ಕೆ.ಆರ್.ಪೇಟೆ ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ನಡೆದ ತಾಲೂಕು ಮಟ್ಟದ ವಿಶ್ವಕರ್ಮ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಿದ್ದ ವಿಶ್ವಕರ್ಮ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ನಂಜುಂಡಿ ವಿಶ್ವಕರ್ಮ ಸೇರಿದಂತೆ ಗಣ್ಯರು ಉದ್ಘಾಟಿಸಿದರು.
ಕೆ.ಆರ್.ಪೇಟೆ: ವಿಶ್ವಕರ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಕ್ಕಿಲ್ಲ. ವಿಶ್ವಕರ್ಮರ ಸಮಗ್ರ ಅಭಿವೃದ್ದಿಯಾಗಬೇಕಾದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಎಸ್.ಟಿ. ವರ್ಗಕ್ಕೆ ನಮ್ಮ ಸಮಾಜವನ್ನು ಸೇರಿಸಬೇಕು. ಇದಕ್ಕಾಗಿ ಎಚ್ಚೆತ್ತುಕೊಂಡು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದು ವಿಧಾನಪರಿಷತ್ ಸದಸ್ಯರು ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ.ನಂಜುಂಡಿ ಕರೆ ನೀಡಿದರು.
ಅವರು ಪಟ್ಟಣದ ಜಯಮ್ಮ ಶಿವಲಿಂಗೇಗೌಡ ಸಮುದಾಯ ಭವನದಲ್ಲಿ ತಾಲ್ಲೂಕು ವಿಶ್ವಕರ್ಮ ಸಂಘಟನೆಗಳ ಒಕ್ಕೂಟದ ವತಿಯಿಂದ ನಡೆದ ತಾಲ್ಲೂಕು ಮಟ್ಟದ ವಿಶ್ವಕರ್ಮ ಜಯಂತಿ ಮಹೋತ್ಸವದಲ್ಲಿ ವಿಶ್ವಕರ್ಮ ಸಮುದಾಯ ಕುರಿತು ಆಶಯ ನುಡಿಗಳನ್ನಾಡಿ ವಿಶ್ವಕರ್ಮ ಸಮುದಾಯವು ಸಂಘಟಿತರಾಗದೇ ಇದ್ದಲ್ಲಿ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು.
1976ರಲ್ಲಿ ಮುಖ್ಯಮಂತ್ರಿಗಳಾಗಿದ್ದ ದೇವರಾಜ ಅರಸುರವರು ಹಾವನೂರು ಆಯೋಗ ರಚನೆ ಮಾಡಿ ನಿರ್ಲಕ್ಷ್ಯ ವಂಚಿತ ಜಾತಿಗಳಿಗೆ ಅಳೆದು ತೂಗಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ನೀಡಿದರು. ಇದರಿಂದ ಸಣ್ಣ ಸಣ್ಣ ಜಾತಿಗಳಿಗೆ ಅನುಕೂಲವಾಯಿತು. ಈ ಸಂದರ್ಭದಲ್ಲಿ ನಮ್ಮ ವಿಶ್ವಕರ್ಮ ಸಮಾಜದ ಮುಖಂಡರು ಸಂಘಟಿತರಾಗಿ ಹೋರಾಟ ಮಾಡಿದ್ದರೆ ನಮ್ಮನ್ನು ಎಸ್.ಟಿ.ವರ್ಗಕ್ಕೆ ಸೇರ್ಪಡೆ ಮಾಡಿಸಿದ್ದರೆ, ನಮ್ಮ ಸಮಾಜವು ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿತ್ತು. ನಮ್ಮ ನಿರಂತರ 9ವ ರ್ಷಗಳ ಹೋರಾಟದ ಫಲವಾಗಿ ವಿಶ್ವಕರ್ಮ ಜಯಂತಿ ಆಚರಣೆ ಆರಂಭಿಸಲಾಯಿತು. ನಂತರ ವಿಶ್ವಕರ್ಮ ಅಭಿವೃದ್ದಿ ನಿಗಮ ಸ್ಥಾಪನೆ ಮಾಡಲಾಯಿತು. ಇದರಿಂದ ಅಲ್ಪ ಮಟ್ಟಿನ ಅಭಿವೃದ್ದಿ ಸಾಧ್ಯವಾಗಿದೆ. ವಿಶ್ವಕರ್ಮರ ಸಮಗ್ರ ಅಭಿವೃದ್ದಿಯಾಗಬೇಕಾದರೆ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯ ಸಿಗಬೇಕಾದರೆ ಎಸ್.ಟಿ. ವರ್ಗಕ್ಕೆ ನಮ್ಮ ಸಮಾಜವನ್ನು ಸೇರಿಸಬೇಕು. ಇದಕ್ಕಾಗಿ ಎಚ್ಚೆತ್ತುಕೊಂಡು ಸಂಘಟಿತರಾಗಿ ಹೋರಾಟಕ್ಕೆ ಸಜ್ಜಾಗಬೇಕು ಎಂದರು.
