ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಅತ್ಯಂತ ಪವಿತ್ರ ಹಾಗೂ ಮಹಾಗ್ರಂಥವಾದ ಮಹಾಭಾರತದ ಪ್ರಮುಖ ಪಾತ್ರವಾದ ಶ್ರೀಕೃಷ್ಣನು ಭಗವಾನ್ ವಿಷ್ಣುವಿನ ಎಂಟನೇ ಅವತಾರವಾಗಿ ಪರಿಗಣಿಸಲ್ಪಟ್ಟಿದ್ದು, ಇವನು ಬೋಧಿಸಿದ ಗೀತೆ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿದ್ದು ಎಲ್ಲಾ ವ್ಯಕ್ತಿಗಳಿಗೂ, ಸಂದರ್ಭಗಳಿಗೂ, ಕಾಲಕ್ಕೂ ಅನ್ವಯವಾಗುವಂತಹ ನೀತಿ ಸಾರವನ್ನೊಳಗೊಂಡಿದೆ. ಇದು ಪ್ರಪಂಚದ ನಾನಾ ಭಾಷೆಗಳಿಗೆ ಅನುವಾದಗೊಂಡಿದ್ದು ಪಂಡಿತ ಪಾಮರರಿಂದ ಎಲ್ಲರನ್ನು ಸೆಳೆದಿದೆ, ಚಿಂತನೆಗೆ ಹಚ್ಚಿದೆ ಎಂದರೆ ಅತಿಶಯೋಕ್ತಿಯಲ್ಲ.
ಅತ್ಯಂತ ಸ್ಫೂರ್ತಿದಾಯಕ ವ್ಯಕ್ತಿತ್ವ ವನ್ನೊಳಗೊಂಡ ಕೃಷ್ಣನ ಜೀವನದಿಂದ ನಾವು ಅನೇಕ ನೀತಿಗಳನ್ನು ಕಲಿಯಬಹುದಾಗಿದ್ದು ಇದರಿಂದ ನಮ್ಮ ಜೀವನ ಸುಗಮಗೊಳ್ಳುವುದರಲ್ಲಿ ಯಾವುದೇ ಸಂಶಯವಿಲ್ಲ. ಸ್ವತಃ ಶ್ರೀಕೃಷ್ಣನು ಭಗವಂತನ ಅವತಾರವಾದರೂ ಸಾಮಾನ್ಯ ನರರಂತೆ ಜೀವನದಲ್ಲಿ ಅಪಾರ ಕಷ್ಟನೋವುಗಳನ್ನು ಅನುಭವಿಸಿ, ಬಂದದ್ದನ್ನು ಎದುರಿಸಿ ಜಗಕೆ ಮಾದರಿಯಾದವನು. ಅವನ ಜೀವನ ಪ್ರಾರಂಭವಾಗುವುದೇ ಅಂದರೆ ಅವನು ಜನ್ಮ ತಾಳಿದ್ದೇ ಸೆರೆಮನೆಯಲ್ಲಿ!. ಹುಟ್ಟಿದ ಕ್ಷಣದಿಂದಲೇ ಅವನಿಗೆ ಸೋದರ ಮಾವ ಕಂಸನಿಂದಲೇ ಜೀವಕ್ಕೇ ಕುತ್ತು ತರುವ ಸಂಕಷ್ಟಗಳು ಎದುರಾಗುತ್ತವೆ. ಹೆತ್ತವರಿಂದ ದೂರವಾಗಬೇಕಾದ ಸಂದರ್ಭ ಬರುತ್ತದೆ, ತಾನು ಬದುಕಿರುವಾಗಲೇ ತನ್ನ ವಂಶದ ಅವನತಿಯನ್ನು ಕಾಣಬೇಕಾದ ದುರವಸ್ಥೆ ಬಂದೊದಗುತ್ತದೆ, ಹೆಜ್ಜೆ ಹೆಜ್ಜೆಗೂ ಶತ್ರು ಕಾಟ ಅನುಭವಿಸಬೇಕಾಗುತ್ತದೆ. ಹೀಗೆ ಜೀವನದ ಕೊನೆಕ್ಷಣದವರೆಗೂ ಸಂಘರ್ಷಮಯ ಬದುಕನ್ನು ಕಂಡ ಶ್ರೀಕೃಷ್ಣ ಎಲ್ಲವನ್ನು ನಗು ನಗುತ್ತಲೇ ಎದುರಿಸಿ ಜಗತ್ತಿಗೆ ಗೀತಾಮೃತವನ್ನು ಧಾರೆ ಎರೆಯುತ್ತಾನೆ. ಆದ್ದರಿಂದಲೇ ಅವನು ಪುರುಷೋತ್ತಮ, ಗೀತಾಚಾರ್ಯ, ಜಗದ್ಗುರು ಎನಿಸಿಕೊಳ್ಳುತ್ತಾನೆ. ಅವನು ಗುಣಸಾಗರ. ಅವನ ವ್ಯಕ್ತಿತ್ವ ಹಿಡಿಯುವುದೆಂದರೆ ಕನ್ನಡಿಯಲ್ಲಿ ಸೂರ್ಯನನ್ನು ಹಿಡಿದಂತೆ.
ಇಂತಹ ದೇವೋತ್ತಮ ಪುರುಷನ ದಿವ್ಯ ಚರಿತೆಯೇ ಆದರ್ಶಪ್ರಾಯವಾದದ್ದು,ಅನುಕರಣೀಯವಾದದ್ದು.ಇಂತಹ ಸ್ಫೂರ್ತಿದಾಯಕ ವ್ಯಕ್ತಿತ್ವವುಳ್ಳ ಶ್ರೀಕೃಷ್ಣನಿಂದ ನಾವು ಅನೇಕ ನೀತಿಗಳನ್ನು ಕಲಿಯಬಹುದು.
ಆ ಮೂಲಕ ನಮ್ಮ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಅವುಗಳಲ್ಲಿ ಕೆಲವನ್ನು ಇಲ್ಲಿ ತಿಳಿಯಬಹುದು.
ಕರ್ಮದ ಮಹತ್ವ:
ಕರ್ಮದ ಮಹತ್ವವನ್ನು ಕುರಿತ ಭಗವದ್ಗೀತೆಯ ಎರಡನೆಯ ಅಧ್ಯಾಯದ 47ನೆಯ ಶ್ಲೋಕವು ಅತ್ಯಂತ ಪ್ರಸಿದ್ಧವಾದದ್ದು.
ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ |
ಮಾ ಕರ್ಮಫಲಹೇತುರ್ಭೂಮಾರ್ಮಾ ತೇ ಸಂಗೋsಸ್ತ್ವ ಕರ್ಮಣಿ ||
