ಮ್ಯೂರಲ್‌ ಆರ್ಟ್ ಕಲಾವಿದ- 'ತ್ರಿನೇತ್ರ' ಶಿವಶಂಕರ್ ಕೆ.ಜಿ.

Upayuktha
0

ಚಿತ್ರಕಲೆಯಲ್ಲಿ ಅದರಲ್ಲೂ ಮಣ್ಣಿನಲ್ಲಿ ಕಲಾಕೃತಿಗಳನ್ನು ರೂಪಿಸುವಲ್ಲಿ ಸಿದ್ದಹಸ್ತರಾದ ಶಿವಶಂಕರ್ ಕೆ.ಜಿ. ಅವರು ಹಾಸನ ವಿದ್ಯಾನಗರದಲ್ಲಿ ವಾಸವಿದ್ದಾರೆ. ಇವರ ತಂದೆ ಕೆ.ಹೆಚ್. ಗಿಡ್ಡೇಗೌಡರು ಬಿಎಸ್‌ಎನ್‌ಎಲ್‌ ಉದ್ಯೋಗಿ. ಇವರ ಪತ್ನಿ ಆಶಾ ಜಿ.ಕೆ. ಸರ್ಕಾರಿ ನೌಕರರು. 22 ಜನವರಿ 1985ರಂದು ಜನಿಸಿದ ಇವರು ಹಂಪಿ ವಿಶ್ವ ವಿದ್ಯಾನಿಲಯದ ಶಾಂತಲಾ ಕಲಾ ಕಾಲೇಜಿನಿಂದ ಫೈನ್‌ ಆರ್ಟ್ ಪದವಿ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಆಟೋಮೋಟಿವ್ ಸಂಬಂಧಿ ಇಲಾಖೆಯಲ್ಲಿ ಕೆಲಸ ನಿರ್ವಹಿಸಿ ಹಲವು ರಾಜ್ಯ ಸುತ್ತಿದ್ದಾರೆ. ನ್ಯಾಷನಲ್‌ ಟೆಕ್ಸ್‌ಟೈಲ್ ಕಾರ್ಪೊರೇಷನ್‌ನಲ್ಲಿ ಕೆಲಸ ಮಾಡಿ ಸರ್ಕಾರಿ ಕೆಲಸ ಬಿಟ್ಟು ಪ್ರಸ್ತುತ ಬದುಕಿಗೆ ತಮಗೊಲಿದ ಚಿತ್ರಕಲೆಯನ್ನೇ ಆರಿಸಿಕೊಂಡಿದ್ದು ಆ ಕಲೆಗಾರಿಕೆ ಬಗ್ಗೆ ತಮ್ಮ ನೈಪುಣ್ಯತೆ ಹಂಚಿಕೊಂಡರು.  


