ಕಲಾ ದೇವತೆ ಎಂದೇ ಹೆಸರಾದ ವಿಶ್ವಕರ್ಮ ದೇವಶಿಲ್ಪಿ. ಕುಶಲಕರ್ಮಿಗಳು ವಿಶ್ವಕರ್ಮನನ್ನು ಸ್ತುತಿಸದೆ, ಆರಾಧಿಸದೆ, ಪೂಜಿಸದೆ ಯಾವ ಕೆಲಸವನ್ನು ಆರಂಭಿಸುವುದಿಲ್ಲ. ಕೆಲವರ ಮಟ್ಟಿಗೆ ಆತನೇ ಪ್ರಜಾಪತಿ, ಇಂದ್ರ. ಸೃಷ್ಟಿಕರ್ತನಿಗೆ ಸಮನಾದ ಸ್ಥಾನವನ್ನು ವಿಶ್ವಕರ್ಮನಿಗೆ ಕೊಡಲಾಗಿದೆ.
ಗಂಗಾ ಬಯಲು ಪ್ರದೇಶದಿಂದ ಅಥವಾ ಅಸಾಂ, ಬಂಗಾಳ ಅಥವಾ ಒಡಿಶಾ ಪ್ರಾಂತ್ಯದಿಂದ ಬಂದ ಕಲಾಕಾರರು ವಿಶ್ವಕರ್ಮನ ಪೂಜೆ ಮಾಡದೇ ಯಾವುದೇ ಕೆತ್ತನೆಯ ಕೆಲಸವನ್ನು ಪ್ರಾರಂಭಿಸುವುದಿಲ್ಲ. ಪಿತೃಪಕ್ಷದ ಆರಂಭಕ್ಕೆ ಪಿತೃದೇವತೆಗಳಿಗೆ ತರ್ಪಣ, ಅಘ್ರ್ಯಗಳನ್ನು ನೀಡಿ ತೃಪ್ತಿ ಪಡಿಸುವ ಮಾಸ. ವಿಶ್ವಕರ್ಮ ಜಯಂತಿಯು ಅದರ ಪೂರ್ವಭಾವಿಯಾಗಿ ಬರುತ್ತದೆ. ವಿಶ್ವಕರ್ಮನೆಂದರೆ ದೇವತೆಗಳ ಶಿಲ್ಪಿ. ಕಲಾದೇವತೆ.
ಸೂರ್ಯನು ಕನ್ಯಾರಾಶಿಗೆ ಪ್ರವೇಶಿಸಿದ ಮುಹೂರ್ತದಲ್ಲಿ ವಿಶ್ವಕರ್ಮನ ಪೂಜೆ ಮಾಡುತ್ತಾರೆ. ಈ ದಿನದಂದು ಭಗವಾನ್ ವಿಶ್ವಕರ್ಮ ಭೂಲೋಕದ ಜನರ ಕಲ್ಯಾಣಕ್ಕಾಗಿ ನೇಗಿಲನ್ನು ತಯಾರಿಸಿ ಕೊಡುಗೆಯಾಗಿ ನೀಡಿದ ಎನ್ನುವ ನಂಬಿಕೆಯಿದೆ.
ಶಿಲ್ಪಿಗಳಲ್ಲಿ ಅಗ್ರೇಸರ
ವಿಶ್ವಕರ್ಮನನ್ನು ಪ್ರಜಾಪತಿ (ಜನನಾಯಕ), ಮಹಾರಾಣ (ಶಿಲ್ಪಿಗಳಲ್ಲಿ ಅಗ್ರೇಸರ), ಬ್ರಹ್ಮಣಸ್ಪತಿ (ಆಕಾಶದ ದೇವತೆ) ಮತ್ತು ದಕ್ಷ (ಸಮರ್ಥ) ಎಂದು ಕರೆಯಲಾಗುತ್ತದೆ. ಆತನನ್ನೇ ಸ್ಥಾಪತ್ಯಶಾಸ್ತ್ರ, ವಾಸ್ತುಶಾಸ್ತ್ರ, ಶಿಲ್ಪಶಾಸ್ತ್ರಗಳ ಅಧಿಪತಿಯೆಂದು ಕರೆಯಲಾಗುತ್ತದೆ. ವಿಶ್ವಕರ್ಮನನ್ನು ಮೊದಲ ಕಲಾಕಾರ ಎಂದು ಕರೆಯುತ್ತಾರೆ. ವಿಶ್ವಕರ್ಮ ಜತಿ ಅಥವಾ ಕುಶಲಕಲೆ, ಬಡಿಗೆ ಮತ್ತು ಆಭರಣ ತಯಾರಕ ಪ್ರಥಮಾಧಿಪನೆಂದು ಕರೆಯುತ್ತಾರೆ. ಗ್ರೀಕರು ವಿಶ್ವಕರ್ಮನನ್ನು ಹೆಫಯಿಸ್ಟನ್ ಎಂದು ಕರೆಯುತ್ತಾರೆ. ರೋಮನ್ನರು ಆತನನ್ನು ವಲ್ಕನ್ ಎಂದು ಗುರುತಿಸುತ್ತಾರೆ. ವಿಶ್ವಕರ್ಮನೇ ಯಂತ್ರಗಳಿಗೆ ದೇವತೆ ಎಂದೂ ಕರೆಯುತ್ತಾರೆ.
ವೇದಭಾವದಲ್ಲಿ ವಿಶ್ವಕರ್ಮ
ವೇದವು ಆತನನ್ನು ತ್ವಸ್ತ್ರ ಎಂದು ಗುರುತಿಸುತ್ತದೆ. ಸೃಷ್ಟಿ ಪ್ರಕ್ರಿಯೆಯಲ್ಲಿ ಪುರುಷ ಮಹಿಳೆಯನ್ನು ಸಮೀಪಿಸಿದಾಗ ಆತ ಅವತರಿಸಿದ. ತಾಯಿಯ ಗರ್ಭದಲ್ಲಿರುವ ಮಗುವಿನಂತೆ ಆತನ ರೂಪವಿತ್ತು. ನಂತರ ಆ ರೂಪವು ಶಿಶುವಾಗಿ ಬದಲಾಯಿತು. ಕೆಲವರು ವಿಶ್ವಕರ್ಮನನ್ನು ಪ್ರಜಾಪತಿ ಅಥವಾ ಬ್ರಹ್ಮನೆಂದೂ ಕರೆಯುತ್ತಾರೆ. ಆತನೇ ಸೃಷ್ಟಿಗೆ ಮೂಲ ಎಂದು ಭಾವಿಸುತ್ತಾರೆ. ವೇದಕಾಲಿನ ಪಠ್ಯಗಳಲ್ಲಿ, ಸಪ್ತಋಷಿಗಳಲ್ಲಿ ಐವರು ಋಷಿಗಳು ವಿಶ್ವಕರ್ಮನಿಂದ ಜನಿಸಲ್ಪಟ್ಟರು ಎಂದು ಹೇಳಲಾಗುತ್ತದೆ. ಇದೊಂದು ಭಾಗವಾದರೆ ಮತ್ತೆ ಕೆಲವರು ವಿಶ್ವಕರ್ಮನನ್ನು ಇಂದ್ರನೊಂದಿಗೆ ಹೋಲಿಸುತ್ತಾರೆ. ಋಗ್ವೇದವು ವಿಶ್ವಕರ್ಮನ ಕಾರಣ ಭೂಮಿ ಮತ್ತು ಆಕಾಶ ಪ್ರತ್ಯೇಕವಾಯಿತು. ಎಂದು ಉಲ್ಲೇಖಿಸಲ್ಪಟ್ಟಿದೆ. ಹಾಗಾಗಿ ವಿಶ್ವಕರ್ಮ ಆನೆಯ ಮೇಲೆ ಕುಳಿತುಕೊಂಡಿರುತ್ತಾನೆ. ತನ್ನ ಕೈಯಲ್ಲಿ ಸುತ್ತಿಗೆ, ಉಳಿ, ಅಳತೆಗೋಲು, ಸ್ಪಿಂಡಲ್ ಹಿಡಿದುಕೊಂಡಿರುತ್ತಾನೆ.