ಹಿಂದುಳಿದ ವರ್ಗಗಳಲ್ಲಿ 102 ಜಾತಿ ಇದೆ ಅಲ್ಲಿ ಬಲಾಡ್ಯ ಜಾತಿಗಳು ಇವೆ. ಅಲ್ಲಿ ನಮಗೆ ಶೇ.1ರಷ್ಟು ಅನುಕೂಲವಾಗಿಲ್ಲ. ಐಎಎಸ್, ಐಪಿಎಸ್ ಆಗಲು ನಮ್ಮ ವಿಶ್ವಕರ್ಮ ಸಮಾಜಕ್ಕೆ ಸಾಧ್ಯವಿಲ್ಲ. ಹಾಗಾಗಿ ನಮ್ಮ ಸಮಾಜವನ್ನು ಎಸ್.ಟಿ ಮೀಸಲಾತಿ ಸಿಕ್ಕರೆ ಮಾತ್ರ. ನಮ್ಮ ಸಮಾಜದ ಮಕ್ಕಳು ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಡಾಧಿಕಾರಿ, ತಹಸೀಲ್ದಾರ್, ಮತ್ತಿತರರ ಆಯಕಟ್ಟಿನ ಹುದ್ದೆ ಪಡೆಯಲು ಸಾಧ್ಯವಾಗುತ್ತದೆ. ಇದಕ್ಕಾಗಿ ನಮ್ಮ ಸಮಾಜದ ಎಲ್ಲರೂ ಸಂಘಟಿತರಾಗಿ ಹೋರಾಟಕ್ಕೆ ಕೈಜೋಡಿಸಬೇಕು. ನಮ್ಮ ಸಮಾಜ ಜಾತಿನೋಡಿ ಕೆಲಸ ಮಾಡುವುದಿಲ್ಲ. ಎಲ್ಲರನ್ನು ಸಮಾನವಾಗಿ ಕಾಣುವ ಏಕೈಕ ಸಮುದಾಯ ನಮ್ಮದು ನಮಗೆ ಜಾತಿಯಿಲ್ಲ ಅದು ನಮ್ಮ ನೆಲದ ಸಂಸ್ಕೃತಿಯ ಸಂಕೇತ ಎಂದು ಕೆ.ಪಿ.ನಂಜುಂಡಿ ನುಡಿದರು.
ಹಾಲಿಗೆ ಸಕ್ಕರೆ ಬೆರೆತರೆ ಹಾಲಿನ ರುಚಿಯು ಹೆಚ್ಚಾಗುವಂತೆ ನಾಗರಿಕ ಸಮಾಜದ ಎಲ್ಲ ಜಾತಿ ವರ್ಗಗಳ ಜನರ ಜೊತೆ ಪ್ರೀತಿ ವಿಶ್ವಾಸದಿಂದ ಜೀವನ ನಡೆಸುತ್ತಾ ಸೌಹಾರ್ದಯುತ ವಾತಾವರಣದ ನಿರ್ಮಾಣಕ್ಕೆ ಅಮೋಘ ಕಾಣಿಕೆ ನೀಡುತ್ತಿರುವ ವಿಶ್ವಕರ್ಮ ಸಮಾಜದ ಕೊಡುಗೆಯು ಸಮಾಜಕ್ಕೆ ಅಪಾರವಾಗಿದೆ. ನಾಗರಿಕ ಸಮಾಜದ ನಿರ್ಮಾಣಕ್ಕೆ ಅವಶ್ಯಕವಾಗಿ ಬೇಕಾಗಿರುವ ಪಂಚ ಕಸುಬುಗಳನ್ನು ಮಾಡುತ್ತಾ ಎಲ್ಲಾ ಜಾತಿ ವರ್ಗಗಳ ಜನರ ಜೊತೆ ಉತ್ತಮವಾದ ಬಾಂಧವ್ಯವನ್ನು ಹೊಂದುವ ಮೂಲಕ ತನ್ನದೇ ಆದ ಕೊಡುಗೆಯನ್ನು