ಕಾರಂತರು ಒಬ್ಬ ವ್ಯಕ್ತಿಯಲ್ಲ ಒಂದು ಸಂಸ್ಥೆ: ಡಾ. ಜಯರಾಜ್ ಅಮೀನ್

Upayuktha
0




ಮಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ ಎನ್ನುವ ಗಾದೆ ಮಾತು ಶಿವರಾಮ ಕಾರಂತರಿಗೆ ಅನ್ವರ್ಥವಾಗುತ್ತದೆ. ಕಾರಂತರು ಕಾಲಿಡದ ಕ್ಷೇತ್ರವಿಲ್ಲ. ಕೇವಲ ಸಾಹಿತ್ಯಕ್ಕೆ ಸೀಮಿತವಾಗಿರದೆ ಪರಿಸರ, ಮಕ್ಕಳ ಬರವಣಿಗೆ, ಯಕ್ಷಗಾನ, ಸಮಾಜ, ಹೋರಾಟ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಚಾಪನ್ನು ಮೂಡಿಸಿದ್ದಾರೆ. ಒಬ್ಬ ವ್ಯಕ್ತಿ ಇಷ್ಟು ಸಾಧನೆ ಮಾಡುವುದಕ್ಕೆ ಸಾಧ್ಯನಾ ಎಂದು ಆಶ್ಚರ್ಯ ಚಕಿತರಾಗುತ್ತೇವೆ. ಹಾಗಾಗಿ ಕಾರಂತರು ಒಬ್ಬ ವ್ಯಕ್ತಿಯಲ್ಲ ಒಂದು ಸಂಸ್ಥೆಯ ಹಾಗೆ ನಮ್ಮೆದುರು ನಿಲ್ಲುತ್ತಾರೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಜಯರಾಜ್ ಅಮೀನ್  ಹೇಳಿದರು. 



ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ, ಶಿವರಾಮ ಕಾರಂತ ಅಧ್ಯಯನ ಪೀಠ ಮತ್ತು ವಿವಿ ಕಾಲೇಜಿನ ಕನ್ನಡ ವಿಭಾಗದ ಸಹಯೋಗದಲ್ಲಿ ಮಂಗಳವಾರ, ಶಿವರಾಮ ಕಾರಂತರ ಜನ್ಮ ದಿನಾಚರಣೆಯ ಪ್ರಯುಕ್ತ ಆಯೋಜಿಸಲಾಗಿದ್ದ "ಕಾರಂತ ಸಂಸ್ಮರಣೆ- ವಿಶೇಷ ಉಪನ್ಯಾಸ" ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 



ಸಮಾಜದಲ್ಲಿರುವ ವಿಪರೀತಗಳನ್ನು ಮುಚ್ಚು ಮರೆ ಇಲ್ಲದೆ ತನ್ನ ಬರವಣಿಗೆಗಳಲ್ಲಿ ಪರಿಣಾಮಕಾರಿಯಾಗಿ ವ್ಯಕ್ತಪಡಿಸಿರುವ ವ್ಯಕ್ತಿ. ಯಾವುದು ಸರಿ ಎಂದೆನಿಸುತ್ತದೆಯೋ ಅದನ್ನು ನಿರ್ಭೀತಿಯಿಂದ ಅಭಿವ್ಯಕ್ತಿಸಿದವರು. ಇದೇ ಕಾರಣಕ್ಕೆ ಕಾರಂತರು ಒಬ್ಬ ಆದರ್ಶ ವ್ಯಕ್ತಿಯಾಗಿ ಕಾಣುತ್ತಾರೆ ಎಂದರು. 



ದಕ್ಷಿಣ ಕನ್ನಡ ಜಿಲ್ಲಾ ಕ. ಸಾ. ಪ ಅಧ್ಯಕ್ಷ ಎಂ. ಪಿ. ಶ್ರೀನಾಥ್ ಮಾತನಾಡಿ, ಶಿವರಾಮ ಕಾರಂತರು ವಿಶ್ವ ಕಂಡ ಶ್ರೇಷ್ಠ ಸಾಹಿತಿಗಳಲ್ಲಿ ಅಗ್ರಗಣ್ಯರು. ಅವರ ಕಾದಂಬರಿಗಳಲ್ಲಿ ನಾವು ಅಧ್ಯಯನ ಶೀಲತೆಯನ್ನ ಗಮನಿಸಬಹುದು. ಅವರು ತಾನು ಏನನ್ನು ಕಂಡಿದ್ದೇನೆಯೋ ಅದರ ಆಧಾರದಲ್ಲೇ ಸಾಹಿತ್ಯವನ್ನು ರಚಿಸಿದವರು. ಹಾಗಾಗಿ ಪ್ರತಿದಿನವೂ ಅವರನ್ನು ನೆನಪಿಸಿಕೊಳ್ಳುವುದು ಪ್ರಸ್ತುತವಾಗುತ್ತದೆ ಎಂದು ಹೇಳಿದರು.



 

"ಕಾರಂತರ ಬದುಕು-ಬರಹ" ವಿಷಯದ ಕುರಿತು ವಿಶೇಷ ಉಪನ್ಯಾಸ ನೀಡಿದ ಪ್ರೊ. ಮಹಾಲಿಂಗ ಭಟ್, ಶಿವರಾಮ ಕಾರಂತರ ಹಲವು ವಿಚಾರಗಳನ್ನು ನಾವು ಪ್ರಸ್ತುತ ದೃಷ್ಟಿಕೋನದಿಂದ ನೋಡಬೇಕಿದೆ. ಯಾವ ಲ್ಯಾಂಡ್ ಫೋನ್ ಇರದ ಕಾಲದಲ್ಲಿಯೂ ಕೂಡ ಡಾಕ್ಯುಮೆಂಟರಿ, ಸಿನಿಮಾ ಮೊದಲಾದ ಕ್ಷೇತ್ರಗಳಲ್ಲಿ ಕಾರಂತರು ಕೈಯಾಡಿಸಿದವರು. ಕೇವಲ ಸಾಹಿತ್ಯ ಕ್ಷೇತ್ರದಲ್ಲದೆ ಸಾಮಾಜಿಕ ನ್ಯಾಯಕ್ಕಾಗಿ ಶ್ರಮಿಸಿದವರು. ಪರಿಸರಕ್ಕಾಗಿ ಹೋರಾಡಿದವರು. ಹಾಗಾಗಿ ಅವರು ನಮಗೆ ಪ್ರೇರಣೆ ಎಂದರು. 



ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿವಿ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಮಾತನಾಡಿ, ನಾಡು ಕಂಡ ಶ್ರೇಷ್ಠ ಕವಿ ವಿವಿ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ್ದರು ಎನ್ನುವುದು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದರು. 



ಶಿವರಾಮ ಕಾರಂತ ಅಧ್ಯಯನ ಪೀಠದ ನಿರ್ದೇಶಕಿ ಡಾ. ಸುಭಾಷಿಣಿ ಶ್ರೀ ವತ್ಸ ಸ್ವಾಗತಿಸಿದರು. ವಿವಿ ಕಾಲೇಜಿನ ಕನ್ನಡ ಸಂಘದ ಸಹ ನಿರ್ದೇಶಕ ಡಾ. ಮಾಧವ ಎಂ.ಕೆ. ವಂದಿಸಿದರು. ವಿದ್ಯಾರ್ಥಿನಿ ಶ್ರೀ ಲಕ್ಷ್ಮಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಉಪನ್ಯಾಸಕರು, ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಮೊದಲಾದವರು ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌  ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ


web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top