ಅದೊಂದು ಅವಿಭಕ್ತ ಕುಟುಂಬ. ಆ ಮನೆಯ ಮಗುವಿನ ತಾಯಿ ಮಗು ಹುಟ್ಟಿದ ಕ್ಷಣದಿಂದ ತನ್ನ ಮಕ್ಕಳಿಗೆ ತಿಳುವಳಿಕೆ ಬರುವವರೆಗೆ ಕೆಲವೊಮ್ಮೆ ನಂತರವೂ ಮತ್ತೂ ಹಲವು ಬಾರಿ ತನ್ನ ಜೀವಿತದ ಕೊನೆಯವರೆಗೂ ತನ್ನ ಮಕ್ಕಳ ಹಿಂದೆ ಮುಂದೆ ಸುತ್ತಾಡುತ್ತಾ, ಅವರ ಎಲ್ಲ ಬೇಕು ಬೇಡಗಳನ್ನು ನಿರ್ವಹಿಸುತ್ತಾ ಅವರ ಎಲ್ಲ ಕೆಲಸ ಕಾರ್ಯಗಳಿಗೂ ತನ್ನದೇ ಸಂಪೂರ್ಣ ಜವಾಬ್ದಾರಿ ಎಂಬಂತೆ ವರ್ತಿಸುತ್ತಾಳೆ. ಕೆಲ ಪುರುಷರು ಕೂಡ ಇದಕ್ಕೆ ಹೊರತಲ್ಲ. ತುಸು ವಿಚಿತ್ರವಾದರೂ ಇದು ನಿಜ!! ಇದನ್ನು ಮನಃಶಾಸ್ತ್ರದ ಭಾಷೆಯಲ್ಲಿ 'ಹೆಲಿಕಾಪ್ಟರ್ ಪೇರೆಂಟಿಂಗ್ ಎಂದು ಕರೆಯುತ್ತಾರೆ.
ಈ ಹೆಲಿಕಾಪ್ಟರ ಪೇರೆಂಟಿಂಗ್ ನಲ್ಲಿ ಪಾಲಕರು ಅವಶ್ಯಕತೆಗಿಂತ ಹೆಚ್ಚಾಗಿ ಮಕ್ಕಳ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಾರೆ, ವಿಪರೀತ ಸುರಕ್ಷತಾ ವಿಧಾನಗಳನ್ನು ಪಾಲಿಸುತ್ತಾರೆ. ಕುಳಿತಲ್ಲಿ ನಿಂತಲ್ಲಿ ಓಡಾಡಿದಲ್ಲಿ ಮಕ್ಕಳ ಹಿಂದೆಯೇ ಇರುತ್ತಾರೆ. ಅತ್ಯಂತ ಮುತುವರ್ಜಿಯಿಂದ ಮಕ್ಕಳನ್ನು ನೋಡಿಕೊಳ್ಳುವ ದಣಿವರಿಯದ ಕಾರ್ಯ ಅವರದು. ಒಂದು ವಿಧದಲ್ಲಿ ಮಕ್ಕಳು ಇವರ ಕೈಯಲ್ಲಿ ಸಿಕ್ಕ ಆಟದ ಕೀಲು ಬೊಂಬೆಗಳಂತೆ. ತಮಗೆ ಬೇಕಾದಂತೆ ಕೀಲಿ ಕೊಟ್ಟು ತಮ್ಮ ತಾಳಕ್ಕೆ ತಕ್ಕಂತೆ ಮಕ್ಕಳನ್ನು ಕುಣಿಸುತ್ತಾರೆ. ಮಕ್ಕಳ ಮನಸ್ಸಿನ ಭಾವನೆಗಳನ್ನು ತಾವೇ ಅರಿತವರಂತೆ ಅವರ ಬೇಕು ಬೇಡಗಳನ್ನು ತಾವೇ ಹೇಳಲಾರಂಭಿಸುತ್ತಾರೆ.