ದಕ್ಷಿಣ ಏಷಿಯಾದಲ್ಲಿ ಬ್ರಹ್ಮ ಮತ್ತು ಇಂದ್ರರಿಬ್ಬರೂ ಒಂದೇ ಎಂದು ಭಾವಿಸಲಾಗಿದೆ. ಅವರೀರ್ವರು ಸೃಷ್ಟಿಕರ್ತರೆಂದೇ ಅಭಿಪ್ರಾಯಸುತ್ತಾರೆ. ಹಾಗಾಗಿ ಬ್ರಹ್ಮದೇವನೂ ಆನೆಯ ಮೇಲೆ ಆಸೀನನಾಗಿರುತ್ತಾನೆ.
ನಗರಗಳ ನಿರ್ಮಾರ್ತೃ
ವಿಶ್ವಕರ್ಮ ನಗರಗಳನ್ನು ನಿರ್ಮಿಸುತ್ತಾನೆ. ಉದಾಹರಣೆಗೆ ದೇವತೆಗಳಿಗಾಗಿ ಅಮರಾವತಿಯನ್ನು, ಅಸುರರಿಗಾಗಿ ಹಿರಣ್ಯಪುರವನ್ನು, ಯಕ್ಷರಿಗಾಗಿ ಅಲಕಾಪುರಿಯನ್ನು, ಪಾಂಡವರಿಗಾಗಿ ಮಯಾಪುರವನ್ನು, ಕೃಷ್ಣನಿಗಾಗಿ ದ್ವಾರಾವತಿಯನ್ನು ನಿರ್ಮಿಸುತ್ತಾನೆ. ಭಗವಾನ್ ವಿಷ್ಣುವಿಗಾಗಿ ಸುದರ್ಶನ ಚಕ್ರವನ್ನು, ಇಂದ್ರನಿಗಾಗಿ ವಜ್ರಾಯುಧವನ್ನು ದಧೀಚಿ ಋಷಿಯ ಬೆನ್ನು ಮೂಳೆಯಿಂದ ವಿನ್ಯಾಸಗೊಳಿಸುತ್ತಾನೆ. ವಿಶ್ವಕರ್ಮನೇ ಸೃಷ್ಟಿಕರ್ತ. ಆತನ ಕಾರಣ ಆರ್ಥಿಕ ಸ್ಥಿತಿ ಅಭಿವೃದ್ಧಿಯಾಗುತ್ತದೆ ಎಂದು ಹೇಳುತ್ತಾರೆ.
ವಿಶ್ವಕರ್ಮ ಮನುಕುಲದ ಕಲಾವಂತಿಕೆಯ ಮೂಲರೂಪ. ಬ್ರಹ್ಮಾಂಡದ ಪ್ರತಿಯೊಂದು ಕೌಶಲ್ಯ, ತಂತ್ರಜ್ಞಾನಗಳಿಗೆ ಅಧಿದೇವತೆ. ವಿಶ್ವಕರ್ಮನ ಆರಾಧನೆಯೊಂದಿಗೆ ಆತನಲ್ಲಿರುವ ನಿಪುಣತೆ, ಕುಶಲತೆ ನಮಗೆ ಮಾರ್ಗದರ್ಶನವಾಗಲಿ ಎಂದು ಬೇಡಿಕೊಂಡಾಗಲೇ ಜಯಂತಿಯ ಆಚರಣೆಯಲ್ಲಿ ಸಾರ್ಥಕತೆ ಕಂಡಿತು.
ಕುಶಾಲಧಿಪತಿ ಪ್ರಜಾಪತಿ
ಗಗನಚುಂಬಿ ಕಟ್ಟಡಗಳನ್ನು ಕಂಡಾಗ ನಮಗರಿವಿಲ್ಲದಂತೆ ವಾಹ್! ಎನ್ನುವ ಉದ್ಗಾರ ಹೊರಹೊಮ್ಮುತ್ತದೆ. ಅಂತೆಯೇ ಬೃಹತ್ತಾದ ಅಣೆಕಟ್ಟುಗಳು, ಅದ್ಭುತ ಶಿಲ್ಪ ಕಲಾವೈಭವದ ಮಂದಿರಗಳ ಭವ್ಯನೋಟದಿಂದ ಮೈಮನ ಪುಳಕಿತವಾಗುತ್ತದೆ. ಒಬ್ಬ ಶಿಲ್ಪಿ ತನ್ನ ಉಳಿ, ಸುತ್ತಿಗೆಗಳಿಂದ ಕೆತ್ತುತ್ತಲೇ ಕಲ್ಲಿಗೊಂದು ರೂಪಕೊಡುತ್ತಾನೆ. ಅದಕ್ಕೊಂದು ಪೂಜನೀಯ ಸ್ಥಾನ ಕಲ್ಪಿಸುತ್ತಾನೆ. ವಿಶ್ವೇಶ್ವರಯ್ಯ ಅವರಂತಹ ಎಂಜಿನಿಯರ್‍ಗಳು ವೃಥಾ ಹರಿವ ನದಿಗೊಂದು ಅಣೆಕಟ್ಟೆ ಕಟ್ಟುತ್ತಾರೆ. ಆ ನದಿಯ ನೀರಿಗೊಂದು ರೂಪ ಕೊಟ್ಟು ಸಾವಿರಾರು ಎಕರೆ ಭೂಮಿಗೆ ನೀರುಣಿಸುತ್ತಾರೆ. ವಿದ್ಯುತ್ ಉತ್ಪಾದಿಸಿ ಅದೆಷ್ಟೋ ಮನೆ, ಮನಗಳನ್ನು ಬೆಳಗುತ್ತಾರೆ. ಅಂತೆಯೇ ಒಬ್ಬ ಸ್ಥಪತಿ, ಬಡಗಿ, ಕಮ್ಮಾರ, ಅಕ್ಕಸಾಲಿಗ, ಗಾರೆ ಕೆಲಸದವ ಹೀಗೆ ಹತ್ತಾರು ಕುಶಲಕರ್ಮಿಗಳ ನೈಪುಣ್ಯತೆಯೂ ಲೋಕ ಹಿತಕ್ಕೆ ಪೂರಕವಾಗಿದೆ. ಹೌದು, ಕಲ್ಲಿಗೊಂದು ರೂಪ ಕೊಡುವುದರಿಂದ ಹಿಡಿದು, ಮರದ ದಿಮ್ಮಿಗಳಲ್ಲಿ ವಿನ್ಯಾಸ ಮೂಡಿಸುವ, ಜಡವಸ್ತುವಿನಲ್ಲೂ ಜೀವಂತಿಕೆಯನ್ನು