ರಾಮಾಯಣ ಹಕ್ಕಿನೋಟ-19: ರಾಮಾಯಣದ ಕುರಿತು ಪ್ರತಿದಿನ ಕಿರು ಪರಿಚಯ

Upayuktha
0

 ಶ್ರೀರಾಮಾಯನಮ:


ರಾಮ ಲಕ್ಷ್ಮಣರು ಮತ್ತು ಸಕಲ ಮುನಿಜನರೊಂದಿಗೆ ವಿಶ್ವಾಮಿತ್ರರು ಮಿಥಿಲೆಗೆ ಬಂದರು.ಅಲ್ಲಿ ರಾಜೋಚಿತ ಸತ್ಕಾರವನ್ನು ಪಡೆದರು.ಗೌತಮರ ಜ್ಯೇಷ್ಠಪುತ್ರ; ಜನಕರಾಜನ ಪುರೋಹಿತನಾದ ಶತಾನಂದನು ತಾಯಿ ಅಹಲ್ಯೆಯ ಶಾಪಮುಕ್ತಿ,ತಂದೆಯ ಆಗಮನದ ವಾರ್ತೆ ಕೇಳಿ ತುಂಬಾ ಸಂತೋಷ ಪಟ್ಟನು.ಶ್ರೀರಾಮ ವಿಶ್ವಾಮಿತ್ರರನ್ನು ಅಭಿವಂದಿಸಿದನು.ಬಳಿಕ ರಾಮ ಲಕ್ಷ್ಮಣರಿಗೆ ಬ್ರಹ್ಮರ್ಷಿ ವಿಶ್ವಾಮಿತ್ರರ ಸಾಧನೆಯ ಕತೆಯನ್ನು ಹೇಳತೊಡಗಿದನು-


ಕುಶನು ಬ್ರಹ್ಮನ ಮಾನಸ ಪುತ್ರ. ಭೂಪಾಲನೆಗಾಗಿ ಬ್ರಹ್ಮನಿಂದಲೇ ನಿಯೋಜಿಸಲ್ಪಟ್ಟವನು.ಅವನ ಮಗ ಕುಶನಾಭ.ಕುಶನಾಭನ ಮಗ ಗಾಧಿ.ಗಾಧಿಯ ಮಗ ವಿಶ್ವಾಮಿತ್ರರು.ಕುಶನ ವಂಶದಲ್ಲಿ ಹುಟ್ಟಿದ ಕಾರಣ ಕೌಶಿಕರೂ ಹೌದು.ಇವರೂ ಸಾವಿರಾರು ವರ್ಷಗಳ ಕಾಲ ದಕ್ಷ ರೀತಿಯಲ್ಲಿ ರಾಜ್ಯಭಾರ ಮಾಡುತ್ತಿದ್ದರು.ಒಂದು ದಿನ ವಿಜಯಯಾತ್ರೆಗಾಗಿ ಭೂಪ್ರದಕ್ಷಿಣೆ ಮಾಡುತ್ತಾ ವಸಿಷ್ಠ ಮಹರ್ಷಿಗಳ ಆಶ್ರಮಕ್ಕೆ ಸೈನ್ಯ ಸಮೇತರಾಗಿ ಬಂದರು.ಬಂದಂತಹ ರಾಜನಿಗೆ ಮತ್ತು ಅವನ ಬಹುದೊಡ್ಡ ಪರಿವಾರಕ್ಕೆ ವಸಿಷ್ಠರು ತಮ್ಮ ಹೋಮಧೇನು ಶಬಲೆಯ ಸಹಾಯದಿಂದ ಬಹುದೊಡ್ಡ ಸತ್ಕಾರವನ್ನು,ಭೋಜನ ಕೂಟವನ್ನು ಏರ್ಪಡಿಸಿದರು. ವಿಶ್ವಾಮಿತ್ರರು ಹಾಗೂ ಅವರ ಸೈನಿಕರು ಅತಿಥಿ ಸತ್ಕಾರದಿಂದ ಸಂತೃಪ್ತರಾದರು.

