ಕೃಷ್ಣ ಸಂಭ್ರಮ

Upayuktha
0


|| ಕೃಷ್ಣಂ ವಂದೇ ಜಗದ್ಗುರುಂ || 

ಕೃಷ್ಣಾವತಾರ ಬಲು ರಮಣೀಯ ,ಬಲು ಸೋಜಿಗ,ಎಂದೂ  ಮಾಗದ, ಮುಪ್ಪಾಗದ ನವನವೀನ, ಕೃಷ್ಣ ಬಗ್ಗೆ ಕೇಳಿದಷ್ಟು ಕೇಳಬೇಕು,ಓದಿದಷ್ಟು ಓದಬೇಕು, ಅರಿತಷ್ಟು ಅರಿಯಬೇಕು, ಸವಿದಷ್ಟು ಸವಿಯಬೇಕು ಎಂಬ ತೃಷೆ ಹೆಚ್ಚಿಸುವ ಚಮತ್ಕಾರದ ತವರು. ಇದೇ ದಿವ್ಯತೆಯ ರಹಸ್ಯ .


ಕೃಷ್ಣ ಒಬ್ಬ ದೇವರು ಎನ್ನುವುದು ಎಷ್ಟು ದಿಟವೋ, ಅದಕ್ಕಿಂತ ಮೊದಲು ಆತ ಒಬ್ಬ ಸಖ ,ಪ್ರೇಮಿ, ನಮ್ಮ ನೆರೆಹೊರೆಯವ ,ತೀರಾ ಸನಿಹದಲ್ಲಿಯೇ ಇರುವಾತ. ಅಬಾಲವೃದ್ದರನ್ನೂ ಪ್ರತಿನಿಧಿಸುವ ದೈವ ಸ್ವರೂಪಿ ಈತ. ಕಲಿಯುಗದ ಅಧಿದೈವ, ಅವನ ಬದುಕು ನಿತ್ಯ ಉತ್ಸವ,ಅವನು ಆನಂದಮಯ ಜೀವನಕ್ಕೆ ಜೀವಂತ ಭಾಷ್ಯ ಬರೆದವನು . 


ಶ್ರೀಕೃಷ್ಣನ ಕಥೆಯಲ್ಲಿ ಚರಿತ್ರಾಂಶವಿದೆ,ಕಾವ್ಯಾಂಶವಿದೆ,ವಾಸ್ತಾವಾಂಶವಿದೆ, ಕಲ್ಪನಾಂಶವಿದೆ, ತತ್ವಾಂಶವಿದೆ.ಕ್ಷಾತ್ರ ಸಂಪತ್ತಿದೆ, ರಾಜರ ತೇಜಸ್ಸಿದೆ. ಇದು ಕೃಷ್ಣ ಕಥೆಯ ವಿಶ್ವ ರೂಪ .ಅವನ ಭಕ್ತರು ಅಪಾರ , ಜ್ಞಾನಿ ದಾರ್ಶನಿಕರು, ಮುನಿಮಾನ್ಯರು, ನರನಾರಿಯರು, ಅವನಲ್ಲಿಯೇ ಆಸಕ್ತರು, ಅವನಿಗಾಗಿ ಸಂಸಾರದಲ್ಲಿ ವಿರಕ್ತರು ಹಲವರು. ಶ್ರೀಕೃಷ್ಣಭಕ್ತಿಯ ವಾಜ್ಮಯ ನಿರ್ಮಾಪಕರು. 


ಕರ್ನಾಟಕದ ಹರಿದಾಸರು, ತಮಿಳುನಾಡಿನ ಆಳ್ವಾರರು, ಆಂಧ್ರದ ಅನ್ನಮಯ್ಯ- ಪೋತನ, ಬಂಗಾಲದ ಚೈತನ್ಯ,ಉತ್ತರಭಾರತದ ಮೀರಾ, ಸೂರದಾಸ, ರಾಜಸ್ಥಾನದ ವಲ್ಲಭಾಚಾರ್ಯರ ,ಮಹಾರಾಷ್ಟ್ರದ ತುಕಾರಾಮ, ಸಖೂಬಾಯಿ ಇವರೆಲ್ಲರ ಭಾಷೆ ಭಿನ್ನ, ದೇಶ – ಕಾಲಗಳೂ ಭಿನ್ನ,  ಆದರೂ ಇವರೆಲ್ಲ ಶ್ರೀಕೃಷ್ಣಭಕ್ತಿಯ ಸಾಗರದಲ್ಲಿ ಮಿಂದವರು, 


