ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುವ ಆಶಯದ ಬಜೆಟ್

Upayuktha
0

ಕರ್ನಾಟಕ ಬಜೆಟ್ 2023-24 ಗಾತ್ರ 3.27 ಲಕ್ಷಸಾವಿರ ಕೋಟಿ ರೂ.



2023-24ನೇ ಸಾಲಿನಲ್ಲಿ ಒಟ್ಟು 2,50,933 ಕೋಟಿ ರೂಪಾಯಿ ರಾಜಸ್ವ ವೆಚ್ಚ, 54,374 ಕೋಟಿ ಬಂಡವಾಳ ವೆಚ್ಚ ಹಾಗೂ ಸಾಲದ ಮರುಪಾವತಿ 22,441 ಕೋಟಿ ರೂಪಾಯಿ ವೆಚ್ಚ ಒಳಗೊಂಡು, ಒಟ್ಟು ವೆಚ್ಚ 3,27,747 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ನಿನ್ನ ಮಂಡಿಸಿದ 2023-24 ನೇ ಸಾಲಿನ ರಾಜ್ಯ ಬಜೆಟ್ ಚುನಾವಣಾ ಹಂತದಲ್ಲಿ ಘೋಷಿಸಿದ ಐದು ಗ್ಯಾರಂಟಿ ಯೋಜನೆಗಳಿಗೆ ತನ್ನ ಸಂಪೂರ್ಣ ಬದ್ಧತೆಯನ್ನು ಪ್ರದರ್ಶಿಸಿದೆ. ಆರ್ಥಿಕ ಶಿಸ್ತಿನ ಬಜೆಟ್ ಮಂಡನೆಗೆ ಹೆಸರಾಗಿದ್ದ ಸಿದ್ಧರಾಮಯ್ಯ ಈ ಸಲ ರೂ 12500 ಕೋಟಿಯಷ್ಟು ವಿತ್ತೀಯ ಕೊರತೆಯ ಬಜೆಟ್ ಮಂಡಿಸಿದ್ದಾರೆ.

ಐದು ಗ್ಯಾರಂಟಿಗಳಿಗೆ ಹಣ ಹೊಂದಿಸುವ ಜೊತೆಯಲ್ಲೇ ಅಭಿವೃದ್ಧಿ ಕಾರ್ಯಗಳಿಗೂ ಭರಪೂರ ಅನುದಾನ ನೀಡುವ ಕೆಲಸ ಮಾಡಿದ್ದಾರೆ. ತೆರಿಗೆ ಸೋರಿಕೆ ತಡೆಯುವ ಜೊತೆಯಲ್ಲೇ ಮದ್ಯದ ತೆರಿಗೆ ಏರಿಕೆ ಮಾಡುವ ಮೂಲಕ ತೆರಿಗೆ ಸಂಗ್ರಹ ಗುರಿಯನ್ನೂ ಹೆಚ್ಚಿಸಲಾಗಿದೆ.


ಸರ್ವರ ಶಾಂತಿಯ ಆಶಯ

ಸಂಪತ್ತಿನ ಮರುಹಂಚಿಕೆಯ ಮೂಲಕ ಅಭಿವೃದ್ಧಿಗ ಹೊಸ ಭಾಷ್ಯವೊಂದನ್ನು ಬರೆಯುವ ಆಶಯ ಎದ್ದು ಕಾಣುತ್ತದೆ. ಅಭಿವೃದ್ದಿ ಮತ್ತು ಸಾಮಾಜಿಕ ನ್ಯಾಯವನ್ನು ಒಟ್ಟೊಟ್ಟಿಗೆ ಸಾಧಿಸುವ ಮಾತುಗಳನ್ನು ಆಡಲಾಗಿದೆ. ಪ್ರತಿ ಕುಟುಂಬಕ್ಕೆ ತಿಂಗಳಿಗೆ ನಿರ್ಧಿಷ್ಟ ಮೂಲ ಆದಾಯ ಖಾತರಿಪಡಿಸುವ ಯೋಜನೆಗಳ ಮೂಲಕ ಬಡ ಜನರ ಕೈಗೆ ಹೆಚ್ಚು ಹಣ ದೊರಕುವಂತಾಗುತ್ತದೆ ಎಂಬುದು ಬಜೆಟ್ ಆಶಯ. ಐದೂ ಗ್ಯಾರಂಟಿಗಳು ಹೊಸ ಸರಕಾರದ ಮೊದಲ ಬಜೆಟ್ ನ ಕೇಂದ್ರ ಬಿಂದುವಾಗಿವೆ. ಇದರಿಂದ ರಾಜ್ಯದ 1.30 ಕೋಟಿ ಕುಟುಂಬಗಳು ಫಲಾನುಭವಿಗಳಾಗಲಿವೆ. ಈ ಯೋಜನೆಗಳಿಂದ ಪ್ರತೀ ಕುಟುಂಬಕ್ಕೆ ವಾರ್ಷಿಕ 48,000 ದಿಂದ 60,000 ರೂ. ಹೆಚ್ಚುವರಿ ಆರ್ಥಿಕ ನೆರವು ದೊರಕಲಿದೆ.


