ಶ್ರೀಮನ್ಮಹಾವಿಷ್ಣುವಿನ ದಶಾವತಾರಗಳಲ್ಲಿ ವಾಮನಾವತಾರವೂ ಒಂದು. ಬಲಿಚಕ್ರವರ್ತಿಯನ್ನು ಮಟ್ಟ ಹಾಕಲು ಪುಟ್ಟ ಬ್ರಾಹ್ಮಣ ರೂಪದಲ್ಲಿ ಬಂದ ಶ್ರೀಮನ್ಮಹಾವಿಷ್ಣುವಿನ ಕಥೆಯನ್ನು ನಾವೆಲ್ಲರೂ ಕೇಳಿದ್ದೇವೆ. ಆದರೆ ಚಾತುರ್ಮಾಸಕ್ಕೂ ಇದಕ್ಕೂ ಏನು ಸಂಬಂಧ? ಖಂಡಿತವಾಗಿಯೂ ಬಲು ಹತ್ತಿರದ ಸಂಬಂಧವಿದೆ.
ಹಿರಣ್ಯಕಶ್ಯಪುವಿನ ಪುತ್ರ ಪ್ರಹ್ಲಾದ.ಪ್ರಹ್ಲಾದನ ಮಗ ವಿರೋಚನ ಮತ್ತು ವಿರೋಚನನ ಮಗನೇ ಈ ಬಲಿ ಚಕ್ರವರ್ತಿ. ಆದರೆ ತನ್ನ ಮುತ್ತಾತನಂತೆಯೇ ಈತನಲ್ಲೂ ರಜೋ ಪ್ರವೃತ್ತಿ ಹೆಚ್ಚಿತ್ತು. ಈತ ವಿಷ್ಣುವಿನ ಭಕ್ತನೂ ಹೌದು. ಅದೆಷ್ಟು ಭಕ್ತಿಯಿಂದ ವಿಷ್ಣುವನ್ನು ಪೂಜಿಸುತ್ತಿದ್ದನೋ ಅಷ್ಟೇ ಕ್ರೂರವಾಗಿ ಋಷಿಮುನಿಗಳನ್ನು ಸಾಧು ಸಂತರನ್ನು ಹಿಂಸಿಸುತ್ತಿದ್ದ. ಯಜ್ಞ ಯಾಗಾದಿಗಳಿಗೆ ತೊಂದರೆ ನೀಡುತ್ತಾ, ಋಷಿಮುನಿಗಳಿಗೆ ಗೋಳು ಹೊಯ್ದುಕೊಳ್ಳುತ್ತಾ, ಋಷಿ ಪತ್ನಿಯರನ್ನು ಪೀಡಿಸುತ್ತಿದ್ದ ಬಲಿ ಚಕ್ರವರ್ತಿ. ಆತನ ಉಪಟಳವನ್ನು ಸಹಿಸಲಾರದೆ ಎಲ್ಲ ಋಷಿಮುನಿಗಳು ಮತ್ತು ದೇವತೆಗಳು ಮಹಾವಿಷ್ಣುವಿನಲ್ಲಿ ಬಲಿಚಕ್ರವರ್ತಿಯಿಂದ ತಮ್ಮನ್ನು ರಕ್ಷಿಸಲು ಬೇಡಿಕೊಂಡರು.
ಇದೇ ಸಮಯದಲ್ಲಿ ಬಲಿಚಕ್ರವರ್ತಿಯು ಅಶ್ವಮೇಧ ಯಾಗವನ್ನು ಮಾಡಬೇಕೆಂಬ ಆಕಾಂಕ್ಷೆಯನ್ನು ಹೊಂದಿದ್ದು ಅದಕ್ಕೆ ಪೂರಕವಾಗಿ ಮಾಡುವ ದಾನದಲ್ಲಿ ಯಾರೇನೆ ಕೇಳಿದರು ಇಲ್ಲವೆನ್ನದೆ ದಾನ ಮಾಡುವುದಾಗಿ ಸಂಕಲ್ಪ ಮಾಡಿದನು. ಇದಕ್ಕೆ ಆತನ ಗುರುಗಳಾದ ಶುಕ್ರಾಚಾರ್ಯರ ಅಸಮ್ಮತಿ ಇದ್ದರೂ ಕೂಡ ಆತ ಅದನ್ನು ಪರಿಗಣಿಸಲಿಲ್ಲ.