ತುಂಬುವ ನೈಪುಣ್ಯತೆ ಒಬ್ಬ ಕಲಾಕಾರನದ್ದು. ಅದುವೇ ಅವನ ಕುಶಲತೆ. ಅಂತಹ ಕುಶಲ ಕರ್ಮಿಗಳ ಅಭಿಮಾನಿ ದೇವತೆಯೇ ವಿಶ್ವಕರ್ಮ. ಹೆಸರೇ ಹೇಳುವಂತೆ ಆತ ಕರ್ಮಯೋಗಿ. ಕಾಯಕವೇ ಕೈಲಾಸ ಎಂದು ಬಗೆದು ಸದಾ ಕಾಯಕ ವೃತ್ತಿಯಲ್ಲೇ ತನ್ನನ್ನು ತೊಡಗಿಸಿಕೊಂಡವ. ತನ್ನ ಕರ್ತವ್ಯದಲ್ಲಿ ದಿವ್ಯತ್ವವನ್ನು ಪಡೆದುಕೊಂಡು ಪ್ರಜಾಪತಿಯ ಸ್ಥಾನಕ್ಕೆ ಏರಿದವ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೂ ಏರಿದವ. ಸತ್ಯಯುಗದಿಂದ ಹಿಡಿದು ಕಲಿಯುಗದವರೆಗೂ ನಗರಗಳನ್ನು ನಿರ್ಮಿಸುತ್ತಾನೆ. ದುಷ್ಟ ಸಂಹಾರ ಕಾರ್ಯದಲ್ಲಿ ನೆರವಾಗುವ ಉದ್ದೇಶದಿಂದ ಸುರರಿಗೆ ಶಸ್ತ್ರಾಸ್ತ್ರ ಹಾರುವ ರಥಗಳನ್ನು ತಯಾರಿಸಿಕೊಡುತ್ತಾನೆ. ತನ್ನ ಪ್ರತಿಯೊಂದು ಕಾರ್ಯದಲ್ಲೂ ಲೋಕಹಿತವನ್ನು ಪ್ರತಿನಿಧಿಸುತ್ತಾನೆ.
ವಿಶ್ವಕರ್ಮ ಬ್ರಹ್ಮನ ಪುತ್ರ. ವಿಶ್ವದ ಸೃಷ್ಟಿಕರ್ತ. ದೇವಲೋಕವನ್ನು ನಿರ್ಮಿಸಿದಾತ. ದೇವತೆಗಳಿಗೆ ರಥ, ಅಸ್ತ್ರ, ಶಸ್ತ್ರಗಳನ್ನು ನಿರ್ಮಿಸಿಕೊಟ್ಟವನೂ ವಿಶ್ವಕರ್ಮನೇ. ಮಹಾಭಾರತದಲ್ಲಿ ವಿಶ್ವಕರ್ಮನನ್ನು ಕಲೆಗಳ ದೇವರೆಂದೇ ಬಣ್ಣಿಸಲಾಗಿದೆ. ಆತ ಸಾವಿರಾರು ಕುಶಲ ಕೆಲಸಗಳನ್ನು ಮಾಡಬಲ್ಲ, ಬಡಗಿಯಾಗಿದ್ದಾನೆ, ಚಿನ್ನಾಭರಣ, ವಜ್ರ, ವೈಢೂರ್ಯಗಳನ್ನು ನಿರ್ಮಿಸುವ ಅಕ್ಕಸಾಲಿಗನಾಗಿದ್ದಾನೆ. ವಿಶ್ವಕರ್ಮನಿಗೆ ನಾಲ್ಕು ಕೈಗಳಿವೆ. ಆತ ಕಿರೀಟವನ್ನು ಧರಿಸಿದ್ದಾನೆ. ಚಿನ್ನದ ಆಭರಣವನ್ನು ಧರಿಸಿಕೊಂಡಿದ್ದಾನೆ. ಒಂದು ಕರದಲ್ಲಿ ಉದಕ ತುಂಬಿದ ಕುಂಭ, ಮತ್ತೊಂದರಲ್ಲಿ ಪುಸ್ತಕ, ಕುಣಿಕೆ ಮತ್ತು ಕುಶಲಕರ್ಮಿಗಳು ಬಳಸುವ ಸಾಧನ (ಉಳಿ ಮತ್ತು ಸುತ್ತಿಗೆ) ಗಳನ್ನೇ ಆಯುಧವನ್ನಾಗಿ ಉಳ್ಳ ವಿಶ್ವಕರ್ಮನದು ಕಲಾವಂತಿಕೆಯ ಪ್ರಾಜ್ಞರೂಪ.
ಪುರಾಣಗಳಲ್ಲಿ ವಿಶ್ವಕರ್ಮನ ಪಾತ್ರ
ನಮ್ಮ ಪುರಾಣಗಳ ಪ್ರಕಾರ ನಾಲ್ಕು ಯುಗಗಳಿವೆ. ಆದರೆ ಸತ್ಯಯುಗದಲ್ಲಿ ದೇವತೆಗಳಿಗೆಂದೇ ಸಾಕಷ್ಟು ನಗರಗಳು ನಿರ್ಮಾಣವಾದವು. ಸತ್ಯಯುಗದಲ್ಲಿ ಆತ ಸ್ವರ್ಗಲೋಕವನ್ನು ನಿರ್ಮಿಸಿದ. ಇಂದ್ರ ದೇವತೆಯ ಆಜ್ಞೆಯನ್ನು ಪಾಲಿಸಿದ. ತ್ರೇತಾಯುಗದಲ್ಲಿ ಆತ ಸುವರ್ಣ ಲಂಕೆಯನ್ನು ನಿರ್ಮಿಸುತ್ತಾನೆ. ದ್ವಾಪರ ಯುಗದಲ್ಲಿ ದ್ವಾರಕೆ ಮತ್ತು ಹಸ್ತಿನಾಪುರವನ್ನೂ ಮತ್ತು ಕಲಿಯುಗದಲ್ಲಿ ಇಂದ್ರಪ್ರಸ್ಥವನ್ನೂ ನಿರ್ಮಿಸುತ್ತಾನೆ. ತ್ರೇತಾಯುಗದಲ್ಲಿ ಸುವರ್ಣ ಲಂಕೆ ರಾವಣನ ರಾಜಧಾನಿಯಾಗಿತ್ತು.
