ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಭಾರತೀಯ ಭಾಷೆಗಳ ಕೀಲಿಮಣೆ (ಕೀಬೋರ್ಡ್) ಸಂಶೋಧನಾ ಹಾಗೂ ಉತ್ಪಾದನಾ ಘಟಕದ ಉದ್ಘಾಟನೆ
ಬೆಂಗಳೂರು: ‘ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕೈಗಾರಿಕೆಗಳ ನೇರ ಸಂಪರ್ಕ ಅತ್ಯವಶ್ಯ. ಇದರಿಂದ ಆಧುನಿಕ ತಂತ್ರಜ್ಞಾನದ ಹಿನ್ನೆಲೆಯಲ್ಲಿ ಕೈಗಾರಿಕೆಗಳ ತುರ್ತು ಅಗತ್ಯಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅಲ್ಲದೆ ನಮ್ಮ ಪರಂಪರಾಗತ ಪಠ್ಯಕ್ರಮವನ್ನು ಬದಲಿಸಿ ಅದನ್ನು ಉದ್ಯಮಗಳ ನಿರೀಕ್ಷೆಗನುಗುಣವಾಗಿ ಮಾರ್ಪಡಿಸಲು ನೆರವಾಗುತ್ತದೆ. ಬಹುಮುಖ್ಯವಾಗಿ ಕೈಗಾರಿಕೆಗಳಿಗೆ ಯಾವುದೇ ಪೂರ್ವ ತರಬೇತಿಯ ಅವಶ್ಯಕತೆಯಿಲ್ಲದೆ, ನೇರವಾಗಿ ಉತ್ಪಾದನಾ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವ ಕುಶಲತೆ ಹೊಂದಿದ ಉದ್ಯೋಗಿಗಳನ್ನು ಒದಗಿಸಿದಂತಾಗುತ್ತದೆ. ಇದಲ್ಲದೆ, ಕ್ರಮೇಣ ಕರ್ನಾಟಕದ ಗ್ರಾಮೀಣ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ ಭಾಷಾಪ್ರಯೋಗಾಲಯಗಳನ್ನು ಸ್ಥಾಪಿಸುವ ಉದ್ದೇಶವೂ ನಮ್ಮದಾಗಿದೆ’, ಎಂದು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಹೆಚ್.ಸಿ. ನಾಗರಾಜ್ ನುಡಿದರು.
ಅವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯ ಹಾಗೂ ಕ-ನಾದ ಪೊನೆಟಿಕ್ಸ್ ಸಂಸ್ಥೆಗಳ ಜಂಟಿ ಯೋಜನೆಯಾದ ‘ಕೀಲಿಮಣೆಗಳ (ಕೀಬೋರ್ಡ್) ಸಂಶೋಧನೆ ಹಾಗೂ ಉತ್ಪಾದನಾ ಘಟಕ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಲ್ಲಿ ಕನ್ನಡ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳ ಲಿಪಿಗಳು ಒಂದೇ ಕೀಬೋರ್ಡ್‍ನಲ್ಲಿ ಬಳಕೆದಾರರ ಆಯ್ಕೆಗನುಸಾರವಾಗಿ ಮೂಡಲು ಅಗತ್ಯವಿರುವ ಸಂಶೋಧನೆ ಹಾಗೂ ಹೊಸ ಕೀಬೋರ್ಡ್‍ಗಳ ಉತ್ಪಾದನೆಗಳನ್ನು ಈ ಘಟಕದಲ್ಲಿ ಕೈಗೊಳ್ಳಲಾಗುತ್ತದೆ. ಇದರಿಂದ ಇಲ್ಲಿ ನೇರವಾಗಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು ಇಂಗ್ಲಿಷ್ ಅಲ್ಲದೆ ತಂತಮ್ಮ ಮಾತೃಭಾಷೆಗಳನ್ನು ಗಣಕೀಕೃತಗೊಳಿಸುವ ಕೌಶಲ್ಯವನ್ನು ಗಳಿಸಲು ಸಾಧ್ಯವಾಗುತ್ತದೆ.