ಈ ಶ್ಲೋಕದ ಅರ್ಥವೇನೆಂದರೆ ಶ್ರದ್ಧೆಯಿಂದ ನಿನ್ನ ಕರ್ಮವನ್ನು ಮಾಡು. (ನಾವು ಮಾಡುವ ಯಾವುದೇ ಕೆಲಸ, ವೃತ್ತಿ) ಅದರ ಫಲಗಳ ಬಗ್ಗೆ ಚಿಂತಿಸ ಬೇಡ.ಹಾಗೆಯೇ ಕರ್ಮ ಮಾಡದೇ ಇರುವ ಆಗ್ರಹವನ್ನು ಇಟ್ಟುಕೊಳ್ಳಬೇಡ ಎಂದು ಈ ಶ್ಲೋಕ ಬೋಧಿಸುತ್ತದೆ. ಕುರುಕ್ಷೇತ್ರದ ರಣರಂಗದಲ್ಲಿ ಅರ್ಜುನ ತನ್ನ ವಿರುದ್ಧವಾಗಿ ನಿಂತಿರುವ ತನ್ನದೇ ಬಂಧು ಬಳಗ, ಗುರುಹಿರಿಯರನ್ನು ಕೊಲ್ಲಲು ನಿರಾಕರಿಸಿ ಶಸ್ತ್ರ ಕೆಳಗಿಳಿಸಿ ನಿಂತು ಬಿಡುತ್ತಾನೆ. ಆಗ ಕೃಷ್ಣನು "ನಾನು ಈ ಪ್ರಪಂಚದ ಸೃಷ್ಟಿಕರ್ತ. ನಾನು ಕ್ಷಣ ಮಾತ್ರದಲ್ಲಿ ಇವರನ್ನೆಲ್ಲ ಕೊಲ್ಲಬಲ್ಲೆ. ಆದರೆ ನಾನು ಕರ್ತವ್ಯ ಕರ್ಮದ ಮಹತ್ವ ಜಗಕ್ಕೆ ತಿಳಿಸಬೇಕಿದೆ. ನೀನು ನಿನ್ನ ಕರ್ತವ್ಯ ಮಾಡು" ಎಂದು ಪ್ರೇರೇಪಿಸುತ್ತಾನೆ. ಆ ಮೂಲಕ ನಾವೆಲ್ಲ ನಮ್ಮ ಕರ್ತವ್ಯಗಳನ್ನು ಶ್ರದ್ಧೆಯಿಂದ ಮಾಡಬೇಕೆಂಬ ಉದಾತ್ತ ಸಂದೇಶ ನೀಡುತ್ತಾನೆ. ಅಲ್ಲದೆ ಇದರೊಳಗೆ ಇನ್ನೊಂದು ಮಹತ್ವದ ನೀತಿಯೂ ಅಡಕಗೊಂಡಿದೆ.ಅದೇ ನಾವು ಪ್ರಸ್ತುತ ಅಂದರೆ ವರ್ತಮಾನದಲ್ಲಿರುವುದು. ನಾವು ಕಳೆದುಹೋದದ್ದರ ಹಾಗೂ ಮುಂದಾಗುವುದರ ಅಂದರೆ ಭವಿಷ್ಯದ ಬಗ್ಗೆ ಚಿಂತಿಸದೆ ವರ್ತಮಾನದ ಸನ್ನಿವೇಶಕ್ಕಗುಣವಾಗಿ ಸೂಕ್ತವಾಗಿ ವರ್ತಿಸುವುದು ಹಾಗೂ ಕರ್ತವ್ಯ ನಿರ್ವಹಿಸುವುದು. ಭಗವಾನ್ ಶ್ರೀ ಕೃಷ್ಣ ಅರ್ಜನನಿಗೆ ಈ ಶ್ಲೋಕದ ಮೂಲಕ ಈ ಅರಿವನ್ನುಂಟು ಮಾಡುತ್ತಾನೆ. ಇದು ನಮಗೆಲ್ಲ ಅನುಕರಣೆಗೆ ಯೋಗ್ಯವಾದದ್ದು.
ಸ್ಥಿತಪ್ರಜ್ಞತೆ:
ಭಗವದ್ಗೀತೆಯಲ್ಲಿ ಶ್ರೀಕೃಷ್ಣನು ಜೀವನದಲ್ಲಿ ಎದುರಾಗುವ ಸುಖದುಃಖಗಳನ್ನು ಸಮಾನ ಮನವಾಗಿ ಸ್ವೀಕರಿಸುವಂತೆ ತಿಳಿಸುತ್ತಾನೆ.
