ಗಂಗೇಚ ಯಮುನೇಚೈವ ಗೋದಾವರಿ ಸರಸ್ವತಿ, ನರ್ಮದೇ ಸಿಂಧು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು ||
ಈ ಪ್ರಸಿದ್ಧ ಸ್ತೋತ್ರವನ್ನು ನಾವು ಒಂದಲ್ಲಾ ಒಂದು ಸಮಯದಲ್ಲಿ ಕೇಳಿರುತ್ತೇವೆ ಮತ್ತು ಪಠಿಸಿರುತ್ತೇವೆ. ಭಾರತದ ಪ್ರಮುಖ ನದಿಗಳಾದ ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು, ಕಾವೇರಿ ಇವುಗಳನ್ನು ಪವಿತ್ರ ನದಿಗಳೆಂದು ವೇದೋಪನಿಷತ್ತುಗಳ ಕಾಲದಿಂದಲೂ ಪರಿಗಣಿಸಲಾಗಿದೆ.
ಈ ಸ್ತೋತ್ರದ ಅರ್ಥ ಈ ರೀತಿ ಇದೆ: "ಈ ನೀರಿನಲ್ಲಿ, ನಾನು ಗಂಗಾ, ಯಮುನಾ, ಗೋದಾವರಿ, ಸರಸ್ವತಿ, ನರ್ಮದಾ, ಸಿಂಧು ಮತ್ತು ಕಾವೇರಿ ನದಿಗಳ ದೈವಿಕ ಜಲಗಳ ಉಪಸ್ಥಿತಿಯನ್ನು ಆವಾಹಿಸುತ್ತೇನೆ. ಈ ನದಿಗಳನ್ನು ದೇವತೆಗಳೆಂದು ಪರಿಗಣಿಸಲಾಗಿದೆ ಮತ್ತು ನಾನು ಅವರನ್ನು ಪ್ರಾರ್ಥಿಸುತ್ತೇನೆ. ಅವರ ಆಶೀರ್ವಾದಕ್ಕಾಗಿ ನನ್ನನ್ನು ಪರಿಗಣಿಸಬೇಕೆಂದು ಬೇಡಿಕೊಳ್ಳುತ್ತೇನೆ."
ಸೆಪ್ಟೆಂಬರ್ ನಾಲ್ಕನೇ ಭಾನುವಾರವನ್ನು ಪ್ರತೀ ವರ್ಷವೂ ವಿಶ್ವ ನದಿಗಳ ದಿನವೆಂದು ಆಚರಿಸಲಾಗುತ್ತದೆ. ಮಾನವರ ಬದುಕಿನಲ್ಲಿ ನದಿಗಳು ಪ್ರಮುಖ ಪಾತ್ರವಹಿಸುತ್ತವೆ. ನದಿಗಳು ನಿಸರ್ಗದತ್ತ ಕೊಡುಗೆಗಳಾಗಿವೆ. ನದಿಯ ದಡದಲ್ಲಿ ಒಮ್ಮೆ ನಿಂತು ನದಿ ಹರಿಯುವುದನ್ನು ನೋಡುತ್ತಿದ್ದಾಗ ಈ ನದಿ ಎಷ್ಟು ಪ್ರಶಾಂತವಾಗಿ ನಿರ್ಮಲವಾಗಿ ಹರಿಯುತ್ತಿದೆ ಎಂದು ನಮಗೆ ಅನ್ನಿಸದೇ ಇರದು. ಆಗ ತಾನೇ ತಾನಾಗಿ ನಮ್ಮ ಮನಸ್ಸು ಚಿಂತನಾ ಲಹರಿಯಲ್ಲಿ ಮುಳುಗಿ ಅನೇಕ ಪ್ರಶ್ನೆಗಳನ್ನು ಹಾಕುತ್ತದೆ. ಈ ನದಿಯಲ್ಲಿ ನೀರು ಎಲ್ಲಿಂದ ಬರುತ್ತಿದೆ. ಈ ನದಿಯ ನೀರು ಎಲ್ಲಿಗೆ ಹೋಗಿ ಸೇರುತ್ತದೆ. ಈ ಪ್ರಶ್ನೆಗಳಿಗೆ ನಮ್ಮ ಬಳಿ ಉತ್ತರವಿದ್ದರೂ ಮನಸ್ಸು ಈ ಪ್ರಶ್ನೆಗಳನ್ನು ಕೇಳಿಕೊಳ್ಳುತ್ತದೆ. ಒಂದು ನದಿ ತಾನು ಹುಟ್ಟುವ ನದಿಮೂಲದಿಂದ ಹಿಡಿದು ಸಾಗರ ಅಥವಾ ಸಮುದ್ರ ಸೇರುವ ತನಕ ತನ್ನ ನದಿ ಪಾತ್ರದ ಅಂದರೆ ನದಿಯ ಇಕ್ಕೆಲ ದಡಗಳಲ್ಲಿ ವಾಸಿಸುವ ಕೋಟ್ಯಂತರ ಜನರಿಗೆ ಬದುಕನ್ನು ಕಟ್ಟಿಕೊಡುತ್ತದೆ. ಪಶುಪಕ್ಷಿಗಳಾದಿಯಾಗಿ ನದಿಯ ನೀರನ್ನೇ ನಂಬಿ ಬದುಕುತ್ತವೆ. ನದಿ ಎಂದೊಡನೆ ನೆನಪಾಗುವುದೇ ನಾಗರೀಕತೆ. ವಿಶ್ವದ ಎಲ್ಲಾ ನಾಗರೀಕತೆಗಳೂ ನದಿಗಳ ದಡದ ಮೇಲೆಯೇ ನಿರ್ಮಿತವಾಗಿವೆ. ಇಂದಿಗೆ 5500 ವರ್ಷಗಳ ಹಿಂದೆಯೇ ಸಿಂಧೂ- ಸರಸ್ವತಿ ನದಿಗಳ ದಡಗಳಲ್ಲಿ ಹರಪ್ಪಾ ಮತ್ತು ಮೊಹೆಂಜೋದಾರೋ ಎಂಬ ವಿಶ್ವದ ಪ್ರಪ್ರಥಮ ಭಾರತದ ನಾಗರೀಕತೆ ಕಂಡುಬಂದಿದೆ. ಇದರ ಸಮಕಾಲೀನ ನಾಗರೀಕತೆಗಳಾದ ಈಜಿಪ್ಟ್ ನಾಗರೀಕತೆಯು ನೈಲ್ ನದಿ ದಂಡೆಯಲ್ಲಿ ಕಂಡುಬಂದಿತು. ಮೆಸಪೊಟೇಮಿಯ ನಾಗರೀಕತೆಯು ಯೂಪ್ರಟಿಸ್ ಮತ್ತು ಟೈಗ್ರಿಸ್ ನದಿಗಳ ಬಯಲುಗಳಲ್ಲಿ ಕಂಡುಬಂದಿತು. ಪ್ರಸಿದ್ಧ ಚೀನಾ ನಾಗರೀಕತೆಯು ಹೊಯಾಂಗ್ ಹೋ ಮತ್ತು ಯಾಂಗ್ ಟೀ ಸಿಕಿಯಾಂಗ್ ನದಿಗಳ ಬಯಲುಗಳಲ್ಲಿ ಕಂಡುಬಂದಿತು. ಇದೇ ರೀತಿ ಗ್ರೀಕ್ ನಾಗೀಕತೆ, ರೋಮ್ ನಾಗರೀಕತೆ, ಅಜೆಟಿಕ್ ನಾಗರೀಕತೆ, ಇಂಕಾ ನಾಗರೀಕತೆ ಮತ್ತು ಮಾಯನ್ನರ ನಾಗರೀಕತೆ ಹೀಗೆ ಪ್ರಪಂಚದ ಹತ್ತು ಹಲವು ಕಡೆಗಳಲ್ಲಿ ಕಾಣಿಸಿಕೊಂಡ ನಾಗರೀಕತೆಗಳು ನದಿಗಳ ಆಶ್ರಯವನ್ನೇ ನಂಬಿದ್ದವು.
ವಿಶ್ವದ ಎಲ್ಲಾ ನಾಗರೀಕತೆಗಳು ನದಿಗಳ ಬಯಲಿನಲ್ಲಿಯೇ ಏಕೆ ರೂಪುಗೊಂಡವು ಎಂದು ಯೋಚಿಸಿದಾಗ ಕೆಲವೊಂದಷ್ಟು ಅಂಶಗಳು ತಿಳಿದು ಬರುತ್ತವೆ. ನದಿಗಳು ಕುಡಿಯಲು ಮತ್ತು ವ್ಯವಸಾಯಕ್ಕೆ ನೀರನ್ನು ಒದಗಿಸುತ್ತವೆ. ಮನುಷ್ಯನ ದಿನನಿತ್ಯದ ಎಲ್ಲಾ ಕೆಲಸಗಳಿಗೂ ನೀರು ಅತ್ಯವಶ್ಯಕ. ನದಿಗಳು ಪ್ರಗತಿಗೆ ಪೂರಕವಾಗಿರುತ್ತವೆ. ನದಿಯ ನೀರು ವಿದ್ಯುತ್ ಉತ್ಪಾದನೆಗೆ, ಕಾರ್ಖಾನೆಗಳಿಗೆ, ದೊಡ್ಡದೊಡ್ಡ ನಗರಗಳ ನಿರ್ಮಾಣಕ್ಕೆ ಮುಂತಾದ ವಿವಿದೋದ್ದೇಶಗಳ ಅನುಕೂಲತೆಗಾಗಿ ಉಪಯೋಗವಾಗಿದೆ.
