ಕಾರವಾರದ ನೌಕಾನೆಲೆಯಲ್ಲಿ ಒಂದು ದಿನ

Upayuktha
0



ನ್ನ ಪತಿ ಬಿಜಾಪುರದ ಸೈನಿಕ ಶಾಲೆಯ ಹಳೆಯ ವಿದ್ಯಾರ್ಥಿ. ಈ ಶಾಲೆಯು ಪ್ರಾರಂಭವಾಗಿ ಇದೀಗ 60 ವರ್ಷಗಳು ಸಂದ ಸಮಯದಲ್ಲಿ ನನ್ನ ಪತಿಯ ಬ್ಯಾಚ್ನ ವಿದ್ಯಾರ್ಥಿಗಳು ಗೋವಾ ಮತ್ತು ಕಾರವಾರಗಳಲ್ಲಿ ಸ್ನೇಹ ಸಮ್ಮಿಳನವನ್ನು ಆಯೋಜಿಸಿದರು. ಇಲ್ಲಿಯೇ ಆಯೋಜಿಸಲು ಕಾರಣ ಅವರ ಸಹಪಾಠಿಯಾದ ರಾಮಕೃಷ್ಣ ಅವರು ಕಾರವಾರ ನೌಕಾನೆಲೆಯ ವಾಯ್ಸ್ ಅಡ್ಮಿರಲ ಆಗಿ ನಿಯೋಜಿತರಾಗಿದ್ದು ಅವರ ಸ್ನೇಹಿತರಿಗೆ ಕಾರವಾರ ನೌಕಾನೆಲೆ ತೋರಿಸಬೇಕೆಂಬುದು ಅವರ ಆಶಯವೂ ಆಗಿತ್ತು. ಹಿಂದೊಮ್ಮೆ ಸೀಬರ್ಡ್ ನೌಕಾ ನೆಲೆಯನ್ನು ನೋಡಬೇಕೆಂಬ ನನ್ನ ಮಹತ್ವಾಕಾಂಕ್ಷೆ ಇದೀಗ ನೆರವೇರಲಿತ್ತು. ನನ್ನ ಉತ್ಸಾಹ ಮೇರೆ ಮೀರಿದ್ದು ಅಂತೆಯೇ ಇನ್ನಿತರ ಸ್ನೇಹಿತರು ಕೂಡ ಜೊತೆಗೂಡಿದ್ದರು.




ನಿಗದಿತ ದಿನ ಗೋವಾದಲ್ಲಿ ಮುಂಜಾನೆಯ ಉಪಹಾರವನ್ನು ಮುಗಿಸಿ ಸುಮಾರು ಏಳೆಂಟು ಕಾರುಗಳಲ್ಲಿ ಕಾರವಾರದತ್ತ ನಾವು ಪಯಣ ಬೆಳೆಸಿದೆವು. ನಮ್ಮೆಲ್ಲರ ಕಾರುಗಳಿಗೆ ಸೈನಿಕ ಶಾಲೆಯ ಸ್ನೇಹ ಸಮ್ಮಿಳನದ ಸ್ಟಿಕರ್ಗಳನ್ನು ಅಂಟಿಸಲಾಗಿತ್ತು. ಈಗಾಗಲೇ ಪರವಾನಗಿ ಪತ್ರ ದೊರೆತಿದ್ದು ನಮಗೆಲ್ಲ ಕಾರವಾರದ ನೌಕಾನೆಲೆಯ ಮುಖ್ಯ ದ್ವಾರದಲ್ಲಿ ನೌಕಾಪಡೆಯ ಅಧಿಕಾರಿಗಳು ಸ್ವಾಗತ ಕೋರಿ ನೌಕಾದಳದ ಆಫೀಸರ್ಸ್ ಮೆಸ್ ನೆಡೆ ಕರೆದೊಯ್ದರು. ಅಲ್ಲಿ ವಾಯ್ಸ್ ಅಡ್ಮಿರಲ್ ರಾಮಕೃಷ್ಣ ಅವರು ಮಾತನಾಡಿ ಕೆಲ ನಿಬರ್ಂಧಗಳನ್ನು ಮತ್ತು ಎಚ್ಚರಿಕೆಗಳನ್ನು ನಮಗೆ ನೀಡಿದರು. ನಂತರ ಅವರ ಸಹೋದ್ಯೋಗಿ ನಮಗೆ ನೌಕಾನೆಲೆಯಲ್ಲಿ ತೋರಿಸುವ ವಿಷಯಗಳನ್ನು ಸ್ಕ್ರೀನಿನ ಮೇಲೆ ತೋರಿಸುತ್ತಾ ವಿವರಣೆ ನೀಡಿದರು.




ಇದೀಗ ನಮ್ಮ ಗುಂಪು ಹೊರಟದ್ದು ನೌಕಾದಳದ ಎರಡು ದೊಡ್ಡ ಬಸ್ಸುಗಳಲ್ಲಿ. ನಾವು ಸುಮಾರು 80ಕ್ಕೂ ಹೆಚ್ಚು ಜನ ಇದ್ದೆವು. ಮೊಟ್ಟ ಮೊದಲು ನಮ್ಮನ್ನು ಕರೆದೊಯ್ದದ್ದು ಶಿಪ್ ಅಪ ಲಿಫ್ಟ್ ಮಾಡುವೆಡೆಗೆ. ದೊಡ್ಡ ದೊಡ್ಡ ಜಹಜುಗಳನ್ನು ರಿಪೇರಿಗಾಗಿ ಮತ್ತಿತರ ಸರ್ವಿಸ್ಗಳಿಗಾಗಿ ಕಡಲ ತೀರಕ್ಕೆ ಸುರಕ್ಷಿತವಾಗಿ ತಂದು ಅವುಗಳನ್ನು ಮೇಲೆತ್ತಿ ರಿಪೇರಿ ಮಾಡಲು ಬಳಸುವ ಈ ಸ್ಥಳವನ್ನು ಜೆಟ್ಟಿ ಎಂದು ಕರೆಯುತ್ತಾರೆ.