ಶಿಲ್ಪಕಲೆ ಅಂತ ಬಂದಾಗ ಮಣ್ಣಿನಲ್ಲಿ ಮಾಡುವ ಕಲಾಕೃತಿಗಳು, ಮರದ ಕೆತ್ತನೆ. ಕಲ್ಲಿನ ಕೆತ್ತನೆ ಈ ಮೂರು ವಿಧಗಳಲ್ಲಿ ಕಲಾಕೃತಿಗಳನ್ನು ತಯಾರಿಸಬಹುದು.  ಮಣ್ಣಿನಲ್ಲಿ ಮಾಡುವ ಕಲಾಕೃತಿಗಳಲ್ಲಿ ಎರಡು ವಿಧ. ಅವು 2ಡಿ ಮತ್ತು 3ಡಿ. ಗೋಡೆಯ ಮೇಲೆ ನೇರವಾಗಿ ಉಬ್ಬು ತಗ್ಗುಗಳಿಂದ ಅಥವಾ ಎಂಬೋಸ್ ಮಾಡಿ ರಚಿಸುವ ಕಲಾಕೃತಿಗಳು 2ಡಿ ಆದರೆ ಎಲ್ಲಾ ದಿಕ್ಕಿನಿಂದಲೂ ನೋಡಬಹುದಾದ ಸರಳ ಕಲಾಕೃತಿಗಳು 3ಡಿ ಕಲೆ. 2ಡಿ ಕಲಾಕೃತಿ ಮಾಡುವಾಗ ಮೊದಲು ಹಲಗೆಯ ಮೇಲೆ ಮಣ್ಣನ್ನು ತನಗೆ ಬೇಕಾದ ರೀತಿಯಲ್ಲಿ ಮತ್ತು ಆಕೃತಿಯಲ್ಲಿ ಹದವಾಗಿ ಮೆತ್ತಿಕೊಂಡು ಅಳತೆ ಪ್ರಕಾರ ರಚನೆ ಕೊಟ್ಟು ಅದನ್ನ ಪೂರ್ಣಗೊಳಿಸಿ ಮಣ್ಣನ್ನು ಮೆತ್ತಿ ಅದು ಆಕೃತಿ ರೂಪ ಪಡೆದುಕೊಂಡ ಮೇಲೆ ಅದಕ್ಕೆ ನಾವು ಕ್ಲೇ ಟೂಲ್ಸ್ ಬಳಸಿ ಅದರ ಅತ್ಯಂತ ಸೂಕ್ಷ್ಮ ಭಾಗಗಳನ್ನು ರಚಿಸಿಕೊಳ್ಳುತ್ತೇವೆ. ಕ್ಲೇ ಆರ್ಟ್ ಮಾಡಲು ಬಳಸುವ ಉಪಕರಣಗಳು ಕ್ಲೇ ಟೂಲ್ಸ್. ಕಲಾಕೃತಿಯ ರೂಪವನ್ನು ಮಣ್ಣಿನಲ್ಲಿ ತಯಾರಿಸಿದ ನಂತರ ಅದರ ಮೇಲೆ ಮೂರರಿಂದ ನಾಲ್ಕು ಪದರಗಳಲ್ಲಿ ಸರಿಯಾದ ಅಳತೆ ಮತ್ತು ಪ್ರಮಾಣದಲ್ಲಿ ಪಿಓಪಿಯನ್ನು ಹಾಕಿ ಅದರ ಡೈ ತೆಗೆದು (ಈ ಸಂದರ್ಭದಲ್ಲಿ ಡೈ ಮುರಿಯದ ಹಾಗೆ ಎಚ್ಚರದಿಂದಿರುವುದು ಮುಖ್ಯ) ಡೈ ಮುಗಿದ ನಂತರ ಪುನಃ ಮಣ್ಣನ್ನು ವಾಪಸ್ ತೆಗೆದುಕೊಂಡು ಕಲಾಕೃತಿಯ ನೆಗೆಟಿವ್ ಚಿತ್ರಣ ಬರುವ ಹಾಗೆ ತಯಾರು ಮಾಡಬೇಕು. ನಂತರ ಅದಕ್ಕೆ ಕೆಲವು ವ್ಯಾಕ್ಸ್ ಗಳನ್ನು ಬಳಸಿ ಎಸ್.ಆರ್.ಪಿ. ರೆಸಿನ್ ಫೈಬರ್ ಕೆಮಿಕಲ್ ಬಳಸಿ ಆಕೃತಿ ರೂಪಿಸಿ ಡೈಗೆ ತೆಳುವಾದ ಪದರ ಪದರಗಳಾಗಿ ಕ್ಲೇ ಸ್ವೂಲ್ ನಿಂದ ಸ್ಟ್ರೆಂತ್ ಬರುವ ಹಾಗೆ ಮಾಡಿ ಒಂದು ರೂಪ ಕೊಡ್ತೀವಿ. ನಂತರ ಅದನ್ನು ಡೈಯಿಂದ ಬೇರ್ಪಡಿಸಿ ಮರದ ಅಥವಾ ಕಲ್ಲಿನ ಕೆತ್ತನೆಯ ರೀತಿ ಎಮ್ರಿ ಮೂಲಕ ಫಿನಿಶ್ ಕೊಟ್ಟು ಪೈಂಟ್ ಮಾಡ್ತಿವಿ. ಇದನ್ನು ಮ್ಯೂರಲ್ ಆರ್ಟ್ ಅಂತೀವಿ. ದೀರ್ಘ ಕಾಲ ಬಾಳುವ ಬಿಸಿಲು ಮಳೆಗೆ ಹಾಳಾಗದ ರೀತಿಯಲ್ಲಿ ಇದನ್ನು ತಯಾರಿಸುವುದರಿಂದ ಎಷ್ಟು ವರ್ಷಗಳು ಬೇಕಾದರೂ ಇಟ್ಟುಕೊಳ್ಳಬಹುದು. ಇದರಲ್ಲಿ ಬಳಸುವ ವಸ್ತುಗಳು ಕೆಮಿಕಲ್ ಹಾಗೂ ಇದನ್ನು ಮಾಡಲು ತಗಲುವ ಸಮಯ ಹೆಚ್ಚು. ಹಲವು ಹಂತಗಳಲ್ಲಿ ಸಮಯ ಕೊಟ್ಟು ನೈಪುಣ್ಯತೆಯಿಂದ ಇದನ್ನು ತಯಾರಿಸಬೇಕಾಗುತ್ತದೆ. ಇದು ಸ್ವಲ್ಪ ದುಬಾರಿ.


