ಶ್ರೀ ಕೃಷ್ಣಾಪುರ ಶ್ರೀ ಅದಮಾರು ಶ್ರೀ ಕಾಣಿಯೂರು ಶ್ರೀ ಶೀರೂರು ಮಠಾಧೀಶರು ಭಾಗವಹಿಸಿದ್ದರು
ಉಡುಪಿ: ನಾಡಿನೆಲ್ಲೆಡೆ ಶುಕ್ರವಾರ ( ಆಷಾಢ ಬಹುಳ ಪಂಚಮೀ) ಮಾಧ್ವಮತಾನುಯಾಯಿಗಳಿಗೆ ಪ್ರಾತಃಸ್ಮರಣೀಯರಲ್ಲಿ ಓರ್ವರಾದ ಶ್ರೀ ಮಜ್ಜಯತೀರ್ಥಾರ್ಯರ (ಟೀಕಾಚಾರ್ಯರ) ಆರಾಧನೋತ್ಸವ ಭಕ್ತಿ ಸಡಗರಗಳಿಂದ ನಡೆದ ವರ್ತಮಾನಗಳು ಬರುತ್ತಿವೆ .
ಮಾಧ್ವ ವೇದಾಂತ ಪರಂಪರೆಯನ್ನು 8 ಶತಮಾನಗಳಿಂದ ಮುನ್ನಡೆಸಿದ ನೂರಾರು ಪ್ರಾತಃಸ್ಮರಣೀಯರಿದ್ದಾರೆ .ಆದರೆ ಅವರೆಲ್ಲರ ಪೈಕಿ ಐವರನ್ನು ಮಹಾಮಹಿಮರೆಂದೇ ಬಣ್ಣಿಸಲಾಗುತ್ತದೆ . ಜಗದ್ಗುರು ಮಧ್ವಾಚಾರ್ಯರು, ಶ್ರೀ ವ್ಯಾಸರಾಜ ತೀರ್ಥರು , ಶ್ರೀ ವಾದಿರಾಜ ತೀರ್ಥರು , ಶ್ರೀ ರಾಘವೇಂದ್ರ ತೀರ್ಥರು , ಹಾಗೂ ಶ್ರೀ ಜಯತೀರ್ಥರೇ ಈ ಪಂಚ ಮಹಾಮಹಿಮರೆನಿಸಿದ್ದಾರೆ .
ಶ್ರೀ ಮಜ್ಜಯತೀರ್ಥರು ಶ್ರೀ ಮಧ್ವಾಚಾರ್ಯರ ಅನುವ್ಯಾಖ್ಯಾನಕ್ಕೆ ಶ್ರೀ ಮನ್ನ್ಯಾಯಸುಧಾವೆಂಬ ವ್ಯಾಖ್ಯಾನ ಕೃತಿಯನ್ನೂ ಸೇರಿ ಅನೇಕ ಕೃತಿರತ್ನಗಳ ಮೂಲಕ ಮಾಧ್ವ ವೇದಾಂತ ಪ್ರಪಂಚವನ್ನು ಶ್ರೀಮಂತವೂ ಧೀಮಂತವೂಗೊಳಿಸಿ ಪರಮಗುರುಗಳಾಗಿದ್ದಾರೆ . ಶ್ರೀ ಮನ್ನ್ಯಾಯಸುಧಾ ಗ್ರಂಥವು ಶ್ರೀ ಮಧ್ವಾಚಾರ್ಯರು ಸ್ಥಾಪಿಸಿದ ತತ್ತ್ವವಾದ ಅಥವಾ ದ್ವೈತ ಸಿದ್ಧಾಂತ ಸುಮೇರು ಸದೃಶ ಗ್ರಂಥಗಳಲ್ಲಿ ಒಂದೆನಿಸಿದ್ದು ಅತ್ಯಂತ ಪೂಜನೀಯ ಸ್ಥಾನವನ್ನೂ ಪಡೆದಿರುವುದು ಶ್ರೀ ಜಯತೀರ್ಥಾರ್ಯರ ವಾಙ್ಮಯ ಶ್ರೇಷ್ಠತೆಗೆ ಸಾಕ್ಷಿಯೂ ಆಗಿದೆ .
