ಸಾಹಿತ್ಯ ಲೋಕ: ಗ್ರಾಮೀಣ ಸೊಗಡಿನ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್

Upayuktha
0


ಪ್ಪಟ ಗ್ರಾಮೀಣ ಪ್ರತಿಭೆಯಾದ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರು ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ಮಹನೀಯರಲ್ಲಿ ಒಬ್ಬರು. ಅವರು ಗ್ರಾಮೀಣ ಬದುಕಿನ ಸಮಗ್ರ ದರ್ಶನವನ್ನು ತಮ್ಮ ಸಾಹಿತ್ಯದ ಮೂಲಕ ಕಟ್ಟಿಕೊಟ್ಟಿದ್ದಾರೆ ಅದೇ ಊರಿನ ಗೊರೂರರ ನಂತರದ ತಲೆಮಾರಿನ ಸಾಹಿತಿ ಗೊರೂರು ಅನಂತರಾಜು. ಡಾ. ರಾಮಸ್ವಾಮಿ ಅಯ್ಯಂಗಾರ್ ಅವರು ತಮ್ಮ ಊರಾದ ಗೊರೂರಿನ ಜೀವನವನ್ನು ತಮ್ಮ ಸಾಹಿತ್ಯದ ಒಂದು ಭಾಗವಾಗಿಸಿಕೊಂಡು ಗೊರೂರಿಗೆ ಒಂದು ವಿಶಿಷ್ಟ ಸ್ಥಾನವನ್ನೇ ಜನಮಾನಸದಲ್ಲಿ ಸೃಷ್ಟಿಸಿದರು. ಆದ್ದರಿಂದಲೇ ಗೊರೂರು ಎಂದರೇ ರಾಮಸ್ವಾಮಿ ಅಯ್ಯಂಗಾರ್ ಎನ್ನುವ ತಾದಾತ್ಮ್ಯವನ್ನು ಕಾಣಬಹುದು. ಅವರ ಅಭಿಮಾನಿಗಳು 1973ರಲ್ಲಿ `ಗೊರೂರು ಗೌರವ ಗ್ರಂಥ’ವನ್ನು ಅರ್ಪಿಸಿದ್ದಾರೆ. ಡಾ. ಗೊರೂರರ ಬಗ್ಗೆ ಅದೇ ಊರಿನವರಾದ ಗೊರೂರು ಸೋಮಶೇಖರರವರು ತಮ್ಮ `ಗೊರೂರು... ನೆನಪುಗಳು’ ಎಂಬ ಪುಸ್ತಕದಲ್ಲಿ ಅವರನ್ನು ನೆನಪಿಸಿಕೊಳ್ಳುತ್ತಾ ಅವರನ್ನು ಒಂದು ಪಾತ್ರದಂತೆ ನಿರೂಪಿಸಿದ್ದಾರೆ. ಬೇರೆಬೇರೆ ಸಂದರ್ಭಗಳಲ್ಲಿ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಮತ್ತು ಬರಹಗಳ ಬಗ್ಗೆ ಪ್ರಬಂಧ, ಲೇಖನಗಳು ಬಂದಿವೆಯಾದರೂ ಚೇತನ ಸಾಹಿತ್ಯ ಕಲಾ ಸಾಧಕರ ಮಾಲೆಯಲ್ಲಿ ಪ್ರಕಟವಾಗುತ್ತಿರುವ ಗೊರೂರು ಅನಂತರಾಜುರವರ ಪುಸ್ತಕ `ಗ್ರಾಮೀಣ ಸೊಗಡಿನ ಸಾಹಿತಿ ಗೊರೂರು ರಾಮಸ್ವಾಮಿ ಅಯ್ಯಂಗಾರ್’ ಹೆಚ್ಚು ಗಮನ ಸೆಳೆಯುತ್ತದೆ.