‘ಈ ಪರಿಯ ಸೊಬಗ ಇನ್ನಾವ ದೇವರಲ್ಲೂ ಕಾಣೆ…’ ದಾಸರ ಈ ಪದ್ಯವೊಂದೇ ಸಾಕು.ಕೃಷ್ಣ ಏಕೆ ಎಲ್ಲರಿಗೂ ಅಚ್ಚುಮೆಚ್ಚು ಎಂದು ತಿಳಿಯಲು .ಇಡಿಯ ಸೃಷ್ಟಿಯ ಅಂತಃಸತ್ವವನ್ನೇ ಚೈತನ್ಯವನ್ನಾಗಿಸಿದ ಅನುಪಮ ಕೊಳಲ ಗಾರುಡಿಗ ಶ್ರೀ ಕೃಷ್ಣ ಮಹಾಪುರುಷ.


ಅನುಭಾವ – ಅನುಭವಗಳ ಪರಮಮೂರ್ತಿ ಕೃಷ್ಣ. ಅವನು ಹುಟ್ಟಿದ ಕೂಡಲೇ ತಾಯಿಯ ಮೊಲೆಹಾಲನ್ನೂ ಕುಡಿಯದೆ,ತಂದೆಯ ತಲೆಯೇರಿ ಮೋಹದಿಂದ ತಪ್ಪಿಸಿಕೊಂಡವನು, ಹೆತ್ತು ಹಾಲುಣಿಸದ ತಾಯಿ ಯಶೋದೆ, ಹಾಲುಡಿಸದೇ ಬೆಳೆಸಿದ ತಾಯಿ ದೇವಕಿ, ಮೊಲೆಹಾಲಿನಲ್ಲಿ ವಿಷವುನ್ನುಣ್ಣಿಸಲು ಬಂದ ತಾಯಿರೂಪದ ಮಾಯಾವಿ ಪೂತನಿ ಮೂವರೂ ತಾಯಿಯರ ಮೋಹಬಂಧದಿಂದ ಬಾಲ್ಯದಿಂದಲೇ ತಪ್ಪಿಸಿಕೊಂಡ. 


ಜಗದ್ಗುರು ಎಂದು ನಾಮಫಲಕ ಹಾಕಿಕೊಳ್ಳಲಿಲ್ಲ ,ನಮ್ಮ ಜನರಲ್ಲೇ ಇರುವ ಅನೇಕ ಜ್ಞಾನಿಗಳು  ಅವನ ರೂಪವನ್ನು ಅರಿತು ಅವನೊಬ್ಬ ಕಾರಣೀಭೂತ ವಿಭೂತಿ ಪುರುಷ ವ್ಯಕ್ತಿತ್ವ ಎಂದು ಕರೆದು ಹಾಗೆ ಗುರುತಿಸಿದರು. ಜಗತ್ತಿಗೆ ಅಪ್ರತಿಮ ಕೊಡುಗೆಯಾಗಿ ಶ್ರೀಮದ್ಭಗವದ್ಗೀತೆಯನ್ನು ಕರುಣಿಸಿದ ಕೃಷ್ಣ ಸಾರ್ವಕಾಲಿಕ ಸತ್ಯವನ್ನು –ತಥ್ಯವನ್ನು ಬೋಧಿಸಿ ಗುರುವಾದ ! ಇವತ್ತಿಗೂ ಅದರ ಒಂದೊಂದು ಅಂಶವೂ ಅತಿಮೌಲ್ಯಯುತ. 