ಆಶ್ರಮವನ್ನು ತೊರೆಯುವ ವೇಳೆಗೆ ಶಬಲೆಯ ಅದ್ಭುತ ಶಕ್ತಿಯನ್ನು ಅರಿತ ವಿಶ್ವಾಮಿತ್ರರು ಅದನ್ನು ತನಗೆ ನೀಡಬೇಕೆಂದು ವಿನಂತಿಸಿದರು.ಆದರೆ ತಮ್ಮ ಹಾಗೂ ತಮ್ಮ ಆಶ್ರಮದಲ್ಲಿನ ಎಲ್ಲರ ಬದುಕಿನ ಅವಿಭಾಜ್ಯ ಅಂಗವಾಗಿರುವ ಆಕೆಯನ್ನು ನೀಡಲು ಅಸಾಧ್ಯವೆಂದು ವಸಿಷ್ಠರು ಬಹುಬಗೆಗಳಲ್ಲಿ ತಿಳಿಯಪಡಿಸಿದರೂ ವಿಶ್ವಾಮಿತ್ರರು ಜಗ್ಗಲಿಲ್ಲ.ವಸಿಷ್ಠರು ಬಗ್ಗಲಿಲ್ಲ.ಕೊನೆಗೆ ತನ್ನ ರಾಜ್ಯದಲ್ಲಿರುವ ಅಮೂಲ್ಯವಾದುದನ್ನು ಪಡೆಯುವುದು ರಾಜನ ಹಕ್ಕು ಎಂದು ವಾದಿಸಿ ಬಲಾತ್ಕಾರವಾಗಿ ಶಬಲೆಯನ್ನು ಎಳೆದುಕೊಂಡು ಹೋಗಲು ಯತ್ನಿಸಿದರು.ವಸಿಷ್ಠರ ಆಜ್ಞೆಯಂತೆ ಶಬಲೆ ತನ್ನನ್ನು ತಾನು ರಕ್ಷಿಸಿಕೊಳ್ಳಲು ಶಕ- ಯವನ- ಕಾಂಭೋಜ-ಮ್ಲೇಚ್ಛ- ಹಾರೀತರೇ ಮೊದಲಾದ ಸೈನಿಕರನ್ನು ಸೃಷ್ಟಿಸಿ ವಿಶ್ವಾಮಿತ್ರರ ಸೈನಿಕರ ಹುಟ್ಟಡಗಿಸಿತು.ಇದರಿಂದ ಕೋಪಗೊಂಡ ವಿಶ್ವಾಮಿತ್ರರ ನೂರು ಮಂದಿ ಮಕ್ಕಳು ವಸಿಷ್ಠರ ಮೈಮೇಲೆ ಏರಿ ಹೋದರು.ಕೇವಲ ವಸಿಷ್ಠರ ಹೂಂಕಾರದಿಂದ ಅವರೆಲ್ಲರೂ ಸುಟ್ಟು ಬೂದಿಯಾದರು.ತನ್ನ ಕಣ್ಣೆದುರೇ ತನ್ನ ಸೈನ್ಯ, ತನ್ನ ಮಕ್ಕಳನ್ನು ಕಳೆದುಕೊಂಡ ವಿಶ್ವಾಮಿತ್ರರು ತುಂಬಾ ದು:ಖಿತರಾದರು.

ಬ್ರಹ್ಮಬಲದೆದುರು ಕ್ಷತ್ರಿಯ ಬಲ ಏನೂ ಅಲ್ಲ ಎಂಬುದನ್ನು ಅರಿತು ತನ್ನ ಮಗನಿಗೆ ರಾಜ್ಯಭಾರವನ್ನು ವಹಿಸಿ  ಶಿವನ ವರಪ್ರಸಾದವನ್ನು ಪಡೆಯಲು ಹೆಚ್ಚಿನ ತಪಸ್ಸಿಗಾಗಿ ಹಿಮವತ್ಪರ್ವತವನ್ನು ಸೇರಿದರು. 

ಸಂಕಲನ: ವಿಶ್ವ ಉಂಡೆಮನೆ


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter   

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top