ಒಂದೇ ಗಾತ್ರದಲ್ಲಿ ದಪ್ಪನಾಗಿ ಕತ್ತರಿಸಿದ ಮರದ ನೂರಾರು ಹಲಗೆಗಳನ್ನು ಸಾಲಾಗಿ ಜೋಡಿಸಿ ಕೆಳಭಾಗದಲ್ಲಿ ಕಬ್ಬಿಣದ ಮತ್ತು ಉಕ್ಕಿನ ತಿರುಗುಣಿಗಳನ್ನು ಹೊಂದಿದ್ದು ನೂರಕ್ಕೂ ಹೆಚ್ಚು ಮೀಟರ್ ಉದ್ದವಾದ ಈ ಹಲಗೆಯ ಹಾಸಿನ ಮೇಲೆ ಹಡಗುಗಳನ್ನು ರಿಪೇರಿಗಾಗಿ ತಂದು ನಿಲ್ಲಿಸಲು ಕಬ್ಬಿಣದ ಎರಡು ದೊಡ್ಡ ದೊಡ್ಡ ಗ್ರಿಡ ಗಳನ್ನು ಬಳಸುತ್ತಾರೆ. ಈ ಗ್ರಿಡ್ ಗಳು ರೇಲಿಂಗ್ ನ್ನು ಹೊಂದಿದ್ದು ಶಿಪ್ ನ ಕೆಳಗೆ.... ಮುಂಭಾಗ ಮತ್ತು ಹಿಂಭಾಗದ ಜಹಜಿನ ಭಾಗವನ್ನು ಬಲವಾದ ಆಸರೆ ನೀಡುವ ಮೂಲಕ ಎತ್ತಿ ಹಿಡಿಯುತ್ತವೆ. ಕಬ್ಬಿಣದ ಮತ್ತು ಉಕ್ಕಿನ ತಿರುಗಣಿಗಳನ್ನು ಹೊಂದಿರುವ, ನೂರಾರು ಉಕ್ಕಿನ ದೊಡ್ಡ ದೊಡ್ಡ ಹಗ್ಗಗಳನ್ನು ಹೊಂದಿರುವ ಎರಡು ಬದಿಯಲ್ಲಿ 21: 21 ರಂತೆ ಸುಮಾರು 42 ಎತ್ತುವ ತಿರುಗಣಿ ರಾಟೆಗಳಿವೆ.



ತಿರುಗಣಿ ರಾಟೆಗಳ ಮೂಲಕ ಕಬ್ಬಿಣದ ತಳ ಭಾಗವನ್ನು ಹೊಂದಿರುವ ಮರದ ಹಲಗೆಗಳು ಸರಿಯುತ್ತಾ ಸುಮಾರು 20 ಕ್ಕೂ ಹೆಚ್ಚು ಅಡಿ ಕೆಳಗೆ ಹೋಗುತ್ತವೆ. ಆಗ ಹಡಗನ್ನು ನಿಧಾನವಾಗಿ ಈ ಹಲಗೆಯ ಮೇಲಿರುವ ಗ್ರಿಡ್ ಗಳ ಮೇಲೆ ಶಿಪ್ ನ ಮುಂಭಾಗ ಮತ್ತು ಹಿಂಭಾಗ ಸರಿಯಾಗಿ ಕುಳಿತುಕೊಳ್ಳುವಂತೆ ಸ್ವಯಂ ಚಾಲಿತ ಯಂತ್ರಗಳ ಸಹಾಯದಿಂದ ಹಡಗನ್ನು ಏರಿಸುತ್ತಾರೆ. ನಂತರದ್ದು ಇನ್ನೂ ಸಾಹಸದ ಕೆಲಸ . ಇದೀಗ ಎರಡು ಬದಿಯ 42 ತಿರುಗಣಿ ರಾಟೆಗಳನ್ನು ಎಲೆಕ್ಟ್ರಿಕ್ ಜಾಕ್ಗಳ ಮೂಲಕ ಮೇಲೇರಿಸುತ್ತಾ ನಿಧಾನವಾಗಿ ಹಡಗನ್ನು ಮೇಲೆತ್ತುತ್ತಾರೆ. ಇಂತಹ ಸಮಯದಲ್ಲಿ ಹಡಗಿಗೆ ಯಾವುದೇ ರೀತಿಯ ಧಕ್ಕೆಯಾಗದಿರುವಂತೆ ನೋಡಿಕೊಳ್ಳುವುದು ಅಸೀಮ ಸಾಹಸದ ಕೆಲಸ. ಆದ್ದರಿಂದಲೇ ಹಡಗಿನ ಪಕ್ಕದಲ್ಲಿಯೇ ಬರುವಂತೆ ಸಾಕಷ್ಟು ಟೈರುಗಳನ್ನು ಕಟ್ಟಿರುವ ವಸ್ತುಗಳನ್ನು ಅಲ್ಲಲ್ಲಿ ಜೋಡಿಸಿ ಇಟ್ಟಿರುತ್ತಾರೆ. ಈ ಜೇಟ್ಟಿಯಲ್ಲಿ ಸುಮಾರು 9958 ಟನ್ ತೂಕದವರೆಗಿನ ಹಡಗುಗಳನ್ನು ಎತ್ತಲು ಸಾಧ್ಯವಿದೆ. ಹಾಗಾಗಿಯೇ ಏಷ್ಯಾದ ಅತಿ ದೊಡ್ಡ ಜೆಟ್ಟಿಯೆಂಬುದು ಕಾರವಾರದ ನೌಕಾನೆಲೆಯ ಹೆಗ್ಗಳಿಕೆಯಾಗಿದೆ.



