ಮಂಡ್ಯಕ್ಕೆ ಬಿಜೆಪಿ ಅಭ್ಯರ್ಥಿಯನ್ನಾಗಿ ಸಂಸದೆ ಸುಮಲತಾಗೆ ಟಿಕೆಟ್ ನೀಡಿ: ಹೈಕಮಾಂಡ್‌ಗೆ ಮನವಿ
ಕೆ.ಆರ್.ಪೇಟೆ ಪಟ್ಟಣದಲ್ಲಿ ಸಂಸದೆ ಸುಮಲತಾ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿದ ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ ಜೆಡಿಎಸ್ ಬಿಜೆಪಿ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದರಲ್ಲದೇ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯನ್ನಾಗಿ ಸುಮಲತಾ ಅಂಬರೀಶ್ ಅವರ ಹೆಸರನ್ನು ಅಂತಿಮಗೊಳಿಸಬೇಕೆಂದು ಬಿಜೆಪಿ ಹೈಕಮಾಂಡ್ ಅನ್ನು ಒತ್ತಾಯಿಸಿದರು.
ಕೆ.ಆರ್.ಪೇಟೆ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಭಾರತೀಯ ಜನತಾ ಪಾರ್ಟಿಯು ಜೆಡಿಎಸ್ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಕ್ರಮವು ಸರಿಯಲ್ಲ ಎಂದು ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ ಹೇಳಿದರು.
ಅವರು ಕೆ.ಆರ್.ಪೇಟೆ ಪಟ್ಟಣದ ಬಸವೇಶ್ವರನಗರದಲ್ಲಿರುವ ತಮ್ಮ ನಿವಾಸದಲ್ಲಿ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು.
ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದರಾಗಿರುವ ಸುಮಲತಾ ಅಂಬರೀಶ್ ಅವರಿಗೆ ಭಾರತೀಯ ಜನತಾ ಪಾರ್ಟಿಯು ಅಭ್ಯರ್ಥಿಯನ್ನಾಗಿ ಘೋಷಣೆ ಮಾಡಿ ಪಕ್ಷದ ಬಿ ಫಾರಂ ನೀಡಬೇಕು. ಮಂಡ್ಯ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿ ಸ್ಪರ್ಧೆ ಮಾಡಲು ಯಾವುದೇ ಕಾರಣಕ್ಕೂ ಸ್ಥಾನ ಹೊಂದಾಣಿಕೆ ಮಾಡಿಕೊಳ್ಳಬಾರದು. ಮಂಡ್ಯ ಜಿಲ್ಲೆಯಲ್ಲಿ ಭಾರತೀಯ ಜನತಾ ಪಾರ್ಟಿಗೆ ಪ್ರಬಲವಾದ ವಿರೋಧಿಯೆಂದರೆ ಜೆಡಿಎಸ್ ಪಕ್ಷ. ಆದ್ದರಿಂದ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವ ತೀರ್ಮಾನವನ್ನು ಪರಿಶೀಲನೆ ಮಾಡಬೇಕು ಎಂದು ಮನವಿ ಮಾಡಿದ ನಾರಾಯಣಗೌಡ ರಾಜ್ಯದಲ್ಲಿ ಜೆಡಿಎಸ್ ಪಕ್ಷದೊಂದಿಗೆ ಬಿಜೆಪಿ ಪಕ್ಷವು ಸ್ಥಾನ ಹೊಂದಾಣಿಕೆ ಮಾಡಿಕೊಂಡಿರುವುದಕ್ಕೆ ನನ್ನ ವಿರೋಧವಿದೆ ಎಂದು ಸ್ಪಷ್ಠಪಡಿಸಿದರು.
ರಾಜ್ಯದಲ್ಲಿ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ಬಿಜೆಪಿ ನೇತೃತ್ವದ ಸರ್ಕಾರವು ಅಧಿಕಾರಕ್ಕೆ ಬರಲು ನಾನೂ ಸೇರಿದಂತೆ 17 ಶಾಸಕರು ಕಾರಣರಾಗಿದ್ದೇವೆ. ಕಳೆದ ಲೋಸಭಾ ಚುನಾವಣೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಎಲ್ಲಾ ಎಂಟು ಸ್ಥಾನಗಳಲ್ಲಿಯೂ ಜೆಡಿಎಸ್ ಶಾಸಕರಿದ್ದರೂ ಜೆಡಿಎಸ್ ಕಾಂಗ್ರೆಸ್ ಮೈತ್ರಿ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿ ಅವರು ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಮಂಡ್ಯ ಜಿಲ್ಲೆಯ ಸೊಸೆಯಾಗಿದ್ದ ಸ್ವಾಭಿಮಾನಿ ಅಭ್ಯರ್ಥಿ ಸುಮಲತಾ ಭರ್ಜರಿ ಗೆಲುವು ಸಾಧಿಸಿದ್ದರು. ಪ್ರಸ್ತುತ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೇಸ್ ದಿಗ್ವಿಜಯ ಸಾಧಿಸಿದ್ದರೂ ಲೋಕಸಭೆ ಚುನಾವಣೆಯ ವಿಚಾರ ಬಂದಾಗ ಪ್ರಜ್ಞಾವಂತ ಮತದಾರರು ನರೇಂದ್ರ ಮೋದಿ ಹಾಗೂ ಬಿಜೆಪಿ ಪಕ್ಷವನ್ನು ನೋಡಿ ಮತ ನೀಡುತ್ತಾರೆ. ಆದ್ದರಿಂದ ಸುಮಲತಾ ಅಂಬರೀಶ್ ಅವರೇ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಬೇಕು ಎನ್ನುವುದು ನನ್ನ ಮನದ ಅಭಿಲಾಷೆಯಾಗಿದೆ ಎಂದು ನಾರಾಯಣಗೌಡ ಸ್ಪಷ್ಠಪಡಿಸಿದರು.
ಮಂಡ್ಯ ಲೋಕಸಭೆ ಸ್ಥಾನಕ್ಕೆ ಬಿಜೆಪಿಯಿಂದ ಸ್ಪರ್ಧಿಸುವ ಬಯಕೆ: ಸುಮಲತಾ
ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮಾತನಾಡಿ, ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಬಗ್ಗೆ ಮೇಲ್ಮಟ್ಟದಲ್ಲಿ ಮಾತುಕತೆಯಾಗಿದ್ದರೂ ಸ್ಥಾನಗಳ ಹೊಂದಾಣಿಕೆಯು ಇನ್ನೂ ಅಂತಿಮವಾಗಿಲ್ಲ. ನಾನು ಬಿಜೆಪಿ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಬೇಕೆಂಬ ಬಯಕೆ ಹೊಂದಿದ್ದೇನೆ. ನನ್ನ ಈ ನಿರ್ಧಾರದಲ್ಲಿ ಯಾವುದೇ ಬದಲಾವಣೆಯಿಲ್ಲ. ರಾಜ್ಯದಲ್ಲಿ ಜೆಡಿಎಸ್-ಬಿಜೆಪಿ ಹೊಂದಾಣಿಕೆಯಿಂದ ರಾಜ್ಯದ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಬಿಜೆಪಿ ಅಭ್ಯರ್ಥಿಗಳು ನಮ್ಮ ದೇಶದ ಸುಭದ್ರತೆ ಹಾಗೂ ಮೋದೀಜಿಯವರ ದಕ್ಷ ಆಡಳಿತದ ಪರವಾಗಿ ಮತನೀಡಲಿದ್ದಾರೆ. ಆದ್ದರಿಂದ ದೇಶದ ಪ್ರಧಾನಿಯಾಗಿ ಮೋಧಿಜಿ ಅವರು ಮತ್ತೊಮ್ಮೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದ ಸುಮಲತಾ ಕಾವೇರಿ ನ್ಯಾಯಾಧೀಕರಣದ ತೀರ್ಪಿನ ವಿಚಾರವಾಗಿ ಪ್ರಧಾನಮಂತ್ರಿಗಳು ಮಧ್ಯಪ್ರವೇಶ ಮಾಡಿ ಸಮಸ್ಯೆ ಇತ್ಯರ್ಥಕ್ಕೆ ಪರಿಕಾರ ಕಂಡುಹಿಡಿಯಲು ಸಾಧ್ಯವಿಲ್ಲ. ಈ ಹಿಂದೆ ಅಂಬರೀಶ್ ಅವರು ಕಾವೇರಿ ನ್ಯಾಯಾಧೀಕರಣ ಮಂಡಳಿಯ ತೀರ್ಪನ್ನು ವಿರೋಧಿಸಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದಾಗ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ಮದ್ಯ ಪ್ರವೇಶಿಸಿ ಸಮಸ್ಯೆಗೆ ಏಕೆ ಪರಿಹಾರ ಕಂಡುಹಿಡಿಯಲಿಲ್ಲ ಎಂದು ಪ್ರಶ್ನಿಸಿದರು.