ಧರ್ಮ ನಮ್ಮನ್ನು ‘ದೈವೀಕ”ಗೊಳಿಸುವ  ಒಂದು ‘ಮಾರ್ಗ’ವಷ್ಟೇ. ಅದುವೇ ದೇವರಲ್ಲ!! ದೇವರನ್ನು ಹೊಂದಬೇಕಾದರೆ ‘ಧಾರ್ಮಿಕಕೋಟೆ’ಯನ್ನು ಭೇದಿಸಬೇಕಾಗುತ್ತದೆ. ಇದು ಕೃಷ್ಣನ ಅಭಿಪ್ರಾಯ. ಧರ್ಮದಲ್ಲಿ ‘ರೀತಿ- ರಿವಾಜು’,’ ಕಟ್ಟು -ಕಟ್ಟಳೆ’, ‘ನೀತಿ- ನಿಯಮಾವಳಿ’ಗಳ ದರ್ಬಾರು ರಂಗೇರಿಕೊಂಡಿರುತ್ತದೆ. ಕೃಷ್ಣ ಇವೆಲ್ಲವುಗಳ ಆಚೆಗಿದ್ದಾನೆ. ದೇವರಿಗೆ ‘ಭಕ್ತಿ -ಪ್ರೀತಿಗಳೇ ‘, ‘ಭಾವ- ಸದ್ಭಾವ’ಗಳೇ ತುಂಬ ಮುಖ್ಯ. 


ಭಾರತದ ಸಮಗ್ರ ಆಧ್ಯಾತ್ಮಿಕ ವಾಜ್ಮಯದ ಸಾರವೇ ಶ್ರೀ ಕೃಷ್ಣ. “ಧರ್ಮ ಸಂಸ್ಥಾಪನಾರ್ಥಯ ಸಂಭವಾಮಿ’ ನಾನು ಧರ್ಮದ ಸಂಸ್ಥಾಪನೆಗಾಗಿಯೇ ಅವತರಿಸುವೆ, ‘ಚಾತುರ್ವಣ್ಯಂ ಮಯಾ ಸೃಷ್ಟಂ’ ಈ ವರ್ಣಾಶ್ರಮ ಧರ್ಮಗಳನ್ನು  ನಾನೇ ನಿರ್ಮಿಸಿರುವೇ. ಆದ್ದರಿಂದ ‘ಸರ್ವಧರ್ಮಾನ್ ಪರಿತ್ಯಜ್ಯ ಮಾಮೇಕಂ ಶರಣಂ ವ್ರಜ’ ಅನ್ಯಧರ್ಮಗಳನ್ನು ಬಿಟ್ಟು  ನನಗೇ ಶರಣು ಬಾ , ನನ್ನಲ್ಲಿ ಭಕ್ತಿ ಮಾಡು, ನೀನು ಅನುಭವಿಸುವುದೆಲ್ಲವನ್ನು ನನಗೇ ಅರ್ಪಿಸು, ನನ್ನನ್ನು ಪುರುಷೋತ್ತಮನೆಂದು ತಿಳಿ ‘ಯತ್ರ ಯೋಗೇಶ್ವರಃ ಕೃಷ್ಣ ತತ್ರ ಶ್ರೀ ವಿಜಯಃ ‘ ಎಲ್ಲಿ ಕೃಷ್ಣನಿರುವ ಅಲ್ಲಿಯೇ ಗೆಲುವು,ಸಂಪತ್ತು,ಯಶಸ್ಸು ಇರುವವು. ದೊರೆಯುವುದು,ಇದು ಉಪನಿಷತ್ತಿನ ಸಾರವಾಧ ಗೀತೆಯ ವೇದಾಂತ . 


ಸಿಂಹಾಸನದಿಂದ ದೂರವಿದ್ದುಕೊಂಡೇ ಜನಮನದ ಸಿಂಹಾಸನದಲ್ಲಿ ಪರಮಾತ್ಮನಾದ ಪರಮಾಪ್ತವಾದ. ಅವನ ಸುಧಾಮ ಪ್ರೀತಿ, ರಾಧಾ ಪ್ರೇಮ, ಅರ್ಜುನ ಸಖ್ಯ, ದ್ರೌಪದಿ ಭ್ರಾತೃತ್ವ. ಕೃಷ್ಣನೊಬ್ಬ ಬಿಟ್ಟರೆ ಕೃಷ್ಣನಿಗೊಂದು ಹೋಲಿಕೆ ಇಲ್ಲ.ಕೃಷ್ಣನೆಂದರೆ ಶಕ್ತಿ ಯುಕ್ತಿಗಳ ಮೊತ್ತ . ಬದುಕಿನ ಸವಾಲುಗಳನ್ನು ಹೆಗೆ ಎದುರಿಸಬೇಕೆಂಬುದಕ್ಕೆ ಮಹೋನ್ನತ ಆದರ್ಶ. 


