|| ಶಕ್ರಾಂತರ್ಗತ ಶ್ರೀ ಧರಾವಾಸಾಯ ನಮಃ||
ಭಗವಂತನ ಅನೇಕ ಅವತಾರಗಳಲ್ಲಿ ಕೃಷ್ಣಾವತಾರವೂ ಒಂದು. ಕಲಿಯುಗಕ್ಕೆ ಬಹಳ ಹತ್ತಿರವಾಗಿ ಗೋಚರಿಸಿದ ಅವತಾರವಿದು. ಜಗತ್ತನ್ನು ಭಗವಂತನ ಕರುಣೆಯಿಂದ ಸೃಷ್ಟಿಸಿದ ಬ್ರಹ್ಮನು ಕೊನೆಯಲ್ಲಿ ಮಾನವನನ್ನು ಸೃಷ್ಟಿಸಿದನಂತೆ. ಯಾವ ಹಿನ್ನೆಲೆಯಲ್ಲಿ ಮಾನವ ಜನ್ಮ ಇತರ ಯೋನಿಗಳ ಜೀವಿಗಳಿಗಿಂತ ಉತ್ತಮವಾಗಿದೆ? ಅಪೂರ್ವ ಬುದ್ಧಿಶಕ್ತಿಯನ್ನು ಪಡೆದು ಮಾನವ ಜ್ಞಾನ ವಿಜ್ಞಾನಗಳ ಅರಿವನ್ನು ಪಡೆದ. ಮಾನವ ಪರೋಪಕಾರಿಯಾಗಿ ಬಾಳಿ ಇತರರಿಗೂ ಆಸರೆಯಾಗಬೇಕು. ಹುಟ್ಟು ಸಾವುಗಳ ಆಚೆ ಏನು ಇದೆ? ಮಾನವ ಜೀವನದ ಸಾರ್ಥಕತೆ ಯಾವುದರಲ್ಲಿದೆ? ಇವೇ ಪ್ರಶ್ನೆಗಳಿಗೆ ಉತ್ತರ ಪಡೆಯುವುದೇ ಮಾನವನ ಗುರಿಯಾಗಿರಬೇಕು. ಮನುಷ್ಯ ತನ್ನ ಜೀವನದಲ್ಲಿ ಜ್ಞಾನ, ವಿಜ್ಞಾನ, ದಯೆ, ಔದಾರ್ಯ, ತೃಪ್ತಿ, ಗಾಂಭೀರ್ಯ ಮುಂತಾದ ಗುಣಗಳನ್ನು ಅಳವಡಿಸಿಕೊಳ್ಳಬೇಕು. ವಿಶ್ವದ ಚಾಲನಶಕ್ತಿಯಾದ ಭಗವಂತನ ಬಗ್ಗೆ ತಿಳಿಯಲು ಪ್ರಯತ್ನಿಸಬೇಕು. ಯಾವ ಹೆಸರಿನಿಂದ ಆ ಜಗನ್ನಾಥನನ್ನು ಕರೆಯಬೇಕೆಂಬ ಗೊಂದಲವೂ ಬೇಡ. ಏಕೆಂದರೆ ಎಲ್ಲ ಶಬ್ದಗಳೂ ಅವನ ಹಿರಿಮೆ- ಗರಿಮೆಗಳನ್ನು ತಿಳಿಸುತ್ತವೆ. ನಾವು ಹಲವು ದೇವತೆಗಳನ್ನು ಕಂಡರೂ ಅವರನ್ನೂ ಸೃಷ್ಟಿಮಾಡಿದ ಪರದೇವತೆ ಒಬ್ಬನೇ ಇದ್ದಾನೆ. ಅವನೇ ನಾನು ಎಂದು ಶ್ರೀಕೃಷ್ಣ ಹೇಳುತ್ತಾನೆ.
