ಉಜಿರೆ: ಶ್ರೀ ಸಿದ್ದವನ ಗುರುಕುಲದಲ್ಲಿ ಶ್ರೀ ಗಣೇಶೋತ್ಸವದ ಪ್ರಯುಕ್ತ ಸೆಪ್ಟೆಂಬರ್ 19ರ ಮಂಗಳವಾರದಂದು ಬೆಳಗ್ಗೆ 10.30ಕ್ಕೆ ಧಾರ್ಮಿಕ ಪ್ರವಚನವು ಜರುಗಿತು.
ಕಾರ್ಯಕ್ರಮದ ಮುಖ್ಯ ಪ್ರವಚನಕಾರಾಗಿ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕ ಡಾ. ವಾದಿರಾಜ ಕಲ್ಲೂರಾಯ ಆಗಮಿಸಿ, "ಹಬ್ಬಗಳ ಆಚರಣೆಯಲ್ಲಿ ನಂಬಿಕೆಯ ನೆಲೆ ಹಾಗೆ ನೆಮ್ಮದಿಯ ಸೆಲೆ ಇರಬೇಕು. ಧಾರ್ಮಿಕ ಆಚರಣೆಗಳು ಋಣಾತ್ಮಕ ಯೋಜನೆಗಳನ್ನು ದೂರಮಾಡಿ ನಮ್ಮಲ್ಲಿರುವ ಕ್ರಿಯಾಶೀಲತೆಯನ್ನು ಹಾಗೆ ರಾಷ್ಟ್ರೀಯತೆಯ ಚಿಂತನೆಗಳನ್ನು ವೃದ್ಧಿಗೊಳಿಸಲು ಸಹಕಾರಿಯಾಗಿದೆ. ಆಚರಣೆಗೆ ಬೇಕಿರುವುದು ವೈಭವವಲ್ಲ ಸರಿಯಾದ ವಿಧಾನ, ಸಾಮಾಗ್ರಿಗಳಿಗಿಂತಲೂ ಸಂಸ್ಕಾರ ಮುಖ್ಯ. ಮನೋವಿಕಾಸ ಹಾಗೂ ಉತ್ತಮ ಜೀವನ ಪದ್ದತಿಯನ್ನು ರೂಪಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ನಾವು ಗಜಮುಖನಂತೆ ಶ್ರೇಷ್ಠವಾದದ್ದನ್ನು ಕೇಳುವ, ಸೂಕ್ಷ್ಮವಾದದ್ದನ್ನು ಗಮನಿಸುವ, ಅಹಂಕಾರವನ್ನು ಮೆಟ್ಟಿ ನಿಲ್ಲುವ ಹಾಗೆ ಜ್ಞಾನ ಸಂಗ್ರಹಣೆಯ ಅಮೂಲ್ಯ ಗುಣಗಳನ್ನು ಪ್ರೇರಣೆಯಾಗಿ ಇಟ್ಟುಕೊಳ್ಳಬೇಕು. ಪುರಾಣಗಳನ್ನು ತಿಳಿದುಕೊಳ್ಳುವ ಹಾಗೆ ಆಚರಣೆಗಳನ್ನು ಅನುಸರಿಸುವ, ಭಾವನೆಯನ್ನು ಬೆಳೆಸಿಕೊಳ್ಳಬೇಕು "ಎಂದು ಹೇಳಿ ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶ್ರೀ. ಧ. ಮ ಕಾಲೇಜಿನ ಕಲಾವಿಭಾಗದ ಡೀನ್ ವಿದ್ವಾನ್ ಶ್ರೀಧರ್ ಭಟ್ ಮಾತನಾಡಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಿದ್ದವನ ಗುರುಕುಲದ ಸೌರಭ ಭಿತ್ತಿಪತ್ರದ ಅನಾವರಣ ಹಾಗೂ ಗಣೇಶ ಚತುರ್ಥಿಯ ಪ್ರಯುಕ್ತ ಆಯೋಜಿಸಿದ್ದ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಸಿದ್ದವನ ಗುರುಕುಲದ ವಿದ್ಯಾರ್ಥಿ ಪೃಥ್ವಿಕ್ ಎಸ್ ಸ್ವಾಗತಿಸಿ, ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗುರುಕುಲದ ಪ್ರಧಾನ ನಿಲಯ ಪಾಲಕ ಕೇಶವ ವಂದಿಸಿ, ವಿದ್ಯಾರ್ಥಿ ಮಂಜುನಾಥ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಸಹ ಪಾಲಕರಾದ ಲಕ್ಷ್ಮೀಶ ಹಾಗೂ ವೇಣುಗೋಪಾಲ ಗುರುಕುಲದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