ಕಾವೇರಿ ನದಿಯ ನೀರು ಹಂಚಿಕೆ ವಿಚಾರದಲ್ಲಿ ಸುಲಭವಾಗಿ ಪ್ರಧಾನಿಗಳು ಮಧ್ಯಪ್ರವೇಶ ಮಾಡುವಂತಿದ್ದರೆ, ಅಂತಾರಾಜ್ಯ ನದಿ ನೀರು ಸಮಸ್ಯೆ ಬಗೆ ಹರಿಸುವಂತಿದ್ದರೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರೇ ಬಗೆಹರಿಸುತ್ತಿದ್ದರು. ಅದು ಸಾಧ್ಯವಾಗದ ಹಿನ್ನೆಲೆಯಲ್ಲಿ ಅಂಬರೀಶ್ ಅವರು 2009ರಲ್ಲಿ ಕೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಕಾವೇರಿ ನೀರಿನ ವಿವಾದ ಇಂದು ನಿನ್ನೆಯದಲ್ಲ. ತಮಿಳುನಾಡು ಭಂಡತನದಿಂದ ವಾದ ಮಂಡಿಸುತ್ತಿದೆ. ರಾಷ್ಟ್ರೀಯ ಸಂಪತ್ತಾಗಿರುವ ನದಿಯ ನೀರು ಹಂಚಿಕೆಯ ವಿಚಾರದಲ್ಲಿ ಪ್ರಧಾನಮಂತ್ರಿಗಳು ಮಧ್ಯೆ ಪ್ರವೇಶ ಮಾಡಿ ಮಾತುಕತೆ ನಡೆಸಲು ಕಾನೂನು ತೊಡಕಿದೆ, ಅದು ಸಾಧ್ಯವಾಗದ ಮಾತು ಎನ್ನುವುದು ಕಾಂಗ್ರೆಸ್ ನಾಯಕರಿಗೂ ಗೊತ್ತಿದೆಯಾದರೂ ಸುಖಾಸುಮ್ಮನೆ ವಿತಂಡವಾದ ಮಾಡ್ತಾರೆ ಎಂದು ಪತ್ರಕರ್ತರ ಪ್ರಶ್ನೆಗೆ ಸುಮಲತಾ ಉತ್ತರಿಸಿದರು.
ಕಾವೇರಿ ವಿವಾದಕ್ಕೆ ಸೌಹಾರ್ದಯುತ ಮಾತುಕತೆಯೊಂದೇ ಪರಿಹಾರ:
ಕಾವೇರಿ ಜಲ ವಿವಾದವನ್ನು ಸೌಹಾರ್ದಯುತ ಮಾತುಕತೆಯಿಂದ ಬಗೆಹರಿಸಿಕೊಳ್ಳಲು ಸಾಧ್ಯವಿದೆ. ರಾಜ್ಯ ಸರ್ಕಾರವು ಸರ್ವೋಚ್ಛ ನ್ಯಾಯಾಲಯ ಹಾಗೂ ಕಾವೇರಿ ನ್ಯಾಯಾಧೀಕರಣ ಮಂಡಳಿಯ ಮುಂದೆ ನಮ್ಮ ರಾಜ್ಯದ ರೈತರ ಸ್ಥಿತಿಗತಿ ಹಾಗೂ ನೀರಿನ ಸಂಗ್ರಹಣೆಯ ಬಗ್ಗೆ ಸಮರ್ಥವಾಗಿ ವಾದ ಮಂಡಿಸಲು ವಿಫಲವಾಗಿದೆ. ಆದ್ದರಿಂದ ನಮಗೆ ವಿರುದ್ಧವಾದ ತೀರ್ಪು ಬರುತ್ತಿದೆ. ಆದ್ದರಿಂದ ನಮ್ಮ ಪರವಾಗಿ ವಾದ ಮಂಡಿಸುವ ವಕೀಲರು ವಾಸ್ತವ ಸ್ಥಿತಿಗತಿಯನ್ನು ಮುಂದಿಟ್ಟುಕೊಂಡು ವಾದ ಮಂಡಿಸಿ ಕಾವೇರಿ ವಿವಾದವನ್ನು ಇತ್ಯರ್ಥಪಡಿಸುವ ಬಗ್ಗೆ ಆಲೋಚಿಸಬೇಕು ಎಂದು ಸುಮಲತಾ ಹೇಳಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