ಕೃಷಿ ಬಾಗ್ಯ ಯೋಜನೆಯನ್ನು ಮಹಾತ್ಮಾ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯೊಂದಿಗೆ ಸಂಯೋಜಿಸಿ ಮರುಜಾರಿಗೊಳಿಸುವ ಆಶ್ವಾಸನ ಇದೆ. ಕೃಷಿ ಸಂಬಂದಿ ನವೋದ್ಯಮಗಳನ್ನು ಉತ್ತೇಜಿಸುವ “ನಂದಿನಿ” ಮಾದರಿಯಲ್ಲಿ ರೈತರ ಉತ್ಪನ್ನಗಳಿಗೆ  ಏಕೀಕೃತ  ಬ್ರ್ಯಾಂಡಿಗ್ ವ್ಯವಸ್ಥೆ ರೂಪಿಸುವ ಭರವಸೆ ನೀಡಲಾಗಿದೆ. ಐದು ಗ್ಯಾರಂಟಿಗಳಿಗೆ ಸಂಪನ್ಮೂಲ ಹೊಂದಿಸುವ ಭರಾಟೆಯಲ್ಲಿ ನೀರಾವರಿಯಂತಹ ಪ್ರಮುಖ ವಲಯಕ್ಕೆ ಆದ್ಯತೆ ಸಿಕ್ಕದೇ ಇರುವುದು ದುರಂತ. ಆರೋಗ್ಯ, ಶಿಕ್ಷಣ, ಮೂಲ ಸೌಕರ್ಯ ಅಭಿವೃದ್ಧಿಗೂ ಅನುದಾನದ ಪ್ರಮಾಣ ಕಡಿಮೆಯಾಗಿದೆ.


ಈ ಯುಗದಲ್ಲಿ ಬಂಡವಾಳ ಹೂಡಿಕೆಯನ್ನು ಆಕರ್ಶಿಸುವುದು, ಉದ್ಯೋಗಸಹಿತ ಬೆಳವಣಿಗೆಯನ್ನು ಸಾಕಾರಗೊಳಿಸುವುದು ಎಷ್ಟು ಮುಖ್ಯವೋ, ಸಂಪತ್ತಿನ ವ್ಯಾಪಕ ಅಸಮಾನ ಹಂಚಿಕೆಯು ಸೃಷ್ಟಿಸುವ ಬೃಹತ್ ಕಂದರವು ಸಮಾಜದ ಮೇಲೆ ವ್ಯತಿರಿಕ್ತ ಪರಣಾಮ ಬೀರದಂತೆ ನೋಡಿಕೊಳ್ಳುವುದೂ ಅಷ್ಟೇ ಮುಖ್ಯ ಎಂಬ ಪ್ರತಿಪಾದನೆ ಸ್ವಾಗತಾರ್ಹ. ಆರ್ಥಿಕ ಪ್ರಗತಿಯ ಫಲಗಳು ಬಡವರಿಗೆ ಸಹಜವಾಗಿ ಹರಿದು ಬರುತ್ತದೆ (Trickle-down effect) ಎಂಬ ನಂಬಿಕೆ ಹಸಿಯಾದ ಸಂದರ್ಭದಲ್ಲಿ ಬಡವರಿಗೆ ನಗದು ವರ್ಗಾವಣೆ ಹಾಗೂ ಖರೀದಿ ಸಾಮಾರ್ಥ್ಯವನ್ನು ಹೆಚ್ಚಿಸುವ ಮಾರ್ಗವನ್ನು ಕಂಡುಕೊಳ್ಳಬೇಕಾದುದು ಸಹಜವೇ. ಈ ಪ್ರಕ್ರಿಯೆ ಉತ್ಪಾದಕತೆಯ ಹೆಚ್ಚಳವನ್ನು ತಡೆಯದಂತೆ ಎಚ್ಚರ ವಹಿಸುವುದು ಕೂಡಾ ಮುಖ್ಯವಾಗುತ್ತದೆ.


