ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ 56ನೇ ಇಂಜಿನಿಯರ್‌ಗಳ ದಿನಾಚರಣೆ

Upayuktha
0



ಬೆಂಗಳೂರು: ‘ಅದೆಂತಹ ಬೃಹತ್ ಸವಾಲು ಎದುರಾದರೂ ಆತ್ಮವಿಶ್ವಾಸದಿಂದ ಆ ಸವಾಲನ್ನು ಮೆಟ್ಟಿ ನಿಲ್ಲುವ ಅಂತಃಶಕ್ತಿಯನ್ನು ನಮ್ಮಯುವಇಂಜಿನಿಯರ್‍ ಗಳು ರೂಢಿಸಿಕೊಳ್ಳಬೇಕು. ಆಗಲೇ ನಾವು ಕಲಿತಜ್ಞಾನವನ್ನು ಸುತ್ತಣ ಸಮಾಜದ ಸಮಗ್ರ ಅಭಿವೃದ್ಧಿಗೆ ವಿನಿಯೋಗಿಸಲು ಸಾಧ್ಯ. ಆತ್ಮವಿಶ್ವಾಸ ಹಾಗೂ ಜನಪರ ನಿಲುವುಗಳು ನಮ್ಮ ಯುವ ತಂತ್ರಜ್ಞರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳಾಗಬೇಕು. ಆಗಲೇ ಸಮಸ್ಯೆಗಳಿಗೆ ತಂತ್ರಜ್ಞಾನವನ್ನಾಧರಿಸಿದ ಪರಿಹಾರಗಳನ್ನು ಕಂಡುಕೊಳ್ಳಲು ಪ್ರೇರಣೆ ಲಭಿಸುತ್ತದೆ. ನಮ್ಮ ಯುವ ತಂತ್ರಜ್ಞರು ತಮ್ಮ ದೇಶಕ್ಕೆ ಕಿಂಚಿತ್ತಾದರೂ ಸೇವೆ ಸಲ್ಲಿಸಬೇಕೆಂದಿದ್ದರೆ ನಮ್ಮ ಹಳ್ಳಿಗಳ ಕಡೆ ಆಗಾಗ್ಗೆ ತೆರಳಬೇಕು. ಹಳ್ಳಿಗರ ನಿತ್ಯದ ಕಡುಕಷ್ಟದ ಬದುಕನ್ನು ತಮ್ಮ ತಂತ್ರಜ್ಞಾನದ ಅರಿವಿನಿಂದ ಸುಗಮವಾಗಿಸಬೇಕು. ಆಗಲೇ ನಮ್ಮ ಜನ್ಮ ಸಾರ್ಥಕ. ಏಕೆಂದರೆ ಹಳ್ಳಿಗಳು ಉದ್ಧಾರವಾದರೆ ಮಾತ್ರದೇಶದ ಸಂಪೂರ್ಣ ಪ್ರಗತಿ ಸಾಧ್ಯ’, ಎಂದು ಸೇತುಬಂಧು ಅಥವಾ ಬ್ರಿಡ್ಜ್ ಮ್ಯಾನ್‍ ಆಫ್‌ ಇಂಡಿಯಾ ಎಂದೇ ಖ್ಯಾತರಾದ ಪದ್ಮಶ್ರೀ ಪುರಸ್ಕೃತ ಡಾ. ಗಿರೀಶ್ ಭಾರದ್ವಾಜ್ ನುಡಿದರು.


ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ 56ನೇ ಇಂಜಿನಿಯರ್‌ಗಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. 


