ಅದ್ದೂರಿ ಅರ್ಥಪೂರ್ಣ ಜಲಪಾತ ಮಲೆನಾಡು ಉತ್ಸವ
ಅಲ್ಲಿ ಮಲೆನಾಡ ಹಾಳೆಟೊಪ್ಪಿ ಮೇಳೈಸಿತ್ತು. ನಡುನಡುವೆ ಜಲಪಾತ ಸಿನಿಮಾದ ಪೋಸ್ಟರ್ ರಾರಾಜಿಸುತ್ತಿತ್ತು. ಮೆದುಳಿಗೆ ಪರಿಸರ ರಕ್ಷಣೆ ಹೊಣೆಗಾರಿಕೆಯ ಮೇವು. ಉದರಕ್ಕೆ ಮಲೆನಾಡ ಭಕ್ಷ ಭೋಜನದ ಸಂತೃಪ್ತಿ. ಕಿವಿಗಳಿಗೆ ಸಂಗೀತದ ಸಿಂಚನ. ಸಾಧಕ ವರೇಣ್ಯರಿಗೆ ಸನ್ಮಾನ. ಸಿನಿಮಾದ ಪರಿಚಯದ ಬೃಹತ್ ಕಾರ್ಯಕ್ರಮ.
ಇದು ಇತ್ತೀಚೆಗೆ ಬೆಂಗಳೂರಿನ ಹೆಚ್ ಎನ್ ಕಲಾಕ್ಷೇತ್ರದಲ್ಲಿ ಶೃಂಗೇರಿಯ ಶ್ರೀ ಭಾರತೀತೀರ್ಥ ಕಲ್ಚರಲ್ ಟ್ರಸ್ಟ್, ಇಂಡಸ್ ಹರ್ಬ್ಸ್ ಮತ್ತು ಕೃಷಿ ಭಾರತ್ ಫೌಂಡೇಷನ್ ಆಯೋಜಿಸಿದ ಮಲೆನಾಡು ಉತ್ಸವದ ಚಿತ್ರಣ.
ಎಲ್ಲೆಡೆ ಅಚ್ಚುಕಟ್ಟುತನ, ವೃತ್ತಿ ಪರತೆ ಮತ್ತು ಕಲಾತ್ಮಕತೆ ಮನೆಮಾಡಿದ್ದ ಈ ಕಾರ್ಯಕ್ರಮದ ರೂವಾರಿಗಳು ಜಲಪಾತ ಚಿತ್ರದ ನಿರ್ದೇಶಕ ರಮೇಶ್ ಬೇಗಾರ್ ಮತ್ತು ನಿರ್ಮಾಪಕ ಟಿ.ಸಿ ರವೀಂದ್ರ ತುಂಬರಮನೆ.
ಬೆಳಿಗ್ಗೆ ರೇಖಾ ಪ್ರೇಮ್ ಕುಮಾರ್ ಮತ್ತು ನಗರ ಶ್ರೀನಿವಾಸ ಉಡುಪರಿಂದ ಪ್ರಕೃತಿ ಆಧಾರಿತ ಸುಗಮಸಂಗೀತ. ನಂತರ ಉತ್ಸವಾಧ್ಯಕ್ಷರಾದ ಚಂದ್ರಶೇಖರ ತುಂಬರಮನೆ ಇವರಿಗೆ ನಿಕಟಪೂರ್ವ ಅಧ್ಯಕ್ಷ ಖ್ಯಾತ ಸಾಹಿತಿ ಎನ್.ಎಸ್ ಶ್ರೀಧರ ಮೂರ್ತಿ ಇವರಿಂದ ಪೀಠ ಹಸ್ತಾಂತರ. ರಾಮಕೃಷ್ಣ ಆಶ್ರಮದ ಶ್ರೀ ಸ್ವಾಮೀ ಯದ್ಯುಕ್ತಾನಂದ ಮಹಾರಾಜ್ ದಿವ್ಯ ಸಾನಿಧ್ಯದಲ್ಲಿ ಹಿರಿಯ ಪರಿಸರವಾದಿ ಡಾ ಎಲ್ಲಪ್ಪ ರೆಡ್ಡಿ ಸಭಾಧ್ಯಕ್ಷತೆಯಲ್ಲಿ ಹಿರಿಯ ಜ್ಯೋತಿಷ್ಯ ವಿದ್ವಾನ್ ಹಿತ್ಲಳ್ಳಿ ನಾಗೇಂದ್ರ ಭಟ್ ಬರೆದ 3 ಘನ ಗ್ರಂಥಗಳನ್ನು ಲೋಕಾರ್ಪಣೆ ಗೊಳಿಸಿದ್ದು ಸಜ್ಜನ ರಾಜಕಾರಣಿ, ಚಿತ್ರಕಲಾ ಪರಿಷತ್ ಅಧ್ಯಕ್ಷ ಡಾ ಬಿ ಎಲ್ ಶಂಕರ್.