ಇಷ್ಟಾದರೂ-ರಾಮಕೃಷ್ಣರನ್ನು ಸದಾ ಒಟ್ಟಿಗೆ ನೋಡುವ ನಾವು ಹೆಚ್ಚು ಭಕ್ತಿಯಿಂದ ಪೂಜಿಸುವುದು ರಾಮನನ್ನೇ. ಎದೆಯ ಮೆಚ್ಚು ಮಾತ್ರ ಕೃಷ್ಣನಿಗೆ. ಏಕೆಂದರೆ ರಾಮ ಆದರ್ಶ, ಕೃಷ್ಣ ವಾಸ್ತವ.


ಶ್ರೀ ಕೃಷ್ಣನಂತಹ ಸೂಕ್ಷ್ಮಮತಿಯ, ಉದಾರ ಚಿತ್ತದ ಅತಿಜಾಗರೂಕರಾದ ಸುಧಾರಕರು ಸಿಗುವುದು ಬಹಳ ಕಷ್ಟ. ಅನೇಕ ವೇಳೆ ನಮ್ಮ ಕಣ್ಣಮುಂದೆ ಬಂದು ಹೋದ ಸುಧಾರಕರಲ್ಲಿ ಪರರಿಗಾಗಿ ಮರುಗುವ ಹೃದಯವೇನೊ ಇದೆ. ಆದರೆ ಅವರಲ್ಲಿ ಸಹನೆ ಇಲ್ಲ. ಎಲ್ಲಿ ತನ್ನ ದೃಷ್ಟಿಯಿಂದ ಅದು ತಪ್ಪೋ ಅದನ್ನು ಖಂಡಿಸಿ ನಾಶ ಮಾಡುವವರೆಗೂ ಅವರ ಚಿತ್ತಕ್ಕೆ ಶಾಂತಿ ಇಲ್ಲ. ಆದರೆ ಶ್ರೀಕೃಷ್ಣನು ಯಾವ ಮಾರ್ಗವನ್ನೂ ಖಂಡಿಸುವುದಿಲ್ಲ. ಅವನ ಎದುರಿಗೆ ಇಡೀ ಮಾನವಕೋಟಿಯ ವಿಕಾಸದ ಹೊಣೆ ಇದೆ.


ಜಗದ್ಗುರುವೆಂದರೆ ನಮ್ಮೆದುರಿಗೆ ಬರುವ ಚಿತ್ತ ಒಬ್ಬ ಮಠಾಧಿಪತಿಯಲ್ಲವೆ? ಕಾವಿ, ಪಲ್ಲಕ್ಕಿ, ಛತ್ರ, ಚಾಮರ, ದೀವಟಿಗೆ, ಪಾದುಕೆ, ದಂಡ, ಕಮಂಡಲ, ಶಿಷ್ಯ ಸಮೂಹ, ಜಾತ್ರೆ, ಗ್ರಂಥ ರಚನೆ, ಪ್ರವಚನ, ಭಿಕ್ಷೆ, ಏಕಾಂತಪ್ರಿಯತೆ-ಇವಲ್ಲವೇ ನಮ್ಮ ಕಲ್ಪನೆ? ‘ಕೃಷ್ಣಂ ವಂದೇ ಜಗದ್ಗುರುಂ’ ಎಂದಾಗ ಈ ಕಲ್ಪನೆಯೆಲ್ಲ ಸುಳ್ಳಾಗಿ, ಈ ಶಬ್ದ ಆಡಂಬರದಂತೆ ತೋರುತ್ತ, ಪೊಳ್ಳಾಗಿ, ಹುಸಿಯಾಗಿ, ಅತಿಶಯೋಕ್ತಿಯಾಗಿ, ಒಗಟಾಗಿ, ಅಣಕಿಸುವಂತೆ ನಿಲ್ಲುತ್ತದೆ. ಶ್ರೀಕೃಷ್ಣನು ಯಾವ ಮಠ ಕಟ್ಟಿದ? ಯಾವ ಸನ್ಯಾಸ ಪರಂಪರೆ ಆರಂಭಿಸಿದ? ಎಲ್ಲಿ? ‘ಅವನ ತ್ರಿದಂಡ’ ಎಲ್ಲಿ ಹೋಯಿತು? ಪಲ್ಲಕ್ಕಿ ಎಲ್ಲಿ? ಯಾರಿಗೆ ಗೊತ್ತು? ಕಣ್ಣು ಅಗಲವಾಗುತ್ತದೆ! ತಾನೇ ಮುಚ್ಚುತ್ತದೆ ! ಕಿವಿಗೆ ಏನೂ ಕೇಳಿಸದೆ, ಮೌನ ಮನಸ್ಸು ಸಮುದ್ರ ತಳ ಕಟ್ಟಿ ಕೊಡುತ್ತದೆ.


