ಹೊಸ ಪ್ರಯೋಗ: ಸೀನ್ ಸೀನರಿಯ ಯಕ್ಷನಾಟಕ ವೈಭವ

Upayuktha
0

ಮಂಗಳೂರು: ಕರಾವಳಿಯ ಜಾನಪದ ಕಲೆಗಳಲ್ಲಿ ಒಂದಾಗಿರುವ ಯಕ್ಷಗಾನದಲ್ಲಿ ಹೊಸ ಹೊಸ ಪ್ರಯೋಗಗಳು ಹೊಸತಲ್ಲ. ಪ್ರತಿಯೊಂದು ಪ್ರಯೋಗಗಳು ಒಂದಕ್ಕಿಂತ ವಿಭಿನ್ನ, ಯಶಸ್ವಿಯೂ ಆಗಿದೆ. ಅದಕ್ಕೀಗ ಹೊಸ ಸೇರ್ಪಡೆ ಸೀನ್ ಸೀನರಿಯ ಯಕ್ಷನಾಟಕ ವೈಭವ.


ಯಕ್ಷಗಾನದ ಇತಿಹಾಸದಲ್ಲಿ ಸುಮಾರು 60 ವರ್ಷಗಳ ಹಿಂದೆ ಟೆಂಟ್ ಮೇಳವಾದ ಕರ್ನಾಟಕ ಯಕ್ಷಗಾನ ನಾಟಕ ಸಭಾವೂ ನಳದಮಯಂತಿ (100 ಪ್ರದರ್ಶನ), ಶ್ವೇತಕುಮಾರ ಚರಿತ್ರೆ ಸೇರಿದಂತೆ ಹಲವು ಪ್ರಸಂಗಗಳನ್ನು ಸೀನ್ ಸೀನರಿಯಾ ಯಕ್ಷನಾಟಕ ಪ್ರದರ್ಶನ ಮೂಲಕ ಪ್ರದರ್ಶಿಸಿ ಮನೆಮಾತಾಗಿತ್ತು. ಅದೇ ಮಾದರಿಯಲ್ಲಿ ಸೋಮವಾರ ಮಂಗಳೂರಿನ ಪುರಭನದಲ್ಲಿ ಪ್ರದರ್ಶನವಾದ ‘ಶ್ವೇತಕುಮಾರ ಚರಿತ್ರೆ’ ಪ್ರೇಕ್ಷಕರ ಮನಸೂರೆಗೊಳಿಸುವಲ್ಲಿ ಯಶಸ್ವಿಯಾಯಿತು. ಬಿರುಸಿನ ಮಳೆಯ ಮಧ್ಯೆಯೂ ಸುಮಾರು 3 ಗಂಟೆಗಳ ಕಾಲ ಪ್ರದರ್ಶನಗೊಂಡ ಯಕ್ಷನಾಟಕದಲ್ಲಿ ಪ್ರೇಕ್ಷಕರು ತುಂಬಿ ತುಳುಕಿದ್ದರು.


ಏನಿದು ಸೀನ್ ಸೀನರಿ?: ಯಕ್ಷಗಾನದಲ್ಲಿ  ಹಿಮ್ಮೇಳ, ಪಾತ್ರಧಾರಿಗಳ ವಿಶ್ಲೇಷಣೆ ಸನ್ನಿವೇಶವನ್ನು ಪ್ರಸ್ತುತಪಡಿಸಿದರೆ, ಸೀನ್ ಸೀನರಿಯ ಯಕ್ಷನಾಟಕದಲ್ಲಿ ಪ್ರತಿಯೊಂದು ದೃಶ್ಯಗಳು ಆಯಾಯ ಸನ್ನಿವೇಶಕ್ಕೆ ತಕ್ಕಂತೆ ಗಮನಸೆಳೆಯುತ್ತವೆ. ಇಡೀ ಯಕ್ಷನಾಟಕದಲ್ಲಿ ಕೈಲಾಸ, ಅಂತಃಪುರ, ಅರಮನೆ, ಕಾಡು, ಯುದ್ಧಭೂಮಿ, ಯಮಲೋಕ, ಸ್ಮಶಾನ, ರಾಜ ಬೀದಿ ದೃಶ್ಯಗಳು ಇಡೀ ಯಕ್ಷನಾಟಕದ ವೈಭವವನ್ನು ತೆರೆದಿಟ್ಟಿದೆ. ಪ್ರತಿಯೊಂದು ದೃಶ್ಯಗಳು ಕ್ಷಣಕ್ಷಣಕ್ಕೂ ಪ್ರೇಕ್ಷಕನ ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ದೃಶ್ಯಕ್ಕೆ ತಕ್ಕುದಾದಂತಹ ಬೆಳಕಿನ ವೈಭವ, ಸ್ಮೋಕ್ ದೃಶ್ಯಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ.