ಬರೀ ಮಣ್ಣಿನಲ್ಲಿ ಕಲಾಕೃತಿ ಮಾಡಿ ಬಣ್ಣ ಕೊಟ್ರೆ ಬಿರುಕು ಬರುವುದು ಜೊತೆಗೆ ದೀರ್ಘ ಕಾಲ ಬಾಳಿಕೆ ಬರುವುದಿಲ್ಲ. ಆದರೆ ಇದನ್ನ ಫೈಬರ್‍‌ನಲ್ಲಿ ಮಾಡಿದಾಗ ಆ ಸಮಸ್ಯೆ ಇಲ್ಲ. 3ಡಿ ವಿಗ್ರಹ, ದೇವರ ವಿಗ್ರಹಗಳು, ಸ್ವಾತಂತ್ರ ಹೋರಾಟಗಾರರು ಹೀಗೆ ವಿವಿಧ ರೀತಿಯಲ್ಲಿ ಮಾಡಬಹುದಾಗಿ ಇದುವರೆಗೂ ಇವರು ಐದರಿಂದ ಆರು ಕಲಾಕೃತಿಗಳನ್ನು ಸಾರ್ವಜನಿಕ ಸ್ಥಳದಲ್ಲಿ ಮಾಡಿದ್ದಾರೆ. ಪುನೀತ್‌ ರಾಜಕುಮಾರ್. ವಿಷ್ಣುವರ್ಧನ್, ಸಿದ್ದಗಂಗಾ ಶ್ರೀಗಳು, ಹೆಗಡೆವಾರ್, ಶಿವಾಜಿ, 9 ಅಡಿ ಎತ್ತರದ ಬೃಹತ್ ಆಂಜನೇಯ ಪ್ರತಿಮೆ ರೂಪಿಸಿದ್ದಾರೆ. ಆಂಜನೇಯನ ಪ್ರತಿಮೆ ತಯಾರಿಸಲು ಸತತ 25 ದಿನ ಕೆಲಸ ಮಾಡಿ ಆರೂವರೆ ಕ್ವಿಂಟಲ್ ಮಣ್ಣು ಬಳಸಲಾಗಿದೆ. ಮಣ್ಣಿನ ವಿನ್ಯಾಸದ ನಂತರ ಕೇವಲ ಒಂದೇ ಡೈನಲ್ಲಿ ಅದರ ಪ್ರತಿಮೆಯನ್ನು ತೆಗೆಯಲು ಸಾಧ್ಯವಿಲ್ಲವಾದುದರಿಂದ ಅನೇಕ ಭಾಗಗಳಾಗಿ ಡೈ ತೆಗೆದು ನಂತರ ಜೋಡಿಸಿ ಪೇಂಟ್ ಮಾಡಿ ಫಿನಿಶಿಂಗ್ ಮಾಡಲಾಗಿದೆ. ಸಾಮಾನ್ಯವಾಗಿ ಮಣ್ಣಿನಿಂದ ಮಾಡಿದ ಪ್ರತಿಮೆಗಿಂತ ಈ ಫೈಬರ್ ಕಲಾ ಕೃತಿ ಹಗುರವಾಗಿದ್ದು ದೊಡ್ಡ ದೊಡ್ಡ ಸಮಾರಂಭಗಳಲ್ಲಿ ಟ್ಯಾಬ್ಲೋ ಪ್ರದಶ೯ನಕ್ಕೆ ಬಳಸಬಹುದು. ಇದೇ ರೀತಿಯಲ್ಲಿ ಕಾಸ್ಟಿಂಗ್ ಅಂದರೆ ಹಿತ್ತಾಳೆಯನ್ನು ಉಪಯೋಗಿಸಿ ಮಾಡುವ ಕಲೆಯೂ ಇದೆ, ಆದರೆ ಅಲ್ಪ ಸ್ವಲ್ಪ ವಿಧಾನಗಳು ಬೇರೆ ಬೇರೆ.


