ಶಿಕ್ಷಕರ ದಿನಾಚರಣೆ ವಿಶೇಷ:
‘ಗುರು ಬ್ರಹ್ಮಾ, ಗುರು ವಿಷ್ಣುಃ, ಗುರು ದೇವೋ ಮಹೇಶ್ವರಃ, ಗುರು ಸಾಕ್ಷಾತ್ ಪರಬ್ರಹ್ಮಃ ತಸ್ಮೈ ಶ್ರೀ ಗುರುವೇ ನಮಃ’ ಈ ಅತ್ಯದ್ಭುತವಾದ ಶ್ಲೋಕವನ್ನು ಆದಿ ಗುರು ಶಂಕರಾಚಾರ್ಯರು ರಚಿಸಿದ್ದಾರೆ. ಗುರುಗಳೇ ಕಣ್ಣಿಗೆ ಕಾಣದ ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ರೂಪವಾಗಿದ್ದು, ಅಂತಹ ಗುರುಗಳಿಗೆ ಶಿರಸಾಷ್ಟಾಂಗ ನಮಸ್ಕಾರಗಳು ಎನ್ನುವ ಅರ್ಥ ಈ ಶ್ಲೋಕಕ್ಕಿದೆ. ಈ ಮೂಲಕ ಇಡೀ ಲೋಕವೇ ಗುರುಗಳಿಗೆ ತಲೆಬಾಗುತ್ತದೆ. ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಗೆ ಪ್ರಥಮ ಸ್ಥಾನವನ್ನು ನೀಡಿದರೆ ನಂತರದ ಸ್ಥಾನವನ್ನು ನೀಡುವುದು ಗುರುಗಳಿಗೇ. ವ್ಯಕ್ತಿಯೊಬ್ಬನಿಗೆ ‘ಶಿಕ್ಷಣ’ ಎನ್ನುವ ಶಬ್ದದ ನೈಜಾರ್ಥವನ್ನು ತಿಳಿಸಿ ಆತನ ಬದುಕನ್ನು ರೂಪಿಸುವವರು ಶಿಕ್ಷಕರಾದ್ದರಿಂದ ಅವರನ್ನು ನಾವೆಲ್ಲರೂ ಪೂಜಿಸುತ್ತೇವೆ. ಆದ್ದರಿಂದ ಪ್ರತೀ ವರ್ಷವೂ ಸೆಪ್ಟೆಂಬರ್ 5ರಂದು ಶಿಕ್ಷಕರ ದಿನಾಚರಣೆಯನ್ನು ಇಡೀ ದೇಶವೇ ಆಚರಿಸುತ್ತದೆ. ಆ ದಿನದಂದು ಬದುಕಿಗೆ ಅರ್ಥ ನೀಡಿದ ಶಿಕ್ಷಕರನ್ನು ಸ್ಮರಿಸಿ ಅವರಿಗೆ ಧನ್ಯವಾದ ಹೇಳುತ್ತೇವೆ.
ಸೆಪ್ಟೆಂಬರ್ 05 ರಂದೇ ಶಿಕ್ಷಕರ ದಿನಾಚರಣೆ ಏಕೆ?
ಪ್ರತಿವರ್ಷ ಸೆಪ್ಟೆಂಬರ್ 5ನ್ನು ಶಿಕ್ಷಕರ ದಿನಾಚರಣೆ ಎಂದು ಆಚರಿಸಲಾಗುತ್ತಿದೆ. 1962ರಿಂದಲೂ ಆಚರಿಸಿಕೊಂಡು ಬರುತ್ತಿರುವ ಈ ದಿನ ಭಾರತೀಯ ಶಿಕ್ಷಣ ವ್ಯವಸ್ಥೆಗೆ ಅಭೂತಪೂರ್ವವಾದ ಕೊಡುಗೆ ನೀಡಿದ ಶಿಕ್ಷಕ, ದಾರ್ಶನಿಕ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನವೂ ಹೌದು. ‘ಶಿಕ್ಷಕರು ಪ್ರತಿಯೊಂದು ದೇಶಗಳ ಜಾಣ ಮೆದುಳುಗಳು ಆಗಬೇಕು’ ಎಂದು ಡಾ. ರಾಧಾಕೃಷ್ಣನ್ ಕರೆ ನೀಡಿದ್ದರು. ಈ ದಿನವನ್ನು ದೇಶದ ಮುಂದಿನ ಭವಿಷ್ಯವಾದ ಮಕ್ಕಳ ಭವಿಷ್ಯವನ್ನು ರೂಪಿಸುವ ಶಿಕ್ಷಕರ ದಿನವನ್ನಾಗಿ ಆಚರಿಸುವ ಮೂಲಕ ಇದು ಶಿಕ್ಷಕರಿಗೆ ನೀಡುವ ಗೌರವವಾಗಿದೆ.
