ಭಕ್ತಿ ಎಂಬ ಪೃಥ್ವಿಯ ಮೇಲೆ, ಗುರುವೆಂಬ ಬೀಜವಂಕುರಿಸಿ
ಲಿಂಗವೆಂಬ ಎಲೆಯಾಯಿತ್ತು ವಿಚಾರವೆಂಬ ಹೂವಾಯಿತ್ತು.
ಆಚಾರವೆಂಬ ಕಾಯಾಗಿತ್ತು, ನಿಷ್ಪತ್ತಿಯೆಂಬ ಹಣ್ಣಾಯಿತ್ತು.
ನಿಷ್ಪತ್ತಿಯೆಂಬ ಹಣ್ಣು ತೊಟ್ಟು ಬಿಟ್ಟು ಕಳಚಿ ಬೀಳುವಲ್ಲಿ
ಕೂಡಲ ಸಂಗಮದೇವ ತನಗೆ ಬೇಕೆಂದು ಎತ್ತಿಕೊಂಡ-
ಬಸವಣ್ಣನವರ ಮಾತುಗಳು ಗುರುವಿನ ಮಹತ್ವವನ್ನು ಎತ್ತಿ ತೋರಿಸುತ್ತವೆ. ಯಾವುದೇ ದೇಶದ ಪ್ರಗತಿ ಅಥವಾ ನಾಶವು ಆ ದೇಶದ ಶಿಕ್ಷಕರನ್ನು ಅವಲಂಬಿಸಿರುತ್ತದೆ. ಒಬ್ಬ ವ್ಯಕ್ತಿಯನ್ನು ದೇಶದ ಆಸ್ತಿಯನ್ನಾಗಿ ಮಾಡುವ ಮಹಾತ್ಕಾರ್ಯ ಪ್ರತಿಯೊಬ್ಬ ಶಿಕ್ಷಕರದ್ದು. ಹುಟ್ಟಿನಿಂದ ಯಾರು ಕೂಡ ಬುದ್ಧಿವಂತರಲ್ಲ. ಆತನಿಗೆ ಸಿಗುವ ಗುರುವಿನಿಂದ ಅವನ ವ್ಯಕ್ತಿತ್ವ ನಿರ್ಧಾರವಾಗುತ್ತದೆ.
"ಗುರುವಿನ ಗುಲಾಮನಾಗುವ ತನಕ ದೊರೆಯದೆನ್ನ ಮುಕುತಿ" ಎಂಬ ನಾಣ್ಣುಡಿಯಂತೆ ಯಾವಾಗ ಗುರುವನ್ನು ಗೌರವಿಸಲು ಆರಂಭಿಸುತ್ತೇವೆಯೋ ಆಗ ಮಾತ್ರ ಮುಕ್ತಿ ಸಾಧ್ಯ. ಒಬ್ಬ ಗುರುವಿನ ಮನಸ್ಸನ್ನು ನೋಯಿಸಿದರೆ ಅದರ ಫಲಿತಾಂಶವನ್ನು ಮುಂದಿನ ಬದುಕಿನಲ್ಲಿ ನಾವೇ ಎದುರಿಸಬೇಕಾಗುತ್ತದೆ. ಪುರಾತನ ಕಾಲದಿಂದಲೂ ಗುರು - ಶಿಷ್ಯರ ನಡುವಿನ ಬಾಂಧವ್ಯ ಎಂದೂ ಮುಗಿಯದ ಅನುಬಂಧ ವಿದ್ದಂತೆ. ಆದರೆ ಹಿಂದಿನ ಕಾಲದಲ್ಲಿ ಇದ್ದ ಬಾಂಧವ್ಯ ಇಂದು ಬದಲಾಗಿವೆ. ವಿದ್ಯೆ ನೀಡಿದ ಗುರು ಎದುರಿಗೆ ಸಿಕ್ಕಾಗ ನಮಿಸುತ್ತಿದ್ದ ಕಾಲದಿಂದ ಗುರುವಿನ ವಿಚಾರಗಳನ್ನು ವಿರೋಧಿಸಿ ಎದುರು ಮಾತನಾಡುವ ಕಾಲಕ್ಕೆ ಬಂದು ತಲುಪಿರುವುದು ನಿಜಕ್ಕೂ ವಿಷಾದನೀಯ.
ಗುರುವೆಂದರೆ ಅದು ಬರಿಯ ವ್ಯಕ್ತಿಯಲ್ಲ, ಜ್ಞಾನಗಳ ಆಗರ. ಗುರುವೆಂದರೆ ಬರಿಯ ಪದವಲ್ಲ ಅದು ಮಹಾನ್ ಚೇತನ. ಹೀಗೆ ಗುರುವಿನ ಬಗ್ಗೆ ಬರೆದಷ್ಟು ಮುಗಿಯದು. ಪದಗಳಿಗೆ ನಿಲುಕದ ಗೌರವನೀಯ ವ್ಯಕ್ತಿತ್ವವೆಂದರೆ ಅದು ವಿದ್ಯಾರ್ಜನೆಗೆಯ್ಯುವ ಗುರುವಿನದ್ದು. ಆತ್ರಿಸಂಹಿತ ಹೇಳುವಂತೆ "ಏಕಮೆವಾಕ್ಷರಂ ಯಸ್ತು ಗುರು ಶಿಷ್ಯೆ ನಿವೇದಯೇತ್, ಪೃಥ್ವಿಯಾಂ ನಾಸ್ತಿ ತದ್ರವ್ಯಮ್ ಯದ್ಧತ್ವ ಹ್ಯನೃನೀ ಭವೇತ್" ಅರ್ಥಾತ್: "ಗುರುವು ಶಿಷ್ಯನಿಗೆ ಒಂದೇ ಒಂದು ಅಕ್ಷರ ಕಲಿಸಿದರೂ ಕೂಡ ಅದಕ್ಕೆ ತಕ್ಕುನಾದ ಪರಿಹಾರ ಈ ಜಗತ್ತಿನಲ್ಲಿಯೇ ಇಲ್ಲ". ಹಾಗಾದರೆ ತಮ್ಮಲ್ಲಿರುವ ವಿದ್ಯೆಯನ್ನೆಲ್ಲಾ ಧಾರೆಯೆರೆದು ಕೊಡುವ ಗುರುವಿನ ಋಣವನ್ನು ಹೇಗೆ ತಾನೆ ತೀರಿಸಲು ಸಾಧ್ಯ? ತಮ್ಮ ಜೀವಮಾನವಿಡೀ ವಿದ್ಯಾರ್ಥಿಗಳಿಗಾಗಿ, ದೇಶದ ನಾಳಿನ ಭವಿಷ್ಯಕ್ಕಾಗಿ ಮುಡಿಪಾಗಿಟ್ಟ ಗುರುಗಳನ್ನು ಗೌರವಿಸುವಂತವರು ನಾವಾಗಬೇಕು.
-ಸಂಶೀನ ಸೂರ್ಯ,
ಪ್ರಥಮ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