ನೀಡುತ್ತಿರುವ ವಿಶ್ವಕರ್ಮ ಸಮಾಜದ ಬಂಧುಗಳು ಇಂದು ಸಂಘಟಿತರಾಗಿ ನಮಗೆ ಸಂವಿಧಾನಬದ್ಧವಾಗಿ ದೊರೆಯಲೇಬೇಕಾಗಿರುವ ಸೌಲಭ್ಯಗಳನ್ನು ಕೇಳಿ ಪಡೆದುಕೊಂಡು ಆರ್ಥಿಕವಾಗಿ ಸಬಲೀಕರಣ ಸಾಧಿಸಿ ಅಭಿವೃದ್ಧಿಯ ಪಥದತ್ತ ಸಾಗಬೇಕು. ನಮ್ಮ ಕುಲ ಕಸುಬುಗಳು ಉಳಿಯಬೇಕಾದರೆ ನಾವೆಲ್ಲರೂ ಸಂಘಟಿತ ಹೋರಾಟ ಮಾಡುವುದು ಅಗತ್ಯವಾಗಿದೆ. ನಮ್ಮ ಮಕ್ಕಳು ಕುಲ ಕಸುಬುಗಳನ್ನು ಕಲಿತು ವೃತ್ತಿಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಜೊತೆಗೆ ಕಡ್ಡಾಯವಾಗಿ ಶಿಕ್ಷಣದ ಜ್ಞಾನವನ್ನು ಪಡೆದುಕೊಂಡು ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಕೈಮುಗಿದು ಮನವಿ ಮಾಡಿದ ನಂಜುಂಡಿ ರಾಜಕೀಯವಾಗಿ, ಶೈಕ್ಷಣಿಕವಾಗಿ ಹಾಗೂ ಸಾಮಾಜಿಕವಾಗಿ ನಮಗೆ ಮೀಸಲಾತು ಬೇಕೇ ಬೇಕು. ಹಿಂದುಳಿದ ಪ್ರವರ್ಗ ಎರಡಕ್ಕೆ ವಿಶ್ವಕರ್ಮ ಜನಾಂಗಕ್ಕೆ ಸೇರಿಸಿರುವುದು ಸರಿಯಾದ ಕ್ರಮವಲ್ಲ. ಹಿಂದುಳಿದ ಪ್ರವರ್ಗ ಎರಡರಲ್ಲಿ ಹಾಲುಮತ ಕುರುಬ, ನೇಕಾರ ಸೇರಿದಂತೆ ಹಲವಾರು ಪ್ರಬಲ ಜಾತಿಗಳಿವೆ. ಅವರೊಂದಿಗೆ ನಾವು ಹೋರಾಟ ಮಾಡಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿರುವ ವಿಶ್ವಕರ್ಮ ಸಮಾಜವನ್ನು ಕುಲಶಾಸ್ತ್ರದ ಅಧ್ಯಯನದ ಪ್ರಕಾರ ಪರಿಶಿಷ್ಠ ಪಂಗಡಕ್ಕೆ ಸೇರಿಸಿ ಅನುಕೂಲ ಮಾಡಿಕೊಡಬೇಕು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಕೆ.ಪಿ.ನಂಜುಂಡಿ ಒತ್ತಾಯ ಮಾಡಿದರು.