ಸುಖದುಃಖೇ ಸಮೇ ಕೃತ್ವಾ ಲಾಭಾಲಾಭೌ ಜಯಜಯೌ |
ತತೋ ಯುದ್ಧಾಯ ಯಜ್ಯಸ್ವ ಪಾಪಮವಾಪ್ಸ್ಯಸಿ ||
ಈ ಶ್ಲೋಕದಲ್ಲಿ ಶ್ರೀಕೃಷ್ಣನು ಜಯ-ಪರಾಜಯ, ಲಾಭ- ಹಾನಿ,ಮತ್ತು ಸುಖದುಃಖ ಇವುಗಳನ್ನು ಸಮಾನವಾಗಿ ತೆಗೆದುಕೊಂಡು ಯುದ್ಧ ಮಾಡು. ಇದರಿಂದ ನಿನಗೆ ಪಾಪ ತಟ್ಟದು ಎನ್ನುತ್ತಾನೆ. ಆ ಮೂಲಕ ಎಲ್ಲರಿಗೂ ಸ್ಥಿತಪ್ರಜ್ಞತೆ ಬೆಳೆಸಿಕೊಳ್ಳುವ ಸಂದೇಶ ನೀಡುತ್ತಾನೆ. ಈ ರೀತಿಯ ಮನೋಭಾವ ಬೆಳೆಸಿಕೊಳ್ಳುವುದರಿಂದ ನಮ್ಮ ಮನಃಶಾಂತಿ ಕಾಪಾಡಿಕೊಳ್ಳುವುದು ಸಾಧ್ಯವಾಗುತ್ತದೆ.
ತ್ಯಾಗ:
ಕುರುಕ್ಷೇತ್ರ ಯುದ್ಧದಲ್ಲಿ ಶ್ರೀಕೃಷ್ಣ ಭೀಮನಿಗೆ ತನ್ನ ಮಗನಾದ ಘಟೋತ್ಕಚನನ್ನು ಯುದ್ಧಕ್ಕೆ ಕಳುಹಿಸಲು ತಿಳಿಸುತ್ತಾನೆ. ಘಟೋತ್ಕಚ ಬಿರುಗಾಳಿಯಂತೆ ನುಗ್ಗಿ ಕೌರವ ಸೇನೆಯನ್ನು ಧ್ವಂಸಗೊಳಿಸತೊಡಗುತ್ತಾನೆ. ಇವನನ್ನು ಕಟ್ಟಿಹಾಕುವುದು ಅಸಾಧ್ಯವೆಂದರಿತ ಕೌರವ ಸೇನೆ ಕರ್ಣನಿಗೆ ಇಂದ್ರಾಸ್ತ್ರ ಪ್ರಯೋಗಿಸಲು ಒತ್ತಡ ಹೇರುತ್ತದೆ. ಇದರಿಂದ ವಿವಶನಾದ ಕರ್ಣನು ಅರ್ಜುನನನ್ನು ಕೊಲ್ಲಲಲು ಇಟ್ಟುಕೊಂಡಿದ್ದ ಇಂದ್ರಾಸ್ತ್ರವನ್ನು ಘಟೋತ್ಕಚನ ಮೇಲೆ ಪ್ರಯೋಗಿಸಿ ಕೊಲ್ಲುತ್ತಾನೆ. ಆ ಮೂಲಕ ಕೃಷ್ಣ ಯುದ್ಧವನ್ನು ಗೆಲ್ಲಿಸಲು ಶಕ್ತನಾದ ಅರ್ಜುನನನ್ನು ರಕ್ಷಿಸುತ್ತಾನೆ. ಘಟೋತ್ಕಚನ ಬಲಿದಾನದಿಂದ ಪಾಂಡವರಿಗೆ ವಿಜಯ ಪ್ರಾಪ್ತವಾಗುತ್ತದೆ. ಈ ಮೂಲಕ ಕೃಷ್ಣನು ದೊಡ್ಡ ಕಾರ್ಯಗಳು ದೊಡ್ಡ ತ್ಯಾಗಗಳಿಂದ ಮಾತ್ರ ಸಾಧ್ಯವೆಂಬುದನ್ನು ಸಾರುತ್ತಾನೆ.
ಕೋಪ ನಿಗ್ರಹ:
ಭಗವಾನ್ ಶ್ರೀ ಕೃಷ್ಣ ಭಗವದ್ಗೀತೆಯ ಎರಡನೆಯ ಅಧ್ಯಾಯದ 63ನೇ ಶ್ಲೋಕದಲ್ಲಿ ಹೀಗೆನ್ನುತ್ತಾನೆ.