ಸುವರ್ಣ ಲಂಕೆ ನಿರ್ಮಾಣದ ಹಿಂದೊಂದು ಕಥೆಯಿದೆ. ಶಿವ ಪಾರ್ವತಿಯನ್ನು ಮದುವೆಯಾಗುತ್ತಾನೆ. ಆತ ಆತ ವಿಶ್ವಕರ್ಮನನ್ನು ತಮ್ಮ ವಾಸಕ್ಕಾಗಿ ಒಂದು ಸುಂದರ ಅರಮನೆಯೊಂದನ್ನು ನಿರ್ಮಿಸಿಕೊಡಲು ಕೇಳಿಕೊಳ್ಳುತ್ತಾನೆ. ಆಗ ವಿಶ್ವಕರ್ಮ ಚಿನ್ನದಿಂದ ಅರಮನೆಯೊಂದನ್ನು ಕಟ್ಟಿಕೊಡುತ್ತಾನೆ. ಗೃಹ ಪ್ರವೇಶಕ್ಕೆ ಪೂರಕವಾದ ಧಾರ್ಮಿಕ ವಿಧಿಗಳನ್ನು ಪೂರೈಸುವ ಸಲುವಾಗಿ ಶಿವನು ಪುಲಸ್ತ್ಯ ಋಷಿಯನ್ನು (ಕುಬೇರ ಮತ್ತು ರಾವಣನ ತಾತ) ಆಮಂತ್ರಿಸುತ್ತಾನೆ. ವಿಧಿ, ವಿಧಾನಗಳು ಮುಗಿದ ನಂತರ ಸಂಭಾವನೆ ಏನು ಕೊಡಬೇಕೆಂದು ಕೇಳುತ್ತಾನೆ. ಆಗ ಪುಲಸ್ತ್ಯ ಬಂಗಾರದ ಅರಮನೆಯನ್ನು ದಕ್ಷಿಣೆಯಾಗಿ ಬೇಡುತ್ತಾನೆ. ಹೀಗೆ ಸುವರ್ಣ ಲಂಕೆಯು ಪುಲಸ್ತ್ಯನ ಪಾಲಾಗುತ್ತದೆ. ಮುಂದೆ ಅವನ ವಂಶದಲ್ಲಿ ಜನಿಸಿದ ರಾವಣ ಸೋದರ ಕುಬೇರನನ್ನು ಆ ಸ್ಥಳದಿಂದ ಓಡಿಸಿ ಅದನ್ನು ತನ್ನದಾಗಿಸಿಕೊಳ್ಳುತ್ತಾನೆ.
ಯದುಕುಲ ತಿಲಕ ಕೃಷ್ಣನ ರಾಜಧಾನಿ ದ್ವಾರಕೆಯನ್ನು ನಿರ್ಮಿಸಿದ ಕೀರ್ತಿಯೂ ವಿಶ್ವಕರ್ಮನಿಗೇ ಸಲ್ಲುತ್ತದೆ. ನಂತರ ಕೌರವ, ಪಾಂಡವರಿಗಾಗಿ ಹಸ್ತಿನಾಪುರವನ್ನು ನಿರ್ಮಿಸುತ್ತಾನೆ. ಪಾಂಡವರಿಗೆಂದೇ ವಿಶ್ವಕರ್ಮನಿಂದ ಸೃಷ್ಟಿಸಲ್ಪಟ್ಟ ನಗರ. ಇಂದ್ರಪ್ರಸ್ಥದಲ್ಲಿ ನಡೆದ ಒಂದು ಘಟನೆ ಮುಂದೆ ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿಯಾಗುತ್ತದೆ. ಆ ಪ್ರಸಂಗ ಹೀಗಿದೆ. ಮಹಾಭಾರತದಲ್ಲಿ ಧೃತರಾಷ್ಟ್ರ ಖಾಂಡವಪ್ರಸ್ಥ ಎನ್ನುವ ಚಿಕ್ಕ ಜಾಗವನ್ನು ಪಾಂಡವರಿಗೆ ಕೊಡುತ್ತಾನೆ. ತನ್ನ ಚಿಕ್ಕಪ್ಪನ ಸೂಚನೆಯಂತೆ ಆ ಪುಟ್ಟ ಪ್ರದೇಶದಲ್ಲೇ ಯುಧಿಷ್ಠಿರ ವಾಸಿಸುತ್ತಾನೆ. ಆಗ ಕೃಷ್ಣನ ಅಣತಿಯಂತೆ ವಿಶ್ವಕರ್ಮ ಪಾಂಡವರಿಗಾಗಿ ಇಂದ್ರಪ್ರಸ್ಥ ನಗರಿಯನ್ನು ನಿರ್ಮಿಸುತ್ತಾನೆ. ಇಂದ್ರಪ್ರಸ್ಥ ಅರಮನೆಯ ವಿನ್ಯಾಸ ಎಷ್ಟು ಆಧುನಿಕವಾಗಿರುತ್ತದೆಂದರೆ, ಆದರ ನೆಲಹಾಸುಗಳು ಕನ್ನಡಿಯಂತೆ ಫಳ ಫಳಿಸುತ್ತಿರುತ್ತವೆ, ಅರಮನೆಯಲ್ಲಿದ್ದ ನೀರಿನ ಕೊಳಗಳು ಎಷ್ಟು ತಿಳಿಯಾಗಿದ್ದವೆಂದರೆ, ಮೇಲ್ನೋಟಕ್ಕೆ ನೆಲ ಮತ್ತು ಅದರ ತಳ ಒಂದೇ ಮಟ್ಟದಲ್ಲಿದ್ದಂತೆ ಕಾಣುತ್ತಿರುತ್ತವೆ. ಪ್ರತಿಯೊಂದು ಕಂಬದಲ್ಲೂ ಬಗೆ, ಬಗೆಯ ಕೆತ್ತನೆಗಳು, ಅಲಂಕಾರಗಳು ಎಂತಹವರನ್ನೂ ದಿಗ್ಮೂಢರನ್ನಾಗಿಸುವಂತಿರುತ್ತದೆ.