‘ನಾವುಸರ್ ಎಂ. ವಿಶ್ವೇಶ್ವರಯ್ಯನವರ ಜನ್ಮದಿನವನ್ನು ಇಂಜಿನಿಯರ್ ದಿನಾಚರಣೆ ಎಂದು ಕರೆಯುತ್ತೇವೆ. ಇದಕ್ಕೆ ಕಾರಣ ವಿಶ್ವೇಶ್ವರಯ್ಯನವರು ತಮ್ಮ ತಾಂತ್ರಿಕ ಕೌಶಲ್ಯದಿಂದ ಭಾರತದ ವಿವಿಧೆಡೆ ಬೃಹತ್ ಅಣೆಕಟ್ಟುಗಳನ್ನು ನಿರ್ಮಿಸಿ ರೈತರಿಗೆ ಹೊಸ ಬಾಳನ್ನು ಕಲ್ಪಿಸಿದವರು. ಕಾರ್ಖಾನೆಗಳನ್ನು ಕಟ್ಟಿದರು. ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಉದ್ಯೋಗಗಳು ಸೃಷ್ಟಿಯಾಗುತ್ತವೆ. ಆ ಉದ್ಯೊಗಗಳು ಅದರಲ್ಲೂ ಗ್ರಾಮೀಣ ಪ್ರದೇಶದ ಜನರಿಗೆ ಲಭಿಸುತ್ತವೆ. ಕೃಷಿಯಜತೆಗೆ ಉದ್ಯೋಗ ಲಭ್ಯತೆಯೂ ಸೇರಿಜನರ ಬದುಕು ಹಸನಾಗುತ್ತದೆ ಎಂದು ಅವರು ನಂಬಿದ್ದರು. ವಿಶ್ವೇಶ್ವರಯ್ಯನವರ ಬದುಕೇ ನನಗೆ ಪ್ರೇರಣೆಯಾಗಿತ್ತು. ಗ್ರಾಮೀಣ ಪ್ರದೇಶಗಳಲ್ಲಿ ಹಳ್ಳಕೊಳ್ಳ ಹಾಗೂ ನದಿಗಳನ್ನು ದಾಟಲು ಪರದಾಡುತ್ತಿದ್ದ ಜನರಿಗೆ ಅನುಕೂಲವಾಗಲೆಂದು ಪಾದಚಾರಿ ಸೇತುವೆಗಳನ್ನು ನಿರ್ಮಿಸಲು ನಿರ್ಧರಿಸಿದೆ. ಈತನಕ 142 ಪಾದಚಾರಿ ಸೇತುವೆಗಳನ್ನು ದುರ್ಗಮ ಅರಣ್ಯ ಪ್ರದೇಶಗಳಿಗೆ ಹೊಂದಿಕೊಂಡಿರುವ ಹಳ್ಳಿಗರಿಗೆ ನೆರವಾಗಲೆಂದು ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಿಸಿದೆ. ಅದಕ್ಕೋಸ್ಕರ ಒಂದು ತಂಡವನ್ನೇ ಕಟ್ಟಿದೆ. ನಮ್ಮ ಹಳ್ಳಿಗಳ ಮಕ್ಕಳು ಶಾಲೆಗಳಿಗೆ ತೆರಳಲು ಈ ಸೇತುವೆಗಳನ್ನು ಬಳಸುತ್ತಿರುವುದನ್ನು ಕಂಡಾಗ ಸಾರ್ಥಕ ಭಾವನೆ ಮೂಡುತ್ತದೆ’, ಎಂದರು.


ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಶೈಕ್ಷಣಿಕ ಮುಖ್ಯಸ್ಥ ಡಾ. ವಿ. ಶ್ರೀಧರ್ ಮಾತನಾಡಿ, ‘ಗಿರೀಶ್ ಭಾರದ್ವಾಜ್‍ ಅವರ ಹಾದಿಯಲ್ಲಿ ನಮ್ಮ ಯುವಜನರು ಸ್ವಲ್ಪ ದೂರ ನಡೆದರೂ ಸಾಕು, ನಮ್ಮ ದೇಶ ಅಪ್ರತಿಮ ಪ್ರಗತಿ ಸಾಧಿಸಲಿದೆ’, ಎಂದು ನುಡಿದರು.


ಪ್ರಾರಂಭದಲ್ಲಿ ಸಂಸ್ಥೆಯ ಗ್ರಂಥಾಲಯ ಮುಖ್ಯಸ್ಥ ಡಾ. ಕೆ.ಸಿ. ಗಂಗಾಧರ್ ಸ್ವಾಗತಿಸಿದರು. ಕೊನೆಯಲ್ಲಿ ಪ್ರೊ. ಪ್ರಹ್ಲಾದ್ ತೆಂಗಳಿ ವಂದಿಸಿದರು. ಸಂಸ್ಥೆಯ ಪ್ರಾಧ್ಯಾಪಕರಾದ ಡಾ. ರಾಮಚಂದ್ರ ಎ.ಸಿ., ಡಾ. ಜಿ. ರಾಘವ, ಡಾ. ಭಾರತಿ ಗಣೇಶ್, ಡಾ. ರೇಖಾ ಫಡ್ಕೆ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top