ನಂತರ ನಾವು ನೋಡಲು ಹೋಗಿದ್ದು ಐಎನ್ಎಸ್ ಮಕರ ಎಂಬ ಹಡಗನ್ನು. ನ್ಯಾವಿಗೇಶನ್ ಚಾರ್ಟ್ ಗಳನ್ನು ತಯಾರಿಸಲು ಹೈಡ್ರೋಗ್ರಾಫಿಕ್ ಸಮೀಕ್ಷೆಗಳನ್ನು ಐಎನ್ಎಸ್ ಮಕರ ಕಾರ್ಯನಿರ್ವಹಿಸುತ್ತದೆ. ಸೀಮಿತ ಸಮುದ್ರಶಾಸ್ತ್ರದ ಸಮೀಕ್ಷೆಗಳನ್ನು ನಡೆಸಲು ಸಮುದ್ರದ ಪರಿಸರದ ಮಾಹಿತಿಯನ್ನು ಸಂಗ್ರಹಿಸುವ ಸಾಮಥ್ರ್ಯವನ್ನು ಕೂಡ ಐಎನ್ಎಸ್ ಮಕರ ಹೊಂದಿದೆ. ಮುಖ್ಯವಾಗಿ ಇದೊಂದು ಯುದ್ಧ ಹಡಗಲ್ಲ. ಇದನ್ನು ಬ್ಯಾಕೆಂಡ್ ಸಪರ‍್ಟ್ ನೌಕೆ ಎಂದು ಹೇಳಬಹುದು.



ನಾಲ್ಕು ಇಂಜಿನ್ ಗಳು ಮತ್ತು ಎರಡು ಬ್ರೋತ್ ರೆಸ್ಟೋರ್ ಗಳನ್ನು ಒಳಗೊಂಡಿರುವ ಮಕರ ಒಂದು ಸಂಯೋಜಿತ ಪ್ಲಾಟ್ ಫಾರ್ಮ್ ನಿರ್ವಹಣಾ ವ್ಯವಸ್ಥೆಯನ್ನು ಹಡಗಿನ ಶಕ್ತಿ ನ್ಯಾವಿಗೇಶನ್ ಮತ್ತು ಪ್ರೊಪಲ್ಶನ್ ಸಿಸ್ಟಮ್ಗಳನ್ನು ಜೋಡಿಸುತ್ತದೆ. ಐಎನ್ಎಸ್ ಮಕರ್ ನಲ್ಲಿ ಸಮೀಕ್ಷೆಯ ಮೋಟಾರ್ ಬೋಟ್ಗಳು ಮಕರ್ ದಲ್ಲಿ ಇರುತ್ತವೆ. ಅದಕ್ಕೆ ಧ್ವನಿ ನೀಡುವ ವ್ಯವಸ್ಥೆಗಳು ಕೆಳಭಾಗದಲ್ಲಿ ಪ್ರೊಪೆಲ್ಲರ್ ಗಳು  ಮತ್ತು ಸುಧಾರಿತ ಎಲೆಕ್ಟ್ರಾನಿಕ್ ವ್ಯವಸ್ಥೆ ಹೊಂದಿರುವ ವ್ಯಾಪಕ ಶ್ರೇಣಿಯ ಸಮೀಕ್ಷಾ ಸಾಧನಗಳನ್ನು, ಕಂಪ್ಯೂಟರ್ ಬೋರ್ಡ್ ಗಳನ್ನು ಅಳವಡಿಸಲಾಗಿದೆ. ಆಟೋ ಗೇರ್ ಗಳನ್ನು ಹೊಂದಿರುವ ಅತ್ಯಾಧುನಿಕ ಶ್ರೇಣಿಯ ವೀಕ್ಷಣೆ ಅವಕಾಶ ಇಲ್ಲಿದೆ. ಸಮುದ್ರದ ಇಂತಿಷ್ಟು ಆಳ, ಇಂತಿಷ್ಟು ಅಗಲ ಮತ್ತು ಇಂಥದ್ದೇ ಪ್ರದೇಶದಲ್ಲಿ ಸರ್ವೆ ಮಾಡಬೇಕೆಂದು ಕಂಪ್ಯೂಟರ್ ಮೂಲಕ ಪ್ರೊಪೆಲ್ಲರ್  ಗಳಿಗೆ ಫೀಡ್ ಮಾಡಿದರೆ ಸಾಕು ನಿಮಗೆ ಬೇಕಾದ ಮಾಹಿತಿ ಕಂಪ್ಯೂಟರ್ ನ ವಿವಿಧ ಪರದೆಗಳಲ್ಲಿ ಸಿದ್ಧವಾಗುತ್ತದೆ ಹೀಗೆ ಸಿದ್ಧವಾದ ಮಾಹಿತಿಯನ್ನು ನಾವು ಆಯಾ ಬಂದರುಗಳಿಗೆ ಬರುವ ಬೇರೆ ದೇಶದ ಜಹಜುಗಳಿಗೂ ಕೂಡ ನಮ್ಮ ನೌಕಾ ನೆಲೆಯವರು ಮಾರಿಕೊಳ್ಳಬಹುದು.



