ಮಹಾತ್ಮ ಗಾಂಧೀಜಿಯವರು ರಾಷ್ಟ್ರೀಯತೆಯನ್ನು ವಿಶಾಲವಾದ ಭಾರತ ಭೂಮಿಯಲ್ಲಿ ಬಿತ್ತರಿಸಿದರು. ವಿವಿಧ ಜನರ ನಡುವೆ ಏಕತೆಯನ್ನು ಸೃಷ್ಟಿಸಿದರು. ಸಾಮಾನ್ಯ ಜನರೊಂದಿಗೆ ಬಲವಾದ ಸಂಬಂಧವನ್ನು ಮಾಡಿಕೊಂಡಿದ್ದರು. ಅಹಮದಾಬಾದ್‌ನ ವಿಶೇಷ ನ್ಯಾಯಾಲಯವು ಅವರ ಹೆಸರು, ವಿಳಾಸ ಮತ್ತು ಉದ್ಯೋಗ ಕೇಳಿದಾಗ ಅವರು ತುಂಬಾ ಸರಳವಾಗಿ ಹೇಳಿದರು. "ನಾನು ರೈತ ಮತ್ತು ನೇಕಾರ" ಎಂದು ಹೀಗೆ ಹೇಳುವ ಮೂಲಕ ಅವರು ಲಕ್ಷಾಂತರ ಶ್ರಮಿಕರ, ರೈತರ ಮತ್ತು ನೇಕಾರರ ಮನವನ್ನು ಗೆದ್ದರು.
ಅವರು ತುಂಬಾ ಸರಳವಾಗಿ ತಮ್ಮ ಜೀವನವನ್ನು ನಡೆಸುತ್ತಿದ್ದರು. ಅವರ ಸರಳ ಜೀವನ ಶೈಲಿಯಿಂದಾಗಿ ಅವರು ಜನ ಸಾಮಾನ್ಯರೊಂದಿಗೆ ಭಾಂದವ್ಯವನ್ನು ಹೊಂದಿದ್ದರು. ಶ್ರೀಮಂತ ಕುಟುಂಬಗಳಿಂದ ಬಂದ ಮತ್ತು ನಗರ ಜೀವನ ಶೈಲಿಯನ್ನು ಹೊಂದಿರುವ ಇತರ ರಾಜಕೀಯ ನಾಯಕರಂತಲ್ಲ ಗಾಂಧೀಜಿ. ಗಾಂಧೀಜಿ ಖಾದಿ ತೊಟ್ಟು, ಚರಕದಿಂದ ನೂಲು ತೆಗೆದು, ಹೊಲಗಳಲ್ಲಿ ತಮ್ಮ ಕೈಗಳನ್ನು ಮಣ್ಣಾಗಿಸಿವರು ಮತ್ತು ಸ್ವಚ್ಛಗೊಳಿಸಿವರು. ಅವರು ಶಬರಿಮತಿ ಸೇವಾ ಗ್ರಾಮದಲ್ಲಿನ ಆಶ್ರಮಗಳಲ್ಲಿ ಸಾರ್ವಜನಿಕ ಸಭೆಗಳಲ್ಲಿ ತಮ್ಮೊಂದಿಗೆ ವೇದಿಕೆ ಹಂಚಿಕೊಳ್ಳುತ್ತಿದ್ದ ಇತರೆ ರಾಜಕೀಯ ನಾಯಕರಿಗೆ ತಮ್ಮ ಮಾತೃಭಾಷೆಯಲ್ಲಿ ಭಾಷಣ ಮಾಡಬೇಕೆಂದು ಒತ್ತಾಯಿಸುತ್ತಿದ್ದರು. ಗಾಂಧೀಜಿ ಎಂದೂ ಕೂಡ ವಾಗ್ದಾಳಿ ನಡೆಸುತ್ತಿರಲಿಲ್ಲ ಆದರೆ ಅವರು ಸುಲಭವಾಗಿ ಅರ್ಥವಾಗುವ ಹಾಗೆ ಮಾತನಾಡುತ್ತಿದ್ದರು.