ಈ ಹೆಲಿಕಾಪ್ಟರ್ ಪೇರೆಂಟಿಂಗ್ ನ ಮುಖ್ಯ ಲಕ್ಷಣ
ಮಕ್ಕಳನ್ನು ಅತಿಯಾಗಿ ಮುತುವರ್ಜಿ ವಹಿಸಿ ನೋಡಿಕೊಳ್ಳುವುದು. "ಮಂಗಳಾರತಿ ತೆಗೆದುಕೊಂಡರೆ ಉಷ್ಣ, ತೀರ್ಥ ತೆಗೆದುಕೊಂಡರೆ ಶೀತ" ಎಂಬ ಗಾದೆ ಮಾತಿನಂತೆ ಮಕ್ಕಳು ಕುಳಿತರೆ, ನಿಂತರೆ ಎಲ್ಲಿ ನೊಂದುಕೊಳ್ಳುತ್ತಾರೋ ಎಂಬಂತೆ ಅವರ ನೋವನ್ನು ಕೂಡ ಇವರೇ ಆಹ್ವಾನಿಸಿಕೊಂಡು, ಒದ್ದಾಡಿ ಅನುಭವಿಸಿ ಬಿಡುತ್ತಾರೆ.
ಮಕ್ಕಳ ಮೇಲೆ ಅತಿಯಾದ ನಿರೀಕ್ಷೆಯ ಭಾರ ಇನ್ನೂ ಕೆಲವು ಪಾಲಕರದು. ಮಕ್ಕಳು ತಮ್ಮ ನಿರೀಕ್ಷೆಯ ಮಟ್ಟದ ಅಂಕಗಳನ್ನು ತೆಗೆದುಕೊಳ್ಳಲು ಬೇಕಾಗುವ ಎಲ್ಲ ಪ್ರಯತ್ನಗಳನ್ನು ಮಾಡುವ ಪಾಲಕರು ಆ ರೀತಿಯ ನಡೆ ಮಕ್ಕಳ ಮೇಲೆ ಒತ್ತಡವನ್ನು ಹೇರುತ್ತದೆ ಎಂಬ ಕಿಂಚಿತ್ತು ಪ್ರಜ್ಞೆಯನ್ನು ಕೂಡ ಹೊಂದಿರುವುದಿಲ್ಲ. ಎಲ್ಲ ರೀತಿಯ ಮೂಲಭೂತ ಅವಶ್ಯಕತೆಗಳನ್ನು ಕೊಟ್ಟಿದ್ದೇವೆ, ಅಂಕಗಳನ್ನು ತೆಗೆಯಲು ಏನು ಕಷ್ಟ ಎಂಬ ಭಾವ ಇವರದು. ಆ ನಿಟ್ಟಿನಲ್ಲಿ ಹೆಚ್ಚಿನ ಪ್ರಯತ್ನ ಪಾಲಕರದ್ದೆ.
ಮೈಕ್ರೋ ಮ್ಯಾನೇಜಿಂಗ್ ಅಂದರೆ ಮಕ್ಕಳು ಬ್ರಷ್‌ಗೆ ಸರಿಯಾಗಿ ಪೇಸ್ಟ್ ಹಾಕಿಕೊಳ್ಳುವುದಿಲ್ಲ ಎಂಬ ಕಾರಣವೊಡ್ಡಿ ಅದನ್ನು ಕೂಡ ತಾವೇ ಮಾಡುವುದು, ಹಲ್ಲುಜ್ಜಿಸಿ ಮುಖ ತೊಳೆಸಿ, ಸ್ನಾನ ಮಾಡಿಸಿ, ತಲೆ ಬಾಚಿ, ತುತ್ತು ಮಾಡಿ ತಿಂಡಿ ತಿನ್ನಿಸುವವರೆಗೆ ಒಂದು ಹಂತವಾದರೆ ಮಕ್ಕಳ ಶಾಲಾ ಬ್ಯಾಗಿನಲ್ಲಿ ಪುಸ್ತಕಗಳನ್ನು ಹೇಗೆ ಜೋಡಿಸಬೇಕು ಎಂಬುದರಿಂದ ಹಿಡಿದು ಅವರು ಯಾವ ರೀತಿ ಬರೆಯಬೇಕು, ಓದಬೇಕು, ಹೋಂವರ್ಕ್ ಮಾಡಬೇಕು, ಯಾವ್ಯಾವ ಸಮಯಕ್ಕೆ ತಿನ್ನಬೇಕು, ಉಣ್ಣಬೇಕು, ನೀರು ಕುಡಿಯಬೇಕು, ಮಲಮೂತ್ರ ವಿಸರ್ಜನೆ ಮಾಡಬೇಕು ಎಂಬುದರವರೆಗೂ ಪ್ರತಿ ಸಣ್ಣಪುಟ್ಟ ವಿಷಯಗಳ ಕುರಿತು ತಲೆಕೆಡಿಸಿಕೊಳ್ಳುವ ಪಾಲಕರು ಇವರು. ಪದೇ ಪದೇ ಮಕ್ಕಳನ್ನು ನೀರು ಕುಡಿಯಲು, ಆಹಾರ ಸೇವಿಸಲು ಆಗ್ರಹಿಸುತ್ತಾ ಕೈಯಲ್ಲಿ ನೀರಿನ ಗ್ಲಾಸ್, ಊಟದ ತಟ್ಟೆಗಳನ್ನು ಹಿಡಿದುಕೊಂಡು ಓಡಾಡುತ್ತಾರೆ.