ಇಂದ್ರಪ್ರಸ್ಥದಲ್ಲಿ ಅರಮನೆ ಪೂರ್ಣಗೊಂಡ ನಂತರ ಪಾಂಡವರು ಕೌರವರನ್ನು ಆಮಂತ್ರಿಸುತ್ತಾರೆ. ಬಂಜರು ಭೂಮಿಯಲ್ಲಿ ಇವರೇನು ಕಟ್ಟಡ ಕಟ್ಟಿಯಾರು ಎನ್ನುವ ಮನೋಭಾವನೆಯಿಂದ ಅರಮನೆಗೆ ಬಂದ ದುರ್ಯೋಧನ ಇದರ ಮೆರುಗನ್ನು ಕಂಡು ಮೂಕ ವಿಸ್ಮಿತನಾಗುತ್ತಾನೆ. ನೆಲವನ್ನೂ, ಕೊಳವನ್ನೂ ಒಂದೇ ಎಂದು ಬಗೆದ ದುರ್ಯೋಧನ ಜಾರಿ ಬೀಳುತ್ತಾನೆ. ದ್ರೌಪದಿ ವ್ಯಂಗ್ಯವಾಡುತ್ತಾಳೆ. ಆಕೆಯ ವ್ಯಂಗ್ಯದಿಂದ ಕ್ರುದ್ಧನಾದ ದುರ್ಯೋಧನ ಕುರುಕ್ಷೇತ್ರ ಯುದ್ಧಕ್ಕೆ ಮುನ್ನುಡಿ ಬರೆಯುತ್ತಾನೆ.
ಕುಶಲಕರ್ಮಿ ವಿಶ್ವಕರ್ಮ
ಪುರಿ ಜಗನ್ನಾಥನ ಮಂದಿರಕ್ಕೆ ನೀವೆಂದಾದರೂ ಹೋಗಿದ್ದೀರಾ? ಅಲ್ಲಿವೆ ಮರದ ವಿಗ್ರಹಗಳು. ಮರದ ವಿಗ್ರಹವಾದರೂ ಅದರ ಸೌಂದರ್ಯ ಮಾತ್ರ ಅಸದಳ. ನೋಡಲೆರಡು ಕಣ್ಣು ಸಾಲದು. ಅಂತೆಯೇ ಹೊಯ್ಸಳ ದೇಗುಲಗಳು. ಅದರ ಶಿಲ್ಪಕಲಾ ಸೌಂದರ್ಯ. ಅದರ ಸೌಂದರ್ಯಕ್ಕೆ ಮಾರುಹೋಗದವರೇ ಇಲ್ಲ. ಹೌದು, ಕಲಾವಂತಿಕೆ ಎನ್ನುವುದು ಹೃದಯ ಸಿರಿವಂತಿಕೆಯ ಪ್ರತೀಕ. ಪ್ರತಿಯೊಬ್ಬ ಕಲಾವಿದನೂ ಒಬ್ಬ ಬ್ರಹ್ಮನೇ. ಆತನ ಕೈಯಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ವಸ್ತುವೂ ಅಸಾದೃಶ್ಯವೇ, ಬಣ್ಣಿಸಲದವಳವೇ !
ಅಂಕು ಡೊಂಕಾದ ಮರದ ಕೊಂಬೆಯೂ ಬಡಗಿಯ ಕೈಯಲ್ಲಿ ಶ್ರೇಷ್ಠ ಕಲಾಕೃತಿಯಾಗುತ್ತದೆ. ಬಳಕೆಗೆ ಯೋಗ್ಯವಾದ ವಸ್ತುವಾಗುತ್ತದೆ. ಪೂಜನೀಯ ವಸ್ತುವಾಗುತ್ತದೆ. ಅಂತೆಯೇ ನೆಲದ ಒಡಲಿನಲ್ಲಿ ಸಿಕ್ಕ ಬಂಗಾರದ ಅದಿರು. ಅಕ್ಕಸಾಲಿಯ ಕೈಯಲ್ಲಿ ಮಿನುಗುವ ಆಭರಣವಾಗುತ್ತದೆ. ಮೌಲ್ಯಯುತ ವಸ್ತುವಾಗುತ್ತದೆ. ಸೌಂದರ್ಯ ಪ್ರಜ್ಞೆಯ ದ್ಯೋತಕವಾಗುತ್ತದೆ. ಅಂತೆಯೇ ವಾಸ್ತುಶಿಲ್ಪಿ ಅತ್ಯಾಧುನಿಕ ಕಟ್ಟಡಗಳ ವಿನ್ಯಾಸಗಾರನಾಗುತ್ತಾನೆ. ಭವ್ಯ ಬಂಗಲೆಗಳ ನಿರ್ಮಾತೃವಾಗುತ್ತಾನೆ. ಹೀಗೆ ಕಲಾಪ್ರಜ್ಞೆ ಎನ್ನುವುದು ಪ್ರತಿಯೊಂದು ಕ್ಷೇತ್ರದಲ್ಲೂ, ರಂಗದಲ್ಲೂ ಆವರಿಸಿದೆ. ಯಾರಲ್ಲಿ ಕಲಾವಂತಿಕೆ ಇರುವುದಿಲ್ಲವೋ ಅವನ ಹೃದಯ ಶ್ರೀಮಂತಿಕೆಯೂ ಶೂನ್ಯ ಎಂದರೆ ಅತಿಶಯೋಕ್ತಿ ಎನಿಸದು. ಕಲೆಗೆ ಅಷ್ಟೊಂದು ಬೆಲೆ ಇರುವ ಕಾರಣದಿಂದಲೇ ಕಲಾವಿದನನ್ನು ಕಲಾಬ್ರಹ್ಮ ಎನ್ನುವುದು. ಆತನಲ್ಲಿರುವ ಪ್ರತಿಭೆಯಲ್ಲಿ ದೈವತ್ವವನ್ನು ಕಾಣುವುದು.
ಕಲೆಯಲ್ಲಿ, ಕಲಾವಿದರಲ್ಲಿ ದೈವತ್ವವನ್ನು, ದೈವೀಪ್ರಜ್ಞೆಯನ್ನು ಕಾಣುವಾಗ ನಮಗೆ ಮೊದಲು ನೆನಪಾಗುವುದೇ ವಿಶ್ವಕರ್ಮ. ವಿಶ್ವಕರ್ಮ ಸತಾನತ ಕುಶಲಕರ್ಮಿ, ದೈವಾಂಶ ಸಂಭೂತನಾದ ತಂತ್ರಜ್ಞ, ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಕಲೆಗಳ, ಕಲಾವಿದರ ಅಧಿಪತಿ. ಸಮುದ್ರ ಮಂಥನದ ಕಾಲದಲ್ಲಿ ವಿಶ್ವಕರ್ಮನ ಜನನವಾಯಿತು ಎಂದು ಹೇಳುತ್ತಾರೆ.