ಇದಕ್ಕೆ ಮೊದಲು ತಮ್ಮದೇ ಊರಿನ ಸುಪ್ರಸಿದ್ಧ ಹಿರಿಯ ಸಾಹಿತಿ ಡಾ. ಗೊರೂರರ ಬಗ್ಗೆ ವಿಶೇಷ ಗೌರವಾಭಿಮಾನವನ್ನು ಹೊಂದಿರುವ ಲೇಖಕರು ಸಹ ಸಾಹಿತ್ಯಾಭಿಮಾನಿಗಳೊಂದಿಗೆ ಡಾ. ಗೊರೂರು ಸ್ಮರಣ ಸಮಿತಿಯನ್ನು ರಚಿಸಿಕೊಂಡು1991ರಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಡಾ. ಗೊರೂರರ ಬದುಕು ಮತ್ತು ಬರಹ ಕುರಿತಂತೆ ಪ್ರಬಂಧವನ್ನು ಮಂಡಿಸಿದ್ದಾರೆ. 11ನೇ ಹಾಸನ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ಪ್ರಕಟಿಸಿದ `ಸಾರಸ್ವತ ಲೋಕದ ದಿಗ್ಗಜರು’ಕೃತಿಯಲ್ಲಿ  ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಬದುಕು ಬರಹ ಕುರಿತಂತೆ  ಲೇಖನವನ್ನು ಬರೆದಿದ್ದಾರೆ. ಇದಲ್ಲದೇ ಡಾ. ಗೊರೂರು ಮತ್ತು ಇತರ ಲೇಖನಗಳು ಕೃತಿಯನ್ನೂ ಪ್ರಕಟಿಸಿದ್ದಾರೆ. ಈ ಹಿನ್ನೆಲೆಯಲ್ಲಿ  ಸುಮಾರು78 ಪುಟಗಳ ಈ ಕಿರುಹೊತ್ತಿಗೆಯಲ್ಲಿ ಲೇಖಕರು ಮಹಾನ್ ಸಾಹಿತ್ಯ ದಿಗ್ಗಜರಾದ ಡಾ. ಗೊರೂರರ ಬದುಕಿನ ಪ್ರಮುಖ ಘಟ್ಟಗಳು, ವಿಶೇಷ ಪ್ರಸಂಗಗಳು, ಎದುರಾದ ನೋವು ನಲಿವುಗಳು, ಜೀವನಾದರ್ಶ, ಬರಹಗಳ ವೈವಿದ್ಯಗಳು, ಪ್ರಬಂಧಗಳು, ಕಥೆಗಳು, ಕಾದಂಬರಿಗಳು, ಜನಪದ ಸಾಹಿತ್ಯ, ಪ್ರವಾಸ ಕಥನ, ಜೀವನ ಚಿತ್ರಗಳು..... ಎಲ್ಲವನ್ನೂ ಅಡಕಗೊಳಿಸಿದ್ದಾರೆ. 


ತಾ. 4-7-1904ರಲ್ಲಿ ಜನಿಸಿದ ಗೊರೂರಿನಲ್ಲಿ ಜನಿಸಿದ ಡಾ. ಗೊರೂರರು ಹೇಮಾವತಿ ತೀರದ ಗಾಂಧಿ ಎಂದು ಹೆಸರಾದವರು. 13 ಮಕ್ಕಳಲ್ಲಿ ಒಬ್ಬರಾದ ಗೊರೂರರು ಹೈಸ್ಕೂಲಿನವರಗೆ ಮಾತ್ರ ವಿದ್ಯಾಭ್ಯಾಸ ಮಾಡಿದ್ದು ಅವರು ಶಾಲೆಯಲ್ಲಿ ಕಲಿತದ್ದಕ್ಕಿಂತ ಜೀವನದಲ್ಲಿ ಕಲಿತಿದ್ದೇ ಹೆಚ್ಚು. ದೇಶಸೇವೆಗೆ ಸಂಬಂಧಿಸಿದ ಅನೇಕ ಕೆಲಸಗಳನ್ನು ಮಾಡುತ್ತಾ ಅನುಭವವನ್ನು ಗಳಿಸಿದ್ದು ಅವರ ವೈಶಿಷ್ಟ್ಯ. `ಗೊರೂರರಿಗೆ ಹುಟ್ಟುತ್ತಾ ಒಂದು ವ್ಯಕ್ತಿತ್ವ ಇದ್ದರೆ ಬೆಳೆಯುತ್ತಾ ಆ ವ್ಯಕ್ತಿತ್ವ ಮತ್ತೊಂದು ಆಯಾಮವನ್ನು ಪಡೆದುಕೊಳ್ಳುತ್ತದೆ. ಅದು ಅವರ ಗಾಂಧಿ ಜೀವನ ಚಿಂತನೆ..... ‘ಎಂದು ಪ್ರಾರಂಭಿಸುತ್ತಾ ಗಾಂಧೀಜಿಯವರಿAದ ಗೊರೂರರು ಪ್ರಭಾವಿತರಾಗಿದ್ದು ಹಾಗೂ ಗಾಂಧೀಜಿಯವರೊಡನೆ ಗೊರೂರರ ಒಡನಾಟವನ್ನು ಸಂಕ್ಷಿಪ್ತವಾಗಿ ತೆರೆದಿಡುತ್ತಾರೆ. 


