ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸುತ್ತಾ ಧ್ವನಿಯಿಲ್ಲದ ಸಮುದಾಯಗಳಿಗೆ ಧ್ವನಿ ಒದಗಿಸುವ ಪರಿಣಾಮಕಾರಿ ಮಾಧ್ಯಮವಾಗಿವೆ ಸಮುದಾಯ ಬಾನುಲಿಗಳು. ಇದು ನಿಜವಾದ ಅರ್ಥದಲ್ಲಿ ಜನರಿಗಾಗಿ ಜನರಿಂದಲೇ ನಡೆಸಲ್ಪಡುವ ಜನರ ಬಾನುಲಿ. ಸಮಾಜದ ಮುಖ್ಯವಾಹಿನಿಗಳಿಂದ ದೂರ ಉಳಿದಿರುವ ಸಮುದಾಯಗಳಿಗೂ ಒಂದು ಧ್ವನಿಯಿದೆ, ಅನುಭವವಿದೆ. ಅವುಗಳನ್ನು ಇತರರೊಂದಿಗೆ ಸಮರ್ಥವಾಗಿ ಹಂಚಿಕೊಳ್ಳಲು ಸಮುದಾಯ ಬಾನುಲಿ ಸಹಕಾರಿ.
ಕೇಂದ್ರ ಸರ್ಕಾರವು ಇತ್ತೀಚಿನ ವರ್ಷಗಳಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಕೇಂದ್ರಗಳನ್ನು ಹೊಸದಾಗಿ ಆರಂಭಿಸುತ್ತಿಲ್ಲ. ಈ ಎರಡು ಮಾಧ್ಯಮಗಳು ಮಾಡಬೇಕಾದ ಕೆಲಸಗಳನ್ನು ಖಾಸಗಿ ಬಾನುಲಿ ಮತ್ತು ಟಿವಿ ಚಾನೆಲ್‌ಗಳಿಗೆ ಕೊಡುವುದರೊಂದಿಗೆ ಹೆಚ್ಚಿನ ಜವಾಬ್ದಾರಿ ನೀಡಲಾಗಿದೆ. ಅಲ್ಲದೆ, ಬಾನುಲಿ ಕ್ಷೇತ್ರದಲ್ಲಿ ಸಮುದಾಯ ಬಾನುಲಿಗಳು ಮತ್ತು ಮೆಟ್ರೋ ಮಹಾನಗರಗಳಿಗೆ ಕಮರ್ಷಿಯಲ್ ಎಫ್ ಎಂ ಕೇಂದ್ರಗಳನ್ನು ಆರಂಭಿಸಿ ಜನರ ಬೇಡಿಕೆಗಳನ್ನು ಪೂರೈಸಲು ಕೇಂದ್ರ ಸರ್ಕಾರ ಅನುಮತಿ ನೀಡುತ್ತಾ ಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಬಹುತೇಕ ಜಿಲ್ಲೆಗಳಲ್ಲಿ ಶಿಕ್ಷಣ ಸಂಸ್ಥೆಗಳು ಮತ್ತು ಸರ್ಕಾರೇತರ ಸಂಸ್ಥೆಗಳು (ಎನ್.ಜಿ.ಒ)ಗಳು ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸಮುದಾಯ ಬಾನುಲಿಗಳನ್ನು ಆರಂಭಿಸಿವೆ. ಇಡೀ ದೇಶದಲ್ಲಿ 439ಕ್ಕೂ ಹೆಚ್ಚು ಸಮುದಾಯ ಬಾನುಲಿಗಳಿದ್ದರೆ ಕರ್ನಾಟಕದಲ್ಲಿ ಸುಮಾರು 24 ಸಮುದಾಯ ಬಾನುಲಿಗಳು ಕಾರ್ಯನಿರ್ವಹಿಸುತ್ತಿವೆ.
ಸ್ವತಃ ಸುದ್ದಿ ಸಂಗ್ರಹಿಸಿ ಮಾಡಬಹುದಾದ ವಾರ್ತೆಗಳ ಪ್ರಸಾರವೊಂದನ್ನು ಬಿಟ್ಟು ಉಳಿದೆಲ್ಲ ವಿಷಯಗಳನ್ನು ಸಮುದಾಯ ಬಾನುಲಿಗಳು ಪ್ರಸಾರ ಮಾಡುತ್ತವೆ. ಅಂದರೆ ಸ್ಥಳೀಯರ ಸಹಭಾಗಿತ್ವದಲ್ಲಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ನಿಯಮಾವಳಿ ಅನುಸಾರ ಶಿಕ್ಷಣ, ಆರೋಗ್ಯ, ಕೃಷಿ, ಕಲೆ, ಸಾಹಿತ್ಯ, ಕ್ರೀಡೆ, ಸಾಂಸ್ಕೃತಿಕ ಹಾಗೂ ಮನರಂಜನೆಯ ಕಾರ್ಯಕ್ರಮಗಳನ್ನು ಇವು ಪ್ರಸಾರ ಮಾಡುತ್ತಿವೆ. ವಿಶೇಷವಾಗಿ ಸರ್ಕಾರದ ವಿವಿಧ ಇಲಾಖೆಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲು ಒತ್ತುಕೊಡುತ್ತಾ ಬಂದಿವೆ. ಕರ್ನಾಟಕ ಸರಕಾರದ ಪ್ರಾಯೋಜಕತ್ವದಲ್ಲಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಯೋಜನೆಗಳ ಕುರಿತಾಗಿ ಕಾರ್ಯಕ್ರಮಗಳನ್ನು ಸತತ ಕೆಲವು ವರ್ಷಗಳಿಂದ ಪ್ರಸಾರ ಮಾಡಿದ ಉದಾಹರಣೆಯೂ ಇದೆ. ಆದರೆ ದುರದೃಷ್ಟಕರ ಸಂಗತಿ ಎಂದರೆ ಪ್ರಾದೇಶಿಕ ಮಟ್ಟದಲ್ಲಿ ಮಾಡುವ ಸಮುದಾಯದ ಅಭಿವೃದ್ಧಿಪರವಾಗಿರುವ ಸಮುದಾಯ ಬಾನುಲಿಯ ಕಾರ್ಯಗಳಿಗೆ ಸರಕಾರದ ನೆರವು ನಿರಂತರವಾಗಿ ಸಿಗುತ್ತಿಲ್ಲ.