ಆರೋಗ್ಯ ಸರಿ ಇಲ್ಲದಿದ್ದರಂತೂ ಮುಗಿದೇ ಹೋಯಿತು, ಕ್ಷಣ ಕ್ಷಣಕ್ಕೂ ಮಗುವಿನ ತಲೆ ಸವರುತ್ತಾ, ಪದೇ ಪದೇ ಅವರಿಗೆ ಏನು ಬೇಕು ಎಂದು ಕೇಳುತ್ತಾ ಅವರ ದೇಹಕ್ಕೆ ಆವರಿಸಿದ ಜಡವನ್ನು ತಾವು ಕೂಡ ಅಂಟಿಸಿಕೊಂಡು ಬಿಡುತ್ತಾರೆ.
ಇನ್ನು ಕೆಲವು ಪಾಲಕರಲ್ಲಿ ತಮ್ಮ ಬಾಲ್ಯಕ್ಕಿಂತ ವಿಭಿನ್ನವಾದ ಭರಪೂರವಾದ ಪೋಷಣೆಯುಳ್ಳ ಪಾಲಕತ್ವವನ್ನು ತಮ್ಮ ಮಕ್ಕಳಿಗೆ ನೀಡುವ ಆಶಯ. ಅಯ್ಯೋ ನಮಗಂತೂ ಒಳ್ಳೆ ಬಾಲ್ಯ ಸಿಗಲಿಲ್ಲ, ನಮ್ಮ ಮಕ್ಕಳಾದರೂ ಅನುಭವಿಸಲಿ ಎಂಬ ಸದಾಶಯವೇನೋ ಒಳ್ಳೆಯದು ನಿಜ. ಆದರೆ ಆ ಸದಾಶಯ ಮಕ್ಕಳ ಮೇಲಿನ ಅತಿಯಾದ ಕಾಳಜಿಗೆ ಕಾರಣವಾಗಬಾರದು. ಮಕ್ಕಳಿಗೆ ಬಯಸಿದ್ದೆಲ್ಲ ಸಿಗಲಿ ಎಂಬುದು ಪಾಲಕರ ಆಶಯವಾದರೂ, ಕೆಲವೊಮ್ಮೆ ಬಯಸಿ ಬಯಸಿ ನಂತರ ವಸ್ತುಗಳು ಸಿಕ್ಕಾಗ ಮಕ್ಕಳು ಪಡುವ ಆನಂದವೇ ಬೇರೆ.
ಈ ಹೆಲಿಕಾಪ್ಟರ್ ಪೇರೆಂಟಿಂಗ್ ನಲ್ಲಿಯೂ ಅಷ್ಟೇ....