ಸಾಹಿತಿಗಳ ಒಡನಾಟದಲ್ಲಿ ಬದುಕು ಬರಹದ ವಿಕಾಸ ಎಂಬ ವಿಭಾಗದಲ್ಲಿ ಗೊರೂರರು ತಮ್ಮ ವ್ಯಕ್ತಿಚಿತ್ರಗಳ ಸಂಗ್ರಹ `ರಸಫಲ’ಕೃತಿಯಲ್ಲಿ ತಮಗೆ ಚಿರಪರಿಚಿತರಾದ 29 ವ್ಯಕ್ತಿಗಳ ಪರಿಚಯದ ಬಗ್ಗೆ ಬರೆಯುತ್ತಾರೆ. ಅವರಲ್ಲಿ ದೇವತಾ ಮನುಷ್ಯರೆಂದು ಪರಿಚಯಿಸುವ ಟಿ. ಎಸ್. ವೆಂಕಣ್ಣಯ್ಯನವರ ಬಗ್ಗೆ ಹೇಳುತ್ತಾ ಅವರ ಹೆಚ್ಚು ಪರಿಚಯದ ಸೌಭಾಗ್ಯವನ್ನು ಹೊಂದಿದವರ ಪೈಕಿ ನಾನೂ ಒಬ್ಬ ಎಂದು ಹರ್ಷಿಸುತ್ತಾರೆ. `ಆ ಕಾಲದಲ್ಲಿ ಪ್ರಬುದ್ಧ ಕರ್ನಾಟಕಕ್ಕೆ ಹೆಚ್ಚು ಲೇಖನಗಳನ್ನು ಬರೆಯುತ್ತಿದ್ದೆ. ಒಂದು ಸಲ ಕೃಷ್ಣಶಾಸ್ತ್ರಿಗಳು ವಿನೋದವಾಗಿ `You are bread for ಪ್ರಬುದ್ಧ ಕರ್ನಾಟಕ’ ಎಂದು ವೆಂಕಣ್ಣಯ್ಯ ಹೇಳುತ್ತಾನೆ. ಚಟ್ನಿ, ಉಪ್ಪಿನ ಕಾಯಿ, ಬಾಳಕ, ಹಪ್ಪಳ, ಪಾಯಸ, ಚಿರೋಟಿ ಯಾರದು ಬೇಕಾದರೂ ಇರಬಹುದು. ಅನ್ನವಂತೂ ಬೇಕೇಬೇಕಷ್ಟೇ.’ ಎಂದರು ಎಂದು ಹೇಳುತ್ತಾ `ನನ್ನ ಕೃತಿಗಳು ಇನ್ನೂ ಉತ್ತಮವಾಗಿರಬೇಕೆಂಬ ಉದ್ದೇಶದಿಂದಲೂ ಅವರು ಹಾಗೆ ಹೇಳಿರಬಹುದು’ ಎಂದು ಅರ್ಥೈಸಿ ಗೊರೂರರು ತಮ್ಮ ಸರಳತೆಯಿಂದ ಶ್ಲಾಘನೀಯರಾಗುತ್ತಾರೆ.   ಡಿ.ಎಲ್.ಎನ್.ರವರ ಪುಣ್ಯಸ್ಮರಣೆ, `ಕನ್ನಡಕ್ಕೊಬ್ಬನೇ ಕೈ’ ಎಂಬ ಬರಹವಾದ ಕೈಲಾಸಂ ಬಗೆಗಿನ ಲೇಖನ, ಪು.ತಿ.ನ., ರಾಜರತ್ನಂ, ಇವರನ್ನು   ಬಾಲ್ಯದಿಂದಲೂ ಕಂಡಿದ್ದ ಗೊರೂರರು ಡಾ. ಬಿ.ಜಿ.ಎಲ್. ಸ್ವಾಮಿಯವರ ಬಗ್ಗೆ ಸೇರಿದಂತೆ  ಎಲ್ಲರನ್ನೂ ಬಹಳ ಆಪ್ತತೆಯಿಂದ ಪರಿಚಯಿಸುತ್ತಾರೆ. 1930-31ರಲ್ಲಿ ಸಿದ್ಧಗಂಗಾ ಕ್ಷೇತ್ರಕ್ಕೆ ಭೇಟಿ ನೀಡಿದ ಬಗ್ಗೆ ಹೀಗೆ ಬರೆಯುತ್ತಾರೆ. ‘ಆಗ ತಾನೇ  ಡಾ. ಶ್ರೀ ಶಿವಕುಮಾರಸ್ವಾಮಿಯವರು ಪಟ್ಟಾಭಿಷಿಕ್ತರಾಗಿರುತ್ತಾರೆ. ಆಗ ಸಿದ್ದಗಂಗಾ ಕ್ಷೇತ್ರದ ಮಠ ಇನ್ನೂ ಚಿಕ್ಕದಾಗಿತ್ತು. ನಾವು ಹೋದ ಕೂಡಲೇ ಸ್ವಾಮಿಗಳು ನಮಗೆ ದರ್ಶನವನ್ನು ದಯಪಾಲಿಸಿದರು.  ಇವರು ನಿಜವಾಗಿ ಒಳ್ಳೆಯ ಸ್ವಾಮಿಗಳಾಗುತ್ತಾರೆ. ಈ ಕ್ಷೇತ್ರವನ್ನು ಬೆಳಗುತ್ತಾರೆ. ಇವರಿಂದ ಈ ಸುತ್ತಲ ಪ್ರಾಂತ, ಅಮೃತ ಸೇಚನವನ್ನು, ಜ್ಞಾನ ಗಂಗೋತ್ರಿಯನ್ನು ಪಡೆಯುತ್ತದೆ’ ಎಂಬ ನಂಬಿಕೆ ನಮ್ಮಲ್ಲಿ ದೃಢವಾಯಿತು.....’ ಎನ್ನುವುದನ್ನು ರಸಫಲಕೃತಿಯಲ್ಲಿನ ‘ಧರ್ಮ ಪ್ರದೀಪ’  ಲೇಖನದಲ್ಲಿ ಬರೆದಿದ್ದಾರೆ. ‘ಇದು ಗೊರೂರರ ದೂರದರ್ಶಿತ್ವಕ್ಕೆ ಸಾಕ್ಷಿಯಾಗಿದೆ. ಅವರ ಅಂದಿನ ನಂಬಿಕೆ ಇಂದಿಗೆ ಸಾಕಾರವಾಗಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಲೇಖಕರಾದ ಗೊರೂರು ಅನಂತರಾಜುರವರು ಉತ್ತಮಾಂಶವನ್ನು ದಾಖಲಿಸುವ ಮೂಲಕ ಪುಸ್ತಕದ ಮೌಲ್ಯವನ್ನು ಹೆಚ್ಚಿಸಿದ್ದಾರೆ.


