ಸಾರ್ವಜನಿಕರಲ್ಲಿ ರಕ್ತದಾನ ಕುರಿತು ಜಾಗೃತಿಯ ಅಗತ್ಯವಿದೆ: ಡಾ. ರಾಮೇಗೌಡ ಎಂ

Upayuktha
0



ಮಂಗಳೂರು: ವಿದ್ಯಾರ್ಥಿಗಳಲ್ಲಿ ರಕ್ತದಾನದ ಕುರಿತು ಜಾಗೃತಿ ಇದೆ. ಆದರೆ ಸಾರ್ವಜನಿಕರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕವಾಗಿದೆ. ಈ ನಿಟ್ಟಿನಲ್ಲಿ ಯುವ ರೆಡ್ ಕ್ರಾಸ್ ತನ್ನ ಕಾರ್ಯಕ್ರಮಗಳನ್ನು ರೂಪಿಸಬಹುದು, ಎಂದು ಕಾಲೇಜು ಶಿಕ್ಷಣ ಇಲಾಖೆಯ (ಮಂಗಳೂರು) ಜಂಟಿ ನಿರ್ದೇಶಕ ಡಾ. ರಾಮೇಗೌಡ ಎಂ. ಹೇಳಿದರು.



ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಮಂಗಳೂರು ಮತ್ತು ಕೊಡಗು ವಲಯಗಳ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಲಾಗಿದ್ದ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿಗಳಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 



ಮುಖ್ಯ ಅತಿಥಿ, ಭಾರತೀಯ ರೆಡ್ ಕ್ರಾಸ್ನ ದ.ಕ ಜಿಲ್ಲಾಧ್ಯಕ್ಷ ಸಿ.ಎ. ಶಾಂತರಾಮ್ ಶೆಟ್ಟಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಮಾದಕ ಪದಾರ್ಥಗಳಿಗಿಂತಲೂ ಹೆಚ್ಚಾಗಿ ಮೊಬೈಲ್ ಅಪಾಯಕಾರಿಯಾಗಿದೆ. ಈಗಿನ ಯುವಜನತೆ ಬೆಳಿಗ್ಗೆ ಮೊಬೈಲ್ ನೋಡಲು ಆರಂಭಿಸಿದರೆ ತಡರಾತ್ರಿಯವರೆಗೂ ಅದರೊಳಗೇ ಮುಳುಗಿರುತ್ತಾರೆ. ಹಾಗಾಗಿ ಅಂತಹ ಯುವ ಜನತೆಯನ್ನು ಸಮಾಜ ಸೇವಾ ಮನೋಭಾವನೆ ಅಥವಾ ರೆಡ್ ಕ್ರಾಸ್ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಳ್ಳುವುದರ ಮೂಲಕ ಸತ್ಪ್ರಜೆಗಳಾಗಿ ರೂಪಿಸಬಹುದು ಎಂದರು. ಸಚೇತ್ ಸುವರ್ಣ ರೆಡ್ ಕ್ರಾಸ್ ನ ಇತಿಹಾಸ, ಕಾರ್ಯಕ್ರಮ ಅಧಿಕಾರಿಗಳ ಪಾತ್ರ ಮತ್ತು ಜವಾಬ್ದಾರಿಯ ಬಗ್ಗೆ ಮಾತನಾಡಿದರೆ, ಡಾ. ಗಣಪತಿ ಗೌಡ ರೆಡ್ ಕ್ರಾಸ್ನ ಕಾರ್ಯನಿರ್ವಹಣೆ ಮತ್ತು ಅದರ ಪ್ರಾಮುಖ್ಯತೆಯನ್ನು ಮನದಟ್ಟು ಮಾಡಿದರು. 



ಉಡುಪಿ ಜಿಲ್ಲಾ ರೆಡ್ ಕ್ರಾಸ್ ಕಾರ್ಯದರ್ಶಿ ಡಾ. ಗಣನಾಥ್ ಶೆಟ್ಟಿ ಎಕ್ಕಾರ್ ಮಾತನಾಡಿ, ಮನುಷ್ಯನಾದವನು ಇನ್ನೊಬ್ಬ ಮನುಷ್ಯನ ಕಷ್ಟಕ್ಕೆ ಸ್ಪಂದಿಸುವ ಮನೋಭಾವ ಹೊಂದಿರಬೇಕು. ಈ ನಿಟ್ಟಿನಲ್ಲಿಯೇ ಯುವ ರೆಡ್ ಕ್ರಾಸ್ ಸ್ಥಾಪನೆಯಾಗಿದೆ, ಎಂದರು. ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಪ್ರಾಂಶುಪಾಲೆ ಡಾ. ಅನುಸೂಯ ರೈ, ಯುವ ರೆಡ್ ಕ್ರಾಸ್ ನ ಎಲ್ಲಾ ಕಾರ್ಯಕ್ರಮಗಳಿಗೆ ವಿಶ್ವವಿದ್ಯಾನಿಲಯ ಕಾಲೇಜು ವೇದಿಕೆಯಾಗಿರುವುದು ಸಂತಸದ ವಿಷಯ. ಕೊರೋನ ಸಮಯದಲ್ಲಿ ವ್ಯಾಕ್ಸಿನೇಷನ್, ರಕ್ತದಾನದ ಶಿಬಿರ ಮೊದಲಾದ ಹಲವು ಕಾರ್ಯಕ್ರಮಗಳು ಯಶಸ್ವಿಯಾಗಿದ್ದವು ಎಂದು ನೆನಪಿಸಿಕೊಂಡರು. 



ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಡಾ. ಗಾಯತ್ರಿ ಎನ್. ಸ್ವಾಗತಿಸಿದರು. ವಿವಿ ಕಾಲೇಜಿನ ಯುವ ರೆಡ್ ಕ್ರಾಸ್ ಕಾರ್ಯಕ್ರಮ ಅಧಿಕಾರಿ ಡಾ. ಭಾರತಿ ಪಿಲಾರ್ ನಿರೂಪಿಸಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಜಿಲ್ಲಾ ಘಟಕದ ಸಮಿತಿ ಸದಸ್ಯ ಸಚೇತ್ ಸುವರ್ಣ ವಂದಿಸಿದರು. ರೆಡ್ ಕ್ರಾಸ್ ಜಿಲ್ಲಾ ಕಾರ್ಯದರ್ಶಿ ಸಂಜಯ್ ಶೆಟ್ಟಿ, ಸದಸ್ಯ ಗುರುದತ್, ಮಂಗಳೂರು ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ನೋಡಲ್ ಅಧಿಕಾರಿಯಾಗಿದ್ದ ಡಾ. ಗಣಪತಿ ಗೌಡ ಮೊದಲಾದವರು ಉಪಸ್ಥಿತರಿದ್ದರು.


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top