ಸಮುದಾಯ ಬಾನುಲಿಗಳನ್ನು ಬೆಳೆಸಬೇಕೆನ್ನುವುದು ಕೇಂದ್ರ ಸರ್ಕಾರದ ಆಶಯ. ಅನೇಕ ಬಾರಿ ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದು ಸ್ಥಳೀಯ ಸಮುದಾಯ ಬಾನುಲಿಗಳನ್ನು ಉತ್ತೇಜಿಸಲು ಆರ್ಥಿಕ ಬಲ ತುಂಬುವ ವಿಶೇಷ ಪ್ರಾಜೆಕ್ಟ್ಗಳನ್ನು ನೀಡಬೇಕೆಂದು ಸೂಚಿಸಿದ್ದಿದೆ. ಆದರೆ ಕೇಂದ್ರ ಸರ್ಕಾರದ ಈ ಮನವಿಗೆ ರಾಜ್ಯ ಸರ್ಕಾರಗಳು ಇನ್ನೂ ಮಾನ್ಯ ಮಾಡದಿರುವುದು ವಿಷಾದದ ಸಂಗತಿ. ರಾಜ್ಯದ ಗ್ರಾಮೀಣ ಪ್ರದೇಶಗಳ ಸಮುದಾಯ ಅಭಿವೃದ್ಧಿ ಕಾರ್ಯಗಳಿಗೆ ಮಾಹಿತಿಯನ್ನು ಒದಗಿಸುವ ಉದ್ದೇಶದಿಂದ ಆರಂಭಿಸಲಾಗಿದ್ದ 'ನಮ್ಮ ಬಾನುಲಿ' ಯೋಜನೆಯನ್ನೂ ಇತ್ತೀಚಿನ ವರ್ಷಗಳಲ್ಲಿ ಸ್ಥಗಿತಗೊಳಿಸಲಾಗಿದ್ದು ಇದನ್ನು ಮರುಪರಿಶೀಲಿಸುವ ಅಗತ್ಯವಿದೆ. ವಾರ್ಷಿಕ ಮಾಧ್ಯಮ ಯೋಜನೆಯಲ್ಲಿ ಸಮುದಾಯ ಬಾನುಲಿಗಳನ್ನು ಸೇರಿಸುವ ಮೂಲಕ ಅವುಗಳ ಸೇವೆಯನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಗೆ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ಆದೇಶ ಬಂದು ಒಂದು ವರ್ಷ ಕಳೆದರೂ ರಾಜ್ಯ ಸರಕಾರ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಇತರ ಮಾಧ್ಯಮಗಳಿಗೆ ನೀಡುವ ಸರಕಾರಿ ಜಾಹೀರಾತುಗಳನ್ನೂ ನೀಡುತ್ತಿಲ್ಲ, ಈ ಬಾರಿಯಾದರೂ ರಾಜ್ಯ ಸರಕಾರ ಧ್ವನಿಯಿಲ್ಲದವರಿಗೆ ಧ್ವನಿ ನೀಡುವ ಸಮುದಾಯ ಬಾನುಲಿಗಳಿಗಾಗಿ ಸೂಕ್ತ ಯೋಜನೆಗಳನ್ನು ರೂಪಿಸುವ ಅಗತ್ಯವಿದೆ. ಆದ್ದರಿಂದ ರಾಜ್ಯ ಸರ್ಕಾರವು ತನ್ನ ಬಜೆಟ್‌ನಲ್ಲಿ ಒತ್ತುನೀಡಿ ಸಮುದಾಯ ಬಾನುಲಿಗಳ ಕಾರ್ಯವನ್ನು ಉತ್ತೇಜಿಸಬೇಕಿದೆ. ಸರಕಾರದ ಎಲ್ಲಾ ಯೋಜನೆಗಳನ್ನು ಸ್ಥಳೀಯ ಸಮುದಾಯಕ್ಕೆ ತಲುಪಿಸುತ್ತಿರುವ ಸಮುದಾಯ ಬಾನುಲಿಗಳ ಸೇವೆಯನ್ನು ಪರಿಗಣಿಸಿ ಅಭಿವೃದ್ಧಿಯ ಕನಸನ್ನು ನನಸಾಗಿಸಬೇಕಿದೆ.
-ಡಾ. ರಶ್ಮಿ ಅಮ್ಮೆಂಬಳ
ಸ್ಥಾಪಕಾಧ್ಯಕ್ಷರು,
ಕರ್ನಾಟಕ ಸಮುದಾಯ ಬಾನುಲಿ ಕೇಂದ್ರಗಳ ಸಂಘ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