ಮಾನವನು ಒಂದು ಕಡೆ ನೆಲೆನಿಂತು ತನ್ನ ವಾಸ್ತವ್ಯವನ್ನು ಕಂಡುಕೊಳ್ಳಲು ನದಿಗಳು ಸಹಾಯಕವಾಗಿವೆ. ನದಿಗಳು ರುದ್ರ ರಮಣೀಯ ಜಲಪಾತಗಳನ್ನು ಸೃಷ್ಟಿಸುತ್ತದೆ. ಕೆನಡಾ ದೇಶದ ನಯಾಗರ ಜಲಪಾತ, ಭಾರತದ ಅದರಲ್ಲೂ ಕರ್ನಾಟಕದ ಜೋಗ ಜಲಪಾತಗಳು ಕಣ್ಮನ ಸೆಳೆಯುತ್ತವೆ. ನದಿಗಳು ಸರೋವರಗಳನ್ನು ಸೃಷ್ಟಿಸುತ್ತದೆ. ನದಿಗಳ ನೀರು ಗಿಡಮರ ಬಳ್ಳಿಗಳ ಚೈತನ್ಯವಾಗಿದೆ.
ವಿಶ್ವ ನದಿಗಳ ದಿನದ ಇತಿಹಾಸವನ್ನು ನೋಡುವುದಾದರೆ ಈ ದಿನವನ್ನು ಆಚರಿಸಲು ಪ್ರಾರಂಭಿಸಿದ್ದು ಮೊದಲ ಬಾರಿಗೆ 2005 ರಲ್ಲಿ. ಏಕೆಂದರೆ ಯುನೈಟೆಡ್ ನೇಷನ್ಸ್ ಆ ವರ್ಷ "ವಾಟರ್ ಫಾರ್ ಲೈಫ್ ಡಿಕೇಡ್" ಎಂಬ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಕೆನಡಾದಲ್ಲಿ ನದಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಮಾರ್ಕ್ ಏಂಜೆಲೊ ಎಂಬ ವ್ಯಕ್ತಿ ಈ ವಿಶೇಷ ದಿನದ ಕಲ್ಪನೆಯನ್ನು ಮುಂದಿಟ್ಟರು. ಅದಕ್ಕೂ ಮೊದಲು, ಕೆನಡಾದಲ್ಲಿ "ಬಿ.ಸಿ. ರಿವರ್ಸ್ ಡೇ" ಎಂಬ ಇದೇ ರೀತಿಯ ಕಾರ್ಯಕ್ರಮವಿತ್ತು ಮತ್ತು ಇದು 1980 ರಿಂದ ನಡೆಯುತ್ತಿತ್ತು. ಬಿ.ಸಿ. ಎಂದರೆ ಬ್ರಿಟಿಷ್ ಕೊಲಂಬಿಯಾ, ಕೆನಡಾದ ಪ್ರಾಂತ್ಯ. ಕೆನಡಾದ ಈ ಘಟನೆ ಯಾವಾಗಲೂ ಸೆಪ್ಟೆಂಬರ್‌ನ ನಾಲ್ಕನೇ ಭಾನುವಾರದಂದು ನಡೆಯುತ್ತದೆ. ಆದ್ದರಿಂದ ವಿಶ್ವ ನದಿಗಳ ದಿನವು ಸೆಪ್ಟೆಂಬರ್‌ನಲ್ಲಿ ನಾಲ್ಕನೇ ಭಾನುವಾರದಂದು ನಡೆಯುತ್ತದೆ.