ಕ್ರೋಧಾದ್ಭವತಿ ಸಮ್ಮೋಹಃ ಸಮ್ಮೋಹಾತ್ ಸ್ಮೃತಿವಿಭ್ರಮಃ |
ಸ್ಮೃತಿಭ್ರಂಶಾದ್ ಬುದ್ಧಿ ನಾಶೋ ಬುದ್ಧಿನಾಶಾತ್ ಪ್ರಣಶ್ಯತಿ ||
ಇದರರ್ಥ ಸಿಟ್ಟಿನಿಂದಾಗಿ ಅವಿಚಾರ ಉಂಟಾಗುತ್ತದೆ. ಇದರಿಂದುಂಟಾಗುವ ಮೂಢತೆಯಿಂದ ಸ್ಮರಣಶಕ್ತಿ ನಾಶವಾಗುವುದು. ಸ್ಮೃತಿಯಲ್ಲಿ ಭ್ರಮೆಯುಂಟಾದಾಗ ಬುದ್ಧಿ ಅಂದರೆ ಜ್ಞಾನಶಕ್ತಿ ನಾಶವಾಗಿ ಮನುಷ್ಯನ ಪತನವಾಗುವುದು. ಕೋಪದಿಂದ ದೈಹಿಕ ಆರೋಗ್ಯವೂ ಕೆಡುವುದು ಎಲ್ಲರಿಗೂ ತಿಳಿದಿರುವ ವಿಚಾರವೇ.
ಆದ್ದರಿಂದ ಜ್ಞಾನಿಯಾದವನು ತನ್ನ ನೆಮ್ಮದಿಗಾಗಿ ಕೋಪವನ್ನು ನಿಯಂತ್ರಿಸಬೇಕು. ಇದು ನಮಗೆಲ್ಲರಿಗೂ ಅವಶ್ಯಕವಾದ ಗುಣವಾಗಿದೆ.
ಧೈರ್ಯ, ಸಾಹಸ ಹಾಗೂ ಸಮಯ ಪ್ರಜ್ಞೆ:
ಬಾಲ್ಯದಿಂದಲೂ ಕೃಷ್ಣ ತೋರಿದ ಅಸೀಮ ಧೈರ್ಯ ಸಾಹಸಗಳು ನಮಗೆಲ್ಲ ತಿಳಿದದ್ದೇ.ತನ್ನನ್ನು ಕೊಲ್ಲಲು ಮಾವ ಕಂಸ ಕಳುಹಿಸಿದ ಪೂತನಿ, ಬಕಾಸುರ, ಅಘಾಸುರಾದಿ ದೈತ್ಯರನ್ನು ಯಮಸದನಕ್ಕಟ್ಟುತ್ತಾನೆ.ಇಂದ್ರನ ಅಹಂಕಾರ ಮುರಿಯಲು ಗೋವರ್ಧನ ಗಿರಿಯನ್ನೇ ಎತ್ತಿ ಹಿಡಿದು ತನ್ನವರ ಹಿತ ಕಾಯುತ್ತಾನೆ. ಘೋರರೂಪಿ ಕಾಳಿಂಗ ಮರ್ದನ ಮಾಡಿ ಜನರನ್ನು ರಕ್ಷಿಸುತ್ತಾನೆ. ಆ ಮೂಲಕ ತನ್ನ ಅಪ್ರತಿಮ ಧೈರ್ಯ, ಸಾಹಸ, ಸಮಯ ಪ್ರಜ್ಞೆ ಮೆರೆಯುತ್ತಾನೆ. ಎಂಥಹುದೇ ಪರಿಸ್ಥಿತಿಯಲ್ಲೂ ಧೃತಿಗೆಡದೆ ವರ್ತಿಸುತ್ತಾನೆ. ಈ ಗುಣಗಳೆಲ್ಲ ನಮಗೆ ಅನುಸರಿಸಲು ಯೋಗ್ಯವಾದದ್ದೇ ಆಗಿದೆ.
