ಹಾಳು ಕೊಂಪೆಯಾಗಿರುವ ಕೆ.ಆರ್.ಪೇಟೆ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್

Upayuktha
0
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೂಲಭೂತ ಸೌಲಭ್ಯಗಳ ಕೊರತೆ
  • ಭಯದ ವಾತಾವರಣದಲ್ಲಿ ವ್ಯಾಸಂಗ ಮಾಡುವ ಅನಿವಾರ್ಯತೆ


ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೋಟ್ಯಾಂತರ ರೂಪಾಯಿ ವೆಚ್ಚದ ಭವ್ಯವಾದ ಕಟ್ಟಡವನ್ನು ಹೊಂದಿದ್ದರೂ, ಎಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆ ಮತ್ತು ಪಾಠಪ್ರವಚನಗಳಿಗೆ ಪೂರಕವಾದ ವಾತಾವರಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲದಿರುವುದರಿಂದ ಜ್ಞಾನದೇಗುಲವಾಗಿ ವಿದ್ಯಾರ್ಥಿಗಳ ಭವ್ಯ ಭವಿಷ್ಯಕ್ಕೆ ವರವಾಗಬೇಕಿದ್ದ ಕಾಲೇಜು ಹಾಳು ಕೊಂಪೆಯಾಗಿ ಬದಲಾಗಿದೆ.


ವಿಶೇಷ ವರದಿ: ಆರ್.ಶ್ರೀನಿವಾಸ್


ಕೆ.ಆರ್.ಪೇಟೆ: ಮೇಲೆಲ್ಲಾ ತಳುಕು ಒಳಗೆಲ್ಲಾ ಹುಳುಕು ಎಂಬ ಹಿರಿಯರ ಗಾದೆ ಮಾತಿನಂತೆ  ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೋಟ್ಯಾಂತರ ರೂಪಾಯಿ ವೆಚ್ಚದ ಭವ್ಯವಾದ ಕಟ್ಟಡವನ್ನು ಹೊಂದಿದ್ದರೂ, ಇಂಜಿನಿಯರಿಂಗ್ ವಿದ್ಯಾರ್ಥಿಗಳ ಕಲಿಕೆ ಮತ್ತು ಪಾಠಪ್ರವಚನಗಳಿಗೆ ಪೂರಕವಾದ ವಾತಾವರಣ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಹೊಂದಿಲ್ಲದಿರುವುದರಿಂದ ಭವಿಷ್ಯದ ಇಂಜಿನಿಯರುಗಳಾಗಿ ರೂಪುಗೊಳ್ಳಬೇಕಾದ ಪ್ರತಿಭೆಗಳು ಪ್ರವರ್ಧಮಾನಕ್ಕೆ ಬಂದು ಪ್ರಕಾಶಿಸುವ ಮೊದಲೇ ಬಾಡಿಹೋಗುತ್ತಿರುವುದು ವಿಪರ್ಯಾಸದ ಸಂಗತಿಯಾಗಿದೆ.