ವಿಶ್ವ ನದಿಗಳ ದಿನದ ಮಹತ್ವ ತಿಳಿಯುವುದಾದರೆ, ಈ ದಿನವು ನಮ್ಮ ಗ್ರಹ ಭೂಮಿಗೆ ಮತ್ತು ಅದರಲ್ಲಿರುವ ಎಲ್ಲಾ ಜೀವಿಗಳಿಗೆ ನದಿಗಳು ಎಷ್ಟು ಮುಖ್ಯ ಎಂಬುದನ್ನು ನೆನಪಿಸುತ್ತದೆ. ಇದು ಸರ್ಕಾರಗಳು, ಪರಿಸರದ ಸಂಘ ಸಂಸ್ಥೆಗಳು, ಗುಂಪುಗಳು, ಸಮುದಾಯಗಳು ಮತ್ತು ನದಿಗಳನ್ನು ರಕ್ಷಿಸಲು ಮತ್ತು ಕಾಳಜಿ ವಹಿಸಲು ಒಟ್ಟಾಗಿ ಕೆಲಸ ಮಾಡಲು ಪ್ರೋತ್ಸಾಹಿಸುತ್ತದೆ. ಜಗತ್ತಿನಾದ್ಯಂತ ಪ್ರಕೃತಿ, ಜನರು ಮತ್ತು ಆರ್ಥಿಕತೆಗಳಿಗೆ ನದಿಗಳು ಅತ್ಯಗತ್ಯವಾಗಿವೆ.
ಇಂದು ವಿಶ್ವದ ಕೆಲವು ದೇಶಗಳಲ್ಲಿ ನದಿಗಳು ಸಮಸ್ಯೆಗಳ ಮೂಲವಾಗಿವೆ. ನದಿಗಳಲ್ಲಿ ಹೂಳು ತುಂಬಿಕೊಳ್ಳುವುದು. ಕಾಲ ಕಾಲಕ್ಕೆ ಹೂಳೆತ್ತದಿರುವುದು. ಕೈಗಾರಿಕೆಗಳಲ್ಲಿ ಬಳಸಿದ ನೀರನ್ನು ನೇರವಾಗಿ ನದಿಗಳಿಗೆ ಬಿಡುವುದು. ಇದರಿಂದಾಗಿ ಜಲಚರಗಳು ಅಲ್ಲಿಯೇ ಸತ್ತು ಕೊಳೆತು ಕೆಟ್ಟ ವಾಸನೆ ಬರುವುದು. ಇವರಿಂದಾಗಿ ರೋಗಗಳ ಹರಡುವಿಕೆ ಹೆಚ್ಚಾಗುತ್ತಿರುವರು. ದೊಡ್ಡ ದೊಡ್ಡ ನಗರಗಳಲ್ಲಿನ ಕೊಳಚೆ ನೀರನ್ನು ನೇರವಾಗಿ ನದಿಗೆ ಸೇರಿಸುವುದೂ ಸಹ ಮತ್ತೊಂದು ದೊಡ್ಡ ಸಮಸ್ಯೆಯಿದೆ. ಹೊಲಗದ್ದೆಗಳಿಗೆ ರಾಸಾಯನಿಕ ಗೊಬ್ಬರ, ಕ್ರಿಮಿನಾಶಕ, ಕೀಟನಾಶಕಗಳನ್ನು ಬಳಸಿದ ನೀರು ನದಿಗಳಿಗೆ ಸೇರುವುದೂ ಸಹ ಒಂದು ಸಮಸ್ಯೆಯೇ ಆಗಿದೆ.
ವಿಶ್ವ ನದಿಗಳ ದಿನದ ಆಚರಣೆ ಮಾಡುವ ಕುರಿತು ಚಿಂತಿಸಬೇಕಿದೆ. ವಿಶ್ವ ನದಿಗಳ ದಿನದಂದು, ಜಗತ್ತಿನಾದ್ಯಂತ ಜನರು ನದಿಗಳ ಮೇಲಿನ ತಮ್ಮ ಪ್ರೀತಿಯನ್ನು ತೋರಿಸಲು ವಿಭಿನ್ನ ಕೆಲಸಗಳಲ್ಲಿ ತೊಡಗುತ್ತಾರೆ.
* ನದಿಯ ಇಕ್ಕೆಲ ದಡಗಳ ಉದ್ದಕ್ಕೂ ಕಸವನ್ನು ಸ್ವಚ್ಛಗೊಳಿಸುವುದು ಮತ್ತು ನಿಸರ್ಗದತ್ತ ಆವಾಸ ಸ್ಥಾನಗಳನ್ನು ಪುನಃ ಸ್ಥಾಪಿಸುವುದನ್ನು ಮಾಡಬಹುದು.
* ನದಿಗಳ ಮಹತ್ವ ಮತ್ತು ಬಳಕೆಯ ಕುರಿತು ಕಾರ್ಯಾಗಾರಗಳನ್ನು ಏರ್ಪಡಿಸಬಹುದು.