ಸ್ಥಪತ್ಯ ವೇದ
ವಿಶ್ವಕರ್ಮ ನಮ್ಮ ಮಟ್ಟಿಗೆ ದೇವಶಿಲ್ಪಿ, ತಂತ್ರಜ್ಞ ಅದ್ಭುತ ಕುಶಲಕಾರ. ಪಾಶ್ಚಿಮಾತ್ಯರ ದೃಷ್ಟಿಯಲ್ಲಿ ಆತನಿಂದ ರೂಪಿಸಲ್ಪಟ್ಟ ಸ್ತಪತ್ಯ ವಿದ್ಯೆಯೇ ವಿಜ್ಞಾನ. ವಾಸ್ತುಶಿಲ್ಪ ಮತ್ತು ಯಂತ್ರ ತಯಾರಿಕೆಯ ಜ್ಞಾನನಿಧಿ. ಸ್ಥಪತ್ಯ ಎಂದರೆ ರೂಪಗೊಂಡಿದ್ದು ಅಥವಾ ರೂಪಗೊಳ್ಳುತ್ತಿರುವುದು, ವೇದ ಎಂದರೆ ಜ್ಞಾನ. ಬ್ರಹ್ಮಾಂಡದೊಡನೆ ಸಂಬಂಧವನ್ನು ಕಲ್ಪಿಸುತ್ತದೆ. ಅಂತಹ ವೇದದ ನಿರ್ಮಾತೃವೇ ವಿಶ್ವಕರ್ಮ. ಶಸ್ತ್ರಾಸ್ತ್ರ, ಆಭರಣ, ವಾಸ್ತುಶಿಲ್ಪ ವಿನ್ಯಾಸದಲ್ಲಿ ವಿಶ್ವಕರ್ಮನ ಕುಶಲತೆ ಒಂದೆಡೆಯಾದರೆ ಆತನಿಂದ ಜನಕವಾದ ಸ್ಥಪತ್ಯ ವಿದ್ಯೆಯೇ ಕುಶಲಕರ್ಮಿಗಳಿಗೆ ದೈವಸಾರ. ಮಾರ್ಗದರ್ಶಿ ಸೂತ್ರ. ಅದುವೇ ವಿಜ್ಞಾನ. ಋಗ್ವೇದದಲ್ಲಿ ವಿಶ್ವಕರ್ಮನ ವರ್ಣನೆ ಸವಿಸ್ತಾರವಾಗಿ ಬಂದಿದೆ. ಯಜುರ್ವೇದ ಪುರಷಸೂಕ್ತವು ವಿಶ್ವಕರ್ಮನ ವರ್ಣನೆ ನೀಡುತ್ತದೆ. ದೇವಶಿಲ್ಪಿ ತ್ವಸ್ತಾರ್ ವಿಶ್ವಕರ್ಮನ ಅಂಶ ಎನ್ನುವುದು ಅದರ ಭಾವ. ವೇದಗಳ ದೃಷ್ಟಿಯಲ್ಲಿ ವಿಶ್ವಕರ್ಮನೇ ಅಜನು, ಪರಬ್ರಹ್ಮನು. ಆತನೇ ಹೋತಾರ. ವಿಶವಸೃಷ್ಟಿಯ ಜನಕ. ದೇವತಾ ಮೂರ್ತಿಗಳಿಗೆ ನಿಜರೂಪವಿತ್ತವನು. ಬ್ರಹ್ಮಾಂಡದ ಸೃಷ್ಟಿಕಾರ್ಯದಲ್ಲಿ ತನ್ನನ್ನು ತೊಡಗಿಸಿಕೊಳ್ಳುವ ವಿಶ್ವಕರ್ಮ ಪುರುಷನಾಗುತ್ತಾನೆ. ವಾಚಸ್ಪತಿಯಾಗಿ ತನ್ನನ್ನು ಬ್ರಹ್ಮಣಸ್ಪತಿಯೊಂದಿಗೆ ಸಂಬಂಧ ಕಲ್ಪಿಸಿಕೊಳ್ಳುತ್ತಾನೆ. ಯಜುರ್ವೇದವು ವಿಶ್ವಕರ್ಮನನ್ನು ಪ್ರಜಾಪತಿಯನ್ನಾಗಿ ನೋಡಿದರೆ ಅಥರ್ವಣ ವೇದದ ಪ್ರಕಾರ ಆತನೇ ಪಶುಪತಿ. ಶ್ವೇತಾಶ್ವತರೋಪನಿಷತ್‍ನ ಪ್ರಕಾರ ವಿಶ್ವಕರ್ಮನೇ ಸೃಷ್ಟಿಕರ್ತ. ಸೃಷ್ಟಿಸುತ್ತಾರೆ. ಅವರೆಂದರೆ, ಮನು, ಮಯ, ತ್ವೋಸ್ಟ, ಶಿಲ್ಪಿ, ವಿಶ್ವಜ್ಞ, ಅವರಿಗೆ ತತ್ ಸಂಬಂಧಿತವಾದ ಋಷಿಗಳು ಜನಿಸುತ್ತಾರೆ. ಅವರೆಂದರೆ, ಸನಗ, ಸನಾತನ, ಅಬುವಾನಾಸಾ, ಪ್ರತ್ನಾಸ, ಸುಪರ್ಣಸಾ. ವಿಶ್ವಕರ್ಮನ ಕಾರಣದಿಂದ ದೇವತೆಗಳಿಗೆ ಸಂಬಂಧಪಟ್ಟ ಅಸ್ತ್ರ, ಶಾಸ್ತ್ರಾಸ್ತ್ರಗಳೆಲ್ಲವೂ ನಿರ್ಮಾಣಗೊಂಡವು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ ಪುರಾಣ ಕಾಲದಲ್ಲಿ ಕಂಡು ಬರುವ ವಜ್ರಾಯುಧದ ನಿರ್ಮಾತೃವೂ ಅವನೇ ಆಗಿದ್ದಾನೆ. ಮಹಾಭಾರತದಲ್ಲಿ ಆತನೇ ಕಲಾ ದೇವರಾಗಿದ್ದಾನೆ. ಬಡಗಿಗಳ ಪಾಲಿನ ಕುಶಲಕರ್ಮಿಯಾಗಿದ್ದಾನೆ. ಮುಖ್ಯವಾಗಿ ಚಿನ್ನಾಭರಣಗಳ ವಿನ್ಯಾಸಕಾರನೆಂಬ ಹೆಸರು ಅವನೊಟ್ಟಿಗಿದೆ. ಕೆಲ ಪುರಾಣಗಳ ಪ್ರಕಾರ ಆತ ಬೃಹ್ಮಣಸ್ಪತಿ ಮತ್ತು ಸಂಜ್ಞಾರ ತಂದೆ. ವಿಶ್ವಕರ್ಮ ಸಾಕಷ್ಟು ನಗರಗಳನ್ನು ಸೃಷ್ಟಿಸಿದ್ದಾನೆ. ಆದರಲ್ಲಿ ಸತ್ಯ ಯುಗದಲ್ಲಿ ಸ್ವರ್ಗವನ್ನು, ತ್ರೇತಾಯುಗದಲ್ಲಿ ಲಂಕೆಯನ್ನು, ದ್ವಾಪರಯುಗದಲ್ಲಿ ದ್ವಾರಕೆಯನ್ನು ನಿರ್ಮಾಣ ಪ್ರಮುಖವಾದುದೆಂದು ಹೇಳಲಾಗುತ್ತದೆ. ತ್ರೇತಾಯುಗದ ಕಾಲದಲ್ಲಿ ವಿಶ್ವಕರ್ಮನಿಂದ ನಿರ್ಮಾಣಗೊಂಡ ಲಂಕೆಗೆ ಸ್ವರ್ಣ ಲಂಕೆ ಎಂದು ಕರೆಯುತ್ತಿದ್ದಂತೆ.