ಕರಾವಳಿಗೇನು ದಕ್ಕಿದೆ?

ರೈತರಿಗೆ ಕೃಷಿ ಉತ್ಪನ್ನ   ಮಾರಾಟಕ್ಕೆ ಪಿಕಪ್ ವಾಹನ ಖರೀದಿಗೆ ನೆರವು, ಮೀನುಗಾರ ಮಹಿಳೆಯರಿಗೆ  ಬಡ್ಡಿರಹಿತ ಸಾಲದ ಮಿತಿ ಹೆಚ್ಚಳ, ಸಸಿಹಿತ್ಲು ಬೀಚಿನಲ್ಲಿ ಅಂತಾರಾಷ್ಟ್ರೀಯ ಸರ್ಫಿಂಗ್ ತಾಣ ಅಭಿವೃದ್ಧಿ, ಪ್ರಸಿದ್ಧ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಏರ್ ಸ್ಟ್ರಿಪ್ ಅಭಿವೃದ್ಧಿ, ಕೊರಗ ಹಾಗೂ ಮಲೆಕುಡಿಯ ಜನಾಂಗಕ್ಕೆ ಪೌಷ್ಠಿಕ ಆಹಾರ ಯೋಜನೆ ಇತ್ಯಾದಿ ಅಂಶಗಳನ್ನು ಬಜೆಟ್ ನಲ್ಲಿ ಪ್ರಕಟಿಸಲಾಗಿದೆ.


ರೂಪಾಯಿಯ ಎಷ್ಟು ಭಾಗ ಯಾವುದರಿಂದ ಮತ್ತು ಯಾವುದಕ್ಕೆ

ರಾಜ್ಯ ತೆರಿಗೆ ಆದಾಯದಿಂದ 54%,ಸಾಲದಿಂದ 20% ಕೇಂದ್ರ ತರಿಗೆಯ ಪಾಲು12%  ಹಾಗೂ ತಲಾ 4% ಕೇಂದ್ರದ ಅನುದಾನ ಮತ್ತು ರಾಜ್ಯ ತೆರಿಗೆಯೇತರ ರಾಜಸ್ವದಿಂದ ಬರಲಿದೆ.    ವೆಚ್ಚದಲ್ಲಿ ಸಾಲಮರುಪಾವತಿಗೆ (18%) ಸಾಮಾನ್ಯ ಸೇವೆಗಳಿಗೆ (17%) ಆರ್ಥಿಕ ಸೇವೆ (15%),  ಕೃಷಿ, ನೀರಾವರಿ, ಗ್ರಾಮೀಣಾಭಿವೃದ್ಧಿ (15%), ಸಮಾಜ ಕಲ್ಯಾಣ( 13% ), ಶಿಕ್ಷಣ (10%), ಆರೋಗ್ಯ (5%) ಸೇವೆಗಳಗೆ ವಿನಿಯೋಗವಾಗಲಿದೆ. ಶಿಕ್ಷಣ ಮತ್ತು ಆರೋಗ್ಯಕ್ಕೆ ನೀಡಲಾದ ಅನುದಾನ ಬಹಳ ಕಡಿಮೆಯೇ ಸರಿ.