ಬಲಿಚಕ್ರವರ್ತಿಯ ಈ ದಾನ ಪ್ರವೃತ್ತಿಯನ್ನು ಜಗತ್ತಿನ ಒಳಿತಿಗೆ ಬಳಸಿಕೊಳ್ಳಲು ಮತ್ತು ಬಲಿ ಚಕ್ರವರ್ತಿಯಿಂದ ಮುಕ್ತಿ ದೊರಕಿಸಿಕೊಳ್ಳಲು ಋಷಿಮುನಿಗಳು ಮತ್ತು ದೇವತೆಗಳು ಪುನಃ ಮಹಾ ವಿಷ್ಣುವಿನಲ್ಲಿ ಮೊರೆಯಿಟ್ಟರು. ಅಂದು ಪ್ರಾತಃಕಾಲದಲ್ಲಿ ದಾನಕ್ಕೆ ಚಿನ್ನ, ಬೆಳ್ಳಿ, ವರಹಗಳು, ದವಸ, ಧಾನ್ಯ ಹೀಗೆ ಸಕಲವನ್ನು ಅಣಿ ಮಾಡಿಕೊಂಡ ಬಲಿ ಚಕ್ರವರ್ತಿಯ ಬಳಿ ದಾನ ಪಡೆಯಲೆಂದೇ ಸಾಕಷ್ಟು ಜನರು ನೆರೆದಿದ್ದರು. ಆಗ ಶ್ರೀಮನ್ಮಹಾವಿಷ್ಣು ಪುಟ್ಟ ಬಾಲವಟುವಿನ ವೇಷದಲ್ಲಿ ದಾನ ಪಡೆಯಲು ಬಂದು ನಿಂತನು. ಆತನ ಸರದಿ ಬಂದಾಗ ಪುಟ್ಟ ಬಾಲಕನನ್ನು ಕಂಡು ಬಲಿ ಚಕ್ರವರ್ತಿಯು ಆತನಿಗೆ ಏನು ಬೇಕೆಂದು ಕೇಳಿದನು. ಅದಕ್ಕೋಸ್ಕರವಾಗಿ ಪುಟ್ಟ ಬಾಲಕ ನಾನೇನು ಕೇಳಿದರೂ ಕೊಡುವೆಯಾ? ಎಂದು ಮರು ಪ್ರಶ್ನಿಸಿದನು. ವಾಮನ ರೂಪಿಯ ಮಾತನ್ನು ಕೇಳಿ ನಸುನಗುತ್ತ "ಖಂಡಿತವಾಗಿಯೂ ನೀನು ಕೇಳಿದ್ದನ್ನು ಕೊಡುವೆ" ಎಂದು ಹೇಳಿದನು.
ಹಾಗಾದರೆ ನನ್ನ ಮೂರು ಪಾದಗಳನ್ನು ಇಡುವಷ್ಟು ಭೂಮಿಯನ್ನು ನನಗೆ ನೀನು ಕೊಡು ಎಂದು ವಾಮನ ರೂಪಿ ಹೇಳಿದನು. ಅಷ್ಟೇಯೇ? ಎಂದ ಬಲಿಚಕ್ರವರ್ತಿ ನೀನು ನಿಂತ ಸ್ಥಳದಿಂದ ನೀನು ಇಡುವ ಮೂರು ಹೆಜ್ಜೆ ಗಳಷ್ಟು ಜಾಗ ಖಂಡಿತವಾಗಿಯೂ ನಿನ್ನದು ಎಂದು ಹೇಳಿದನು. ಸರಿ ಅಂದ ವಾಮನನು ತನ್ನ ಮೊದಲ ಹೆಜ್ಜೆಯನ್ನು ಇಟ್ಟನು. ಅದೇನಾಶ್ಚರ್ಯ! ವಾಮನ ರೂಪಿ ಭಗವಂತನ ಪಾದ ಇಡೀ ಭೂಮಂಡಲವನ್ನು