ಗಾಂಧೀಜಿಯವರು ಜನರಲ್ಲಿ ರಾಷ್ಟ್ರೀಯತೆಯ ಭಾವನೆಯನ್ನು ತುಂಬುತ್ತಿದ್ದರು. ಗಾಂಧೀಜಿಯವರ ಹೃದಯದಲ್ಲಿ ರಾಷ್ಟ್ರದ ಮೇಲೆ ಬಹಳ ಗೌರವ ಮತ್ತು ಪ್ರೀತಿ ಇತ್ತು. ಗಾಂಧೀಜಿಯವರು ಹರಿಜನ ಸೇವಾ ಸಂಘವನ್ನು ಸ್ಥಾಪಿಸಿದರು. ಅವರು ಎಲ್ಲಾ ಕೆಲಸದ ಉದ್ಯೋಗಿಗಳಿಗೆ ಪ್ರೋತ್ಸಾಹಿಸಿದರು. ಅವರ ಎಲ್ಲ ಚಟುವಟಿಕೆಗಳು ವೈವಿಧ್ಯಮಯ ಹಿನ್ನೆಲೆಯ ಜನರನ್ನು ಸಜ್ಜುಗೊಳಿಸುವ ಗುರಿಯನ್ನು ಹೊಂದಿತ್ತು. ರಾಷ್ಟ್ರೀಯ ಏಕತೆ ಮತ್ತು ಸ್ವಾತಂತ್ರ್ಯದ ಹೋರಾಟಕ್ಕಾಗಿ ಗಾಂಧೀಜಿ 1915 ರಲ್ಲಿ ಚೆನ್ನಾಗಿ ಯೋಚಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವ ಮೊದಲು ಒಂದು ವರ್ಷ ಪೂರ್ತಿ ದೇಶಾದ್ಯಂತ ಸಂಚರಿಸಿ ಸಾಮಾನ್ಯ ಜನರನ್ನು ಮತ್ತು ಮುಖಂಡರನ್ನು ಭೇಟಿಯಾಗಿ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡಿದ್ದರು. ಈ ಕಾರಣದಿಂದ ಅವರಿಗೆ ನೇತಾಜಿ ಸುಭಾಷ್ ಚಂದ್ರ ಬೋಸ್ ರವರು 1944 ರಲ್ಲಿ ರಾಷ್ಟ್ರಪಿತ ಎಂದು ಹೊಗಳಿದರು. ಹಾಗೂ ಅವರು ಪ್ರಭಾವಶಾಲಿ ವ್ಯಕ್ತಿ ಎಂದು ಕೂಡ ಹೊಗಳಿದ್ದಾರೆ.
ಗಾಂಧಿಯವರ ಕಾರ್ಯ ಸಾಧನೆಗಳಿಗೆ ಮತ್ತು ಅವರ ನಿರಂತರ ಸ್ವಾತಂತ್ರ ಹೋರಾಟದಲ್ಲಿ ಪಾಲ್ಗೊಳ್ಳುವಿಕೆಗೆ ಅವರಿಗೆ ರಾಷ್ಟ್ರಪಿತ ಎಂದು ಕೂಡ ಹೆಗ್ಗಳಿಕೆ ಇದೆ. ಗಾಂಧೀಜಿಯವರು ಯಾವುದೇ ತರಹದ ಹಿಂಸೆ- ಅಶಾಂತಿಯ ತತ್ವಗಳನ್ನು ಅನುಸರಿಸಿ ಸ್ವಾತಂತ್ರ್ಯಕ್ಕೆ ಹೋರಾಡಲಿಲ್ಲ. ಅದಲ್ಲದೆ ಗಾಂಧೀಜಿಯವರು ಸತ್ಯ- ಅಹಿಂಸೆ- ಶಾಂತಿಯಿಂದ ನಮ್ಮ ಭಾರತಕ್ಕೆ ಸ್ವಾತಂತ್ರ್ಯ ಲಭಿಸುವಂತೆ ಮಾಡಿದರು. ಸ್ವಾತಂತ್ರ್ಯಕ್ಕಾಗಿ ತಮ್ಮ ಜೊತೆ ಜನಸಾಮಾನ್ಯರನ್ನು ಸೇರಿಸಿಕೊಂಡು ಬ್ರಿಟಿಷರೊಂದಿಗೆ ಹೋರಾಡಿ ಅಂತ್ಯದಲ್ಲಿ 1947 ರಲ್ಲಿ ಭಾರತಕ್ಕೆ ಸ್ವಾತಂತ್ರ ದಕ್ಕಿಸಿದರು. ಹೀಗೆ ನಾವು ನಮ್ಮ ರಾಷ್ಟ್ರಪಿತರಾದ ಗಾಂಧೀಜಿಯವರನ್ನು ದಿನ ನಿತ್ಯ ಒಂದಲ್ಲ ಒಂದು ರೀತಿಯಲ್ಲಿ ಅವರ ತತ್ವಗಳನ್ನು ಅನುಸರಿಸುತಿದ್ದೇವೆ. ಗಾಂಧಿಜೀ ಎಂದಿಗೂ ನಮ್ಮ ಮನದಲ್ಲಿ ಉಳಿದಿರುತ್ತಾರೆ. ಅವರ ಸ್ಪೂರ್ತಿದಾಯಕ ಸಂದೇಶಗಳು ಎಂದಿಗೂ ಜೀವಂತವಾಗಿರುತ್ತದೆ. ಅವರ 155 ನೇ ಜನ್ಮ ದಿನದಂದು ರಾಷ್ಟ್ರಪಿತರಾದ ಮಹಾತ್ಮ ಗಾಂಧೀಜಿಯವರ ಸಂದೇಶಗಳನ್ನು ಅನುಸರಿಸೋಣ. ವಂದೇ ಮಾತರಂ. ಜೈ ಹಿಂದ್
-ಗೌಸ್ ಪೀರ್
ದ್ವಿತೀಯ ವರ್ಷದ ಬಿಎ ವಿದ್ಯಾರ್ಥಿ,
ಕಟೀಲ್ ಅಶೋಕ್ ಪೈ ಸ್ಮಾರಕ ಕಾಲೇಜು, ಶಿವಮೊಗ್ಗ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