ಯಕ್ಷಗಾನದಲ್ಲಿ ಹಿಮ್ಮೇಳದವರು ರಂಗಸ್ಥಳದಲ್ಲಿದ್ದರೆ, ಯಕ್ಷನಾಟಕದಲ್ಲಿ ವೇದಿಕೆಯ ಮುಂಭಾಗ ಕುಳಿತಿರುತ್ತಾರೆ. ಯಕ್ಷಗಾನದಲ್ಲಿ ಪ್ರವೇಶ, ನಿರ್ಗಮನ ಎರಡು ದ್ವಾರಗಳಿದ್ದರೆ, ಯಕ್ಷನಾಟಕದಲ್ಲಿ ಅಷ್ಟದ್ವಾರಗಳಿದ್ದು ಸನ್ನಿವೇಶಕ್ಕೆ ತಕ್ಕಂತೆ ಅದನ್ನು ಬಳಸಲಾಗಿದೆ. ಕಿರೀಕ್ಕಾಡು ವಿಷ್ಣುಭಟ್ ಅವರ ಶ್ವೇತಕುಮಾರ ಚರಿತ್ರೆ ಪ್ರಸಂಗಕ್ಕೆ ಹಿಮ್ಮೇಳದಲ್ಲಿ ಸಂಗೀತ ಸುಧೆ ಹರಿಸಿದ ಭಾಗವತಿಕೆ, ಮದ್ದಳೆ ಹಾಗೂ ತಬಲಾ, 2 ಚೆಂಡೆ, ಕೊಳಲು ಸೀನ್ ಸೀನರಿಯ ಯಕ್ಷನಾಟಕ ವೈಭವ ಹೆಚ್ಚಿಸಿದೆ. ಶೃಂಗಾರ ರಸಧಾರೆಯ ನಾಟ್ಯ ವೈಭವ, ಸಕಾಲಿಕ ಹಾಸ್ಯ, ಆಶು ಸಾಹಿತ್ಯ ಕ್ಷಣಕ್ಷಣಕ್ಕೂ ಬದಲಾಗುತ್ತಿರುವ ದೃಶ್ಯಗಳು ಹೊಸತನವನ್ನು ತೆರೆದಿಟ್ಟವು.


ಕದ್ರಿ ನವನೀತ ಶೆಟ್ಟಿಯವರ ಪರಿಕಲ್ಪನೆ, ರಕ್ಷಿತ್ ಶೆಟ್ಟಿ ಪಡ್ರೆಯವರ ನಿರ್ದೇಶನ, ಲಾವಣ್ಯ ವಿಶ್ವಾಸ್‌ಕುಮಾರ್ ನಿರ್ಮಾಣ-ನಿರ್ವಹಣೆಯಲ್ಲಿ ಎಸ್‌ಡಿಎಂ ಲಾ ಕಾಲೇಜು, ನಿಟ್ಟೆ ಕಾಲೇಜಿನ ವಿದ್ಯಾರ್ಥಿಗಳು, ಆಳ್ವಾಸ್‌ನ ಉಪನ್ಯಾಸಕಿ ಸೇರಿದಂತೆ ವಿದ್ಯಾರ್ಥಿ ಕಲಾವಿದರ ಅಭಿನಯ ಶ್ಲಾಘನೀಯವಾದುದು. ತಸ್ಮೈ ಕೊಡಿಯಾಲ್‌ಬೈಲ್ ಬೆಳಕಿನ ವ್ಯವಸ್ಥೆ, ರಂಜನ್ ದಿವ್ಯ ಜ್ಯೋತಿ ಅವರ ಧ್ವನಿವರ್ಧಕ ವ್ಯವಸ್ಥೆ ನಾಟಕದ ಸೊಬಗನ್ನು ಹೆಚ್ಚಿಸಿದವು.

- ಕದ್ರಿ ನವನೀತ ಶೆಟ್ಟಿ


 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top