ಕಾಲೇಜು ಕಟ್ಟಡದ ನಿರ್ವಹಣೆ, ಜನರೇಟರ್, ಶೌಚಾಲಯ, ಕುಡಿಯುವ ನೀರಿನ ಸೌಲಭ್ಯ, ಸುಸಜ್ಜಿತವಾದ ಪ್ರಯೋಗಾಲಯ ಸೇರಿದಂತೆ ಯಾವುದೇ ಒಂದು ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲದ ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನ ಆಡಳಿತ ಮಂಡಳಿಯು ಇರುವ ವ್ಯವಸ್ಥೆಯೆಲ್ಲವನ್ನೂ ಹಾಳು ಮಾಡಿಕೊಂಡಿರುವುದರಿಂದ ಗ್ರಾಮೀಣ ಪ್ರತಿಭೆಗಳ ಶೈಕ್ಷಣಿಕ ವಿಕಾಸಕ್ಕೆ ವರದಾನವಾಗಬೇಕಿದ್ದ ಸರ್ಕಾರಿ ತಾಂತ್ರಿಕ ಕಾಲೇಜು ಕೇವಲ ಹೆಸರಿಗೆ ಮಾತ್ರ ಸರ್ಕಾರಿ ತಾಂತ್ರಿಕ ಕಾಲೇಜಾಗಿದ್ದು ಪ್ರಯೋಗಾಲಯ ಸೇರಿದಂತೆ ಪ್ರಾಕ್ಟಿಕಲ್ ತರಬೇತಿ ಹಾಗೂ ಪರೀಕ್ಷೆಗೆ ಮಂಡ್ಯದ ಪಿಎಎಸ್ ಎಂಜಿನಿಯರಿಂಗ್ ಕಾಲೇಜಿಗೆ ವಾರದಲ್ಲಿ ಎರಡು ದಿನಗಳ ಕಾಲ ಗಂಟುಮೂಟೆಯನ್ನು ಕಟ್ಟಿಕೊಂಡು ಅಲೆಯಬೇಕಾದ ಸಂದರ್ಭವು ನಿರ್ಮಾಣವಾಗಿದೆ. ರಾಜ್ಯ ವಿಧಾನಸಭಾಧ್ಯಕ್ಷ ಕೆ.ಆರ್.ಪೇಟೆ ಕೃಷ್ಣ ಅವರ ಕನಸಿನ ಕೂಸಾದ ತಾಂತ್ರಿಕ ಕಾಲೇಜು ವಿದ್ಯಾರ್ಥಿಗಳ ಪಾಲಿಗೆ ಶಾಫವಾಗಿ ಪರಿಣಮಿಸಿದೆ.


ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಆಡಳಿತ ಹಾಗೂ ನಿರ್ವಹಣೆಯ ಹೊಣೆ ಹೊತ್ತ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಸುತ್ತಲಿನ ಪರಿಸರ ಹಾಗೂ ಕಾಲೇಜಿನ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆಯನ್ನು ಎಷ್ಟರಮಟ್ಟಿಗೆ ಹದಗೆಡಿಸಿಟ್ಟಿಸಿದ್ದಾರೆಂದರೆ ಇದೊಂದು ಬೇಜಾವ್ದಾರಿ ನಿರ್ವಹಣೆಗೆ ಸಾಕ್ಷಿಯಾಗಿದೆ. ಕಾಲೇಜಿನ ಕಟ್ಟಡದ ಸುತ್ತಮುತ್ತಲಿನ ಪ್ರದೇಶದಲ್ಲಿ ಗಿಡ-ಗಂಟೆಗಳು ಬೆಳೆದುಕೊಂಡು ಗಬ್ಬೆದ್ದು ನಾರುತ್ತಿದ್ದರೂ ಸಹ ಕಾಲೇಜಿನ ಪ್ರಾಂಶುಪಾಲರಾಗಲಿ, ಅಧ್ಯಾಪಕ ವರ್ಗವಾಗಲಿ ಅಥವಾ ಸಿಬ್ಬಂಧಿಗಳಾಗಲೀ ಇತ್ತ ತಲೆ ಹಾಕಿಯೂ ಸಹ ನೋಡುತ್ತಿಲ್ಲ. ಕಾಲೇಜಿನ ಸುತ್ತಲೂ, ಕಸಕಡ್ಡಿಗಳು, ಮುಳ್ಳಿನ ಪೊದೆಗಳು ಹಾಗೂ ಗಿಡಗಂಟೆಗಳ ಅವಾಸಸ್ಥಾನದಿಂದಾಗಿ ಹಾವುಗಳು, ಕ್ರಿಮಿಕೀಟಗಳು, ಸೊಳ್ಳೆಗಳು ಹೆಚ್ಚಾಗಿದ್ದು ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ಪಾಠಪ್ರವಚನಗಳನ್ನು ಕಲಿಯಬೇಕಾದ ವಾತಾವರಣವು ನಿರ್ಮಾಣವಾಗಿದೆ. ಕಾಲೇಜು ನಿರ್ವಹಣೆಗೆ ಲಕ್ಷಾಂತರ ರೂಪಾಯಿ ಅನುದಾನವು ಬಂದರೂ ಸಹ ಕಾಲೇಜಿನ ಪರಿಸರವನ್ನು ಉತ್ತಮ ರೀತಿಯಲ್ಲಿ ಇಟ್ಟುಕೊಳ್ಳುವಲ್ಲಿ ಪ್ರಾಂಶುಪಾಲರು ಸಂಪೂರ್ಣವಾಗಿ ವಿಫಲರಾಗಿದ್ದಾರೆ.