ವಿಶ್ವರೂಪನಿವನು
ಕುಶಲಕರ್ಮಿ ಮತ್ತು ವಾಸ್ತುಶಿಲ್ಪ ವಿನ್ಯಾಸಗಾರರ ಅಧಿದೇವತೆಯೇ ವಿಶ್ವಕರ್ಮ, ವಿಶ್ವಕರ್ಮ ಬ್ರಹ್ಮನ ಮಗ. ಇಡೀ ಬ್ರಹ್ಮಾಂಡದ ಕಲ್ಪನೆ, ವಿನ್ಯಾಸವೂ ಆತನದೇ ಎಂದು ಹೇಳಲಾಗುತ್ತದೆ. ದೇವತೆಗಳು ಬಳಸುವ ಹಾರುವ ರಥ, ಶಸ್ತ್ರಾಸ್ತ್ರ, ದೇವಗೃಹಗಳ ನಿರ್ಮಾಣ ಕಾರ್ಯದಲ್ಲೂ ವಿಶ್ವಕರ್ಮನ ಪಾತ್ರವಿದೆ. ಮಹಾಭಾರತವು ಆತನನ್ನು ಕಲೆಗಳ ಅಧಿಪತಿ, ಸಾವಿರಾರು ಕುಶಲಕಲೆಗಳ ನಿರ್ಮಾತೃ, ಬಡಗಿಗಳ ಆರಾಧ್ಯದೈವ, ಚಿನ್ನಾಭರಣಗಳ ವಿನ್ಯಾಸಕಾರ ದೇವತೆ ಎಂದೆಲ್ಲಾ ಹೊಗಳುತ್ತದೆ. ವಿಶ್ವಕರ್ಮನಿಗೆ ನಾಲ್ಕು ಕೈಗಳಿವೆ. ಆತ ಕಿರೀಟವನ್ನು ಧರಿಸಿದ್ದಾನೆ, ಅತ್ಯಮೂಲ್ಯ ಚಿನ್ನಾಭರಣಗಳನ್ನು ಧರಿಸಿದ್ದಾನೆ, ಕೈಯಲ್ಲಿ ನೀರಿನ ತಂಬಿಗೆ, ಪುಸ್ತಕ, ಉಳಿ ಮತ್ತಿತರ ಸಾಧನಗಳನ್ನು ಹಿಡಿದುಕೊಂಡಿದ್ದಾನೆ. ಹೀಗೆ ಸರ್ವಾಭರಣ, ಸರ್ವ ಕಲೆಗಳ ಪ್ರತೀಕವಾದ ವಿಶ್ವಕರ್ಮ ಕಲಾಪ್ರಿಯರ ಪಾಲಿನ ಬ್ರಹ್ಮನಾಗಿದ್ದಾನೆ. ಆರಾಧನೆಯ ಬಿಂದುವಾಗಿದ್ದಾನೆ. ಈ ದೇವಶಿಲ್ಪಿಗೆ ವೇದಪುರಾಣಗಳಲ್ಲಿ ವಿಶಿಷ್ಟ ಸ್ಥಾನವಿದೆ.
ದೇವಶಿಲ್ಪಿ ವಿಶ್ವಕರ್ಮ
ಮಹಾಭಾರತದಲ್ಲೊಂದು ಪ್ರಸಂಗ ಬರುತ್ತದೆ. ಶ್ರೀಕೃಷ್ಣನ ಅಣತಿಯಂತೆ ವಿಶ್ವಕರ್ಮನು ಪಡುಗಡಲ ನಡುವೆ ನೂರು ಯೋಜನ ಗಾತ್ರದ ದ್ವಾರಕಾ ನಗರಿಯನ್ನು ನಿರ್ಮಿಸುತ್ತಾನೆ. ಅದುವೇ ದ್ವಾರಕಾ ನಗರಿ. ಪುರಾಣಗಳ ಪ್ರಕಾರ, ದ್ವಾರಕಾ ನಗರಿಯಲ್ಲಿ ಹದಿನಾರು ಸಾವಿರ ಉಪ್ಪರಿಗೆ ಮನೆಗಳಿದ್ದವಂತೆ. ಅವು ಐದರಿಂದ ಒಂಬತ್ತು ಅಂತಸ್ತುಗಳವರೆಗೆ ಇದ್ದವೆಂದರೆ, ವಿಶ್ವಕರ್ಮನ ಕುಶಲತೆಯನ್ನು ಅರ್ಥಮಾಡಿಕೊಳ್ಳಬಹುದು.
ವಿಶ್ವಕರ್ಮನ ಕುಶಲತೆಗೆ ಮತ್ತೊಂದು ನಿದರ್ಶನವೆಂದರೆ, ಇಂದ್ರಪ್ರಸ್ಥ. ಪಾಂಡವರಿಗಾಗಿ ನಿರ್ಮಾಣ ಮಾಡಿದ ನಗರ. ಅದರ ಹಿಂದಿನ ಕಥೆ ಹೀಗಿದೆ. ಧೃತರಾಷ್ಟ್ರನು ಹಸ್ತಿನಾಪುರವನ್ನು ಕೌರವನಿಗೆ ಕೊಟ್ಟು ಪಾಂಡವರಿಗೆ ಖಾಂಡವಪ್ರಸ್ಥವೆಂಬ ಕಾಡಿನಂತಹ ಪ್ರದೇಶ ನೀಡುತ್ತಾನೆ. ಅದುಅ ವಾಸಕ್ಕೆ ಯೋಗ್ಯವಾದ ಸ್ಥಳವಾಗಿರುವುದಿಲ್ಲ. ನಂತರ, ಶ್ರೀಕೃಷ್ಣನಲ್ಲಿ ಮೊರೆಹೋಗುತ್ತಾರೆ. ಶ್ರೀಕೃಷ್ಣನ ಅನುಜ್ಞೆಯಂತೆ ವಿಶ್ವಕರ್ಮನು ಪಾಂಡವರಿಗಾಗಿ ನಗರವೊಂದನ್ನು ನಿರ್ಮಿಸುತ್ತಾನೆ. ಅದು ದೇವಲೋಕದ ಅಮರಾವತಿ ನಗರದಂತೆ ಶೋಭಿಸುತ್ತಿರುತ್ತದೆ. ಹಾಗಾಗಿ ಅದನ್ನು ಇಂದ್ರಪ್ರಸ್ಥ ಎಂದು ಕರೆಯುತ್ತಾರೆ.