ಸತ್ಯವೇ ಭಗವಂತ' ಎಂದು ಕರೆಯುವುದರಿಂದ ಈ ವಿಶ್ವವೂ ಸತ್ಯವಾಗಿದೆ. ನಶ್ವರವಾಗಿರುವುದು ಮನುಷ್ಯನ ಬಾಳು. ಅವನ ಆಸೆಗಳು. ಸಾಧನೆಗೆ ಸಾಧನವಾಗಬೇಕು ಮನುಷ್ಯ ಜನ್ಮ. ಅತಿ ವಿಚಿತ್ರವಾದ ಯಾರ ನಿಲುವಿಗೂ ನಿಲುಕದ ಈ ವಿಶ್ವದ ನಿರ್ಮಾತೃವು, ಉತ್ಕೃಷ್ಟನೂ ನಾನಾಗಿರುವೆ ಎಂದು ಶ್ರೀಕೃಷ್ಣ ತಿಳಿಸುತ್ತಾನೆ. ಸತ್ಯ, ದಾನ, ಅಧ್ಯಯನ, ಭಗವಂತನ ಪೂಜೆಗಳಿಂದ ಮನುಷ್ಯನ ಮನಸ್ಸು ಶುದ್ಧಗೊಳ್ಳುತ್ತದೆ. ಭಗವಂತನ ಆರಾಧನೆಯು ಕೆಲವರಿಗೆ ಮಾತ್ರ ಸೀಮಿತವಾಗಿಲ್ಲ. ಆಸಕ್ತಿ ಇರುವವರೆಲ್ಲರೂ ಅರ್ಹರು. ನನ್ನ ಬಗ್ಗೆ ಜ್ಞಾನವನ್ನು ಹೊಂದಿ, ಅದಕ್ಕೆ ಪೂರಕವಾಗಿ ನನ್ನ ಮಹಿಮೆ ತಿಳಿದು, ಸಂಸಾರದಲ್ಲಿ ವೈರಾಗ್ಯವನ್ನು ತಾಳಬೇಕು. ಇದರಲ್ಲಿ ಯಶಸ್ವಿಯಾದವನು ನನ್ನ ಕರುಣೆಗೆ ಪಾತ್ರನಾಗುವನು. ಒಮ್ಮೆ ನನ್ನ ಕರುಣೆಗೆ ಪಾತ್ರನಾದರೆ ಆತನು ಈ ಸಂಸರದಿಂದ ಮುಕ್ತನಾದಂತೆಯೇ ಎಂದು ಕೃಷ್ಣನು ತನ್ನ ಸಂದೇಶದಲ್ಲಿ ತಿಳಿಸುತ್ತಾನೆ.
ಧರ್ಮದ ಜೊತೆಗೆ ''ಅ'' ಸೇರಿದರೆ ಅಧರ್ಮವೆನಿಸುತ್ತದೆ.''ಅ' ಎಂಬುದು ಅಸಹನೆಯಾಗಿರಬಹುದು. ಅಹಂಕಾರವಾಗಿರಬಹುದು. ಅನ್ಯಾಯವಾಗಿರಬಹುದು. ಅಲ್ಪಬುದ್ಧಿಯಾಗಿರಬಹುದು. ಅತಿಶಯ ಆಸೆಯಾಗಿರಬಹುದು. ಹೀಗೆ ಧರ್ಮವನ್ನು ಅಧರ್ಮವನ್ನಾಗಿ ಬೆಳೆಸುವವರು ದುರ್ಜನರು. ಇಂಥವರ ನಾಶಕ್ಕೆ ಭಗವಂತನ ಅವತಾರಗಳು ಆಗಾಗ ನಡೆಯುತ್ತಲೇ ಇರುತ್ತವೆ. ಸಜ್ಜನರೂ ಸಹ ದುರ್ಜನರ ಸಂಗದಿಂದ ದೂರವಿರಬೇಕು. ಇಲ್ಲದಿದ್ದರೆ ಅವರೂ ಕಲುಷಿತರಾಗುವ ಭಯವಿರುತ್ತದೆ. ದುರ್ಗುಣದ ಒಂದು ಬೀಜ ಸಾಕು, ಧರ್ಮವನ್ನು ನಾಶಮಾಡಲು. ಅಧರ್ಮವು ಕಾಳ್ಗಿಚ್ಚಿನಂತೆ ಪಸರಿಸುತ್ತದೆ. ಆಗ ಎಷ್ಟು ನೀರು ಸುರಿದರೂ ಪ್ರಯೋಜನವಾಗದು. ಆಗ ಪರಮಾತ್ಮ ಎಂಬ ಸಾಗರವೇ ಹರಿದು ಅಲ್ಲಿ ಬರಬೇಕು. ಆಗ ನಡೆಯುವುದೇ ಆ ಲೀಲಾಮಯಿಯ ಅವತಾರ. ಭಗವಂತನ ಅವತಾರಕ್ಕೆ ಕಾಲ ಪಕ್ವವಾಗಬೇಕು. ದುರ್ಜನರ ಅಟ್ಟಹಾಸ ಮೇರೆ ದಾಟಬೇಕು. ಸಜ್ಜನರ ಸಹನೆಯ ಕಟ್ಟೆ ಒಡೆಯಬೇಕು. ಧರ್ಮದೇವತೆ ಕಂಗಾಲಾಗಿ ಕೂಗಬೇಕು. ಆಗ ಭಗವಂತ ಅವತಾರ ಮಾಡಿ ಮೂರನ್ನೂ ಸರಿಪಡಿಸುತ್ತಾನೆ. ಕೃಷ್ಣಾವತಾರದ ಉದ್ದೇಶವೂ ಇದಾಗಿತ್ತು.