‘ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಅಟಲ್ ಕಮ್ಯೂನಿಟಿ ಅನ್ವೇಷಣಾ ಕೇಂದ್ರದ ಭಾಗವಾಗಿರುವ ಈ ಘಟಕ ಅತ್ಯಂತ ಕಡಿಮೆ ವೆಚ್ಚದಲ್ಲಿ ಭಾರತೀಯ ಭಾಷೆಗಳ ಕೀಬೋರ್ಡ್‍ಗಳನ್ನು ಉತ್ಪಾದಿಸಲು, ನಮ್ಮ ವಿದ್ಯಾರ್ಥಿಗಳ ಯುವ ಪ್ರತಿಭೆಯನ್ನು ಸಮರ್ಥವಾಗಿ ಬಳಸಿಕೊಳ್ಳಲಿದೆ. ಇದರಿಂದ ವಿದ್ಯಾರ್ಥಿಗಳು ಇಂಗ್ಲಿಷ್‍ನಲ್ಲಿ ಕಲಿತ ತಂತ್ರಜ್ಞಾನದ ವಿವಿಧ ತಾಂತ್ರಿಕ ವಿಧಾನಗಳನ್ನು ತಮ್ಮ ತಮ್ಮ ಮಾತೃಭಾಷೆಗಳಿಗೆ ಅಳವಡಿಸುವುದರಿಂದ ಅವರ ವಿಷಯ ಗ್ರಹಿಕೆಯ ವೇಗವೂ ಹೆಚ್ಚುತ್ತದೆ ಮತ್ತು ಕನ್ನಡವೂ ಸೇರಿದಂತೆ ಇತರೆ ಭಾರತೀಯ ಭಾಷೆಗಳ ಜ್ಞಾನಭಂಡಾರವೂ ಅಧಿಕಗೊಳ್ಳಲಿದೆ’, ಎಂದು ಕ-ನಾದ ಸಂಸ್ಥೆಯ ನಿರ್ದೇಶಕ ಡಾ. ಗುರುಪ್ರಸಾದ್ ನುಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ನಿಟ್ಟೆ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ರೋಹಿತ್ ಪೂಂಜ ಮಾತನಾಡಿ – ‘ವಿದ್ಯಾ ಸಂಸ್ಥೆಯ ಆವರಣದಲ್ಲಿಯೇ ಕೈಗಾರಿಕೆಯ ಸಂಶೋಧನಾ ಹಾಗೂ ಉತ್ಪಾದನಾ ಘಟಕವನ್ನು ಮೊದಲ ಬಾರಿಗೆ ಸ್ಥಾಪನೆ ಮಾಡಿರುವ ಹೆಮ್ಮೆ ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪಾಲಾಗಿದೆ’, ಎಂದರು.
ಅಮೇರಿಕಾದ ಹಿಂದೂ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಬಿ.ವಿ.ಕೆ. ಶಾಸ್ತ್ರಿ, ನಾಸಾ ಸಂಸ್ಥೆಯ ವಿಜ್ಞಾನಿಗಳಾಗಿದ್ದ ಗೋಪಾಲ್ ಅಯ್ಯಂಗಾರ್, ನಿಟ್ಟೆ ವಿದ್ಯಾಸಂಸ್ಥೆಯ ಅಕಾಡೆಮಿಕ್ ನಿರ್ದೇಶಕ ಡಾ. ಸಂದೀಪ್ ಶಾಸ್ತ್ರಿ, ಕಾಲೇಜಿನ ಶೈಕ್ಷಣಿಕ ವಿಭಾಗದ ಮುಖ್ಯಸ್ಥ ಡಾ. ವಿ. ಶ್ರೀಧರ್ ಹಾಗೂ ಕಾಲೇಜಿನ ಅಂತರಾಷ್ಟ್ರೀಯ ಸಂಬಂಧಗಳ ಮುಖ್ಯಸ್ಥ ಡಾ. ಸುಧೀರ್ ರೆಡ್ಡಿ ಉಪಸ್ಥಿತರಿದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