ಆವರಿಸಿಕೊಂಡಿತು. ಆಗಲೇ ಬಲಿಚಕ್ರವರ್ತಿಗೆ ಅರ್ಥವಾಯಿತು ಇದು ಮಹಾ ವಿಷ್ಣುವಿನ ಆಟವೆಂದು. ವಾಮನ ಬಲಿಚಕ್ರವರ್ತಿಯನ್ನು ಎರಡನೇ ಪಾದವನ್ನು ಎಲ್ಲಿಡಲಿ ಎಂದು ಕೇಳಿದಾಗ ಆಕಾಶದತ್ತ ಕೈ ತೋರಿದನು. ತನ್ನ ಎರಡನೇ ಹೆಜ್ಜೆಯನ್ನು ಆಕಾಶದತ್ತ ವಾಮನ ಇಡುತ್ತಲೇ ಇಡೀ ಆಗಸವನ್ನು ಆತನ ಕಾಲು ಆವರಿಸಿಕೊಂಡಿತು. ಆಕಾಶದೆಡೆ ಒಂದು ಕಾಲು ಭೂಮಿಯೆಡೆ ಮತ್ತೊಂದು ಕಾಲು ಇರಿಸಿದ ವಾಮನ ಮೂರ್ತಿ ಮೂರನೇ ಹೆಜ್ಜೆಯನ್ನು ಎಲ್ಲಿಡಲಿ ಎಂದು ಬಲಿ ಚಕ್ರವರ್ತಿಯನ್ನು ಪ್ರಶ್ನಿಸಿದ. ಕೈಮುಗಿದ ಬಲಿಚಕ್ರವರ್ತಿಯು ತನ್ನ ತಲೆಯ ಮೇಲೆ ಕಾಲಿಡಲು ಹೇಳಿದ. ಆಗ ತನ್ನ ಮೂರನೇ ಹೆಜ್ಜೆಯನ್ನು ಬಲಿ ಚಕ್ರವರ್ತಿಯ ತಲೆಯ ಮೇಲೆ ಇಟ್ಟ ವಾಮನ.... ತ್ರಿವಿಕ್ರಮನಾಗಿ ಬೆಳೆದ ಆತನ ಕಾಲಿನ ಭಾರಕ್ಕೆ ಬಲಿಚಕ್ರವರ್ತಿಯು ಭೂಮಿಯನ್ನು ಸೇರಿಕೊಂಡು ಪಾತಾಳಕ್ಕೆ ತುಳಿಯಲ್ಪಟ್ಟ.
ಎಷ್ಟೇ ಆಗಲಿ ಭಕ್ತಿಪ್ರಿಯ ಅಲ್ಲವೇ ನಮ್ಮ ವಿಷ್ಣು? ತನ್ನ ನಾಶ ಖಂಡಿತ ಎಂದು ಗೊತ್ತಿದ್ದರೂ ಬಲಿ ಚಕ್ರವರ್ತಿ ದಾನ ಮಾಡಿದ್ದುದನ್ನು ಕಂಡ ವಿಷ್ಣು ಸಂಪ್ರೀತನಾಗಿ ಆತನಿಗೆ ವರವನ್ನು ಕೋರಿಕೊಳ್ಳಲು ಹೇಳಿದ. ಅದಕ್ಕೆ ಉತ್ತರವಾಗಿ ಬಲಿಚಕ್ರವರ್ತಿ ಶ್ರೀಮನ್ಮಹಾವಿಷ್ಣುವನ್ನು ಪಾತಾಳದಲ್ಲಿಯೇ ತನ್ನೊಂದಿಗೆ ನೆಲೆಸುವಂತೆ ಕೇಳಿಕೊಂಡನು. ಒಪ್ಪಿದ ಮಾಧವ ಪಾತಾಳದಲ್ಲಿ ಬಲಿಯಿಂದ ಪೂಜೆ ಪುನಸ್ಕಾರಗಳನ್ನು ಪಡೆಯುತ್ತಾ ಹಾಯಾಗಿ ಅಲ್ಲಿಯೇ ಉಳಿದುಕೊಂಡನು.