ಪಿಎಂ ವಿಶ್ವಕರ್ಮ ಯೋಜನೆಯ ಸದ್ಬಳಕೆ ಮಾಡಿಕೊಳ್ಳಿ: ಸುಮಲತಾ
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಮಂಡ್ಯ ಲೋಕಸಭಾ ಸದಸ್ಯೆ ಸುಮಲತಾ ಅಂಬರೀಶ್ ಮಾತನಾಡಿ, ಮಾನ್ಯ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿಯವರು ಪಿಎಂ ವಿಶ್ವಕರ್ಮ ಯೋಜನೆ ಜಾರಿಗೆ ತಂದಿದ್ದಾರೆ. ಇದನ್ನು ತಾವು ಸದುಪಯೋಗ ಪಡಿಸಿಕೊಳ್ಳಬೇಕು. ಜಲಜೀವನ್ ಮಿಷನ್ ಯೋಜನೆ ಅಡಿ ಕುಡಿಯುವ ನೀರಿಗೆ 192 ಕೋಟಿ, ಗ್ರಾಮಸಡಕ್ ಯೋಜನೆಗೆ 20 ಕೋಟಿ, ಎಸ್.ಸಿಪಿ, ಎಸ್.ಟಿ.ಪಿ. 32 ಕೋಟಿ, ಆದರ್ಶ ಗ್ರಾಮ ಸೇರಿದಂತೆ ಒಟ್ಟು 245 ಕೋಟಿ ಅನುದಾನವನ್ನು ಕೆ.ಆರ್.ಪೇಟೆ ತಾಲ್ಲೂಕಿಗೆ ನೀಡಿದ್ದೇನೆ. ತಾಲ್ಲೂಕು ಕೇಂದ್ರದಲ್ಲಿ ನಿರ್ಮಾಣವಾಗುವ ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ಕಟ್ಡಡ ನಿರ್ಮಾಣ ಅಗತ್ಯ ಅನುದಾನವನ್ನು ನೀಡುವ ಭರವಸೆ ನೀಡಿದರು. ವಿಶ್ವಕರ್ಮ ಈ ಸಮಾಜದ ನಿರ್ಮಾತೃವಾಗಿದ್ದು, ನಾವು ಪೂಜೆ ಮಾಡುವ ವಿಗ್ರಹಗಳು, ನಾವು ಧರಿಸುವ ಚಿನ್ನದ ಆಭರಣಗಳು, ಬೇಸಾಯಕ್ಕೆ ಬೇಕಾದ ಉಪಕರಣಗಳನ್ನು ನಿರ್ಮಾಣ ಮಾಡಿಕೊಡುತ್ತಿರುವ ವಿಶ್ವಕರ್ಮ ಸಮಾಜದ ಬಂಧುಗಳು ಸಂಘಟಿತರಾಗಿ ಸಮಾಜದ ಮುಖ್ಯವಾಹಿನಿಗೆ ಬಂದು ಸಾಧನೆ ಮಾಡಬೇಕು ಎಂದು ಸುಮಲತಾ ಹೇಳಿದರು.
ವಿಶ್ವಕರ್ಮರ ಕಂಚಿನ ಪುತ್ಥಳಿಗೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ರಾಜ್ಯದ ಮಾಜಿ ಸಚಿವ ಡಾ. ನಾರಾಯಣಗೌಡ, ನಾನು ಸಚಿವನಾಗಿದ್ದಾಗ ಪಟ್ಟಣದ ಹೇಮಾವತಿ ಬಡಾವಣೆಯಲ್ಲಿ ವಿಶ್ವಕರ್ಮ ಭವನದ ನಿರ್ಮಾಣಕ್ಕೆ ಸರ್ಕಾರದಿಂದ ೫೦ಲಕ್ಷರೂ ವಿಶೇಷ ಅನುದಾನವನ್ನು ಮಂಜೂರು ಮಾಡಿಸಿದ್ದಲ್ಲದೇ ನನ್ನ ಅನುದಾನದಿಂದಲೂ 10 ಲಕ್ಷ ರೂ ಅನುದಾನ ನೀಡಿದ್ದೆ. ನಾನೀಗ ಶಾಸಕನಲ್ಲ, ಕ್ಷೇತ್ರದ ಹಾಲಿ ಶಾಸಕರಾದ ಮಂಜುನಾಥ್ ಅವರು ಸರ್ಕಾರದಿಂದ ವಿಶೇಷ ಅನುದಾನ ೫೦ಲಕ್ಷರೂ ಬಿಡುಗಡೆ ಮಾಡಿಸಲು ಹೋರಾಟ ನಡೆಸಬೇಕು. ಶಾಸಕರು ನನ್ನ ಕೈಯ್ಯಲ್ಲಿ ಅನುದಾನ ತರಲು ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತರೆ ನಾನು ಮತ್ತು ಕೆ.ಪಿ.ನಂಜುಂಡಿ ಅವರು ಒಂದಾಗಿ 50 ಲಕ್ಷ ರೂ ಜೊತೆಗೆ ಇನ್ನೂ ಹೆಚ್ಚಿನ ಅನುದಾನವನ್ನು ಬಿಡುಗಡೆ ಮಾಡಿಸಿ ತರುತ್ತೇವೆ. ವಿಶ್ವಕರ್ಮ ಸಮಾಜವನ್ನು ನನಗೆ ಕಂಡರೆ ಭಾರೀ ಗೌರವವಿದೆ. ವಿಶ್ವಕರ್ಮ ಬಂಧುಗಳು ತಮ್ಮ ವೃತ್ತಿಕೌಶಲ್ಯದ ಕೈಕಸುಬುಗಳ ಮೂಲಕ ಸಾಧನೆ ಮಾಡಬೇಕು. ತಮ್ಮ ಮಕ್ಕಳನ್ನು ಕಡ್ಡಾಯವಾಗಿ ವಿದ್ಯಾವಂತರನ್ನಾಗಿ ಮಾಡಿ ಸಮಾಜಕ್ಕೆ ಕೊಡುಗೆಯಾಗಿ ನೀಡಬೇಕು ಎಂದು ಹೇಳಿದರು.