ಬಾಲ್ಯದ ಮೂರು ರಂಗಪ್ರಸಂಗಗಳನ್ನು ವಿವರಿಸುತ್ತಾ ತಾವು ಕನ್ನಡ ಲೋಯರ್ ಸೆಕೆಂಡರಿ ಕಟ್ಟಿದ ವರ್ಷ ತಮ್ಮ ಅಣ್ಣನ ಪಠ್ಯವನ್ನು ಆಧರಿಸಿ ಬುದ್ಧನ ಕಥೆಯನ್ನು ಸಂಭಾಷಣೆಯ ರೂಪದಲ್ಲಿ ಬರೆಯುತ್ತಾರೆ. ಅದೇ ಊರಿನಲ್ಲಿ ವಾಸವಿದ್ದ ಅವರ ಮುಖ್ಯ ಶಿಕ್ಷಕರು ಅದನ್ನು ನಾಟಕ ರೂಪಗೊಳಿಸಿ ಇವರೆಲ್ಲರಿಂದ ಆಡಿಸಿದಾಗ ಬುದ್ಧನ ಪಾತ್ರ ವಹಿಸಿದ ತಾವು ಬುದ್ಧನ ಉಪದೇಶಕ್ಕೆ ಪುರಂದರ ದಾಸರ ಹಾಡನ್ನು ಹಾಡಿದ್ದನ್ನು ಶುದ್ದ ಅಸಂಬದ್ದ ಪ್ರಲಾಪ ಎಂದು ತಮಗೆ ತಾವೇ ವಿನೋದಮಾಡಿಕೊಳ್ಳುತ್ತಾರೆ. ಕಿತ್ತಾನೆ ಹವ್ಯಾಸಿ ಕಲಾಸಂಘದವರು ರಥೋತ್ಸವದ ಸಂದರ್ಭದಲ್ಲಿ ಸಂಪೂರ್ಣ ರಾಮಾಯಣ ನಾಟಕವಾಡಲು ಬರುತ್ತಾರೆ. ಆದರೆ ಸೀತೆಗೆ ಚೂಡಾಮಣಿಯನ್ನು ಕೊಟ್ಟ ಸಣ್ಣ ಕಪಿಯ ಪಾತ್ರವನ್ನು ಮಾಡುವ ನಟನ ಗೈರುಹಾಜರಿಯಲ್ಲಿ ತಾವೇ ಸಣ್ಣಕಪಿಯಾದದ್ದನ್ನು ತಿಳಿಸಿರುವುದು ಬಹಳ ಸ್ವಾರಸ್ಯವಾಗಿದೆ. ಮತ್ತೊಂದು ವೈಜ್ಞಾನಿಕ ಪ್ರಹಸನದಲ್ಲಿ ತಾವೇ ಪ್ರಮುಖ ಪಾತ್ರವಾದ ವೈಜ್ಞಾನಿಕನಾಗಿ ತಮ್ಮ ವಿಶಿಷ್ಟ ವೇಷಭೂಷಣ, ಸಂಭಾಷಣೆಗಳಿಂದ ಜನರನ್ನು ನಗೆಗಡಲಲ್ಲಿ ತೇಲಿಸಿದ್ದನ್ನು  ನೆನಪಿಸುತ್ತಾರೆ.