ಯಾವುದೇ ಪ್ರದೇಶದಲ್ಲಿ ಹಡಗು ಮುಳುಗಿದಾಗ, ಸಮುದ್ರದ ಆಳದಲ್ಲಿ ಮನುಷ್ಯರು ಕಾಣೆಯಾದಾಗ, ಹವಳದ ದಿಬ್ಬಗಳನ್ನು ನೋಡಲು, ಸಮುದ್ರದ ಆಳದಲ್ಲಿರುವ ಬೆಟ್ಟ ಗುಡ್ಡಗಳನ್ನು ಅಳೆಯಲು ಹೀಗೆ ಹಲವಾರು ಕಾರಣಗಳಿಗಾಗಿ ಐಎನ್ಎಸ್ ಮಕರ ಶ್ರೇಣಿಯ ಜಹಜುಗಳನ್ನು ಬಳಸಲಾಗುತ್ತದೆ. ಐಎನ್‍ಎಸ್ ಮಕರ್ ನಲ್ಲಿರುವ ಟಾರ್ಪಿಡೋ ಎಂಬ ಪುಟಾಣಿ ಯಂತ್ರದ ಬೆಲೆ 48 ಕೋಟಿಗೂ ಹೆಚ್ಚು. ಹಿಂಭಾಗದಲ್ಲಿ ರೆಕ್ಕೆಗಳನ್ನು ಹೊಂದಿರುವ ಬ್ಯಾಟರಿ ಚಾಲಿತ ಟಾರ್ಪಿಡೋ ಸಾವಿರ ಮೀಟರ್ ಗಳ ಆಳದವರೆಗೆ ಇಳಿದು ಸರ್ವೇಕ್ಷಣ ಮಾಡುವ ಕೆಪಾಸಿಟಿಯನ್ನು ಹೊಂದಿದೆ. ಎಲೆಕ್ಟ್ರಿಕ್ ಬ್ಯಾಟರಿಯ ಮೂಲಕ ಚಾರ್ಜ್ ಮಾಡಲಾಗುವ ಈ ಟಾರ್ಪಿಡೋ ಸುಮಾರು ಒಂದೂವರೆ ಗಂಟೆಗಳ ಕಾಲ ಅಂದರೆ 90 ನಿಮಿಷಗಳ ಕಾಲ ನೀರಲ್ಲಿ ಇರಬಲ್ಲ ಸಾಮಥ್ರ್ಯವನ್ನು ಹೊಂದಿರುತ್ತದೆ. ಮತ್ತೆ ಮೇಲೆ ಬಂದು ಬ್ಯಾಟರಿ ಮರುಪೂರಣವನ್ನು ಕೈಗೊಂಡು ವಾಪಸ್ಸು ತನ್ನ ಕಾರ್ಯಾಚರಣೆಯನ್ನು ಮುಂದುವರಿಸಲು ಹೋಗಬಹುದು.ಇತ್ತೀಚೆಗೆ 2023ರ ಫೆಬ್ರುವರಿಯಲ್ಲಿ ಮಂಗಳೂರಿನ ಬಳಿ ನಡೆದ ದುರಂತದಲ್ಲಿ ಸುಮಾರು 151 ಮೀಟರ ಸಮುದ್ರದ ಆಳಕ್ಕೆ ಹೋಗಿ ಕಾರ್ಯ ನಿರ್ವಹಿಸಿದ್ದು ಇದೇ ಟಾರ್ಪಿಡೋ. ಐಎನ್ಎಸ್ ಮಕರನ ಒಂದು ಕಾರ್ಯಾಚರಣೆಗೆ ಸುಮಾರು 80 ಕೆ ಎಲ್ ನಷ್ಟು ಡೀಸೆಲ್ ಇಂಧನ ಬೇಕು ಮತ್ತು ಟಾರ್ಪಿಡೋಗೆ ಕೂಡ ಅತಿ ಹೆಚ್ಚಿನ ಪ್ರಮಾಣದ ಬ್ಯಾಟರಿಯ ಚಾರ್ಜ್ ಬೇಕಾಗುತ್ತದೆ.



ಕೋಟಿಗಟ್ಟಲೆ ಬೆಲೆಬಾಳುವ ಈ ಸರ್ವೇ ವಾಹನದ ಅವಶ್ಯಕತೆ ಅಷ್ಟರಮಟ್ಟಿಗೆ ಇದೆಯೇ ಎಂಬ ನನ್ನ ಪ್ರಶ್ನೆಗೆ ನಸುನಕ್ಕ ಆ ನೌಕಾಧಿಕಾರಿ ಹೇಳಿದ್ದು ಇಂದಿಗೂ ಕೂಡ ಜಗತ್ತಿನ ಶೇಕಡ 90ರಷ್ಟು ವ್ಯವಹಾರ ಮತ್ತು ಸಾಗಾಣಿಕೆ ನಡೆಯುವುದು ಸಾಗರಗಳ ಮೂಲಕ. ಬೇರೆ ದೇಶಗಳೊಂದಿಗೆ ಯುದ್ಧ ಮಾಡಲು ಅಲ್ಲದಿದ್ದರೂ ನಮಗೆ ಬೇಕಾಗುವ ಅವಶ್ಯಕ ವಸ್ತುಗಳನ್ನು ಸುರಕ್ಷಿತವಾಗಿ ರಫ್ತು ಮತ್ತು ಆಮದು ಮಾಡಿಕೊಳ್ಳಲು, ನಮ್ಮ ನೀರಿನ ಗಡಿ ಪ್ರದೇಶವನ್ನು ರಕ್ಷಿಸಿಕೊಳ್ಳಲು ನಮಗೆ ಈ ಟಾರ್ಪಿಡೋಗಳು ಅತ್ಯಂತ ಅವಶ್ಯಕ ಎಂದು ಹೇಳಿದರು.



ನಂತರ ನಾವು ನೋಡಲು ಹೋಗಿದ್ದು ಸಬ್ ಮರೈನ್ ಗಳನ್ನು. ಕಾರವಾರ ನೌಕಾ ನೆಲೆಯಲ್ಲಿ ಸುಮಾರು ಆರು ಸಬಮರಿನ್ ಜಲಾಂತರ್ಗಾಮಿ ಯಂತ್ರಗಳಿವೆ. ನಮ್ಮ ತಂಡವನ್ನು ಇಬ್ಬಾಗಿಸಿ ಬೇರೆ ಬೇರೆ ಎರಡು ಸಬ್ ಮರಿನ್ ಗಳನ್ನು ನೋಡಲು ಕಳುಹಿಸಲಾಯಿತು. ಈ ಜಲಾಂತರ್ಗಾಮಿಗಳ ಮೇಲ್ಭಾಗದಲ್ಲಿ ಇರುವ ಬಾಗಿಲಿನ ಮೂಲಕ ಇಳಿಯಲು ಅವರು ಬಳಸುವ ಏಣಿ 90ಲಿ ನೇರವಾಗಿದ್ದು ಏಣಿಯನ್ನು ಗಟ್ಟಿಯಾಗಿ ಹಿಡಿದುಕೊಂಡು ಇಳಿಯಬೇಕು ಒಳಗೆ ಯಾವುದೇ ವಸ್ತುಗಳನ್ನು ಮುಟ್ಟಬಾರದು ಎಂದು ನಮಗೆ ಮೊದಲೇ ತಿಳಿಸಲಾಗಿತ್ತು ಜೊತೆಗೆ ಸುರಕ್ಷತೆಯ ಕಾರಣದಿಂದ ಯಾವುದೇ ರೀತಿಯ ಫೋಟೋ, ವಿಡಿಯೋ ಚಿತ್ರೀಕರಣ ಮಾಡದಂತೆ ಎಚ್ಚರಿಸಲಾಗಿತ್ತು. ಅವರ ಎಲ್ಲಾ ಎಚ್ಚರಿಕೆಯ ಸಂದೇಶಗಳನ್ನು ಸಂಪೂರ್ಣವಾಗಿ ಫಾಲೋ ಮಾಡಿದ ನಾವುಗಳು ಸಬ್ ಮರಿನ ಒಳಗೆ ಪ್ರವೇಶಿಸಿದವು ಸುಮಾರು 9 ಡಯಾಮೀಟರ್ ನಷ್ಟು ದೊಡ್ಡದಾದ ಸಬ್ಮರೈನ್ಗಳಲ್ಲಿ ಆರು ಟರ್ನಡೋಗಳು ಇರುತ್ತವೆ. ಸಬ್ಮರೈನ ಹೊರ ಭಾಗ ಮೀನಿನ ಆಕಾರದಲ್ಲಿಯೇ ಇದ್ದು ಹಿಂಭಾಗದಲ್ಲಿ ಫಿನ್ ಎಂಬ ಬಲು ಎತ್ತರದ ರೆಕ್ಕೆಯನ್ನು ಹೊಂದಿರುತ್ತದೆ. 