ಶಾಸಕರಾದ ಹೆಚ್.ಟಿ.ಮಂಜು ಮಾತನಾಡಿ ತಾಲ್ಲೂಕಿನ ವಿಶ್ವಕರ್ಮ ಸಮಾಜದ ಅಭಿವೃದ್ಧಿಗೆ ನನ್ನ ಅಧಿಕಾರದ ಅವಧಿಯಲ್ಲಿ ಶಕ್ತಿ ಮೀರಿ ಶ್ರಮಿಸುತ್ತೇನೆ. ವಿಶ್ವಕರ್ಮ ಅಭಿವೃದ್ಧಿ ನಿಗಮದಿಂದ ಬರುವ ಅನುಧಾನ, ಗಂಗಾಕಲ್ಯಾಣ ಯೋಜನೆ, ಸೇರಿದಂತೆ ಎಲ್ಲಾ ಯೋಜನೆಗೆ ಫಲಾನುಭವಿಗಳನ್ನು ತಾಲ್ಲೂಕು ವಿಶ್ವಕರ್ಮ ಮುಖಂಡರ ಸಲಹೆ ಪಡೆದು ಅರ್ಹರನ್ನು ಆಯ್ಕೆ ಮಾಡುತ್ತೇನೆ ಎಂದು ಹೇಳಿದರು.
ಅರಕಲಗೂಡಿನ ಶ್ರೀವಿಶ್ವಕರ್ಮ ಮಹಾಸಂಸ್ಥಾನ ಮಠದ ಶ್ರೀಗುರುಶಿವ ಸುಜ್ಞಾನತೀರ್ಥ ಮಹಾಸ್ವಾಮೀಜಿಗಳು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿ ಮಾತನಾಡಿ, ರಾಜ್ಯಾದ್ಯಂತ ವಿಶ್ವಕರ್ಮ ಸಮುದಾಯವನ್ನು ಸಂಘಟಿಸುವಲ್ಲಿ ಅಪಾರವಾಗಿ ಶ್ರಮಿಸುತ್ತಿದ್ದಾರೆಮ ಇವರ ನೇತೃತ್ವದಲ್ಲಿ ಎಸ್.ಟಿ. ಮೀಸಲಾತಿ ಹೋರಾಟ ನಡೆಸಿದರೆ ಯಶಸ್ವಿಯಾಗಬಹುದಾಗಿ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮಕ್ಕೂ ಮುನ್ನ ತಾಲ್ಲೂಕು ಟಿಎಪಿಸಿಎಂಎಸ್ ಸಂಸ್ಥೆಯ ಆವರಣದಿಂದ ಆರಂಭವಾದ ವಿಶ್ವಕರ್ಮ ದೇವರ ಭಾವಚಿತ್ರ ಮೆರವಣಿಗೆ ಗೆ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚೆಲುವರಾಯಸ್ವಾಮಿ ಚಾಲನೆ ನೀಡಿ, ಸಮುದಾಯದವರು ನೀಡಿದ ಬಿನ್ನವತ್ತಳೆಯನ್ನು ಸ್ವೀಕರಿಸಿ ವಿಶ್ವಕರ್ಮ ಸಮುದಾಯದ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುವ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕ ಹೆಚ್.ಟಿ.ಮಂಜು, ಸಮಾಜ ಸೇವಕ ಆರ್.ಟಿ.ಓ ಮಲ್ಲಿಕಾರ್ಜುನ್, ಮಾಜಿ ಶಾಸಕ ಬಿ.ಪ್ರಕಾಶ್, ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಕೆ.ಶ್ರೀನಿವಾಸ್, ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಹೆಚ್.ಕೆ.