ವಿನಯಶೀಲತೆ ಮತ್ತು ವಿಧೇಯತೆ:
ಕೃಷ್ಣ ರಾಜನಾಗಿದ್ದರೂ, ಸ್ವತಃ ದೇವನಾಗಿದ್ದರೂ ಬಹಳ ವಿನಯಶೀಲನಾಗಿದ್ದು ತನ್ನ ಗುರು ಹಿರಿಯರಿಗೆ ಅಪಾರ ಗೌರವ ನೀಡುತ್ತಿದ್ದನು. ತನ್ನ ಸ್ನೇಹಿತರೊಂದಿಗೆ ಬಹಳ ಸರಳವಾಗಿ ಆತ್ಮೀಯವಾಗಿ ಬೆರೆಯುತ್ತಿದ್ದನು. ಇದಕ್ಕೆ ಅತ್ಯುತ್ತಮ ಉದಾಹರಣೆ ಕೃಷ್ಣ ಸುಧಾಮರ ಸ್ನೇಹ. ಕೃಷ್ಣನ ವ್ಯಕ್ತಿತ್ವದ ಈ ಅಪರೂಪದ ಗುಣದಿಂದಾಗಿಯೇ ಅವನ ಸುತ್ತಮುತ್ತ ಜನ ಕಿಕ್ಕಿರಿದು ತಂಬಿರುತ್ತಿದ್ದರು. ಎಲ್ಲರೂ ಅವನೆಡೆಗೆ ಆಕರ್ಷಿತರಾಗುತ್ತಿದ್ದರು. ಬಾಲ್ಯದಲ್ಲಿ ಗೋಪಿಕಾ ಸ್ತ್ರೀಯರೊಂದಿಗೆ ವಿಶೇಷವಾಗಿ ರಾಧೆಯೊಂದಿಗೆ ಅವನ ನಿಷ್ಕಾಮ ಪ್ರೇಮವೂ ಇದಕ್ಕೆ ಉದಾಹರಣೆಯೇ. ತನ್ನ ತಾಯಿ ತಂದೆ, ಗುರು ಹಿರಿಯರಿಗೆ ಅವನು ನೀಡುತ್ತಿದ್ದ ಗೌರವ ಮರ್ಯಾದೆಗಳು, ಮುಗ್ಧತೆಯ ತುಂಟಾಟಗಳು ಎಲ್ಲವೂ ರಸಕಾವ್ಯವೇ ಹೌದು!.
ಕೃಷ್ಣ ಪದದ ಅರ್ಥವೇ ಆಕರ್ಷಣೆ. ಸದಾ ಜನರೊಂದಿಗೆ ಬೆರೆಯುತ್ತ ತಾನೂ ಅವರಲ್ಲಿ ಒಬ್ಬನಾಗಿ ಇಡೀ ಮನುಕುಲಕ್ಕೆ ಭಗವದ್ಗೀತೆಯ ಮೂಲಕ ಉದಾತ್ತ ಸಂದೇಶಗಳನ್ನು ನೀಡಿದ ಕೃಷ್ಣ ಅಲೌಕಿಕ ದೃಷ್ಟಿಯಿಂದ ದೇವೋತ್ತಮ ಪುರುಷನೆನಿಸಿಕೊಂಡರೆ, ಸಾಮಾನ್ಯರ ದೃಷ್ಟಿಯಿಂದ ಸದ್ಗುಣಗಳಿಂದ ಕೂಡಿದ ಆದರ್ಶ ಪುರುಷನೇ ಹೌದು. ಅವನ ಈ ಆದರ್ಶಮಯ ವ್ಯಕ್ತಿತ್ವ ನಮಗೆಲ್ಲ ಸ್ಫೂರ್ತಿಸೆಲೆಯಾಗಲಿ...
'ಕೃಷ್ಣಂ ವಂದೇ ಜಗದ್ಗುರುಂ'
- ಎಸ್.ಎಲ್. ವರಲಕ್ಷ್ಮೀಮಂಜುನಾಥ್.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