ದ್ವಾಪರಯುಗದ ಅಂತ್ಯದಲ್ಲಿ ಆ ಪರಿಸ್ಥಿತಿ ನಿರ್ಮಾಣವಾಗಿತ್ತು. ದುಷ್ಟರಾಜರು, ದುರ್ಜನರು ಮೆರೆಯುತ್ತಿದ್ದರು. ಸಜ್ಜನರು ಸಂಕಟವನ್ನು ಅನುಭವಿಸುತ್ತಿದ್ದರು. ಮುಕ್ತಿಗಾಗಿ ಸಾಧನೆಯನ್ನು ಮಾಡುವುದು ಬಹಳ ಕಷ್ಟವಾಗಿತ್ತು. ಆಗ ಆಯಿತು ನೋಡಿ, ಕೃಷ್ಣನ ಅವತಾರ! ವಸುದೇವ ದೇವಕಿಯರು ಧರ್ಮದ ಬಂಧನದ ಸಂಕೇತವಾದರು. ಕಂಸ, ದುರ್ಯೋಧನಾದಿಗಳು ದುಷ್ಟಕಾರ್ಯಗಳ ಪ್ರವರ್ತಕರೆನಿಸಿದರು. ಪಾಂಡವರು ಶೋಷಣೆಗೆ ಒಳಗಾದವರ ಪ್ರತೀಕರೆನಿಸಿದರು. ಭೀಷ್ಮಾದಿ ಮಹಾ ಮುತ್ಸದ್ಧಿಗಳಿದ್ದರೂ ಅವರಿಗೆ ದುಷ್ಟಸಂಗದಿಂದ ಹೊರಬರಲಾಗಲಿಲ್ಲ. ಶಕುನಿ, ದುಶ್ಯಾಸನರಂತಹವರು ಪ್ರವರ್ಧಮಾನಕ್ಕೆ ಬಂದರು. ಇಂತಹ ಸಮಯದಲ್ಲಿ ಪ್ರಾರಂಭವಾಯಿತು ಕೃಷ್ಣನ ಸಾಮ, ಭೇದ ಮತ್ತು ದಂಡೋಪಾಯಗಳು. ಅನ್ಯಾಯ, ಅತ್ಯಾಚಾರ, ಅಧಿಕಾರ ಲಾಲಸೆಯನ್ನು ನಾಶಮಾಡಲೆಂದೇ ಭೂಮಿಗೆ ಬಂದನು. ಸಜ್ಜನರ ರಕ್ಷಕನಾದ ಭಗವಂತ ಕೃಷ್ಣನಾಗಿ. ಕೃಷ್ಣ ತನ್ನ ಅವತಾರ ಸಮಯದಲ್ಲಿ ತ್ರಿವಿಧ ಕಾರ್ಯಗಳಿಂದ (ಧರ್ಮಸ್ಥಾಪನೆ, ಸಜ್ಜನರ ರಕ್ಷಣೆ ಮತ್ತು ದುರ್ಜನರ ನಾಶ) ಮೆರೆದು ಮುಕ್ತಿದಾಯಕ ಎನಿಸಿಕೊಂಡನು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