ಇತ್ತ ವೈಕುಂಠದಲ್ಲಿ ಪತಿ ಇಲ್ಲದೆ ದಿನ ಕಳೆಯಲು ಸಾಧ್ಯವಾಗದೆ ಹೋದ ಮಾತೆ ಮಹಾಲಕ್ಷ್ಮಿಯು ಪತಿಯನ್ನು ಹುಡುಕಿಕೊಂಡು ಎಲ್ಲೆಡೆ ಅಲೆದಳು. ಅಂತಿಮವಾಗಿ ಪಾತಾಳಕ್ಕೆ ಬಂದಳು. ಅಲ್ಲಿ ಮಹಾವಿಷ್ಣುವನ್ನು ಕಂಡು ಸಂತಸಗೊಂಡಳು. ಮಹಾವಿಷ್ಣುವಿಗೆ ವೈಕುಂಠಕ್ಕೆ ಮರಳುವಂತೆ ಕೇಳಿಕೊಂಡಳು. ಆದರೆ ವಿಷ್ಣು ಭಕ್ತಪರಾಧೀನನಲ್ಲವೇ! ಬಲಿಚಕ್ರವರ್ತಿಯ ಮಾತಿಗೆ ಕಟ್ಟು ಬಿದ್ದು ತಾನಿಲ್ಲೇ ಉಳಿದುಕೊಂಡಿರುವುದಾಗಿ ಹೇಳಿದನು. ಆಗ ಮಹಾಲಕ್ಷ್ಮಿಯು ಬಲಿಚಕ್ರವರ್ತಿಗೆ ತನ್ನ ಪತಿಯನ್ನು ತನಗೆ ಮರಳಿಸಲು ಕೋರಿಕೊಂಡಳು. ಬಲಿಚಕ್ರವರ್ತಿ ಮಾತೆ ಲಕ್ಷ್ಮಿಗೆ ಒಂದು ಷರತ್ತಿನ ಮೇಲೆ ಆಕೆಯ ಪತಿಯನ್ನು ಮರಳಿ ಕಳುಹಿಸಿಕೊಡಲು ಒಪ್ಪಿದ. ಆ ಶರತ್ತಿನ ಪ್ರಕಾರ ವರ್ಷದ ಮೂರನೇ ಎರಡು ಭಾಗ ಲಕ್ಷ್ಮಿಯ ಬಳಿಯೂ ಇನ್ನುಳಿದ ಒಂದು ಭಾಗ ಅಂದರೆ ವರ್ಷದ ಎಂಟು ಮಾಸಗಳು ಲಕ್ಷ್ಮಿಯೊಂದಿಗೆ ವೈಕುಂಠದಲ್ಲಿ ಮತ್ತು ಉಳಿದ ಒಂದು ಭಾಗ ಪಾತಾಳದಲ್ಲಿ ಬಲಿ ಚಕ್ರವರ್ತಿಯ ಬಳಿ ಇರಬೇಕು ಎಂಬುದು ಆ ಶರತ್ತಿನ ಒಂದು ಭಾಗ. ಈ ಸಮಯದಲ್ಲಿ ವಿಷ್ಣು ವೈಕುಂಠದಲ್ಲಿ ಮಾಯಾ ಯೋಗ ನಿದ್ರೆಯಲ್ಲಿ ಇರುತ್ತಾನೆ ಮತ್ತು ಪಾತಾಳದಲ್ಲಿ ಬಲಿಚಕ್ರವರ್ತಿಯ ಬಳಿ ಅಥವಾ ವಾಸವಾಗಿರುತ್ತಾನೆ ಎಂದು ಹೇಳಲಾಗುತ್ತದೆ. ಈ ಸಮಯವನ್ನು ಚಾತುರ್ಮಾಸ ಎಂದು ಆಚರಿಸುತ್ತಾರೆ.
ಈ ಚಾತುರ್ಮಾಸವನ್ನು ಮಳೆಗಾಲದ ನಾಲ್ಕು ತಿಂಗಳುಗಳಲ್ಲಿ ಆಚರಿಸುತ್ತಾರೆ.ಶ್ರಾವಣ, ಭಾದ್ರಪದ, ಆಶ್ವೀಜ ಮತ್ತು ಕಾರ್ತಿಕ ಮಾಸಗಳು ಈ ಚಾತುರ್ಮಾಸದ ಪರಿಧಿಯಲ್ಲಿ ಬರುತ್ತವೆ. ಸಾಮಾನ್ಯವಾಗಿ ವಾತಾವರಣವು ವಿಭಿನ್ನವಾಗಿದ್ದು ಮಳೆಗಾಲ ಎಂದರೆ ಸದಾ ಕೊಚ್ಚೆ ಕೆಸರಿನಲ್ಲಿ ಓಡಾಡುವಂತಹ ಕಾಲ. ಈ ಸಮಯದಲ್ಲಿ ಹೊರಗಿನ ವಾತಾವರಣ ಮತ್ತು ದೈಹಿಕ ತಾಪಮಾನದಲ್ಲಿ ಹೊಂದಾಣಿಕೆಯಾಗದ ಪಕ್ಷದಲ್ಲಿ ಜನರು ಅನಾರೋಗ್ಯಕ್ಕೆ ಈಡಾಗುತ್ತಾರೆ ಕ್ರಿಮಿ ಕೀಟಗಳು ಹೆಚ್ಚಾಗುವ ಈ ಸಮಯದಲ್ಲಿ ಕಾಲ್ಲಡಿಗೆಯಲ್ಲಿ ಪ್ರವಾಸ ಹೊರಡುವ ಯತಿಗಳಿಗೆ ತಮ್ಮ ಅಹಿಂಸಾಮಾರ್ಗವನ್ನು ತೊರೆಯುವ ಅನಿವಾರ್ಯತೆ ಉಂಟಾಗುತ್ತದೆ.