ಈ ಸಂದರ್ಭ ಶಂಕರ್ ಮಾತನಾಡಿ ಮಲೆನಾಡು ಉತ್ಸವಕ್ಕೆ ತಾನು ಹಲವು ಬಾರಿ ಸಾಕ್ಷಿಯಾಗಿದ್ದು ಇದು ಈಗ ಬೆಂಗಳೂರಿನ ಮಲೆನಾಡಿಗರನ್ನು ಒಂದು ಮಾಡುತ್ತಿರುವುದು ಸಂತೋಷದಾಯಕ. ಹಿತ್ಲಳ್ಳಿಯಂಥ ಮೇರು ವ್ಯಕ್ತಿಗಳ ಗ್ರಂಥಗಳ ಆಶಯ ಜನರನ್ನು ತಲುಪಿಸುವ ಕಾರ್ಯ ಶ್ಲಾಘನೀಯ ಎಂದರು.
ನಾಗೇಂದ್ರ ಭಟ್ ಮಾತನಾಡಿ ವರಾಹಮಿಹಿರ ಸಂಹಿತೆಯ ವೃಕ್ಷ ವ್ಯಾಖ್ಯಾನವನ್ನು ಸೊಗಸಾಗಿ ವಿವರಿಸಿದರು. ಡಾ. ಎಲ್ಲಪ ರೆಡ್ಡಿ ಅಂಕಿ ಅಂಶಗಳ ಸಹಿತ ಈ ನಾಲ್ಕಾರು ದಶಕದಲ್ಲಿ ಪರಿಸರ ನಾಶ ಹೇಗೆಲ್ಲಾ ಆಗುತ್ತಿದೆಯೆಂದು ವಿವರಿಸಿ ವಿಷಾದಿಸಿದರು.
ಸಮಾರಂಭದಲ್ಲಿ ಸ್ವಾಗತ ಸಮಿತಿಯ ಅಡೆಕಂಡಿ ಲಕ್ಷ್ಮೀನಾರಾಯಣ್, ಪ್ರಕಾಶಕ ರವೀಂದ್ರ, ಚಂದ್ರಶೇಖರ ಬಾಳೆ ಉಪಸ್ಥಿತರಿದ್ದರು.
ಮಧ್ಯಾಹ್ನದ ಸೊಗಸಾದ ಮಲೆನಾಡು ಮೆನುವಿನ ಊಟದ ನಂತರ ಪ್ರಸಿದ್ಧ ಚಲನಚಿತ್ರ ಸಂಶೋಧಕ ಎನ್ ಎಸ್ ಶ್ರೀಧರ ಮೂರ್ತಿ ಸಾರಥ್ಯದಲ್ಲಿ, ಶ್ರೀನಿಧಿ ಕೊಪ್ಪ ಸಂಗೀತ ಸಂಯೋಜನೆಯಲ್ಲಿ ಭಾಗ್ಯಶ್ರೀ ಗೌಡ, ಪ್ರವೀಣ್ ಧೇವಧರ್ ಮತ್ತು ರೇಖಾ ಪ್ರೇಮ್ ಕುಮಾರ್ ಇವರಿಂದ ಪ್ರಕೃತಿ ಆಧಾರಿತ ಚಲನಚಿತ್ರ ಗೀತೆಗಳು ನೆರೆದಿದ್ದ ಅಪಾರ ಪ್ರೇಕ್ಷಕರನ್ನು ಇನ್ನಿಲ್ಲದಂತೆ ರಂಜಿಸಿತು.
ಈ ಕಾರ್ಯಕ್ರಮ ನಡುವೆಯೇ ಮಲೆನಾಡು ಮೂಲದ ಯುವ ಸಾಧಕರಾದ ವಿನಾಯಕ ರಾಂ ಕಲಗಾರು (ಮಾಧ್ಯಮ), ಶಂಕರಮೂರ್ತಿ (ಕಲೆ), ಪ್ರಣೀತಾ ಗೌಡ (ಬಹುಮುಖ), ಅರುಣ್ ಕುಮಾರ್ ಅರಳಕುಡಿಗೆ (ಯಕ್ಷಗಾನ) ಮತ್ತು ನವನ್ ಶ್ರೀನಿವಾಸ್ (ಸಿನಿಮಾ) ಇವರನ್ನು ಆಪ್ತವಾಗಿ ಸನ್ಮಾನಿಸಲಾಯ್ತು.