* ಸ್ಥಳೀಯ ನದಿಗಳ ಬಗ್ಗೆ ಅರಿವು ಮೂಡಿಸಲು ಮಾರ್ಗದರ್ಶಿ ಪ್ರವಾಸಗಳನ್ನು ಹಮ್ಮಿಕೊಳ್ಳಬಹುದು.
* ಈ ದಿನದಂದು ವಿಜ್ಞಾನಿಗಳು ನದಿಯ ಆರೋಗ್ಯ ಮತ್ತು ನೀರಿನ ಗುಣಮಟ್ಟದ ಬಗ್ಗೆ ತಮ್ಮ ಸಂಶೋಧನೆಗಳನ್ನು ಹಂಚಿಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ.
* ಶಾಲಾ ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ನದಿಗಳ ಸಂರಕ್ಷಣೆ ಕುರಿತಂತೆ ವಿದ್ಯಾರ್ಥಿಗಳಿಗೆ ವಿಚಾರ ಸಂಕಿರಣ ಮತ್ತು ಚರ್ಚಾ ಸ್ಪರ್ಧೆ, ಭಾಷಣ ಸ್ಪರ್ಧೆ, ಗೀತ ಗಾಯನ ಸ್ಪರ್ಧೆ, ಚಿತ್ರಕಲಾ ಸ್ಪರ್ಧೆ, ಕವನ ರಚನಾ ಸ್ಪರ್ಧೆ ಮುಂತಾದವುಗಳನ್ನು ಏರ್ಪಡಿಸುವ ಮೂಲಕ ನದಿಗಳ ಕುರಿತು ವ್ಯಾಪಕ ಮತ್ತು ನಿರಂತರ ಅರಿವನ್ನು ಉಂಟು ಮಾಡಬಹುದು.
ಹೀಗೆಯೇ ನಮ್ಮ ಜೀವನ ಒಂದು ನದಿಯಂತಿದ್ದು ವಿವಿಧ ರೀತಿಯಲ್ಲಿ ಸಮಾಜೋಪಯೋಗಿ ಕೆಲಸಗಳಲ್ಲಿ ತೊಡಗಿಸಿಕೊಂಡು ಜೀವನ ನಿರ್ವಹಣೆ ಮಾಡಬೇಕು. ನದಿ ತನ್ನ ಕಾಯಕ ಮಾಡುತ್ತಾ ಸಮುದ್ರವೆಂಬ ಕೈಲಾಸದಲ್ಲಿ ಲೀನವಾಗುವಂತೆ, ನಾವೂ ಕೂಡಾ ನಮ್ಮ ನಮ್ಮ ಕಾಯಕದಲ್ಲಿ ಪರಮಾತ್ಮನನ್ನು ಕಾಣೋಣ. ಆದ್ದರಿಂದಲೇ ಬಸವಣ್ಣನವರು ಕಾಯಕವೇ ಕೈಲಾಸವೆಂದು ನುಡಿದಿದ್ದಾರೆ. ಕರ್ತವ್ಯವೇ ದೇವರೆಂದು ತಿಳಿಯೋಣ. ನಮ್ಮ ಕಾಯಕ ಪರಿಶುದ್ಧವಾದ ಮನಸ್ಸಿನಿಂದ ಕೂಡಿರಬೇಕು. ಈ ರೀತಿಯ ಕಾಯಕ ನಮ್ಮ ಹೆಸರನ್ನು ಶಾಶ್ವತತೆಯೆಡೆಗೆ ಕರೆದೊಯ್ಯುತ್ತದೆ. ಮಹಾವೀರ, ಬುದ್ಧ, ಶರಣರು, ದಾಸರು ಎಲ್ಲರೂ ತಮ್ಮ ತಮ್ಮ ಕಾಯಕದ ಮೇಲೆಯೇ ಅಜರಾಮರಾಗಿರುತ್ತಾರೆ. ಬದುಕನ್ನು ಪ್ರೀತಿಸುತ್ತಾ ಇಷ್ಟ ಪಟ್ಟು ಬದುಕೋಣ. ಆನಂದದಿಂದ ಶ್ರಮಿಸೋಣ. ನಮಗೆ ಕಾಯಕದ ಪಾಠ ಹೇಳುವಲ್ಲಿ ನದಿ ಪ್ರಮುಖ ಪಾತ್ರ ವಹಿಸುತ್ತದೆ. ಜೀವನದಲ್ಲಿ ನಾವು ನದಿಯಂತೆ ಬಾಳೋಣ.
- ಕೆ.ಎನ್. ಚಿದಾನಂದ, ಹಾಸನ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