ದೈಹಿಕವಾಗಿಯೂ ಕೂಡ ನಮ್ಮ ನಮ್ಮ ಜೀಣಾರ್ಂಗ ವ್ಯವಸ್ಥೆ ಅನೇಕ ಬದಲಾವಣೆಗಳನ್ನು ಹೊಂದುತ್ತದೆ. ಹಸಿವೆ ಇಲ್ಲದಿರುವಿಕೆ, ಅಜೀರ್ಣ ಉಂಟಾಗುವ ಸಂಭವವಿರುವುದರಿಂದ ಈ ಸಮಯದಲ್ಲಿ ಸರಳ ಮತ್ತು ತಾಜಾ ಆಹಾರವನ್ನು ಸೇವಿಸುವ ಅವಶ್ಯಕತೆ ಇದೆ. ಈ ಸಮಯದಲ್ಲಿ ಜನರು ಬೆಲ್ಲ, ಹಾಲು ಮತ್ತು ಹಾಲಿನ ಉತ್ಪನ್ನಗಳು, ಅತಿಯಾದ ಮಸಾಲೆ ಪದಾರ್ಥಗಳ ಸೇವನೆ, ಹೂ ಕೋಸು ಮತ್ತು ಎಲೆ ಕೋಸುಗಳ ತರಕಾರಿಗಳು, ಸುಪಾರಿ, ಮಾಂಸ, ತಂಬಾಕು ಇತ್ಯಾದಿಗಳನ್ನು ತಿನ್ನುವುದನ್ನು ಧಾರ್ಮಿಕ ಕಾರಣಗಳಿಗಾಗಿ ತಮಗೆ ತಾವೇ ನಿಬರ್ಂಧ ಸೇರಿಕೊಳ್ಳುತ್ತಾರೆ. ಉಪವಾಸ ನಿರಾಹಾರಗಳು ಕೂಡ ದೇಹಕ್ಕೆ ರೋಗ ಬರದಂತೆ ತಡೆಯುವಲ್ಲಿ ತಮ್ಮ ಅಹರ್ನಿಶಿ ಪಾಲನ್ನು ಸಲ್ಲಿಸುತ್ತವೆ. ದೇಹವು ಅನಾರೋಗ್ಯದಿಂದ ಬಳಲದಿರಲು ಸಾತ್ವಿಕ ಆಹಾರ ಸೇವನೆ ಮಾಡುವ ಮೂಲಕ ನಮ್ಮ ದೇಹವನ್ನು ಶುದ್ಧಗೊಳಿಸಿಕೊಳ್ಳಬೇಕು ಎಂಬುದು ಈ ಚಾತುರ್ಮಾಸದ ಅತ್ಯಗತ್ಯತೆಗಳಲ್ಲಿ ಒಂದಾಗಿದೆ. ಅದು ಅಲ್ಲದೆ ಮಳೆಗಾಲದ ಸಮಯದಲ್ಲಿ ಸೂರ್ಯನ ಶಾಖ ದ ಪ್ರಖರತೆ ಕಡಿಮೆಯಾಗಿ ತಮ (ಮಂದ ಬೆಳಕು)ದ ಅಂಶವು ಹೆಚ್ಚಾಗುವುದರಿಂದ ಸಾತ್ವಿಕ ಆಹಾರವನ್ನು ಸೇವಿಸಿ ಸತ್ವ ಅಂಶವನ್ನು ಹೆಚ್ಚಾಗಿಸಿಕೊಳ್ಳಬೇಕು
ಮಳೆಗಾಲದ ಋತುವಿನಲ್ಲಿ, ಸೂರ್ಯನ ಬೆಳಕು ಕಡಿಮೆಯಾಗಿ ತಾಮಸಿಕ ಅಂಶವು ಹೆಚ್ಚಾಗುವುದರಿಂದ ಸೂರ್ಯನ ಬೆಳಕಿನ ಶಕ್ತಿಯುತ ಕಿರಣಗಳನ್ನು ಸ್ವೀಕರಿಸಲು ನಮಗೆ ಕಷ್ಟವಾಗುತ್ತದೆ, ಇದು