ಅಶೋಕ್, ಬಿಜೆಪಿ ಮುಖಂಡ ಶ್ರೀರಂಗಪಟ್ಟಣ ಸಚ್ಚಿದಾನಂದ, ರಾಜ್ಯ ವಿಶ್ವಕರ್ಮ ಯುವಮಿಲನ್ ಅಧ್ಯಕ್ಷ ವಿಕ್ರಮ್. ಆಚಾರ್ಯ, ರಾಜ್ಯ ಸಹಕಾರ ಮಾರಾಟ ಮಹಾಮಂಡಲದ ನಿರ್ದೇಶಕ ಎಸ್.ಎಲ್.ಮೋಹನ್, ತಾ.ಪಂ.ಮಾಜಿ ಅಧ್ಯಕ್ಷ ಜವರಾಯಿಗೌಡ, ತಾಲೂಕು ಜೆಡಿಎಸ್ ಅಧ್ಯಕ್ಷ ಜಾನಕೀರಾಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಳಹಳ್ಳಿ ವಿಶ್ವನಾಥ್, ಕೆಪಿಸಿಸಿ ಸದಸ್ಯ ಕಿಕ್ಕೇರಿ ಸುರೇಶ್, ಜಿಲ್ಲಾ ಹಾಪ್‌ಕಾಮ್ಸ್ ಅಧ್ಯಕ್ಷ ಕೆ.ಜಿ.ತಮ್ಮಣ್ಣ, ಮನ್‌ಮುಲ್ ನಿರ್ದೇಶಕ ಡಾಲುರವಿ, ಪುರಸಭೆ ಅಧ್ಯಕ್ಷ ನಟರಾಜು, ಪುರಸಭೆ ಸದಸ್ಯರಾದ ಬಸ್‌ಸಂತೋಷ್, ಗಿರೀಶ್, ರವೀಂದ್ರಬಾಬು, ಸುಗುಣ, ರಮೇಶ್, ಡಿ. ಪ್ರೇಂಕುಮಾರ್, ಕೆ.ಎಸ್.ಪ್ರಮೋದ್, ತಿಮ್ಮೇಗೌಡ, ಪಂಕಜಾ, ಪ್ರಕಾಶ್, ವಿಶ್ವಕರ್ಮ ಸಮಾಜದ ಮುಖಂಡ ತಿಲಕೇಶಆಚಾರ್, ಯೋಗಾಚಾರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಕೆ.ಎಸ್.ಬಸವೇಗೌಡ, ತಾಲ್ಲೂಕು ವಿಶ್ವಕರ್ಮ ಕುಶಲ ಕೈಗಾರಿಕಾ ಸಹಕಾರ ಸಂಘದ ಅಧ್ಯಕ್ಷ ಕೆ.ಎನ್.ಕುಮಾರಸ್ವಾಮಿ, ಈಶ್ವರಾಚಾರ್, ರೂಪೇಶಾಚಾರ್, ಜಿ.ಎಸ್.ಮಂಜು, ರಮೇಶ್, ಎಸ್.ಅಶೋಕ್, ಗುರುಮೂರ್ತಾಚಾರ್, ಚೌಡಾಚಾರ್, ಟಿಎಪಿಸಿಎಂಎಸ್ ರವಿ, ಜಿ.ಎಸ್.ಮಂಜು, ರಮೇಶ್, ಶಶಿಧರ್, ಸೋಮಾಚಾರ್, ಪ್ರಕಾಶಾಚಾರ್, ಗಾಯತ್ರಿ, ಸೇರಿದಂತೆ ಸಾವಿರಾರು ವಿಶ್ವಕರ್ಮ ಸಮುದಾಯದ ಬಂಧುಗಳು ಕಾರ್ಯಕ್ರಮದಲ್ಲಿ ಮತ್ತಿತರರು ಭಾಗವಹಿಸಿದ್ದರು.
ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಮೋದೂರು ಪುರುಷೋತ್ತಮ್ ಸಂಘದ ಬೇಡಿಕೆಯನ್ನು ಮಂಡಿಸಿದರು. ತಾಲೂಕು ವಿಶ್ವಕರ್ಮ ಕೈಗಾರಿಕಾ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಪ್ರೆಸ್ ಕುಮಾರಸ್ವಾಮಿ ಸ್ವಾಗತಿಸಿದರು. ಅಗ್ರಹಾರಬಾಚಹಳ್ಳಿ ರೂಪೇಶಾಚಾರ್ ವಂದಿಸಿದರು.
ವರದಿ: ಶ್ರೀನಿವಾಸ್, ಕೆ.ಆರ್.ಪೇಟೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ







