ಅಂಕಣಕಾರ ಶ್ರೀವತ್ಸ ಜೋಶಿಯವರು ವಿಶ್ವವಾಣಿ ಪತ್ರಿಕೆಯಲ್ಲಿ The Vaccine War ಚಲನಚಿತ್ರದ ಬಗ್ಗೆ ಲೇಖನವೊಂದನ್ನು ಬರೆದಿದ್ದರು. ಅದನ್ನು ಓದಿದ ಕೂಡಲೇ ನಾನು ನಿರ್ಧರಿಸಿಯೇ ಬಿಟ್ಟೆ ಆ ಸಿನೆಮಾವನ್ನು ನೋಡಲೇಬೇಕೆಂದು. ಸೆಪ್ಟೆಂಬರ್ 28ರಂದು ಬಿಡುಗಡೆಯಾದ ಚಿತ್ರವನ್ನು 29ನೇ ತಾರೀಕಿಗೆ ನೋಡಿದೆ. ನನ್ನ ನಿರ್ಧಾರ ನೂರಕ್ಕೆ ನೂರು ಸರಿಯಾಗಿತ್ತು. ವಿವೇಕ್ ಅಗ್ನಿಹೋತ್ರಿ ನಿರ್ದೇಶಕರಾಗಿ, ಪಲ್ಲವಿ ಜೋಶಿ ನಿರ್ಮಾಪಕಿಯಾಗಿರುವ ಈ ಚಿತ್ರವು ನಿಜವಾಗಿಯೂ ನನ್ನ ಮನಸೂರೆಗೊಂಡಿತು. ಕೋವಿಡ್ 19ರ ಕೊರೋನಾ ಲಸಿಕೆ ತಯಾರಿಗೆ ಸಂಬಂಧಪಟ್ಟ ಈ ಚಿತ್ರವು ವೈದ್ಯಕೀಯ ಸಂಶೋಧನೆಯ ಕುರಿತಾಗಿದ್ದರೂ ಸಾಮಾನ್ಯ ಜನರಿಗೆ ಅರ್ಥವಾಗುವಂತೆ ತೋರಿಸಿದ ರೀತಿಯು ಶ್ಲಾಘನೀಯವಾದುದು.
2020-21 ರ ಕೋವಿಡ್ 19ರ ಸಂಕಷ್ಟವನ್ನು ನೆನಪಿಸಿಕೊಂಡರೆ ಈಗಲೂ ಬೆಚ್ಚಿ ಬೀಳುವಂತಾಗುತ್ತದೆ. ಅಂತಹುದರಲ್ಲಿ ಅತಿ ಕ್ಷಿಪ್ರವಾಗಿ ಅತ್ಯಂತ ಸುರಕ್ಷಿತವಾದ ಲಸಿಕೆಯನ್ನು ಭಾರತೀಯ ವಿಜ್ಞಾನಿಗಳು ತಯಾರಿಸಿದ್ದು, ಅದರ ಹಿಂದಿನ ತಾಳ್ಮೆ,ಕಠಿಣ ಪರಿಶ್ರಮವನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಲಸಿಕೆ ತಯಾರಿಯ ತಂಡದಲ್ಲಿ ಎಪ್ಪತ್ತು ಪ್ರತಿಶತ ಮಹಿಳೆಯರಿದ್ದು ಚಿತ್ರದ ಕೊನೆಯಲ್ಲಿ ಸಂಸ್ಥೆಯ ಮುಖ್ಯಸ್ಥರು ತಯಾರಿಯ ಯಶಸ್ಸನ್ನು ಮಹಿಳೆಯರಿಗೆ ಸಮರ್ಪಿಸಿದಾಗ ನಿಜವಾಗಿಯೂ ಅವರು ಅದಕ್ಕೆ ಅರ್ಹರು ಅನಿಸಿತು. ಸಾಂಸಾರಿಕ ಜವಾಬ್ದಾರಿಯೊಂದಿಗೆ ಸಂಸ್ಥೆಯಲ್ಲಿಯೂ ಹಗಲಿರುಳೆನ್ನದೆ ದುಡಿದು ಲಕ್ಷಾಂತರ ಜನರ ಜೀವ ಉಳಿಕೆಗಾಗಿ ಶ್ರಮಿಸಿದ ನಾರೀ ಶಕ್ತಿಗೊಂದು ನಮನ- ಹೃದಯಾಂತರಾಳದಿಂದ.
ನಾನಾ ಪಾಟೇಕರ್, ಪಲ್ಲವಿ ಜೋಶಿ, ಅನುಪಮ್ ಖೇರ್ ಮುಖ್ಯ ಪಾತ್ರದಲ್ಲಿದ್ದು ಚಿತ್ರತಂಡದ ಎಲ್ಲರೂ ಅಭಿನಯದಲ್ಲಿ ಪಾತ್ರವೇ ತಾವಾಗಿ ಜೀವ ತುಂಬಿದ್ದಾರೆ. ಚಿತ್ರೀಕರಣ, ಸಂಭಾಷಣೆ ಎಲ್ಲವೂ ಪ್ರಶಂಸಾರ್ಹ. ನಾಯಕ- ನಾಯಕಿ ಇಲ್ಲದೆ ಹಾಡು, ಕುಣಿತ, ಹೊಡೆದಾಟವಿಲ್ಲದೆಯೂ ಎಲ್ಲಿಯೂ ಬೋರ್ ಎನ್ನಿಸದೆ ಚಂದವಾಗಿ ನಿರ್ಮಿಸಿದ ಒಂದು ಚಿತ್ರ The Vaccine War ಎಲ್ಲರೂ ಒಮ್ಮೆ ನೋಡಿ. ಭಾರತೀಯ ವಿಜ್ಞಾನಿಗಳಿಗೂ, ಚಿತ್ರ ತಂಡಕ್ಕೂ ಒಂದು ದೊಡ್ಡ ಸಲಾಂ.
-ಪಿ.ವಿ.ಶಾಂತಕುಮಾರಿ.
ಕುಲಶೇಖರ, ಮಂಗಳೂರು
ನಿರಂತರ ಅಪ್ಡೇಟ್ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