ಏನನ್ನೂ ಬಯಸದ ನಿಸ್ಪೃಹನಿಗೆ ಈ ಜಗತ್ತಿನ ಉದ್ಧಾರ ಏಕೆ ಬೇಕಿತ್ತು? ತಾನೇ ಆಳದವನು ‘ಜಗತ್ತಿಗೆ ದುರ್ಯೋಧನನೇ ಒಡೆಯನಾಗಿರಲಿ, ಯುಧಿಷ್ಠಿರನೇ ಆಗಿರಲಿ, ತನಗೇಕೆ ಗೊಡವೆ?’ ಎಂದೇಕೆ ತಾಟಸ್ಥ್ಯ ವಹಿಸಲಿಲ್ಲ? ಅದು ಅಸಾಮಾನ್ಯ ! ಅದ್ಭುತ ! ಮಾಯೆ !


ಅವನೆಂದರೆ ಸೌಂದರ್ಯ, ಅವನೆಂದರೆ ಮೋಹ, ಅವನೆಂದರೆ ಪ್ರೀತಿ, ಅವನೆಂದರೆ ವಿರಹ, ಅವನೆಂದರೆ ಕ್ಲೇಷ ನಿವಾರಣೆ, ಅವನೆಂದರೆ ಎಲ್ಲವೂ…

ಕೃಷ್ಣನ ವ್ಯಕ್ತಿತ್ವವೇ ಹಾಗೆ ! ತುಂಬು ಲವಲವಿಕೆಯಿಂದ, ಜೀವಂತಿಕೆಯಿಂದ ಬಾಳಿದವನು. ಹಾಗೆ ನೋಡಿದರೇ ಮಹಾಭಾರತವೇ ಕೃಷ್ಣನ ಲೀಲಾವಿನೋದ. ವ್ಯಕ್ತಿಯೊಬ್ಬ ಹುಟ್ಟಿನಿಂದ ವೃದ್ಧಾಪ್ಯದವರೆಗೆ ಸ್ತ್ರೀಯರಿಗೆ ಏನೇನು ಆಗಿರಬಲ್ಲನೋ ಅದೆಲ್ಲವೂ ಅವನಾಗಿದ್ದ.


ಮೋಹಕ ಮಾತುಗಾರ ……

ಭಾಗವತ ಪ್ರಜ್ಞೆಯ ಪುರುಷೋತ್ತಮ ತತ್ವದ ಅನುಷ್ಠಾನ ರಾಮ. ಹಾಗೆ ನೋಡಿದಲ್ಲಿ ರಾಮ ಮೌನಿ. ಆತ ನುಡಿದಂತೆ ನಡೆ, ನಡೆದಂತೆ ನುಡಿ. ಮುಂಬರುವ ಕೃಷ್ಣನ ಕಥೆಯೇ ಬೇರೆ. ಅವನು ವಾಚಾಳಿ. ತಾಯಿ ಯಶೋದೆಗೆ ಮಾಯಾ ವಿಶ್ವವನ್ನೇ ಬಾಯ್ದೆರೆದು ತೋರಿದ. ಭಾಗವತ ಪ್ರಜ್ಞೆಯ ದಿವ್ಯಾಗಾರ ಕೃಷ್ಣ ಬಾಯಿಯಿಂದಲೇ ಕುರುಕ್ಷೇತ್ರದಲ್ಲಿ ಅರ್ಜುನನಿಗೆ ವಿಶ್ವರೂಪ ತೋರಿಸಿ, ಭಗವದ್ಗೀತೆ ಬೋಧಿಸಿದ ವಿಶ್ವ ದಾರ್ಶನಿಕ.