ಈಗಾಗಲೇ ಸಂಜೆಯಾಗಿತ್ತು. ಉತ್ಸವದ ಮೆರುಗು ಮತ್ತಷ್ಟು ವರ್ಣಮಯವಾಗುತ್ತಾ ಸಾಗಿತು. ಸುಪ್ರಸಿದ್ಧ ನಟಿ, ಮಾಜಿ ಸಚಿವೆ ಜಯಮಾಲ ಅವರು ಜಲಪಾತ ಸಿನಿಮಾದ 2ನೇ ಹಾಡು "ಎಲ್ಲಿ ಹೋದನೇ ಸಖೀ" ಇದರ ವೀಡಿಯೋ ವನ್ನು ಬಿಡುಗಡೆಗೊಳಿಸಿದರು. ಮಲೆನಾಡು ಮೂಲದವಳಾದ ನನಗೆ ಮಲೆನಾಡಿಗರ ಈ ಚಿತ್ರದ ಆಶಯ ತುಂಬಾ ಮೆಚ್ಚುಗೆಯಾಯಿತು. ಸಿನಿಮಾ ಯಶಸ್ಸನ್ನು ಪಡೆಯುವುದು ನಿಶ್ಚಿತ ಎಂದು ಶುಭ ಹಾರೈಸಿದರು.
ಈ ಸಂದರ್ಭ ಚಿತ್ರದ ಹಿರಿಯ ನಟ ಬಿ.ಎಲ್ ರವಿಕುಮಾರ್, ನಾಯಕ ರಜನೀಶ್, ನಾಯಕಿ ನಾಗಶ್ರೀ, ಪ್ರಮುಖ ಪಾತ್ರದಾರಿ ರೇಖಾ ಪ್ರೇಮ್ ಕುಮಾರ್, ರಶ್ಮಿ ಹೇರ್ಳೆ ಮೊದಲಾದ ಕಲಾವಿದರು, ತಂತ್ರಜ್ಞರಾದ ಶಶೀರ ಶೃಂಗೇರಿ, ಅವಿನಾಶ್ ಶೃಂಗೇರಿ, ಕಾರ್ತಿಕ್ ಶೃಂಗೇರಿ, ವಿನಯ್ ರೇ, ಅಭಿಷೇಕ್ ಹೆಬ್ಬಾರ್ ಮತ್ತು ಸಂಗೀತ ನಿರ್ದೇಶಕಿ ಸಾದ್ವಿನಿ ಕೊಪ್ಪ ಉಪಸ್ಥಿತರಿದ್ದರು.
ನಂತರ ನಡೆದ ಸಮಾರೋಪದಲ್ಲಿ ಸ್ವಾಗತ ಸಮಿತಿ ಮುಖ್ಯಸ್ಥರಾದ ಹೊದಲ ಚಂದ್ರಶೇಖರ, ಜಯಮಾಲ ಅತಿಥಿಗಳಾಗಿದ್ದರು.
ಅಮೃತ್ ನೋನಿ ಖ್ಯಾತಿಯ ಉದ್ಯಮ ಕ್ಷೇತ್ರದ ಹೆಮ್ಮೆಯ ಮಲೆನಾಡಿಗ ಶ್ರೀನಿವಾಸ ಮೂರ್ತಿ ಅರೇಹಳ್ಳ, ಉದ್ಯಮಿ ಅಚ್ಯುತ ಗೌಡ ಇವರಿಗೆ ಡಾ. ಎಲ್.ಎಂ ಭಟ್ ಹೆಸರಿನ ಪ್ರಶಸ್ತಿ ನೀಡಲಾಯ್ತು. ಕೆ.ಆರ್ ಅಣ್ಣಯ್ಯ ಹೆಗ್ಡೆ ಸ್ಮಾರಕ ಶಿಕ್ಷಕ ಪ್ರಶಸ್ತಿಯನ್ನು ಸಿಗದಾಳಿನ ದೇವಪ್ಪ ಮಾಸ್ಟರ್‌ಗೆ, ಮೆಣಸೆ ಶಂಕರ ಹೆಗ್ಡೆ ಸ್ಮಾರಕ ಕಲಾಪ್ರಶಸ್ತಿ ಸಿನಿಮಾ ನಿರ್ಮಾಪಕ ರವಿ ರೈ ಕಳಸ, ಹೆಚ್.ವಿ ಚನ್ನಪ್ಪ ಸ್ಮಾರಕ ಕೃಷಿ ಪ್ರಶಸ್ತಿಯನ್ನು ಜಿಗಳೇಬೈಲು ಶಿವಪ್ರಸಾದ್ ಮತ್ತು ಎಲ್ ಜಿ ಶಿವಕುಮಾರ್ ಸ್ಮಾರಕ ಸಾಂಸ್ಕೃತಿಕ ಪ್ರಶಸ್ತಿಯನ್ನು ಖ್ಯಾತ ವ್ಯಂಗ್ಯಚಿತ್ರಕಾರ ನಂಜುಂಡ ಸ್ವಾಮಿ ಅವರಿಗೆ ನೀಡಿ ಗೌರವಿಸಲಾಯ್ತು.