ತಮ್ಮ ಮಕ್ಕಳು ಕೊಂಚ ತೊಂದರೆ ಅನುಭವಿಸುತ್ತಾರೆ ಎಂಬ ಅರಿವಾಗುತ್ತಲೇ ಪಾಲಕರು ಧಾವಿಸಿ ಬಂದು ತಮ್ಮ ಮಕ್ಕಳನ್ನು ರಕ್ಷಿಸುತ್ತಾರೆ. ಇಂತಹ ಪಾಲಕರು ತಮ್ಮ ಮಕ್ಕಳ ಪ್ರತಿ ಆಗುಹೋಗುಗಳಿಗೆ ಹಗಲು ರಾತ್ರಿ ಎನ್ನದೆ ಅವರ ಶಿಕ್ಷಕರಿಗೆ ಕರೆ ಮಾಡಿ, ಭೇಟಿಯಾಗಿ ಗೋಳು ಹೊಯ್ದುಕೊಳ್ಳುತ್ತಾರೆ. ಇಂತಹ ಪಾಲಕರು ಮಕ್ಕಳನ್ನು ಪ್ರತಿ ಹೆಜ್ಜೆಯಲ್ಲಿಯು ನಿರ್ದೇಶನ ನೀಡುತ್ತಾ ಇರುತ್ತಾರೆ. ಮಗು ತಪ್ಪು ಮಾಡಿ ಕಲಿತುಕೊಳ್ಳಲು ಅವಕಾಶವೇ ಇಲ್ಲದಂತೆ ವರ್ತಿಸುತ್ತಾರೆ. ಪ್ರತಿಯೊಂದು ಹೆಜ್ಜೆಯಲ್ಲಿಯೂ ಪಾಲಕರು ಹಸ್ತಕ್ಷೇಪ ಮಾಡಿದಾಗ ಮಗು ಸ್ವಂತಿಕೆಯನ್ನು ಕಳೆದುಕೊಂಡು ಪಾಲಕರು ಆಡಿಸಿದಂತೆ ಆಡುವ ಗೊಂಬೆಯ ವ್ಯಕ್ತಿತ್ವವನ್ನು ಹೊಂದುತ್ತದೆ. ಇದು ಸುತರಾಂ ಸಲ್ಲದು.
ಇಲ್ಲಿ ಒಂದು ಕಥೆಯನ್ನು ನೆನಪು ಮಾಡಿಕೊಳ್ಳಬಹುದು.... ಒಂದು ಮೊಟ್ಟೆಯಲ್ಲಿ ಇದ್ದ ಪುಟ್ಟ ಮರಿ ಮೊಟ್ಟೆಯೊಡೆಯಲು ತನ್ನ ಕೈಕಾಲುಗಳ ಬಲವನ್ನು ಉಪಯೋಗಿಸಿ ಅಪಾರ ಪ್ರಯತ್ನ ಮಾಡಿ ಮೊಟ್ಟೆಯ ಚಿಪ್ಪನ್ನೊಡೆದು ಹೊರಗೆ ಬರುತ್ತದೆ. ಈ ಪ್ರಕ್ರಿಯೆಯಲ್ಲಿ ಆ ಮರಿಯ ಕೈ ಕಾಲುಗಳು ಬಲಶಾಲಿಯಾಗುತ್ತವೆ. ಮುಂದೆ ಮರಿಗೆ ಹಾರಲು ಬರುವವರೆಗೆ ಮಾತ್ರ ತಾಯಿ ಹಕ್ಕಿ ಮಗುವಿಗೆ ಆಹಾರವನ್ನು ಪೂರೈಸುತ್ತದೆ. ಒಂದೊಮ್ಮೆ ಮಗು ತನ್ನ ರೆಕ್ಕೆ ಬಿಚ್ಚಿ ಹಾರಲಾರಂಭಿಸಿದರೆ ಸ್ವಾವಲಂಬಿಯಾಗುತ್ತದೆ. ತನ್ನ ಆಹಾರವನ್ನು ತಾನೇ ಹುಡುಕಿ ಓಡಾಡುತ್ತದೆ. ಅಲ್ಲಿಗೆ ತಾಯಿ ಹಕ್ಕಿಯ ಜವಾಬ್ದಾರಿ ಮುಗಿಯಿತು. ನಾವೇನಾದರೂ ಅಯ್ಯೋ ಪುಟ್ಟ ಮರಿ ಮೊಟ್ಟೆ ಒಡೆಯಲು ತೊಂದರೆ ಅನುಭವಿಸುತ್ತಿದೆ ಎಂದು ಅದಕ್ಕೆ ಸಹಾಯ ಮಾಡಲು ಹೋದರೆ ಕೈಕಾಲುಗಳಲ್ಲಿ ಬಲ ಕಳೆದುಕೊಂಡ ಮರಿ ಹೊರಗೆ ಬರಬಹುದು ಅಷ್ಟೇ!! ಬರುತ್ತದೆ ಕೂಡ.