ನಮ್ಮ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಹಾಗಾಗಿ ಆ ತಾಮಸ ಅಂಶವನ್ನು ನಿಯಂತ್ರಿಸಲು ಸಾತ್ವಿಕ ಆಹಾರವನ್ನು ಸೇವಿಸಿ ನಮ್ಮ ದೇಹವನ್ನು ಶುದ್ದ ಮಾಡಿಕೊಳ್ಳಬೇಕು. ಅದರಿಂದಾಗಿ ಸಾತ್ವಿಕ ಅಂಶವು ಹೆಚ್ಚಾಗುತ್ತದೆ ಮತ್ತು ಅದರಿಂದ ನಮ್ಮ ದೇಹವು ತಾಮಸಿಕ ಅಂಶವನ್ನು ನಿಯಂತ್ರಿಸಲು ಸಾಧ್ಯವಾಗುತ್ತದೆ.
ಶ್ರಾವಣ ಮಾಸದಿಂದ ಕಾರ್ತಿಕ ಮಾಸದವರೆಗಿನ ಈ ಸಮಯದಲ್ಲಿಯೇ ನಮ್ಮ ಎಲ್ಲಾ ಪ್ರಮುಖ ಹಬ್ಬಗಳು ಬರುತ್ತವೆ. ಶ್ರಾವಣದಲ್ಲಿಯಂತೂ ಸರಿಯೇ ಸರಿ ವರಮಹಾಲಕ್ಷ್ಮಿ ಹಬ್ಬ, ಮಂಗಳಗೌರಿ, ಶುಕ್ರಗೌರಿ, ನಾಗರ ಪಂಚಮಿ, ನೂಲ ಹುಣ್ಣಿಮೆಯ ರಕ್ಷಾ ಬಂಧನ, ಭಾದ್ರಪದ ಮಾಸದಲ್ಲಿ ಗಣೇಶ ಚತುರ್ಥಿ, ಅಶ್ವಿಜಮಾಸದಲ್ಲಿ ದಸರಾ, ಶೀಗಿ ಹುಣ್ಣಿಮೆ, ಕಾರ್ತಿಕ ಮಾಸದಲ್ಲಿ ದೀಪಾವಳಿ ಗೌರಿ ಹುಣ್ಣಿಮೆ ಹೀಗೆ ಹಬ್ಬಗಳ ಸಾಲು ಸಾಲುಗಳು ಬರುತ್ತವೆ. ಈ ಹಬ್ಬಗಳು ಸಾಮಾಜಿಕವಾಗಿ, ಸಾಂಸ್ಕøತಿಕವಾಗಿ, ಭಾವನಾತ್ಮಕವಾಗಿ, ಧಾರ್ಮಿಕವಾಗಿ ನಮ್ಮೆಲ್ಲರನ್ನು ಒಂದುಗೂಡಿಸುತ್ತವೆ. ಇದು ಕೂಡ ಚಾತುರ್ಮಾಸದ ಮಹತ್ವ.
ಹೀಗೆ ಧಾರ್ಮಿಕವಾಗಿ ಮತ್ತು ಸಾಮಾಜಿಕವಾಗಿ ಚಾತುರ್ಮಾಸದ ಅವಶ್ಯಕತೆ ನಮಗಿದೆ. ಸಂಪೂರ್ಣವಾಗಿ ಅಲ್ಲದಿದ್ದರೂ ಸ್ವಲ್ಪ ಮಟ್ಟಿಗಾದರೂ ಆರೋಗ್ಯದ ರಕ್ಷಣೆಗಾಗಿ ಚಾತುರ್ಮಾಸವನ್ನು ಪಾಲಿಸೋಣ.
- ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ, ಗದಗ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