ಹೀಗೆ ಸಂಜೆಯ ಸಭೆಯ ಸೊಬಗು ಬಹು ಸಮಾಜದ ಹಿರಿಮೆಯಾಗಿ ಕಂಗೊಳಿಸಿತು. ಉತ್ಸವಾಧ್ಯಕ್ಷರಾದ ಚಂದ್ರಶೇಖರ ತುಂಬರಮನೆ ಶಿಖರೋಪನ್ಯಾಸಗೈದು ಒಂದು ದಿನದ ಈ ಉತ್ಸವ ಎಲ್ಲಾ ಮಲೆನಾಡಿಗರನ್ನು ಒಂದೇ ಚಪ್ಪರದ ಕೆಳಗೆ ನಿಲ್ಲಿಸಿದ್ದು ಮಾತ್ರವಲ್ಲದೇ ವಿದ್ವತ್ ಸಭೆ, ಸಾಧಕ ಸಭೆ ಸಾಂಸ್ಕೃತಿಕ ಸಭೆಯಾಗಿ ಪೂರ್ಣತ್ವವನ್ನು ಸಾಧಿಸುವಲ್ಲಿ ಯಶಸ್ಸು ಕಂಡಿದೆ. ನಾವು ಏಕತೆಯನ್ನು ಬಿಂಬಿಸುವುದು ಇಂದಿನ ಸಾಂಸ್ಕೃತಿಕ ಮತ್ತು ಸಂಸ್ಕಾರದ ಅಗತ್ಯ ಎಂದರು.
ಇಡೀ ಸಮಾರಂಭದ ನಿರೂಪಣೆಯನ್ನು ಆಯೋಜಕ ರಮೇಶ್ ಬೇಗಾರ್ ವಿಭಿನ್ನ ಶೈಲಿಯಲ್ಲಿ ನೆರವೇರಿಸಿ ಸಮಾರಂಭ ವನ್ನು ಕಳೆಗಟ್ಟಿಸಿದರೆ ಮತ್ತೋರ್ವ ಆಯೋಜಕ ರವೀಂದ್ರ ತುಂಬರಮನೆ ಅಚ್ಚುಕಟ್ಟು ಆಯೋಜನೆಯ ಹಿಂದಿನ ಶಕ್ತಿಯಾಗಿ ಜನಮಾನಸವನ್ನು ಗೆದ್ದರು.
ಕೊನೆಯಲ್ಲಿ ಬಡಗುತಿಟ್ಟಿನ ಪ್ರಸಿದ್ಧ ಕಲಾವಿದರಿಂದ ಚಂದ್ರಹಾಸ ಎಂಬ ಯಕ್ಷಗಾನ ನಡೆದು ತಡ ರಾತ್ರಿಯವರೆಗೂ ರಾಜಧಾನಿಯ ಪ್ರೇಕ್ಷಕರನ್ನು ಹಿಡಿದಿಟ್ಟಿತು.
ಸಮಾರಂಭವನ್ನು ಜೈ ಟಿವಿ ಲೈವ್ ನ ಮೂಲಕ ವಿಶ್ವದಾದ್ಯಂತ ಸಾವಿರಾರು ಮಂದಿ ವೀಕ್ಷಿಸಿದರು. ಕಾರ್ಯಕ್ರಮದಲ್ಲಿ ಭಾಗಿಯಾದ ಎಲ್ಲರ ಆಶಯವೂ ಜಲಪಾತ ಸಿನಿಮಾ ಗೆಲ್ಲಲಿ ಎಂಬ ಸಾರ್ವತ್ರಿಕ ಸ್ಪಂದನೆಯಾಗಿತ್ತು. ಜಲಪಾತ ಇದೇ ಸೆಪ್ಟೆಂಬರ್ ಕೊನೆಯ ವಾರದಲ್ಲಿ ತೆರೆಗೆ ಬರುವ ಸಿದ್ಧತೆಯಲ್ಲಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಚಾನೆಲ್ ಫಾಲೋ ಮಾಡಲು ಈ ಲಿಂಕ್ ಕ್ಲಿಕ್ ಮಾಡಿ