ಕಾಲೇಜಿನ ಶೌಚಾಲಯದಲ್ಲಿ ಪೈಪ್‌ಲೈನ್ ಒಡೆದು ಸೋರಿ ಇಡೀ ಕಟ್ಟಡವು ಹಾಳಾಗುತ್ತಿದ್ದರೂ ಅದನ್ನು ರೀಪೇರಿ ಮಾಡಿಸುವ ಗೋಜಿಗೆ ಯಾರೂ ಹೋಗಿಲ್ಲ. ಇನ್ನು ಕಾಲೇಜು ವಿದ್ಯಾರ್ಥಿಗಳಿಗೆ ಕುಡಿಯುವ ನೀರಿನ ಸೌಲಭ್ಯ ಗಗನ ಕುಸುಮವಾಗಿದೆ. ನೀರು ಶುದ್ಧೀಕರಣ ಮಾಡುವ ಯಂತ್ರವು ಕೆಟ್ಟುಹೋಗಿ ವರ್ಷಗಳು ಉರುಳಿದರೂ ಸಹ ಅತ್ತ ತಿರುಗಿಯೋ ನೋಡಿಲ್ಲ ಎಂಬುದಕ್ಕೆ ಅದನ್ನು ನೋಡಿದರೆ ಸಾಕು ತಿಳಿಯುತ್ತದೆ. ಇನ್ನು ಹೆಣ್ಣುಮಕ್ಕಳು ಮತ್ತು ಗಂಡು ಮಕ್ಕಳಿಗೆ ನಿರ್ಮಿಸಿರುವ ಶೌಚಾಲಯವಂತೂ ಕೆಟ್ಟ ಕೆರಹಿಡಿದಿದೆ. ಬಡವರು ಮಕ್ಕಳು ಸರಕಾರಿ ಕಾಲೇಜನಲ್ಲಿ ಇಂತಹ ಅವ್ಯವಸ್ಥೆ ಯಲ್ಲಿ ಓದಬೇಕಾಗಿದೆ. ಶೌಚಾಲಯವು ನೀರಿನ ಸಂಪರ್ಕವಿಲ್ಲದೇ ಗಬ್ಬೆದ್ದು ನಾರುತ್ತಿದೆ. ಕಾಲೇಜಿನ ಕಿಟಕಿ ಬಾಗಿಲುಗಳು ಮುರಿದು ಬಿದ್ದಿದ್ದು, ನೇತ್ತಾಡುತ್ತಿದ್ದರೂ ಸಹ ಇದಕ್ಕೆ ಯಾರೂ ಗಮನ ಹರಿಸದಿರುವುದನ್ನು ನೋಡಿದರೆ ಸರಕಾರಿ ಕೆಲಸ ಎಂದರೆ ಎಷ್ಟು ಉಡಾಫೆ ತೋರಿಸುತ್ತಾರೆ ಎಂದು ನಾಗರಿಕರು ದೂರಿದ್ದಾರೆ.