ಶ್ರೀ ಜಯತೀರ್ಥ ಗುರುಗಳ ಮೂಲ ವೃಂದಾವನವು ಕಲಬುರ್ಗಿ ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ಕಾಗಿಣಾ ನದೀ ತೀರದಲ್ಲಿದ್ದು ಸಮಸ್ತ ಮಾಧ್ವರಿಗೆ ಇದು ಪವಿತ್ರ ತೀರ್ಥ ಕ್ಷೇತ್ರವಾಗಿದೆ .
ನಾಡಿನ ಅನೇಕ ಕಡೆಗಳಲ್ಲಿ ಶುಕ್ರವಾರ ಶ್ರೀ ಜಯತೀರ್ಥರ ಆರಾಧನೋತ್ಸವ ನಡೆದಿದೆ.
ಉಡುಪಿ ಶ್ರೀ ಮಠದ ರಥಬೀದಿಯಲ್ಲಿರುವ ಶ್ರೀ ಉತ್ತರಾದಿ ಮಠದಲ್ಲಿರುವ ಶ್ರೀ ದಿಗ್ವಿಜಯರಾಮಶ್ರೀ ಮುಖ್ಯಪ್ರಾಣ ಹಾಗೂ ಶ್ರೀ ಜಯತೀರ್ಥರ ಮೃತ್ತಿಕಾ ವೃಂದಾವನ ಸನ್ನಿಧಿಯಲ್ಲೂ ಅತ್ಯಂತ ವೈಭವದದಿಂದ ಆರಾಧನೋತ್ಸವ ನೆರವೇರಿತು . ಬೆಳಿಗ್ಗೆ ವಿವಿಧ ಧಾರ್ಮಿಕ ವಿಧಿವಿಧಾನಗಳು , ವಿಶೇಷ ಅಲಂಕಾರ ಸಹಿತ ಮಹಾಪೂಜೆ , ಪ್ರಸಾದ ವಿತರಣೆ , ಭಜನೆ ಪಾರಾಯಣಾದಿಗಳು ಸಂಪನ್ನಗೊಂಡವು . ಶ್ರೀ ಪರ್ಯಾಯ ಶ್ರೀ ಕೃಷ್ಣಾಪುರ ಮಠಾಧೀಶರಾದ ಶ್ರೀ ವಿದ್ಯಾಸಾಗರತೀರ್ಥ ಶ್ರಿಪಾದರು , ಶ್ರೀ ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥರು ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥರು ಹಾಗೂ ಶ್ರೀ ಶೀರೂರು ಮಠದ ಶ್ರೀ ವೇದವರ್ಧನತೀರ್ಥರು ಆಗಮಿಸಿ ಶ್ರೀ ರಾಮ ಶ್ರೀ ಮುಖ್ಯಪ್ರಾಣದೇವರಿಗೆ ಮತ್ತು ಶ್ರೀ ಜಯತೀರ್ಥರ ವೃದಾವನ ಸನ್ನಿಧಿಗೆ ಮಂಗಳಾರತಿ ಬೆಳಗಿ ಅನುಗ್ರಹ ಸಂದೇಶ ನೀಡಿದರು . ಈ ಎಲ್ಲ ಮಠಾಧೀಶರಿಗೂ ಶ್ರೀ ಉತ್ತರಾದಿ ಮಠದ ವತಿಯಿಂದ ಭಕ್ತಿ ಗೌರವದ ಸಮರ್ಪಣೆಯಾಯಿತು . ನೂರಾರು ಭಕ್ತ ಜನರು ಈ ಸತ್ಕರ್ಮದಲ್ಲಿ ಭಾಗವಹಿಸಿದರು . ಶ್ರೀ ಮಠದ ವ್ಯವಸ್ಥಾಪಕರಾದ ಶ್ರೀ ಪ್ರಕಾಶಾಚಾರ್ಯರು ಹಾಗೂ ಇತರೆ ವಿದ್ವಾಂಸರು ನೇತೃತ್ವವಹಿಸಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