ಕೆ.ಆರ್.ಪೇಟೆ: ಪ್ರತಿಯೊಬ್ಬ ಶಿಕ್ಷಕರು ಕೂಡ ನಾನು ಒಬ್ಬ ವಿದ್ಯಾರ್ಥಿ ಎಂದುಕೊಂಡರೆ ಮಾತ್ರ ಉತ್ತಮ ಶಿಕ್ಷಕರಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಹೆಚ್.ಕೆ.ಮಂಜುನಾಥ್ ಅಭಿಪ್ರಾಯಪಟ್ಟರು.
ಅವರು ಕೆ.ಆರ್.ಪೇಟೆ ತಾಲ್ಲೂಕಿನ ಕಸಬಾ ಹೋಬಳಿ ಮಾರ್ಗೋನಹಳ್ಳಿಯ ಶ್ರೀ ಮರಡಿಲಿಂಗೇಶ್ವರ ದೇವಸ್ಥಾನದ ಬಳಿ ಇರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆ ಮಾರ್ಗೋನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಗಣಿತ-ವಿಜ್ಞಾನ-ಸಮಾಜ ವಿಜ್ಞಾನ ವಿಷಯಗಳ ಸಮಾಲೋಚನಾ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಶಿಕ್ಷಕರು ತರಗತಿಗೆ ಹೋಗುವ ಮುಂಚೆ ಆ ದಿನದ ಪಾಠವನ್ನು ಚೆನ್ನಾಗಿ ಮನನ ಮಾಡಿಕೊಂಡ ನಂತರವೇ ತರಗತಿಗೆ ಹಾಜರಾಗಬೇಕು. ಇಲ್ಲದಿದ್ದರೆ ಉತ್ತಮ ಬೋಧನೆ ಮಾಡಲು ಸಾಧ್ಯವಾಗುವುದಿಲ್ಲ. ಸಮಾಲೋಚನೆಯ ಸಭೆಯ ಉದ್ದೇಶವೆಂದರೆ ತರಗತಿಯಲ್ಲಿ ಶಿಕ್ಷಕ ಪಾಠ ಮಾಡುವಾಗ ಹಲವಾರು ಸವಾಲುಗಳನ್ನು ಎದುರಿಸಬೇಕಿರುತ್ತದೆ. ಆ ಸಂದರ್ಭದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ಸೂಕ್ತ ತರಬೇತಿ ಪಡೆದು ವಿಷಯನ್ನು ಗ್ರಹಿಸಿದಾಗ ಕ್ಲಿಷ್ಟಕರವಾದ ವಿಷಯಗಳನ್ನು ಅರಿತು ಪರಿಪೂರ್ಣವಾಗಿ ಬೋಧನೆ ಮಾಡಲು ಸಹಕಾರಿಯಾಗುತ್ತದೆ. ತನ್ಮೂಲಕ ವಿದ್ಯಾರ್ಥಿಗಳಿಗೆ ಸಾಮಾಜಿಕ ನ್ಯಾಯವನ್ನು ಒದಗಿಸಬಹುದಾಗಿದೆ. ಪ್ರಸ್ತುತ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ನಿಯಮಗಳು ಬದಲಾಗಿದ್ದು, ಇಲಾಖೆಯ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ. ಮಕ್ಕಳನ್ನು ಇಂದಿನಿಂದಲೇ ಮಾನಸಿಕವಾಗಿ ಸದೃಢಗೊಳಿಸಬೇಕೆಂದು ಮನವಿ ಮಾಡಿದರು.