ಬೆಂಗಳೂರಿನ ಸಮಗ್ರ ಅಭಿವೃದ್ಧಿಯ ಕನಸಾದ ’ಬ್ರಾಂಡ್ ಬೆಂಗಳೂರು’ ಉಪಕ್ರಮ ಅನುಷ್ಠಾನಕ್ಕಾಗಿ ಒಟ್ಟು 45  ಸಾವಿರ ಕೋಟಿ ರೂಪಾಯಿ ಒದಗಿಸಲಾಗಿದೆ.  ಪ್ರತಿ ಬಜೆಟ್ ನಲ್ಲೂ ಅಬಕಾರಿ ಸುಂಕ ಹೆಚ್ಚು ಮಾಡುವುದು ಮಾಮೂಲಿ. ಆದರೆ ನಿವೇಶನ ಖರೀದಿ ತುಟ್ಟಿಯಾಗುವದು  ಮಧ್ಯಮವರ್ಗಕ್ಕ ಶಾಕ್ ನೀಡಿದೆ. ಬಡ್ಡಿ ರಹಿತ ಸಾಲದ ಮೊತ್ತವನ್ನು 3-5 ಲಕ್ಷಕ್ಕೆ ಏರಿಸಿರುವುದು  ಹಾಗೂ ಮದ್ಯಮಾವಧಿ ಸಾಲದ ಪ್ರಮಾಣವನ್ನು 10-15 ಲಕ್ಷಕ್ಕೆ ಏರಿಸಿರುವುದು ಅಭಿನಂದನೀಯ.  ಆದರೆ ಇದರಿಂದ ಜನರ ಸಾಲದ ವಿಷವರ್ತುಲದಲ್ಲಿ ಬೀಳುವ ಸಾಧ್ಯತೆ ಹೆಚ್ಚು.


ಸಾಲ ಮಾಡುವ ದಾರಿ 

ಸರ್ಕಾರ ನೀಡಿದ ಎಲ್ಲಾ ಭರವಸೆ ಹಾಗೂ ಕೆಲವು ಯೋಜನೆಯನ್ನು ಜಾರಿಗೆ ತರಲು ಆರ್ಥಿಕ ಪರಿಸ್ಥಿತಿಯನ್ನು ಉತ್ತಮವಾಗಿ ನೋಡಿಕೊಳ್ಳುವ ಹಿತ ದೃಷ್ಟಿಯಿಂದ ಮೂರು ಇಲಾಖೆಗಳಿಂದ ತೆರಿಗೆ ಸಂಗ್ರಹಿಸುವ ಗುರಿಯನ್ನು ಹೊಂದಿದ್ದಾರೆ. ತಮ್ಮ ಬಜೆಟ್‌ನಲ್ಲಿ ಈ ಮೂರು ಇಲಾಖೆಗಳಿಂದ 1,62,000ಕೋಟಿ  ರೂ. ತೆರಿಗೆ ಹಣ ಸಂಗ್ರಹದ ಗುರಿಯನ್ನು ನೀಡಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ 1,01,000 ಲಕ್ಷ ಕೋಟಿ ರೂ., ಅಬಕಾರಿ ಇಲಾಖೆಯಿಂದ 26,000 ಕೋಟಿ ರೂ. ಹಾಗೂ ನೋಂದಣಿ ಮತ್ತು ಮುದ್ರಾಂಕ ಇಲಾಖೆಯಿಂದ 25,000 ಕೋಟಿ ರೂ. ತೆರಿಗೆ ಸಂಗ್ರಹ ಗುರಿ ಹೊಂದಿದೆ. ಅಬಕಾರಿ ಸುಂಕ, ನೋಂದಣಿ, ಮುಂದ್ರಾಕ ಶುಲ್ಕ ಹಾಗೂ ವಾಹನ ನೋಂದಣಿ ತೆರಿಗೆಯನ್ನು ಗಣನೀಯವಾಗಿ ಏರಿಸಲಾಗಿದೆ. ಆದರೂ ಕೊರತೆಯನ್ನು ತುಂಬಿಸಲು ಸಾಧ್ಯವಾಗಿಲ್ಲ. ಹೀಗಾಗಿ ಸಾಲ ಹೆಚ್ಚು ಮಾಡುವ ದಾರಿಯನ್ನೇ ರಾಜ್ಯ ಸರಕಾರ ನೆಚ್ಚಿಕೊಂಡಿದೆ.