‘ರಾಮ ಬಾಣ’ ಮತ್ತು ‘ಕೃಷ್ಣಪ್ರಜ್ಞೆ ….. ‘

ಭಾಗವತವು ಕೃಷ್ಣ ಬದುಕಿನ ಬಗ್ಗೆ ಬೆಳಕು ಚೆಲ್ಲಿದರೆ ಕೃಷ್ಣ ನೀಡಿದ ವರಪ್ರಸಾದದಂತಿರುವ ಭಗವದ್ಗೀತೆಯು ಎಲ್ಲರ ಬದುಕಿನ ಮೇಲೆ ಬೆಳಕು ಚೆಲ್ಲುತ್ತದೆ. 


ನಮ್ಮೀ ದೇಶದ ಜನಗಳಿಗೆ ರಾಮ ಬಾಣ ಮತ್ತು ಕ್ರಷ್ಣಪ್ರಜ್ಞೆ ಎಂಬ ಈ ಎರಡು ಪದಗಳು ಚಿರಪರಿಚಿತ , ಈ ಎರಡು ಪದಗಳು ನಮ್ಮ ನಾಡು ನುಡಿಗಳಲ್ಲಿ  ನಮ್ಮ ಸಂಸ್ಕೃತಿಗಳಲ್ಲಿ ಓತಪ್ರೋತವಾಗಿ ಬೆರೆತುಕೊಂಡಿದೆ. ಇವು ತುಂಬ ಚಲಾವಣೆಯಲ್ಲಿರುವ ಪದಗಳು ಕೂಡ ಅಹುದು. 


ಇಲ್ಲಿ ಒಂದು ಅಂಶವನ್ನು ಗಮನಿಸಬೇಕು ರಾಮ ಈತ, ಬಾಣವಾಗುತ್ತಾನೆ ‘ರಾಮಬಾಣ’ವಾಗುತ್ತನೆ. ಆದರೆ ಕೃಷ್ಣ ಈತ, ಪ್ರಜ್ಞೆಯಾಗುತ್ತಾನೆ. ‘ಕೃಷ್ಣಪ್ರಜ್ಞೆ ‘ಯಾಗುತ್ತಾನೆ. ರಾಮಬಾಣವೆಂದರೆ ‘ಹುಸಿ ಹೋಗದೆ ಇರೋದು ‘ಮತ್ತು ‘ಗುರಿ ತಪ್ಪದೆ ಇರೋದು’ ಎಂದರ್ಥವಾದರೆ ಕೃಷ್ಣಪ್ರಜ್ಞೆ  ಎಂದರೆ ‘ಹುಸಿ ಇಲ್ಲದ್ದು’  ಮತ್ತು  ‘ ಹುಸಿ ಅಲ್ಲದು’್ದ ಎಂದರ್ಥ  ‘ಕೃಷ್ಣಪ್ರಜ್ಞೆ ‘ಯನ್ನು ಬಲ್ಲವರು ‘ಸಾಕ್ಷಿಪ್ರಜ್ಞೆ ‘ ಯೆಂದೆನ್ನುತ್ತಾರೆ.  ಕೃಷ್ಣಪ್ರಜ್ಞೆ ಇದು, ನಮ್ಮೆಲ್ಲರ ಸಾಕ್ಷಿಪ್ರಜ್ಞೆ ಯಾಗಿ ನಿಂತುಕೊಂಡದ್ದೇ  ಆದರೆ ನಮ್ಮೀ ದೇಶವಿದು ಎಲ್ಲ ‘ಅವತಾರ’ ಹಾಗೂ ‘ ಅವಾಂತರ’ ಗಳಿಂದ ಮುಕ್ತವಾಗಿ ಸ್ಪಟಿಕ ಹಾಗೂ ಪಾರದರ್ಶಕ ಖ್ಯಾತಿವನ್ನು ತನ್ನದಾಗಿಸಿಕೊಂಡು ವಿಜೃಂಭಿಸುತ್ತದೆ. 


