ಸೆ.24ರಂದು ಮುಡಿಪು ಭಾರತೀ ಶಾಲೆಯಲ್ಲಿ ವಿಶಿಷ್ಟ ಶಿಕ್ಷಕರ ದಿನಾಚರಣೆ

Upayuktha
0

ಅಮೃತ ಮಹೋತ್ಸವ ಪ್ರಯುಕ್ತ ‘ಅಕ್ಷರಾಮೃತವುಣಿಸಿ ಹರಸುವ ಶಿಕ್ಷಕರಿಗೆ ಕೋಟಿ ನಮನ’ ಕಾರ್ಯಕ್ರಮ



ಮುಡಿಪು: ಕುರ್ನಾಡು ಗ್ರಾಮದ ಮುಡಿಪು ಶ್ರೀ ಭಾರತೀ ಶಾಲೆಯ ಅಮೃತ ಮಹೋತ್ಸವ ಸಮಿತಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ‘ಅಕ್ಷರಾಮೃತವುಣಿಸಿ ಹರಸುವ ಶಿಕ್ಷಕರಿಗೆ ಕೋಟಿ ನಮನ’ ವಿಶಿಷ್ಟ ಕಾರ್ಯಕ್ರಮ ಸೆ.24ರಂದು ಭಾನುವಾರ ಶ್ರೀ ಭಾರತೀ ಶಾಲೆ ಆವರಣದಲ್ಲಿ ನಡೆಯಲಿದೆ.


ಶಾಲೆಯ ಅಮೃತ ಮಹೋತ್ಸವ ಸರಣಿ ಕಾರ್ಯಕ್ರಮಗಳ ಭಾಗವಾಗಿ ನಡೆಯುವ ಈ ಸಮಾರಂಭವನ್ನು ಅಂದು ಬೆಳಗ್ಗೆ 9.30ಕ್ಕೆ ಮುಡಿಪು ಸರ್ಕಾರಿ ಪ.ಪೂ.ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಪಿ.ಶೀನ ಶೆಟ್ಟಿ ಉದ್ಘಾಟಿಸುವರು. ಚೆನ್ನೈಯ ಉಷಾ ಫೈರ್ ಸೇಫ್ಟಿ ಇಕ್ವಿಪ್ಮೆಂಟ್ ಲಿ.ನ ವ್ಯವಸ್ಥಾಪಕ ನಿರ್ದೇಶಕ, ಹಳೆ ವಿದ್ಯಾರ್ಥಿ ಜಗದೀಶ ಅಡಪ ಅಧ್ಯಕ್ಷತೆ ವಹಿಸುವರು.


ಅತಿಥಿಗಳಾಗಿ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಮಾಜಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್, ಜಿ.ಪಂ. ಮಾಜಿ ಅಧ್ಯಕ್ಷೆ ಮಮತಾ ಡಿ.ಎಸ್.ಗಟ್ಟಿ, ಮುಡಿಪು ಜವಾಹರ್ ನವೋದಯ ವಿದ್ಯಾಲಯ ಪ್ರಾಂಶುಪಾಲ ಪಿ.ರಾಜೇಶ್, ಮುಡಿಪು ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ನವೀನ್ ಡಿಸೋಜ, ಉದ್ಯಮಿ ಎ.ಬಿ. ಮಹಮ್ಮದ್ ಹುಸೈನ್, ನಿವೃತ್ತ ಬ್ಯಾಂಕ್ ಅಧಿಕಾರಿ ಪರಮೇಶ್ವರ ಕಾರಂತ, ಉದ್ಯಮಿಗಳಾದ ವಿಜೇಶ್ ನಾಯ್ಕ್ ನಡಿಗುತ್ತು, ಶಿಹಾಬ್ ಕಲಂದರ್ ಮುಡಿಪು, ವಿಕಾಸ್ ಎಂ. ಪಾಲ್ಗೊಳ್ಳಲಿದ್ದಾರೆ.


ಶಾಲೆಯಲ್ಲಿ ಸೇವೆ ಸಲ್ಲಿಸಿ ಅಗಲಿದ ಚೇತನಗಳಿಗೆ ಪುಷ್ಪನಮನ, ಶಾಲೆಯ ನಿವೃತ್ತ ಶಿಕ್ಷಕ, ಶಿಕ್ಷಕಿಯರು, ಪ್ರಕೃತ ಶಾಲೆಯಲ್ಲಿ ಸೇವೆಯಲ್ಲಿರುವ ಶಿಕ್ಷಕ, ಶಿಕ್ಷಕಿಯರು, ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರು, ಸಂಸ್ಥೆಯಲ್ಲಿ ಗೌರವ ಶಿಕ್ಷಕ, ಶಿಕ್ಷಕಿಯರಾಗಿ ಸೇವೆ ಸಲ್ಲಿಸಿದವರು, ಈ ವಿದ್ಯಾಸಂಸ್ಥೆಯಲ್ಲಿ ಕಲಿತು ಶಿಕ್ಷಣ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಿರುವವರನ್ನು ಸನ್ಮಾನಿಸಲಾಗುವುದು.


ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿ ವಿಜೇತ ಪಿ.ರಾಜೇಶ್, ರಾಜ್ಯ ಶಿಕ್ಷಕ ಪ್ರಶಸ್ತಿ ವಿಜೇತ ಜಯರಾಮ ಪೂಂಜ ತದ್ಮಬಾಳಿಕೆ, ಜಿಲ್ಲಾ ಶಿಕ್ಷಕ ಪ್ರಶಸ್ತಿ ವಿಜೇತ ಶಾರದಾ ಪಿ. ಅವರನ್ನು ವಿಶೇಷವಾಗಿ ಸನ್ಮಾನಿಸಲಾಗುವುದು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಎಂದು ಅಮೃತ ಮಹೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಕೆ.ಆರ್., ಶ್ರೀ ಭಾರತೀ ಎಜುಕೇಶನ್ ಟ್ರಸ್ಟ್‌ ಸಂಚಾಲಕ ಕೆ. ಸುಬ್ಮಹ್ಮಣ್ಯ ಭಟ್, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ನಿಶ್ಚಲ್ ಜಿ.ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


1948ನೇ ಇಸವಿಯಲ್ಲಿ ಸ್ಥಾಪನೆಯಾದ ಮುಡಿಪು ಶ್ರೀ ಭಾರತೀ ಶಾಲೆ ಇದೇ ಬರುವ ನವೆಂಬರ್‌ನಲ್ಲಿ ಅಮೃತ ಮಹೋತ್ಸವ ಸಮಾರಂಭ ಆಚರಿಸಲಿದೆ. ಅಮೃತ ಮಹೋತ್ಸವ ಪ್ರಯುಕ್ತ 2022 ಆಗಸ್ಟ್‌ನಿಂದ ಶಾಲೆಯಲ್ಲಿ ಅಮೃತ ಮಹೋತ್ಸವ ಸಮಿತಿ ಸಹಯೋಗದಲ್ಲಿ ಹಲವು ಸರಣಿ ಕಾರ್ಯಕ್ರಮಗಳು ನಡೆದಿವೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top