ತಾಲ್ಲೂಕು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್. ಯತೀಶ್ ಕಾರ್ಯಕ್ರಮ ಕುರಿತು ಮಾತನಾಡಿ ಶಿಕ್ಷಕರ ವೃತ್ತಿ ಅತ್ಯಂತ ಜವಾಬ್ದಾರಿಯುತ ಶ್ರೇಷ್ಠ ವೃತ್ತಿಯಾಗಿದೆ. ಕಾನೂನು, ನೀತಿ ನಿಯಮಗಳ ನಡುವೆ ಗುರುತರವಾದ ಸಾಮಾಜಿಕ ಜವಾಬ್ದಾರಿಯನ್ನು ಹೊರಬೇಕಾಗಿದೆ. ಒಂದು ಹೊತ್ತಿನ ಊಟ ಕೆಟ್ಟರೆ ದಿನ ಪೂರ್ತಿ ಕೇಡಾಗುತ್ತೆ. ಒಂದು ಬಾರಿಯ ಫಸಲು ಕೆಟ್ಟರೆ ಇಡೀ ವರ್ಷ ರೈತರ ಬದುಕು ಕೇಡು, ಹಾಗೆಯೇ ಒಬ್ಬ ವಿದ್ಯಾರ್ಥಿಯ ಶಿಕ್ಷಣ ಹಾಳಾದರೆ ಆತನ ಇಡೀ ಜೀವನ ನಷ್ಟವಾಗಲಿದೆ. ಆ ವಿದ್ಯಾರ್ಥಿಗಳ ಬದುಕನ್ನು ರೂಪಿಸಲು ನಮಗೆ ಒದಗಿ ಬಂದಿರುವ ಅವಕಾಶವನ್ನು ಪೂರ್ವ ಜನ್ಮದ ಪುಣ್ಯವೆಂದು ಭಾವಿಸಿ ದೇಶದ ಸತ್ಪ್ರಜೆಗಳನ್ನು ರೂಪಿಸಬೇಕೆಂದು ಮನವಿ ಮಾಡಿದರು.
ವಸತಿ ಶಾಲೆಯ ಪ್ರಾಂಶುಪಾಲ ಎಲ್. ಮಲ್ಲಿಕಾರ್ಜುನಸ್ವಾಮಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಂಡ್ಯ ಉಪ ನಿರ್ದೇಶಕರ ಕಛೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ನಂಜರಾಜು, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಸಿ.ಎನ್.ಯತೀಶ್, ಶಿಕ್ಷಣ ಸಂಯೋಜಕರಾದ ಡಿ.ಎಂ.ವೇಣುಗೋಪಾಲ್, ಜ್ಞಾನೇಶ್, ನೋಡಲ್ ಅಧಿಕಾರಿ ಕೆ.ಆರ್.ಮೋಹನ್, ಕ್ಷೇತ್ರ ಸಂಪನ್ಮೂಲ ವ್ಯಕ್ತಿ ಕೆ.ಪಿ.ಬೋರೇಗೌಡ, ಮುಖ್ಯ ಶಿಕ್ಷಕರ ಸಂಘದ ಕಾರ್ಯದರ್ಶಿ ಹೆಚ್.ಎಸ್.ಕೃಷ್ಣ, ಸಹ ಶಿಕ್ಷಕರ ಸಂಘದ ನಿರ್ದೇಶಕರಾದ ಸತೀಶ್‌ಚಂದ್ರ. ಹರೀಶ್, ಬಡ್ತಿ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಸುರೇಶ್, ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕ ಸಿ.ಎನ್. ಕುಮಾರ್, ವಿಷಯ ಸಂಪನ್ಮೂಲ ವ್ಯಕ್ತಿಗಳಾದ ಟಿ.ಎಂ.ದೇವರಾಜು, ಅಬ್ದುಲ್ ಹಮೀದ್, ಗಣೇಶ್ ಗಾಣಿಗರ್, ರವಿಕುಮಾರ್, ಚಲುವೇಗೌಡ ವೇದಿಕೆಯಲ್ಲಿದ್ದರು. ಶಾಲೆಯ ಹಿರಿಯ ಶಿಕ್ಷಕ ಹೆಚ್.ಮಹೇಶ್, ಬೋಧಕ ಹಾಗೂ ಬೋಧಕೇತರ ವರ್ಗದವರು ಹಾಜರಿದ್ದರು.
ವಸತಿ ಶಾಲೆಯ ಸಮಾಜ ವಿಜ್ಞಾನ ಶಿಕ್ಷಕ ಮನು ಪ್ರಾರ್ಥಿಸಿದರು. ಆಂಗ್ಲ ಭಾಷಾ ಶಿಕ್ಷಕ ಟಿ.ವೈ. ಅನಂತ ನರಸಿಂಹನ್ ಸ್ವಾಗತಿಸಿದರೆ ಶಾಲೆಯ ಸಾಂಸ್ಕೃತಿಕ ಸಮಿತಿ ಮುಖ್ಯಸ್ಥ ಡಾ.ಕೆ.ಎಸ್. ಚಂದ್ರು ಕಾಡುಮೆಣಸ ಕಾರ್ಯಕ್ರಮ ನಿರೂಪಿಸಿದರು.
ವರದಿ: ಶ್ರೀನಿವಾಸ್, ಕೆ.ಆರ್.ಪೇಟೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