ಇದು ಮಕ್ಕಳಿಗೂ ಅನ್ವಯಿಸುತ್ತದೆ.... ಜಾಗೃತಿ ವಹಿಸಬೇಕಾಗಿರುವುದು ನಾವು ಪಾಲಕರು. ಇದನ್ನು ಹೆಲಿಕಾಪ್ಟರ್ ಪೇರೆಂಟಿಂಗ್ ಮಾಡುವ ಪಾಲಕರು ಅರಿತುಕೊಳ್ಳಬೇಕು. ತಾವು ಸಮಾಜಕ್ಕೆ ಒಪ್ಪಿಸ ಬೇಕಾದದ್ದು ಓರ್ವ ಸ್ವಾವಲಂಬಿ ಸದೃಢ ವಿದ್ಯಾವಂತ ಪ್ರಜೆಯನ್ನೇ ಹೊರತು ಪರಾವಲಂಬಿ ಜೀವಿಯನ್ನಲ್ಲ ಎಂದು.
ಹಾಗಾದರೆ ಹೆಲಿಕಾಪ್ಟರ್ ಪೇರೆಂಟಿಂಗ್ ತಪ್ಪೇ?
ಖಂಡಿತವಾಗಿಯೂ ತಪ್ಪು. ನಡೆಯುವವನು ಎಡವುವುದು ಸಹಜ. ನಮ್ಮ ಮಕ್ಕಳು ಎಡವಲೇ ಬಾರದು ಎಂದರೆ ಹೇಗೆ? ಪ್ರತಿ ಮಗುವೂ ವಿಶಿಷ್ಟ, ಅದ್ವಿತೀಯ ಮತ್ತು ಅನನ್ಯವಾದುದು. ಪ್ರತಿ ಮಗುವಿನ ಅವಶ್ಯಕತೆಗಳು ವಿಭಿನ್ನವಾಗಿದ್ದು ತಮ್ಮ ತಮ್ಮ ಬಲಾವಬಲಗಳ ಕುರಿತ ತಿಳುವಳಿಕೆ ಮಕ್ಕಳಿಗೆ ಬರಬೇಕೆಂದರೆ ಮಕ್ಕಳು ತುಸು ಸ್ವಾವಲಂಬಿಯಾಗಿರಲೇಬೇಕು. ಚಿಕ್ಕಂದಿನಲ್ಲಿ ಮಕ್ಕಳನ್ನು ಪಾಲಿಸುವುದೇನೋ ಸರಿ, ಮಕ್ಕಳು ಬೆಳೆಯುತ್ತಿರುವಾಗ ಅವರಿಗೆ ತುಸು ಅಂತರದಲ್ಲಿ ನಿಂತು ಸಹಾಯ ಮಾಡಬೇಕೆ ಹೊರತು ನಾವೇ ಅವರ ಕೆಲಸವನ್ನು ಮಾಡಬಾರದು. ಮಕ್ಕಳು ಪ್ರತಿಯೊಂದು ಕೆಲಸಕ್ಕೂ ನಮ್ಮನ್ನು ಅವಲಂಬಿಸುವುದು ಒಂದು ಹಂತದವರೆಗೆ ಮಾತ್ರ ಸರಿ.
ಮಗುವಿನ ಮಾನಸಿಕ ಮತ್ತು ಭಾವನಾತ್ಮಕ ಬೆಳವಣಿಗೆಗೆ ಹೆಲಿಕಾಪ್ಟರ್ ಪೇರೆಂಟಿಂಗ್ ಒಂದು ಹಂತದವರೆಗೆ ಸಹಾಯ ಮಾಡುವುದೇನೋ ನಿಜ. ಮಗುವಿನಲ್ಲಿ ಮಾನಸಿಕ ಮತ್ತು ಭಾವನಾತ್ಮಕ ಭದ್ರತೆಯ ಭಾವವನ್ನು ಮಗುವಿನಲ್ಲಿ ಸ್ಫುರಿಸುವ, ಉತ್ತಮ ಹವ್ಯಾಸಗಳನ್ನು ಕಟ್ಟಿಕೊಡುವ, ಜೀವನ ಕೌಶಲಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ತಮ್ಮ ಪಾತ್ರವನ್ನು ಹೆಲಿಕಾಪ್ಟರ್ ಪೇರೆಂಟಿAಗ್ ಸಮರ್ಥವಾಗಿ ನಿರ್ವಹಿಸುತ್ತದೆ.