ಕಾಲೇಜು ಆವರಣದಲ್ಲಿರುವ ೨ಹೈಮಾಸ್ಟ್ ದೀಪಗಳು ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಸೋಡಿಯಂ ಲೈಟ್‌ಗಳು ಕೆಟ್ಟುನಿಂತಿದ್ದು ಇಂದು ದಿನೂ ಸಹ ಸರಿಯಾಗಿ ಉರಿಯುತ್ತಿಲ್ಲ. ಕಾಲೇಜಿನ ಮುಂಭಾಗದಲ್ಲಿರುವ ಜನರೇಟರ್ ಕೆಟ್ಟು ನಿಂತು ವರ್ಷಗಳು ಕಳೆಯುತ್ತಿದ್ದರೂ ಸಹ ಅದನ್ನು ರಿಪೇರಿ ಮಾಡಿಸುವ ಗೋಜಿಗೆ ಇದುವರೆಗೆ ಪ್ರಯತ್ನ ಮಾಡಿಲ್ಲ. ಇಂಜಿನಿಯರಿಂಗ್ ಕಾಲೇಜು ಕ್ಯಾಂಪಸ್ ಕೆ.ಆರ್. ಪೇಟೆ ಸಂತೆಯಾಗಿ ಬದಲಾಗಿದೆ. ದನಗಾಹಿಗಳು ಹಾಗೂ ಪುಂಡುಪೋಕರಿಗಳ ಆವಾಸ ಸ್ಥಾನವಾಗಿರುವ ಕಾಲೇಜಿನ ಆವರಣದಲ್ಲಿ ರಾತ್ರಿಯ ಸಮಯದಲ್ಲಿ ರಾಜಾರೋಷವಾಗಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದ್ದರೂ ಹೇಳುವವರು ಕೇಳುವವರು ಯಾರೂ ಇಲ್ಲದಂತಾಗಿದೆ.


ಕಾಲೇಜಿನಲ್ಲಿ ಎನ್‌ಎಸ್‌ಎಸ್ ಘಟಕ ಇದ್ದರೂ ಸಹ, ರಾಷ್ಟ್ರೀಯ ಸೇವಾ ಯೋಜನೆಯ ವಿದ್ಯಾರ್ಥಿಗಳನ್ನು ಬಳಸಿಕೊಂಡು ಶ್ರಮದಾನದ ಮೂಲಕ ಕಾಲೇಜಿನ ವಾತಾವರಣವನ್ನು ಸ್ವಚ್ಛಮಾಡಿಸುವ ಕೆಲಸಕ್ಕೆ ಕಾಲೇಜು ಆಡಳಿತ ಮಂಡಳಿಗೆ ಆಸಕ್ತಿಯೇ ಇಲ್ಲದಂತಾಗಿದೆ. ಕೂಡಲೇ ಈ ಬಗ್ಗೆ ಸೂಕ್ತ ರೀತಿಯಲ್ಲಿ ಕ್ರಮ ಕೈಗೊಳ್ಳುವಂತೆ ಪುರಸಭಾ ಸದಸ್ಯರಾದ ಕೆ.ಸಿ. ಮಂಜುನಾಥ್ ಸಂಬಂಧ ಪಟ್ಟವರನ್ನು ಆಗ್ರಹಿಸಿದ್ದಾರೆ.


ಸರ್ಕಾರಿ ಕಾಲೇಜಿನ ಕಟ್ಟಡದ ಕಥೆ ಒಂದಾದರೆ ಇದೇ ಕಾಲೇಜು ಕ್ಯಾಂಪಸ್‌ನಲ್ಲಿರುವ ಬಿಸಿಎಂ ವಿದ್ಯಾರ್ಥಿ ನಿಲಯದ ಕಟ್ಟಡದ್ದು ಬೇರೆಯೇ ಕಥೆಯಿದೆ. ಹಾಸ್ಟೆಲ್ ಕಟ್ಟಡದ ಸುತ್ತಲೂ ಗಿಡ ಗಂಟೆಗಳು, ಮುಳ್ಳಿನ ಗಿಡಗಳು ಬೆಳೆದು ನಿಂತಿದ್ದರೂ ಸಹ ಅವುಗಳನ್ನು ತೆರವುಗೊಳಿಸಲು ವಾರ್ಡನ್ ಆಗಲಿ ಅಧಿಕಾರಿಗಳಾಗಲೀ ಗಮನ ನೀಡಿಲ್ಲ.



