ್ಯಾರ್ಥಿಗಳು ಪ್ರಮಾಣಗೈದರು.
ಸ್ನಾತಕೋತ್ತರ ಕೇಂದ್ರದ ಇಂಗ್ಲಿಷ್ ವಿಭಾಗದ ಮುಖ್ಯಸ್ಥರಾದ ಡಾ. ಮಂಜುಶ್ರೀ ಆರ್. ಮತ್ತು ಸಹಾಯಕ ಪ್ರಾಧ್ಯಾಪಕ ಪ್ರೊ. ವಿಘ್ನೇಶ್ ಐತಾಳ್ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅದಿರಾ ಅನಿಲ್ ಕಾರ್ಯಕ್ರಮ ನಿರೂಪಿಸಿದರು. ಸೆಸಿಲ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