ಮುಂದುವರೆದಂತೆ ಡಾ.ಗೊರೂರರ ಪ್ರಬಂಧಗಳು, ಕಥೆಗಳು, ಕಾದಂಬರಿಗಳು, ಜನಪದ ಸಾಹಿತ್ಯ, ಪ್ರವಾಸಕಥನ, ಜೀವನ ಚಿತ್ರಗಳ ಸ್ಥೂಲ ಪರಿಚಯವನ್ನು ನೀಡುತ್ತಾರೆ. ಗೊರೂರರ ಸಾಹಿತ್ಯ ವಿಮರ್ಶೆಯ ಕುರಿತೂ ಮಾಹಿತಿಯನ್ನು ಒದಗಿಸಿದ್ದಾರೆ. 


ಬಾಲ್ಯದಲ್ಲಿ ಓದಿನ ಕಡೆಗೆ ಗಮನ ಹರಿಸದೇ ತುಂಟಾಟದಲ್ಲಿ ತೊಡಗಿಕೊಂಡಿದ್ದರೂ ಗಾಂಧೀಜಿಯವರ ಪ್ರಭಾವದಿಂದ ಗಾಂಧಿವಾದಿಗಳಾಗಿ ಸ್ವಾಧ್ಯಯನದಿಂದ ಜ್ಞಾನಸಂಪತ್ತನ್ನು ತಮ್ಮದಾಗಿಸಿಕೊಂಡು ತಾವು ಕಂಡದ್ದನ್ನು ಅನುಭವದ ಸಾರವನ್ನು ಬರಹರೂಪಕ್ಕಿಳಿಸಿ ಮೇರುಸಾಹಿತಿಯಾದ ಗೊರೂರರ ಬಗ್ಗೆ ವಿದ್ವಾಂಸರ, ಮಹಾನ್ ಸಾಹಿತಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿ ದಾಖಲಿಸಿದ್ದಾರೆ. ಕಡೆಯ ಪುಟಗಳಲ್ಲಿ ಡಾ. ಗೊರೂರರ ಕೃತಿಗಳ ಬಗ್ಗೆ, ಜೀವನದ ಮುಖ್ಯ ಘಟನೆಗಳ ಬಗ್ಗೆ ಮಾಹಿತಿಯಿದೆ. 


ಒಟ್ಟಾರೆಯಾಗಿ ಚೇತನ ಸಾಹಿತ್ಯ ಕಲಾ ಸಾಧಕರ ಮಾಲೆಯಲ್ಲಿ ಪ್ರಕಟವಾಗಿರುವ ಗೊರೂರು ಅನಂತರಾಜುರವರ ಈ ಪುಸ್ತಕವು ವಿಸ್ತಾರವಾಗಿ ರೆಂಬೆಗಳನ್ನು ಚಾಚಿ ಹರಡಿರುವ ಡಾ. ಗೊರೂರು ರಾಮಸ್ವಾಮಿ ಅಯ್ಯಂಗಾರ್‌ರವರೆಂಬ ಮಹಾನ್ ವೃಕ್ಷವನ್ನು  ಚಿಕ್ಕದಾಗಿ ಚೊಕ್ಕವಾಗಿ ಲಭ್ಯ ಚೌಕಟ್ಟಿನಲ್ಲಿ ಸೆರೆಹಿಡಿದು ಚಿತ್ರಪಟಗೊಳಿಸಿದಂತಿದೆ. 


~ಪ್ರಭಾಮಣಿ ನಾಗರಾಜ, ಹಾಸನ.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter    


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top