ರಾಧಮಾಧವ ರಾಸ 

ಕಾದ ಭೂಮಿಗೆ ಮುಸಲ ಧಾರೆಯಸ್ಪರ್ಶ, ಬಾಯ್ದೆರೆದು ನಿಂತ ನೆಲಕ್ಕೆ ತಣ್ಣನೆಯ ಸಂತೈಕೆ.ತುಂತುರು ಸಿಂಚನ ಸುತ್ತೆಲ್ಲ ಆವರಿಸಿ ಜೀವ ನಳನಳಿಸುವ ಕ್ಷಣವದು ಸತತ, ಸುದೀರ್ಘ,ಕಠಿಣತಮ ಸಾಧನೆಗೆ ಫಲ ಸಂದಿತ್ತು.ಮಳೆ ಬಿಸಿಲೆನ್ನದೇ, ಕುಳಿರ್ಗಾಳಿಗೆ ಮೈಯೊಡ್ಡಿ ತುದಿಗಾಲಮೇಲೆ ನಿಂತು ತಪಗೈದ ಮುನಿಗೆ ದೈವಸಾಕ್ಷಾತ್ಕಾರವಾದಂತೆ ಅನುಭೂತಿ ರಾಧೆಗೆ ಕೃಷ್ಣನ ಸಾನ್ನಿಧ್ಯದಲ್ಲಿ. ಜ್ಞಾನಚಕ್ಷುಗಳು ತೆರದುಕೊಂಡ, ಜಗದ ಸಾರಸರ್ವಸ್ವಗಳನ್ನು ಅದರೊಳಗೆ ಅರಗಿಸಿಕೊಂಡ ಅನುಭವ. ಹೊಸತೊಂದು ಸೃಷ್ಠಿಗೆ ಸಜ್ಜಾಗಿ ನಿಂತ ಚೈತನ್ಯ - ಬಳಲಿಕೆ. ನೋವಿನಲ್ಲೂ ಹಿತನೀಡುವ ಅವ್ಯಕ್ತ ಸಂತಸ , ಶಾರೀರಿಕ ದ್ವಂದ್ವ ಸ್ತರದಲ್ಲೂ ಆಧ್ಯಾತ್ಮಿಕ ಸಿದ್ಧಿಯ ಸಂತೃಪ್ತಿ. 


ಹೌದು, ರಾಧಾಕೃಷ್ಣರ ಸಂಬಂಧಗಳಲ್ಲಿ  ಮೇಲುನೋಟಕ್ಕೆ  ಕಾಣುವುದಕ್ಕಿಂತ ಹೆಚ್ಚು ಆಳವಿದೆ.ಭಾರತೀಯ ಸನ್ನಿವೇಶದಲ್ಲಿ , ಈ ನೆಲದಲ್ಲಿ ಅಂತರ್ಗತವಾದ ಉದಾತ್ತ ಪ್ರೇಮದ ತೀವ್ರರೂಪ. ಇದಕ್ಕೆ ಸಾಂಸ್ಕೃತಿಕ ಹಾಗೂ ಧಾರ್ಮಿಕ ನೆಲೆ ದೊರೆತಿದ್ದು ಸಹ ಇದೇ ಕಾರಣಕ್ಕೆ. ಗ್ರಹಿಕೆ ಕ್ರಮಗಳ ಮೇಲೆ ಆ ಸಂಬಂಧ ಅರ್ಥ ಪಡೆಯುತ್ತದೆ. ಪೌರಾತ್ಯ, ಲೈಂಗಿಕ ರಂಜನೆಯಿಂದ ಹೊರತಾದ ಮೌಲ್ಯ ಪುನರುಜ್ಜೀವನದ ನಾಗರಿಕ ಸಂಬಂಧವಾಗಿಯೂ ರಾಧಾಕೃಷ್ಣರ ಪ್ರೇಮ ಆದರ್ಶಪ್ರಾಯ. 

 

ತಾಯಿಗೆ ಬಾಯೊಳು ಜಗವನೆ ತೋರಿದ ಕೃಷ್ಣ ನೀ ಬೇಗನೆ ಬಾರೋ

ಅವನು ದೇವನಲ್ಲ, ನಮ್ಮೊಳಗಿನ ಒಂದು ಭಾಗ !