ಸರ್ವಪಲ್ಲಿ ಡಾ.ರಾಧಾಕೃಷ್ಣನ್ ಅವರ ಹುಟ್ಟಿದ ದಿನವನ್ನು ಶಿಕ್ಷಕರ ದಿನವಾಗಿ ಆಚರಣೆ ಮಾಡಲು ಅತ್ಯತ್ತಮ ಕಾರಣವಿದೆ. ಒಮ್ಮೆ ಅವರ ವಿದ್ಯಾರ್ಥಿಗಳ ಪೈಕಿ ಒಬ್ಬನು ನಿಮ್ಮ ಹುಟ್ಟಿದ ಹಬ್ಬವನ್ನು ಬಲು ವಿಜೃಂಭಣೆಯಿಂದ ನಾವೆಲ್ಲರೂ ಆಚರಿಸಲಿದ್ದೇವೆ, ತಾವು ಖಂಡಿತಾ ಬರಬೇಕು ಎಂದು ಆಹ್ವಾನವನ್ನು ನೀಡಿದ್ದರು. ಈ ಮಾತಿಗೆ ಉತ್ತರವಾಗಿ ಡಾ. ರಾಧಾಕೃಷ್ಣನ್ ಅವರು ಈ ದಿನವನ್ನು ನೀವೆಲ್ಲರೂ ನನ್ನ ಹುಟ್ಟುಹಬ್ಬವನ್ನಾಗಿ ಆಚರಿಸುವ ಬದಲು ‘ಶಿಕ್ಷಕರ ದಿನ' ಆಗಿ ಏಕೆ ಆಚರಿಸಬಾರದು? ಇದರಿಂದ ನನಗೆ ಹೆಚ್ಚು ಸಂತೋಷವಾಗುತ್ತದೆ ಎಂದು ಹೇಳಿದ್ದರು. ಅವರು ಹೇಳಿದ ಮಾತನ್ನು ಗಂಭೀರವಾಗಿ ಪರಿಗಣಿಸಿದ ವಿದ್ಯಾರ್ಥಿಗಳು ಅಂದಿನಿಂದಲೇ ಸೆಪ್ಟೆಂಬರ್ 05ನ್ನು ಶಿಕ್ಷಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಿದರು. ಅಂದಿನಿಂದ ಪ್ರತಿವರ್ಷ ಸೆಪ್ಟೆಂಬರ್ ಐದರಂದು ಶಿಕ್ಷಕರ ದಿನಾಚರಣೆಯ ರೂಪದಲ್ಲಿ ಸರ್ವಪಳ್ಳಿ ರಾಧಾಕೃಷ್ಣನ್ ಅವರ ಹುಟ್ಟುಹಬ್ಬವನ್ನು ಎಲ್ಲೆಡೆ ಆಚರಿಸಲಾಗುತ್ತಿದೆ.
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರು ಸೆಪ್ಟೆಂಬರ್ 5, 1888 ರಂದು ಆಂದ್ರಪ್ರದೇಶದ ತಿರುತ್ತಾನಿ ಪಟ್ಟಣದ ತೆಲುಗು ಕುಟುಂಬದಲ್ಲಿ ಜನಿಸಿದರು. ಇವರು ಒಬ್ಬ ಅತ್ಯುತ್ತಮ ಶಿಕ್ಷಕ, ತತ್ವಜ್ಞಾನಿ, ರಾಜ್ಯಪಾಲ ಅಷ್ಟೇ ಅಲ್ಲದೇ 1952 ರಿಂದ 1962 ರವರೆಗೆ ಭಾರತದ ಮೊದಲ ಉಪರಾಷ್ಟ್ರಪತಿಯಾಗಿ, 1962ರಲ್ಲಿ ಭಾರತದ ರಾಷ್ಟ್ರಪತಿ ಆಗಿಯೂ ಸೇವೆ ಸಲ್ಲಿಸಿದ್ದರು. ಮೊದಲ ಶಿಕ್ಷಕರ ದಿನವನ್ನು 5 ಸೆಪ್ಟೆಂಬರ್ 1962 ರಂದು ಆಚರಿಸಿ, ಅದನ್ನೇ ಅನುಸರಿಸಿಕೊಂಡು ಬರಲಾಗಿದೆ. ಡಾ.ರಾಧಾಕೃಷ್ಣನ್ ಅವರು ದೇಶ ಕಂಡ ಶ್ರೇಷ್ಠ ಶಿಕ್ಷಕರು ಮತ್ತು ಖ್ಯಾತ ತತ್ವಶಾಸ್ತ್ರಜ್ಞರಾಗಿದ್ದು, ತಮ್ಮ ಜೀವನವನ್ನು ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಮುಡಿಪಾಗಿಟ್ಟಿದ್ದರು.
ಶಿಕ್ಷಕರ ದಿನದ ವಿಶೇಷತೆ:
‘ಇಂದಿನ ಮಕ್ಕಳೇ ಮುಂದಿನ ಸತ್ಪ್ರಜೆಗಳು’ ಎನ್ನುವ ಮಾತಿದೆ. ಅಂದರೆ ಒಂದು ದೇಶದ ನಿರ್ಮಾಣದಲ್ಲಿ ಮಕ್ಕಳ ಪಾತ್ರ ಅತ್ಯಂತ ಮಹತ್ವದ್ದು. ಆದರೆ ಅದೇ ಮಕ್ಕಳ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು. ಪುರಾತನ ಕಾಲದ ಗುರುಕುಲ ಶಿಕ್ಷಣ ವ್ಯವಸ್ಥೆಯಿಂದ ಹಿಂದಿನ ಆಧುನಿಕ ಶಿಕ್ಷಣ ವ್ಯವಸ್ಥೆಯವರೆಗೂ ಅಧ್ಯಾಪಕರು ಮಕ್ಕಳ ಉಜ್ವಲ ಭವಿಷ್ಯವನ್ನು ನಿರ್ಮಾಣ ಮಾಡಲು ತಮ್ಮ ಬದುಕನ್ನೇ ಮುಡಿಪಾಗಿ ಇಡುತ್ತಿದ್ದಾರೆ.
ಶಿಕ್ಷಕರು ಮಕ್ಕಳ ಭವಿಷ್ಯ, ಮಕ್ಕಳ ಆತ್ಮವಿಶ್ವಾಸ ಮತ್ತು ಮಕ್ಕಳ ಬದುಕನ್ನು ಬಲಿಷ್ಠಗೊಳಿಸುತ್ತಾರೆ. ಮಕ್ಕಳು ಮಾಡುವ ಪ್ರತಿಯೊಂದು ತಪ್ಪುಗಳನ್ನು ತಿದ್ದಿ ಅವರ ಜವಾಬ್ದಾರಿಯನ್ನು ತಿಳಿಹೇಳುತ್ತಾರೆ. ತನ್ನ ಶಿಷ್ಯಂದಿರ ಬದುಕು ಎಂದೆಂದಿಗೂ ಉಜ್ವಲವಾಗಿ ಇರಲಿ ಎಂದು ಬಯಸುವ ಶಿಕ್ಷಕರ ಅವಿರತ ಪ್ರಯತ್ನಗಳನ್ನು ಗುರುತಿಸಿ ಗೌರವಿಸಬೇಕು. ಶಿಕ್ಷಕರ ದಿನಾಚರಣೆಯನ್ನು ವಿದ್ಯಾರ್ಥಿಗಳು ತಮ್ಮ ಅಚ್ಚುಮೆಚ್ಚಿನ ಶಿಕ್ಷಕರಿಗೆ ವಿಶೇಷ ಉಡುಗೊರೆ ಮತ್ತು ಗೌರವಗಳನ್ನು ಅರ್ಪಿಸಿ ಶುಭಾಶಯ ತಿಳಿಸುತ್ತಾರೆ.
ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ನಿರ್ಮಾಣ ಮಾಡುವ ಪಾಠಕ್ಕಿಂತಲೂ ಮಿಗಿಲಾಗಿ ತನ್ನ ಶಿಷ್ಯಂದಿರಲ್ಲಿ ಬದುಕಿಗೆ ಅಗತ್ಯವಾಗಿ ಬೇಕಿರುವ ವಿವೇಕ, ತಾಳ್ಮೆ, ದೂರದೃಷ್ಟಿ, ಮಾನವತೆಯನ್ನು ತಿಳಿಸಿ ವಿದ್ಯಾರ್ಥಿಗಳನ್ನು ದೇಶ ಕಟ್ಟುವ ಸತ್ಪ್ರಜೆಗಳನ್ನಾಗಿ ರೂಪಿಸುವ ಶಿಕ್ಷಕರಿಗೆ ವಂದನೆ ಸಲ್ಲಿಸುವ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆ ಅತಿ ಮಹತ್ವದ್ದು. ಅತ್ಯುತ್ತಮ ವಿದ್ಯಾಭ್ಯಾಸವು ಒಂದು ದೇಶದ ಭವಿಷ್ಯವನ್ನೇ ಬದಲಿಸಿಬಿಡಬಲ್ಲುದು ಎನ್ನುವ ಮಾತಿದೆ. ಯಾವುದೇ ಒಬ್ಬ ವ್ಯಕ್ತಿ ಜೀವನದಲ್ಲಿ ಅತ್ಯತ್ತಮ ಸಾಧನೆ ಮಾಡಿದ್ದಾನೆಂದರೆ ಅದರ ಹಿಂದೆ ಹೆತ್ತವರ ಶ್ರಮದ ಜೊತೆಗೆ ಶಿಕ್ಷಕರ ಶ್ರಮವೂ ಅತ್ಯಂತ ಮಹತ್ವದ್ದು. ಇದನ್ನು ಗುರುತಿಸಿ ಗೌರವಿಸುವುದು ಅತ್ಯಗತ್ಯ.
‘ವ್ಯಕ್ತಿಯ ಬದುಕಿನಲ್ಲಿ ಬದುಕು ಹಾಗೂ ಸಮಯ ಬಹುದೊಡ್ಡ ಶಿಕ್ಷಕರು. ಜೀವನವು ಸಮಯದ ಮೌಲ್ಯವನ್ನು ಕಲಿಸಿದರೆ, ಸಮಯವು ಬದುಕಿನ ಮೌಲ್ಯವನ್ನು ತಿಳಿಸುತ್ತದೆ. ಶಿಕ್ಷಣ ವ್ಯಕ್ತಿಗೆ ಜೀವನ ಮೌಲ್ಯಗಳನ್ನು ಕೌಶಲ್ಯಗಳು ಮತ್ತು ಅನುಭವಗಳ ಜೊತೆಗೆ ತಿಳಿಸುತ್ತದೆ. ನಮ್ಮ ವ್ಯಕ್ತಿತ್ವ ಹೊಳೆಯಲು ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ.’ ಎಂದು ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಹೇಳಿದ್ದು, ಬದುಕನ್ನು ಕಲ್ಪಿಸಿದ ಹಾಗೂ ಕಟ್ಟಿಕೊಟ್ಟ ಪ್ರೀತಿಯ ಸಿಕ್ಷಕರಿಗೆ ಶಿಕ್ಷಕರ ದಿನಾಚರಣೆಯ ಶುಭಾಶಯಗಳನ್ನು ಹೇಳೋಣ.
- ಸಂತೋಷ್ ರಾವ್ ಪೆರ್ಮುಡ
ಪೆರ್ಮುಡ ಮನೆ, ಪಟ್ರಮೆ ಗ್ರಾಮ ಮತ್ತು ಅಂಚೆ
ಬೆಳ್ತಂಗಡಿ ತಾಲೂಕು, ದ.ಕ ಜಿಲ್ಲೆ-574198
ದೂ: 9742884160
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