ಹೀಗೆ ವಿಶ್ವಕರ್ಮನು ಶಿಲ್ಪಿಯಾಗಿ, ನಗರ ನಿರ್ಮಾತೃವಾಗಿ, ಪರಬ್ರಹ್ಮ ಸ್ವರೂಪನಾಗಿ ತನ್ನನ್ನು ಗುರುತಿಸಿಕೊಂಡಿದ್ದಾನೆ. ಒರಿಸ್ಸಾದ ಪುರಿಯಲ್ಲಿರುವ ಜಗನ್ನಾಥನ ಮರದ ವಿಗ್ರಹವೂ ವಿಶ್ವಕರ್ಮನಿಂದ ನಿರ್ಮಿತವಾದುದು ಎಂದು ಹೇಳಲಾಗುತ್ತದೆ. ಅಂತೆಯೇ ಪುರಾಣಗಳನ್ನು ಒಮ್ಮೆ ಅವಲೋಕಿಸಿದಾಗ, ದೇವ, ದಾನವರ ಯುದ್ಧದ ಸಮಯದಲ್ಲಿ ದೇವತೆಗಳ ಅನುಕೂಲಕ್ಕಾಗಿ ರಥವನ್ನು, ಶಸ್ತ್ರಾಸ್ತ್ರಗಳನ್ನು, ಇಂದ್ರನಿಗೆ ವಜ್ರಾಯುಧವನ್ನು ಕುಬೇರನಿಗೆ ಪುಷ್ಪಕ ವಿಮಾನವನ್ನು ನಿರ್ಮಿಸಿದ ಖ್ತಾತಿ ವಿಶ್ವಕರ್ಮನದು.
ವಿಶ್ವಕರ್ಮನ ಸೃಷ್ಟಿಯ ಕಾರ್ಯ ಅರಮನೆ, ನಗರ, ಶಸ್ತ್ರಾಸ್ತ್ರಗಳಿಷ್ಟೇ ಸೀಮಿತವಾಗಿಲ್ಲ. ಸುಂದ, ಉಪಸುಂದರೆಂಬ ಮಹಾದುರುಳ ರಾಕ್ಷಸರನ್ನು ಸಂಹರಿಸುವ ಸಲುವಾಗಿ ತಿಲೋತ್ತಮೆಯನ್ನು ವಿಶ್ವಕರ್ಮನು ಸೃಷ್ಟಿಸಿದನೆಂಬ ಉಲ್ಲೇಖವನ್ನು ಪುರಾಣಗಳಲ್ಲಿ ನೋಡಬಹುದು. ಇದರಿಂದಾಗಿ ವಿಶ್ವಕರ್ಮನು ಸೃಷ್ಟಿಕರ್ತನಾಗಿ ಬ್ರಹ್ಮನಿಗೆ ಸಮನಾದನು. ಇಂದಿಗೂ ಮರ, ಕಲ್ಲು, ಲೋಹ, ಮಣ್ಣು, ಚಿನ್ನದಿಂದ ಸುಂದರವಾದ ಆಕೃತಿ, ವಿನ್ಯಾಸ ಮಾಡುವ ಜನಾಂಗದವರನ್ನು ವಿಶ್ವಕರ್ಮನ ಹೆಸರಿನಿಂದಲೇ ಗುರುತಿಸುತ್ತಾರೆ. ಜೀವಿಯ ಬುದ್ಧಿಶಕ್ತಿ, ಕುಶಲತೆಗೆ ವಿಶ್ವಕರ್ಮನೇ ಸಂಕೇತನಾಗಿದ್ದಾನೆ. ಜಗದ್ವಂದ್ವನಾಗಿದ್ದಾನೆ.
ಕನ್ಯಾ ಸಂಕ್ರಮಣದ ದಿನದಂದು ವಿಶ್ವಕರ್ಮ ಈ ಜಗತ್ತನ್ನು ಸೃಷ್ಟಿಸಿದನೆನ್ನುವ ನಂಬಿಕೆ ಹಲವರದ್ದು. ಹಾಗೆಂದೇ ಅಂದು ವಿಶ್ವಕರ್ಮನನ್ನು ನೆನೆಯುವ ಸಂಪ್ರದಾಯವಿದೆ. ಪರಬ್ರಹ್ಮ ಸ್ವರೂಪನಾದ ವಿಶ್ವಕರ್ಮನಿಗೆ ಉತ್ತರ ಭಾರತದಲ್ಲಿ ಅಗ್ರಪೂಜೆ. ಮೊದಲಿಗೆ ವಿಶ್ವಕರ್ಮನನ್ನು ನಿರ್ಗುಣ ರೂಪದಲ್ಲಿ ಪೂಜೆಗೊಳ್ಳುತ್ತಿದ್ದಾನೆ. ವಿಶ್ವಕರ್ಮನ ಹೆಸರಿನಲಿ ಸಾಕಷ್ಟು ದೇಗುಲಗಳಿವೆ. ಬೆಳಗಾವಿಯ ಸಿರಸಂಗಿಯಲ್ಲಿ ಪುರಾತನ ಕರ್ಮಠೇಶ್ವರ (ವಿಶ್ವಕರ್ಮ), ಮಂಗಳೂರು ಹಾಗೂ ಉಡುಪಿ ಕಾಟಪಾಡಿಯಲ್ಲಿರುವ ವಿಶ್ವಕರ್ಮನ ದೇಗುಲಗಳು ಮುಖ್ಯವಾಗಿವೆ. ಇನ್ನುಳಿದಂತೆ ಕುಂದಾಪುರದ ಉಪ್ರಳ್ಳಿಯಲ್ಲಿ ವಿಶ್ವಕರ್ಮನನ್ನು ವಿಭೂತಿಯ ರೂಪದಲ್ಲಿ ಪೂಜಿಸುತ್ತಾರೆ. ಗೋಕರ್ಣದ ಕೋಟಿ ತೀರ್ಥದಲ್ಲಿ ಲಿಂಗರೂಪದಲ್ಲಿ (ಕರ್ಮಟೇಶ್ವರ) ವಿಶ್ವಕರ್ಮನ ಆರಾಧನೆ ನಡೆಯುತ್ತದೆ.
(ವಿವಿಧ ಮೂಲಗಳಿಂದ)
-ಡಾ.ಗುರುರಾಜ ಪೋಶೆಟ್ಟಿಹಳ್ಳಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