ಬಾಲ ಕೃಷ್ಣನಾದರೆ ನಮ್ಮದೇ ಮನೆಯ ಹುಡುಗ. ಬೆಣ್ಣೆ ಕದ್ದರೂ ಅವನನ್ನು ಕಳ್ಳ ಎನ್ನುವುದಿಲ್ಲ. ಕದ್ದರೂ ಅವನು ನಮಗೆ ಮುದ್ದುಮುದ್ದು. ಅಕ್ಷರಶಃ ಅವನು ಬೆಳೆಯುವುದು ನಮಗೆ ಇಷ್ಟವೇ ಇಲ್ಲ. ಬೆಳೆದರೆ ದೊಡ್ಡವನಾಗಿಬಿಡುತ್ತಾನೆ. ಮನುಷ್ಯ ಸಹಜ ಕಾಮ, ಕ್ರೋಧ, ಮದ, ಮತ್ಸರಗಳು ಅವನಿಗೂ ಸೋಕಿಬಿಡುತ್ತವೆ. ಅವನೂ ಎಲ್ಲರಂತೆ ಕೆಟ್ಟವನಾಗಿ ಬಿಡುತ್ತಾನೆ ಅಂತ.

ಕೃಷ್ಣ ಅಂದರೆ ಕಪಟನಾಟಕ ಸೂತ್ರಧಾರಿ. ಆ ಮುರಾರಿ ನಿಜಕ್ಕೂ ಕ್ಯಾರೆಕ್ಟರ್ ಇರುವ ಜೀವಂತ ರಾಜಕಾರಣಿ. ಬಹುಶಃ ಕೃಷ್ಣನಷ್ಟು ಡಿಪ್ಲೊಮೆಟಿಕ್ ಆಗಿ ವರ್ತಿಸಿದ ರಾಜಕಾರಣಿ ಜಗತ್ತಿನ ಇತಿಹಾಸದಲ್ಲಿ ಮತ್ತೊಬ್ಬನಿಲ್ಲ. ಅದೂ ಲೋಕಹಿತಕ್ಕೇ!

ಒಂದು ಹಂತದಲ್ಲಿ ಆತ ಮಾಡಿದ್ದೆಲ್ಲ ತಪ್ಪೇ. ಆದರೂ ಅವು ಒಪ್ಪು. ಏಕೆಂದರೆ ಅವನು ಕೃಷ್ಣ. ಅವನು ಮಾಡಿದ್ದೆಲ್ಲ ಲೋಕ ಹಿತಕ್ಕೆ !!”


ಅವನು ಬಾಲಕೃಷ್ಣನಾಗಿ ಮಾಡಿದ್ದೂ ತಪ್ಪುಗಳ ಸರಮಾಲೆ. ಉಹು ್ಞನಾವದನ್ನು ತಪ್ಪೆನ್ನುವುದೇ ಇಲ್ಲ. ಅವು ಅವನ ಬಾಲಲೀಲೆ... ಹಾಗೆ ಮುಂದೆ ಮಾಡಿದ್ದು ಜಗದ್ದೋದ್ಧಾರಕ್ಕೆ. ಜಗತ್ತಿನಲ್ಲಿ ಹೀಗೆ ಪ್ರತಿಹಂತದಲ್ಲೂ ಸಿಹಿಸಿಹಿ ತಪ್ಪು ಮಾಡಿದ ವ್ಯಕ್ತಿಬೇರೊಬ್ಬನಿಲ್ಲ. ಹಾಗೆ ಮಾಡಿಯೂ ಎಲ್ಲರ ಪ್ರೀತಿಗೆ ಪಾತ್ರವಾದ ಮತ್ತೊಂದು ಪಾತ್ರವೂ ಇಲ್ಲ. 


ವೇಣುಗೋಪಾಲ-ಮುರಳೀಧರ ಎಂಬಿತ್ಯಾದಿ ನಾಮಾಂಕಿತನಾದ ಅದೇ ಶ್ರೀಕೃಷ್ಣ, ಕೊಳಲನ್ನು ಬಿಟ್ಟು ಎಲ್ಲಿಗೂ ಹೋಗುತ್ತಿರಲಿಲ್ಲವೇ ಅಥವಾ ಕೊಳಲಿಲ್ಲದೇ ಕೃಷ್ಣನೆನಿಸುತ್ತಿರಲಿಲ್ಲವೆ ಎಂಬೊಂದು ಜಿಜ್ಞಾಸೆಯು ನಮ್ಮ ಮನಸ್ಸಿನಲ್ಲಿ ಹುಟ್ಟುತ್ತದೆ. 

-ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ) 

ಸಂಸ್ಕೃತಿ ಚಿಂತಕರು 


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top