ಹಾಸ್ಟೆಲ್‌ನಲ್ಲಿ ಇರುವ ವಿದ್ಯಾರ್ಥಿಗಳನ್ನು ಬಳಸಿಕೊಂಡು ಕಾಲೇಜು ಆವರಣವನ್ನು ಸ್ವಚ್ಛಗೊಳಿಸಬಹುದಾದರೂ ನಿಲಯಪಾಲಕರಿಗೆ

ಆಸಕ್ತಿಯೇ ಇಲ್ಲ. ಸರಕಾರಿ ಕೆಲಸ ಎಂದರೆ ಬೇಕಾಬಿಟ್ಟಿ ಆಗಿರುವುದರಿಂದ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ನಿರ್ಮಾಣ ಮಾಡಿದ ಹಾಸ್ಟೆಲ್‌ಗಳು ಹಾಳುಕೊಂಪೆ ಆಗಲಿದೆ. ಕೂಡಲೇ ಈ ಅವ್ಯವಸ್ಥೆ ಸರಿಪಡಿಸಲು ವಿದ್ಯಾರ್ಥಿಗಳ ಪೋಷಕರು ಆಗ್ರಹಿಸಿದ್ದಾರೆ.


ಅಭಿಪ್ರಾಯಗಳು: 

ಕೆ.ಆರ್.ಪೇಟೆ ಕೃಷ್ಣ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಕೆ.ಆರ್.ಪೇಟೆ ಪಟ್ಟಣದಲ್ಲಿರುವುದು ಗ್ರಾಮೀಣ ವಿದ್ಯಾರ್ಥಿಗಳ ಶೈಕ್ಷಣಿಕ ವಿಕಾಸಕ್ಕೆ ವರದಾನವಾಗಿದೆಯಾದರೂ ವಿದ್ಯಾರ್ಥಿಗಳಿಗೆ ಕನಿಷ್ಠ ಮೂಲಭೂತ ಸೌಲಭ್ಯಗಳು ದೊರೆಯುತ್ತಿಲ್ಲವೆನ್ನುವುದು ನನ್ನ ಗಮನಕ್ಕೆ ಬಂದಿದೆ. ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ವರದಿ ಸಲ್ಲಿಸಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತೇನೆ.

- ನಿಸರ್ಗಪ್ರಿಯ, ತಹಶೀಲ್ದಾರ್, ಕೆ.ಆರ್. ಪೇಟೆ.



ಕೆ.ಆರ್.ಪೇಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಅವಶ್ಯಕವಾಗಿ ಬೇಕಾಗಿರುವ ಪ್ರಯೋಗಾಲಯ, ಲ್ಯಾಬ್, ಕುಡಿಯುವ ನೀರು, ಶೌಚಾಲಯ, ವಿದ್ಯುತ್ ಸೇರಿದಂತೆ ಹಲವಾರು ಸಮಸ್ಯೆಗಳಿವೆ. ಜಿಲ್ಲಾ ಉಸ್ತುವಾರಿ ಸಚಿವರ ಮೂಲಕ ಉನ್ನತ ಶಿಕ್ಷಣ ಸಚಿವರ ಗಮನಕ್ಕೆ ತಂದು ಕಾಲೇಜಿಗೆ ಕಾಯಕಲ್ಪ ಕೊಡಿಸಲು ಮುಂದಾಗುತ್ತೇನೆ.

-ಶಾಸಕರು, ಕೆ.ಆರ್. ಪೇಟೆ ವಿಧಾನಸಭಾ ಕ್ಷೇತ್ರ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top