ಈ ಫಿನಗೆ ಜೋಡಿಸಿದಂತೆ ಸುಮಾರು ಹದಿನಾರು ಅಡಿ ಉದ್ದದ ಉಕ್ಕಿನ ಕಂಬವಿದ್ದು ಆ ಕಂಬದ ಮೇಲ್ಭಾಗಕ್ಕೆ ಕ್ಯಾಮರಾ ಫಿಕ್ಸ್ ಮಾಡಿರುತ್ತಾರೆ. ಸಮುದ್ರದಲ್ಲಿ 14 ಅಡಿ ಕೆಳಗೆ ಇರುವ ಸಬ್ ಮರಿನ್ ನ ಹೊರಭಾಗದಲ್ಲಿ ಕೇವಲ ಎರಡು ಮೀಟರ್ ಎತ್ತರದಲ್ಲಿ ಕಾಣುವ ಪುಟ್ಟ ಅಗೋಚರ ಕ್ಯಾಮೆರಾ ತನ್ನ ಸುತ್ತಲಿನ ದೃಶ್ಯವನ್ನು ಸಬ್ ಮರೀನ್ ಒಳಗೆ ಇರುವ ಕಂಪ್ಯೂಟರ್ ಪರದೆಯ ಮೇಲೆ ಮೂಡಿಸುತ್ತದೆ. ಸಬ ಮರೀನ ಒಳಗೆಯೇ ಕ್ಯಾಪ್ಟನ್ ಸೀಟಿನಲ್ಲಿ ಕುಳಿತು ಆಟೋ ಗೇರ್ ಹಾಕುತ್ತ 360ಲಿ ಕೋನದಲ್ಲಿ ಸಮುದ್ರದ ಮೇಲ್ಭಾಗವನ್ನು ಎಲ್ಲಾ ದಿಕ್ಕುಗಳಲ್ಲಿಯೂ ನಾವು ವೀಕ್ಷಿಸಬಹುದು.



ಸಬ್ ಮರಿನ್ ಒಂದು ಜಲಾಂತರ್ಗಾಮಿ ಯುದ್ಧ ನೌಕೆ.ಜಲಾಂತರ್ಗಾಮಿ ಒತ್ತಡದ ಹಲ್ ಅನ್ನು ಸಾಮಾನ್ಯವಾಗಿ ಸ್ಟೀಲ್, ಅಲ್ಯೂಮಿನಿಯಂ, ಟೈಟಾನಿಯಂ, ಅಕ್ರಿಲಿಕ್ ಪ್ಲಾಸ್ಟಿಕ್ ಮತ್ತು ಗಾಜಿನಿಂದ ತಯಾರಿಸಲಾಗುತ್ತದೆ. ಆದಾಗ್ಯೂ, ಹೆಚ್ಚು ವ್ಯಾಪಕವಾಗಿ ಬಳಸಲಾಗುವ ವಸ್ತು ಉಕ್ಕು. ಸಬಮರಿನ್ ನಲ್ಲಿರುವ ಟಾರ್ನಿಡೋ (ಸಮುದ್ರದಲ್ಲಿ ಉಪಯೋಗಿಸುವ ಸುಮಾರು 18 ಕಿಲೋಮೀಟರ ದೂರದವರೆಗೆ ಸಾಗಬಲ್ಲ ಅತಿ ದೊಡ್ಡ ಬಾಂಬ್) ದೊಡ್ಡ ದೊಡ್ಡ ಹಡಗುಗಳನ್ನು ಉರುಳಿಸಬಲ್ಲ ಸಾಮಥ್ರ್ಯವನ್ನು ಹೊಂದಿರುತ್ತದೆ.