ಸಾಲ, ತೆರಿಗೆ ಹೆಚ್ಚಳ

ರಾಜ್ಯದ GSDP ಬೆಳವಣಿಗೆ ದರವನ್ನು ಶೇ.13 ರಿಂದ ಶೇ.17ಕ್ಕೆ ಹೆಚ್ಚಿಸುವ ಮೂಲಕ ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯಾಗಿ ಏರಿಸುವ ಗುರಿ ಶ್ಲಾಘನೀಯ. ಇದರೊಂದಿಗೆ ಕೃಷಿ, ಉದ್ಯಮ ಮತ್ತು ಸೇವಾ ವಲಯಗಳ ಸಾಮರ್ಥ್ಯ ವೃದ್ಧಿ, ಮೂಲಸೌಕರ್ಯ ಬೆಂಬಲ, ಅಧಿಕಾರ ಪ್ರತ್ಯಾಯೋಜನೆ, ಆಡಳಿತ ವಿಕೇಂದ್ರೀಕರಣ ಮತ್ತಿತರ ಉಪಕ್ರಮ ಜಾರಿಗೆ ತರಲಾಗುವುದು. ಆದರೆ ಈ ಯಶಸ್ಸು ಮುಂದಿನ ಸಾಲಿನಲ್ಲಿ ಸಂಗ್ರಹವಾಗುವ ತೆರಿಗೆ ಹಾಗೂ ಇನ್ನಿತರ ಸರಕಾರಿ ಆದಾಯದ ಮೇಲೆ ಅವಲಂಬಿಸಿರುತ್ತದೆ. ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ 52,062  ಕೋಟಿ ರೂ.ಗಳನ್ನು ನೀಡಲಾಗಿದೆ. ಜನರ ಇಷ್ಟು ದೊಡ್ಡಮಟ್ಟದ ಋಣ ತೀರಿಸಲು  ಸರಕಾರಕ್ಕೆ 85,818 ಕೋಟಿ ರೂ.ಸಾಲ ಪಡೆಯದೆ ಬೇರೆ ದಾರಿಯಿಲ್ಲ. 


ಈ ಸಾಲಿನ ಬಜೆಟ್ ತಾತ್ಕಾಲಿಕ ಲಾಭವನ್ನು ಕೊಟ್ಟಂತೆ ಭಾಸವಾಗುತ್ತದೆ. ಸಾಲದ ಹೊರೆ ಮತ್ತು ತೆರಿಗೆಯ ಬರೆಯ ಅನಿವಾರ್ಯ ಬಜೆಟ್ ಇದಾಗಿದೆ ಎಂದರೆ ತಪ್ಪಾಗಲಾರದು. ಸದ್ಯದ ಗ್ಯಾರಂಟಿ ಜಾರಿಯ ಅನಿವಾರ್ಯ ಸ್ಥಿತಿಯಲ್ಲಿ ದೂರಗಾಮಿ ಪರಿಣಾಮ ಬೀರುವಂತಹ ದೀರ್ಘಾವಧಿ ಯೋಜನೆಗಳ ಬರ ಈ ಬಜೆಟ್ ನ ದೊಡ್ಡ ಕೊರತೆಯೇ ಸೈ. ಅಭಿವೃದ್ಧಿಗಾಗಿ ಮೀಸಲಿಡಬೇಕಾದ ಸಂಪನ್ಮೂಲವನ್ನು ಅಪಾತ್ರರಿಗೆ ದಾನ ಮಾಡಬಾರದು ಹಾಗೂ ಉಳ್ಳವರು ಕೈನೀಡಬಾರದು ಎಂಬ ನೈತಿಕ ಮೌಲ್ಯವನ್ನು ಎತ್ತಿಹಿಡಿಯಬೇಕಾದ ಅನಿವಾರ್ಯತೆ ಇದೆ.


 

- ಡಾ.ಎ.ಜಯ ಕುಮಾರ ಶೆಟ್ಟಿ

ನಿವೃತ್ತ ಪ್ರಾಂಶುಪಾಲರು

ಶ್ರೀ.ಧ.ಮಂ.ಕಾಲೇಜು, ಉಜಿರೆ

ajkshetty@gmail.com

9448154001


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  


Post a Comment

0 Comments
Post a Comment (0)
To Top