ಚಿತ್ರಕಲೆಯನ್ನು ಹವ್ಯಾಸವಾಗಿ ಮೊದಮೊದಲು ಇವರು ಪೆನ್ಸಿಲ್ ಸ್ಕೆಚ್‌ಗಳನ್ನು ಮಾಡುತ್ತಾ ಗೆಳೆಯರಿಗೆ ಭಾವಚಿತ್ರ ಬಿಡಿಸಿಕೊಡುತ್ತಿದ್ದು ಈಗ ಚಿತ್ರ ಕಲೆಯನ್ನೆ ವೃತ್ತಿಯನ್ನಾಗಿಸಿಕೊಂಡಿದ್ದಾರೆ. ಹೊರ ದೇಶಗಳಿಂದಲೂ ಆರ್ಡರ್ ಪಡೆಯುತ್ತಿದ್ದಾರೆ. ಬೆಂಗಳೂರಿನ ಚಿತ್ರ ಸಂತೆಯಲ್ಲೂ ಪ್ರದರ್ಶಿಸಿ ಮಾರಾಟ ಮಾಡಿದ್ದಾರೆ. ಇವರು ಆಯಿಲ್ ಪೈಂಟಿಂಗ್, ಸ್ಟ್ರೀಟ್ ಆರ್ಟ್, ಇಂಟಿರಿಯರ್ ವರ್ಕ್, ವಾಲ್ ಪೈಂಟಿಂಗ್, ಸ್ಟ್ರೀ ವರ್ಕ್ ಮಾಡುತ್ತಾರೆ. ಯೂ ಟ್ಯೂಬ್‌ನಿಂದ ಮ್ಯೂರಲ್ ಮತ್ತು ಸ್ಕಲ್‌ಪ್ಷರ್ ವರ್ಕ್ ಕಲಿತಿದ್ದಾರೆ.


- ಗೊರೂರು ಅನಂತರಾಜು, ಹಾಸನ. 

ಮೊ: 9449462879.

ವಿಳಾಸ: ಹುಣಸಿನಕೆರೆ ಬಡಾವಣೆ, 29ನೇ ವಾರ್ಡ್, 

ಶ್ರೀ ಶನೇಶ್ವರ ದೇವಸ್ಥಾನ ರಸ್ತೆ, ಹಾಸನ.



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top