ಇಂತಹ ಒಂದು ಟಾರ್ನಿಡೋ ವನ್ನು ಎಲೆಕ್ಟ್ರಾನಿಕ್ ಸ್ವಯಂ ಚಾಲಿತ ಯಂತ್ರಗಳ ಮೂಲಕ ಅದರ ಮೂಲಸ್ಥಾನದಿಂದ ಮಧ್ಯದಲ್ಲಿ ತಂದು ಶತ್ರು ವಾಹನದತ್ತ ಇಲ್ಲವೇ ಮತ್ತಿತರ ಪರಿಕರಗಳತ್ತ ಹಾರಿಸಿದಾಗ ಅದು ತನ್ನ ಗುರಿ ತಲುಪುವ ದಾರಿಯಲ್ಲಿ ಸಾಗುತ್ತದೆ. ಆದರೆ ಅದೇ ಸಮಯದಲ್ಲಿ ಸಬ ಮರಿನ ಒಳಗೆ ಹೊಗೆ ಆವರಿಸಿಕೊಳ್ಳುತ್ತದೆ ಆ ಸಮಯದಲ್ಲಿ ಅಲ್ಲಿಯೇ ಅಲ್ಲಲ್ಲಿ ಫಿಕ್ಸ್ ಮಾಡಿರುವ ಆಕ್ಸಿಜನ ಮಾಸ್ಕ್ ಗಳನ್ನು ಮೂಗಿಗೆ ಹಾಕಿಕೊಳ್ಳುವ ಮೂಲಕ ತಮ್ಮನ್ನು ತಾವು ಕಾಯ್ದುಕೊಳ್ಳುತ್ತಾರೆ ನೌಕೆಯಲ್ಲಿರುವ ಯೋಧರು. ಇಲ್ಲಿ ಹಲವಾರು ರೇಡಿಯಮ್ ದೀಪಗಳನ್ನು ಕೂಡ ಹಾಕಿದ್ದಾರೆ, ಅಕಸ್ಮಾತ್ ಬ್ಯಾಟರಿ ಏನಾದರೂ ನಿಂತು ಪವರ್ ಸಪ್ಲೈ ಕೈ ಕೊಟ್ಟರೆ ಈ ರೇಡಿಯಂ ದೀಪ್ಗಳ ಮೂಲಕ ಆಕ್ಸಿಜನ ಪವರ್ ಕೇಬಲ್ ನೋಡಿಕೊಳ್ಳಬಹುದು ಎಂದು. ಆದರೆ ಎಂದು ಸಬ್ ಮರಿನ ನೌಕೆಯ ಒಳಗೆ ನೀರು ನುಗ್ಗುವುದಿಲ್ಲ. 



ಎಂತದ್ದೇ ಕಠಿಣ ಪರಿಸ್ಥಿತಿಯಲ್ಲಿಯೂ ಕೂಡ ಎಂಟು ದಿನಗಳ ಕಾಲ ತನ್ನನ್ನು ತಾನು ಸಬ್ ಮರಿನ ರಕ್ಷಿಸಿಕೊಳ್ಳಬಲ್ಲದು. ಸುಮಾರು 90 ದಿನಗಳ ಕಾಲ ಸಬ್ ಮರೀನ ನೀರಿನಲ್ಲಿ ಇರಬಲ್ಲದು. ಈ ಜಲಾಂತರ್ಗಾಮಿ ನೌಕೆಯ ಒಳಗೆ ಆಕ್ಸಿಜನ್ ಮತ್ತು ನೀರನ್ನು ಮರು ಶುದ್ಧಿಕರಿಸಿ ಬಳಕೆ ಮಾಡಲಾಗುತ್ತದೆ. ಸಬ್ ಮರಿನ್ ನಲ್ಲಿ ಒಂದು ಇಲ್ಲವೇ ಎರಡು ಟಾಯ್ಲೆಟ್ ಗಳು ಮಾತ್ರವೇ ಇರುತ್ತದೆ. ಟಾರ್ನಿಡೊಗಳ ಕೆಳಗೆ ಹಲವಾರು 2x6 ಬೆಡ್ಗಳು ಇದ್ದು ಅವು ಟ್ರೇನಿಗಳಿಗಾಗಿ ಇದ್ದರೆ ಇನ್ನುಳಿದ ಜಲಾಂತರ್ಗಾಮಿ ನೌಕೆಯ ಯೋಧರಿಗೆ ಅಲ್ಲಲ್ಲಿ ಸ್ಥಳಾವಕಾಶ ಕಲ್ಪಿಸಲಾಗುತ್ತದೆ. ಕೇವಲ ಒಂದೂವರೆ ಅಡಿಯ ರಸ್ತೆ ಒಂದನ್ನು ಬಿಟ್ಟರೆ 80 ಅಡಿಗೂ ಹೆಚ್ಚು ಉದ್ದವಿರುವ ಈ ನೌಕೆಯಲ್ಲಿ ಮನುಷ್ಯನಿಗೆ ಸ್ಥಳಾವಕಾಶ ಅತ್ಯಂತ ಕಡಿಮೆಯಾದರೂ ಇತ್ತೀಚೆಗೆ ಕೆಲ ಸಬ್ ಮರಿನಗಳಲ್ಲಿ ಕುಳಿತು ಟಿವಿ ವೀಕ್ಷಣೆ ಮಾಡಲು, ದೈಹಿಕ ಆರೋಗ್ಯವನ್ನು ಕಾಯ್ದುಕೊಳ್ಳಲು ಜಿಮ್ ಪರಿಕರಗಳನ್ನು ಹೊಂದಿಸಿಡಲಾಗಿದೆ. ಇವರು ಕೆಡದೆ ಇರುವಂತಹ ಆಹಾರಗಳನ್ನು ಮಾತ್ರ ಸೇವಿಸಬೇಕು. ತಮ್ಮ ಆಹಾರ ತಯಾರಿಕೆಗೆ ಇವರು ಅಗ್ನಿಯನ್ನು ಬಳಸುವಂತಿಲ್ಲ. ಅತ್ಯಂತ ಕಡಿಮೆ ಬೇಯಿಸಲ್ಪಡುವ ಫ್ರೋಜನ್ ಫುಡ್ ಗಳನ್ನು ಮತ್ತು ಪ್ಯಾಕ್ ಮಾಡಲ್ಪಟ್ಟ ಪಾನೀಯಗಳನ್ನು ಸೇವಿಸಬೇಕು. ತಮ್ಮಲ್ಲಿರುವ ಆಹಾರದ ದಾಸ್ತಾನು ಖಾಲಿಯಾಗುವ ಸಮಯದಲ್ಲಿ ಹತ್ತಿರದ ಬಂದರಿಗೆ ಚಲಿಸಿ ಆಹಾರ ಮತ್ತು ಇಂಧನವನ್ನು ಮರುಪೂರಣಗೊಳಿಸಿಕೊಳ್ಳುತ್ತಾರೆ.



ಇದೆಲ್ಲವನ್ನು ನೋಡುವ ಹೊತ್ತಿಗೆ ಸುಮಾರು 3 ಗಂಟೆಗಳು ಕಳೆದು ಹೋಗಿತ್ತು ಆದರೂ ಹೊಸದೊಂದು ಜಗತ್ತಿನ ಅನಾವರಣವಾಗಿತ್ತು ಎಂದರೆ ತಪ್ಪಿಲ್ಲ. ನಮಗೆ ಈ ಎಲ್ಲ ವಿವರಣೆಗಳನ್ನು ನೀಡಿದ ಎಲ್ಲಾ ಯೋಧರು ಹೆಚ್ಚು ಕಮ್ಮಿ ಇಂಜಿನಿಯರಿಂಗ್ ಪದವೀಧರರಾಗಿದ್ದು ಅದರಲ್ಲಿ ಹಲವರು ಕಮಾಂಡೋ ತರಬೇತಿಗಳನ್ನು ಪಡೆದಿದ್ದರು. ಮನೆಯಿಂದ ಸಾಕಷ್ಟು ದೂರದಲ್ಲಿರುವ, ಮನೆಯ ಆಹಾರಕ್ಕಾಗಿ ಹಪಹಪಿಸುವ ಆದರೂ ದೇಶ ಸೇವೆಯ ಪ್ರಶ್ನೆ ಬಂದಾಗ ತಮ್ಮನ್ನು ತಾವು ದೇಶಕ್ಕೆ ಸಮರ್ಪಿಸಿಕೊಂಡಿರುವ ಈ ತರುಣ ಯೋಧರಿಗೆ ಒಂದು ಸಲ್ಯೂಟ್ ಅನ್ನು ಮನದಲ್ಲಿ ಸಲ್ಲಿಸಿ ಆ ಹಸನ್ಮುಖಿ ಯುವಕರ ಪರಿಚಯ ಮಾಡಿಕೊಂಡು ಕೈ ಕುಲುಕಿ ಸಬಮರಿನನಿಂದ ಹೊರಗೆ ಬಂದೆವು. ನಮ್ಮನ್ನು ಸದಾ ಸರ್ವದಾ ಕಾಪಾಡುವ ನೌಕಾ ಪಡೆಯ ಆ ಪುಟ್ಟ ಯೋಧರ ಸೇವೆಯನ್ನು ಕಂಡು ಮನ ತುಂಬಿ ಬಂದಿತ್ತು.



ಅಲ್ಲಿಂದ ನಮ್ಮ ಪಯಣ ಮತ್ತೆ ಆಫೀಸರ್ಸ್ ಮೆಸ್ ನೆಡೆಗೆ. ಸಾಕಷ್ಟು ಓಡಾಡಿದ್ದ ನಮಗೆ ಹೊಟ್ಟೆ ಹಸಿವಾಗಿತ್ತು. ನಮಗೆಂದೇ ನೌಕಾಪಡೆಯ ಆಫೀಸರ್ ಮೆಸ್ ನಲ್ಲಿ ಪುಷ್ಕಳವಾದ ಭೋಜನ ತಯಾರಾಗಿತ್ತು. ಜೊತೆಗೆ ವೈಸ್ ಅಡ್ಮಿರಲ್ ರಾಮಕೃಷ್ಣ ತಮ್ಮ ನೌಕಾ ದಳದ ಅಡ್ಮಿರಲ್ ಸಮವಸ್ತ್ರದಲ್ಲಿ ಮತ್ತು ಅವರ ಪತ್ನಿ ನಮ್ಮ ಆತಿಥ್ಯಕ್ಕೆ ಸಜ್ಜಾಗಿ ನಿಂತಿದ್ದರು. ಕೈ ತೊಳೆದವರೇ ಹೊಟ್ಟೆ ತುಂಬಾ ಊಟವನ್ನು ಸೇವಿಸಿ ಅಲ್ಲಿಯೇ ಕೊಂಚ ಕುಳಿತು ತಿಳಿಯಾದ ಮಾತುಕತೆಗಳನ್ನು ಆಡುತ್ತಾ ವಿರಾಮ ಅನುಭವಿಸಿದೆವು. ನಂತರ ಮತ್ತೆ ಬಸ್ ಏರಿದ ನಾವು ಆರ್ಮಿ ಹೆಡ್ ಕ್ವಾರ್ಟರ್ಸ್, ನೌಕಾದಳದ ಇತರ ಸಿಬ್ಬಂದಿಗಳ ವಸತಿ ಸಮುಚ್ಚಯಗಳು, ಶಾಲೆಗಳು ಆಟದ ಮೈದಾನ ಎಲ್ಲವನ್ನು ಬಸ್ನಲ್ಲಿಯೇ ಕುಳಿತು ವೀಕ್ಷಿಸುತ್ತಾ ಅಂಜದೀಪ ಎಂಬ ದ್ವೀಪದಡೆ ಹೊರಟೆವು. 



ಈ ಅಂಜದೀಪ ಎಂಬ ದ್ವೀಪವು ಕ್ರಿಸ್ತಶಕ 1498ರಲ್ಲಿ ವಾಸ್ಕೋಡಗಾಮ ಈ ದೀಪಕ್ಕೆ ಮೊದಲ ಬಾರಿ ಬಂದಿಳಿದನು. ಮುಂದೆ 1905 ಸಪ್ಟಂಬರ್ ನಲ್ಲಿ ಪೋರ್ಚುಗೀಸರ ಫ್ರಾನ್ಸಿಸ್ ಡಿ ಅಲ್ಮೇಡ ಇಲ್ಲಿ ಬಂದು ನೆಲೆಸಿದ ನಂತರ ಇದು ಅಧಿಕೃತವಾಗಿ ಪೋರ್ಚುಗೀಸರ ವಶವಾಯಿತು.ಭಾರತ ಸ್ವಾತಂತ್ರ್ಯಗೊಂಡರೂ 1961 ರವರೆಗೆ ಪೋರ್ಚುಗೀಸರ ಆಡಳಿತ ಇಲ್ಲಿತ್ತು.1961 ರಲ್ಲಿ ನಡೆದ ಗೋವಾ ವಿಮೋಚನೆಯ ಭೀಕರ ಕಾಳಗದಲ್ಲಿ ಈ ದ್ವೀಪವನ್ನು ಭಾರತೀಯ ನೌಕಾಪಡೆಯ ಯೋಧರು ತಮ್ಮ ಕೈವಶ ಮಾಡಿಕೊಂಡರು. ಈ ಪ್ರಯತ್ನದಲ್ಲಿ ಸುಮಾರು 500ಕ್ಕೂ ಹೆಚ್ಚು ಜನ ಜನ ಯೋಧರು ಮೃತರಾದರು. ಅವರಲ್ಲಿ 3 ಜನರಿಗೆ ಕೀರ್ತಿ ಚಕ್ರ ಮತ್ತು 3 ಶೌರ್ಯ ಚಕ್ರ ಮತ್ತಿತರ ಗ್ಯಾಲಂಟಿಯರ್ ಅವಾಡ್ರ್ಗಳನ್ನು ನೀಡಲಾಯಿತು. ಅಷ್ಟೇನೂ ಉಬ್ಬರವಿಳಿತಗಳಿಲ್ಲದ ಅತ್ಯಂತ ಸುರಕ್ಷಿತವಾದ ಈ ಬಂದರು ಪ್ರದೇಶದ ಮೂಲಕವೇ ಇಡೀ ಗೋವಾ ರಾಜ್ಯದ ಸಮುದ್ರ ಸಾರಿಗೆ ವ್ಯವಹಾರಗಳನ್ನು ನಿಯಂತ್ರಣ ಮಾಡುವ ಶಕ್ತಿ ಈ ಬಂದರಿಗಿದೆ.