ಆದರೆ ಮಕ್ಕಳಲ್ಲಿ ನಿರ್ಣಯಗಳನ್ನು ತೆಗೆದುಕೊಳ್ಳುವ ಶಕ್ತಿಯನ್ನು ಕಸಿಯುತ್ತವೆ, ಪ್ರತಿಯೊಂದು ತೊಂದರೆಗೂ ಮಕ್ಕಳು ತಂದೆ ತಾಯಿಯತ್ತ ಮುಖ ಮಾಡುವಂತೆ ಮಾಡುತ್ತವೆ. ಆತಂಕ ಮತ್ತು ಉದ್ವೇಗಗಳನ್ನು ಹೆಚ್ಚಿಸುತ್ತವೆ, ಪರಾವಲಂಬಿತನ ಮಕ್ಕಳಲ್ಲಿ ಮನೆ ಮಾಡುತ್ತದೆ. ಇದು ಖಂಡಿತಾ ಮಗುವಿನ ಬೆಳವಣಿಗೆಗೆ ಒಳ್ಳೆಯದಲ್ಲ. ಮಕ್ಕಳನ್ನು ನಿಧಾನವಾಗಿಯಾದರೂ ಸರಿ ಅವರವರ ಕೆಲಸಗಳನ್ನು ಮಾಡಿಕೊಳ್ಳಲು ಬಿಡಿ, ಹಾಗೆ ಮಾಡಿಕೊಂಡ ಕೆಲಸಗಳು ಪರಿಪೂರ್ಣವಾಗಿರದಿದ್ದರೂ ಪರವಾಗಿಲ್ಲ ಸ್ವಲ್ಪವೇ ಚೆನ್ನಾಗಿದ್ದರೂ ಮನಃಪೂರ್ವಕವಾಗಿ ಅವರನ್ನು ಅಭಿನಂದಿಸಿ. ತಪ್ಪಿದ್ದರೆ ಸೂಕ್ಷ್ಮವಾಗಿ ತಿದ್ದಿ ಹೇಳಿ. ಮಕ್ಕಳು ತಮ್ಮ ಸರಿ ತಪ್ಪುಗಳ ಅವಲೋಕನ ಮಾಡಿಕೊಳ್ಳುವುದನ್ನು ಕಲಿಸಿ. ಮಕ್ಕಳು ತಮ್ಮ ಜೀವನದ ಪ್ರಮುಖ ನಿರ್ಧಾರಗಳನ್ನು ಪಡೆಯುವಲ್ಲಿ ಪಾಲಕರ ಸಲಹೆಗಳನ್ನು ಪಡೆಯಲಿ ಹೊರತು, ಪಾಲಕರೆ ನಿರ್ಧಾರ ಮಾಡುವುದು ಬೇಡ. ಮುಂದೊಂದು ದಿನ ಅವರ ನಿರ್ಧಾರ ಅವರ ಮಕ್ಕಳಿಗೆ ಪಥ್ಯವೆನಿಸದೆ ಹೋದಾಗ ಪಾಲಕರನ್ನು ದೂಷಿಸದಂತಾಗಲಿ.
ಮಕ್ಕಳು ಮನುಷ್ಯ ಸಹಜ ಪ್ರಕ್ರಿಯೆಗಳನ್ನು ತಮ್ಮದಾಗಿಸಿಕೊಳ್ಳಲಿ, ತಪ್ಪುಗಳಿಂದ ಪಾಠ ಕಲಿಯಲಿ, ಪಾಲಕರ ಹೆಲಿಕಾಪ್ಟರ್ ಪೇರೆಂಟಿಂಗ್ ಮಕ್ಕಳ ಪಾಲಿಗೆ ಪ್ರೋತ್ಸಾಹದಾಯಕವಾಗಿರಲಿಯೇ ಹೊರತು ನಿರ್ಬಂಧವೆನಿಸದಿರಲಿ. ಆ ನಿಟ್ಟಿನಲ್ಲಿ ಪಾಲಕರು ಕಾರ್ಯನಿರ್ವಹಿಸಲಿ.
-ವೀಣಾ ಹೇಮಂತ್ ಗೌಡ ಪಾಟೀಲ್,
ಮುಂಡರಗಿ. ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