ಈ ದ್ವೀಪಕ್ಕೆ ನೌಕ ನೆಲೆಯವರು ಕೇವಲ ಒಂದೆರಡು ವರ್ಷಗಳ ಹಿಂದೆ ರಸ್ತೆ ಮಾರ್ಗವನ್ನು ಕಲ್ಪಿಸಿದ್ದು, ಇಲ್ಲಿ ಒಂದು ಚರ್ಚ್ ಇದ್ದು ಇದೀಗ ಸ್ಥಳೀಯ ಗೋವನ್ನರು ನೌಕಾ ನೆಲೆಯವರ ಮೇಲೆ ಚರ್ಚ್ ಅನ್ನು ತಮ್ಮ ಸ್ವಾಧೀನಕ್ಕೆ ಬಿಟ್ಟುಕೊಡಲು ಕೋರ್ಟ್ ಮೊರೆ ಹೋಗಿದ್ದಾರೆ. ಆದರೆ ನೌಕಾ ನಿಲಯ ಸುರಕ್ಷತೆಗೆ ಈ ಕಾರ್ಯದಿಂದ ಧಕ್ಕೆ ಬರುವುದು ಎಂಬುದು ನೌಕಾ ನೆಲೆಯ ವಾದ.  ಹೊರಗಿನಿಂದಲೇ ಚರ್ಚ್ ಅನ್ನು ವೀಕ್ಷಿಸಿ ಮುಂದೆ ಅಂಜದೀಪ ದೇವಿಯ ಪುಟ್ಟ ಗುಡಿಯನ್ನು ದರ್ಶಿಸಿ ಅಲ್ಲಿಂದ ಹೊರಟ ನಾವು ಮತ್ತೆ ಬಂದದ್ದು ಅಡ್ಮಿರಲ್ ಅವರ ನಿವಾಸಕ್ಕೆ. ಸಮುದ್ರಕ್ಕೆ ಸುಮಾರು 40 ಅಡಿ ಮೇಲ್ಭಾಗದಲ್ಲಿ ಇರುವ ವಾಯ್ಸ್ ಅಡ್ಮಿರಲ್ ಅವರ ಭವ್ಯ ಬಂಗಲೆಯ ಮುಂದೆ ಸೈನಿಕ ಶಾಲೆಯ ಒಬಿಎ(ಓಲ್ಡ್ ಬಾಯ್ಸ್ ಅಸೋಸಿಯೇಷನ್)ನ ಎಲ್ಲ ವಿದ್ಯಾರ್ಥಿಗಳು ತಮ್ಮ ಪ್ರೀತಿಯ ಸ್ನೇಹಿತ ವಾಯ್ಸ್ ಅಡ್ಮಿರಲ್ ರಾಮ್ ಕಿ ಮತ್ತು ತಮ್ಮ ಕುಟುಂಬದ ಜೊತೆ ನಿಂತು ಆ ಕ್ಷಣಕ್ಕೆ ಸಾಕ್ಷಿಯಾಗಿ ಭಿತ್ತಿಚಿತ್ರ ತೆಗೆಸಿಕೊಂಡರು.



ಮತ್ತೆ ನಮ್ಮ ಬಸ್ಸು ಅಲ್ಲಿಂದ ಹೊರಟು ನೀವು ಆಫೀಸರ್ಸ್ ಮೆಸೇಜ್ ನಲ್ಲಿ ಚಹಾ ಕಾಫಿ ಸೇವನೆ ಮಾಡಿ ದೆವು. ನಂತರ ವಾಯ್ಸ್ ಅಡ್ಮಿರಲ್ ನಾವೆಲ್ಲ ಹೆಣ್ಣು ಮಕ್ಕಳಿಗೆ ನೇವಿಯ ಪ್ರಮುಖ ಸಾಧನಗಳನ್ನು ಹೊಂದಿರುವ ಶಾಲುಗಳನ್ನು ಕಾಣಿಕೆಯಾಗಿ ನೀಡಿದರು. ತುಂಬು ಹೃದಯದಿಂದ ಕಾಣಿಕೆಗಳನ್ನ ಸ್ವೀಕರಿಸಿದ ನಾವು ಮತ್ತೊಮ್ಮೆ ಅವರೊಂದಿಗೆ ಫೋಟೋ ತೆಗೆಸಿಕೊಂಡೆವು. ಮತ್ತೆ ನೇವಿಯ ಎಲ್ಲಾ ಆಫೀಸರ್ ಗಳಿಗೆ ಧನ್ಯವಾದಗಳು ತಿಳಿಸಿ ಗೋವಾದತ್ತ ಪಯಣ ಬೆಳೆಸಿದವು.



-ವೀಣಾ ಹೇಮಂತ್ ಗೌಡ ಪಾಟೀಲ್ 

ಮುಂಡರಗಿ, ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top