ಮಂಗಳೂರು: ರಕ್ತದಾನ ಇನ್ನೊಬ್ಬರ ಜೀವ ಉಳಿಸುವುದು ಮಾತ್ರವಲ್ಲದೆ ರಕ್ತ ಕೊಡುವವರ ಆರೋಗ್ಯ, ಚೈತನ್ಯವನ್ನು ವೃದ್ಧಿಸುತ್ತದೆ, ರಕ್ರವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲದ ಕಾರಣ ರಕ್ತದಾನಿಗಳ ಅಗತ್ಯ ತುಂಬಾ ಇದೆ. ಒಮ್ಮೆ ತೆಗೆದ ರಕ್ತ 24 ಗಂಟೆಗಳಿಂದ 48 ಗಂಟೆಯ ಒಳಗಾಗಿ ತುಂಬಿಕೊಳ್ಳುವುದರಿಂದ ರಕ್ತದಾನದಿಂದ ಯಾವುದೇ ತೊಂದರೆ ಆಗುವುದಿಲ್ಲ ಎಂದು ರಕ್ತದಾನದ ಅಗತ್ಯ ಅವಶ್ಯಕತೆಯ ಕುರಿತು ದ.ಕ ಜಿಲ್ಲಾ ಗೃಹ ರಕ್ಷಕ ದಳದ ಸಮಾದೇಷ್ಟರಾದ ಡಾ.ಮುರಲೀ ಮೋಹನ್ ಚೂಂತಾರು ಮಾಹಿತಿ ನೀಡಿದರು.
ಪೊಸಕುರಲ್ ಬಳಗ, ದ.ಕ ಜಿಲ್ಲಾ ಗೃಹರಕ್ಷಕ ದಳ, ಚೂಂತಾರು ಸರೋಜಿನಿ ಪ್ರತಿಷ್ಠಾನ (ರಿ) ಮಂಗಳೂರು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ (ರಿ), ಸದ್ಭಾವನಾ ವೇದಿಕೆ ಉಳ್ಳಾಲ, ಜಮಾಅತೆ ಇಸ್ಲಾಮಿ ಹಿಂದ್, ಉಳ್ಳಾಲ, ಯುವವಾಹಿನಿ (ರಿ.) ಕೊಲ್ಯ, ರೋಟರಿ ಸಮುದಾಯ ದಳ ಕೊಲ್ಯ, ನವೋದಯ ಫ್ರೆಂಡ್ಸ್ (ರಿ) ಉಳ್ಳಾಲಬೈಲ್, ಲಯನ್ಸ್ ಮತ್ತು ಲಿಯೊ ಕ್ಲಬ್ ಪೆರ್ಮನ್ನೂರು ಉಳ್ಳಾಲ, ಕ್ಯಾಥೊಲಿಕ್ ಸಭಾ (ರಿ), ಮಂಗಳೂರು, ಪೆರ್ಮನ್ನೂರು ಘಟಕ ಇವರ ಸಂಯುಕ್ತ ಆಶ್ರಯದಲ್ಲಿ ಕೆಎಂಸಿ ಆಸ್ಪತ್ರೆ ಅತ್ತಾವರ ಮಂಗಳೂರು ಇವರ ಸಹಯೋಗದಲ್ಲಿ ಕೊಲ್ಯ ಬೆನಕ ಬಿಲ್ಡಿಂಗ್ ಆವರಣದಲ್ಲಿ ಆಯೋಜಿಸಿದ ರಕ್ತದಾನ ಮಾಹಿತಿ ಮತ್ತು ರಕ್ತದಾನ ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಅವರು ಮಾತನಾಡಿದರು. 18ರಿಂದ ಮೇಲ್ಪಟ್ಟು 60ರ ಒಳಗಾಗಿ ಆರೋಗ್ಯವಂತರು ರಕ್ತದಾನ ಮಾಡುವಂತೆ ಕರೆನೀಡಿದರು.
ಜಮಾಅತೆ ಇಸ್ಲಾಮೀ ಹಿಂದ್ ಉಳ್ಳಾಲ ವಲಯ ಅಧ್ಯಕ್ಷ ಅಬ್ದುಲ್ ಕರೀಮ್, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕ ಅಧ್ಯಕ್ಷ ನಝೀರ್ ಹುಸೈನ್ ಮಂಚಿಲ ಗಿಡಕ್ಕೆ ನೀರೆರೆದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ರಕ್ತಕ್ಕೆ ಜಾತಿ ಇಲ್ಲ, ರಕ್ತದ ಅಗತ್ಯ ಎಲ್ಲರಿಗೂ ಇದೆ, ರಕ್ತದ ಅಗತ್ಯ ಬಂದಾಗ ಯಾವ ಜಾತಿ, ಧರ್ಮ ನೋಡುವುದಿಲ್ಲ ಎಂದು ಮಂಗಳೂರು ವಿಶ್ವವಿದ್ಯಾಲಯದ ಸಮಾಜ ಕಾರ್ಯ ವಿಭಾಗದ ಅಧ್ಯಕ್ಷ ಡಾ. ಮೋಹನ್ ಸಿಂಘೆ ರಕ್ತದಾನದಿಂದ ಮಾನವೀಯ ಸಂಬಂಧ- ಸೌಹಾರ್ದ ಸಂಬಂಧ ಬೆಳೆಯುತ್ತದೆ ಎಂದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಕೆ.ಎಂ.ಸಿ ಆಸ್ಪತ್ರೆಯ ಡಾ.ಜಿನ್ಸಿ ಮತ್ತು ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಅಧ್ಯಕ್ಷ ನಝೀರ್ ಹುಸೈನ್ ಸಾಂದರ್ಭಿಕವಾಗಿ ಮಾತನಾಡಿದರು. ದೇರಳೆಕಟ್ಟೆ ವಿದ್ಯಾರತ್ನ ಆಂಗ್ಲ ಮಾಧ್ಯಮ ಶಾಲಾ ಅಧ್ಯಕ್ಷ ರೊಟೇರಿಯನ್ ಕೆ.ರವೀಂದ್ರ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪೊಸಕುರಲ್ ಬಳಗ ಸೌಹಾರ್ದ ಕಾರ್ಯಕ್ರಮ, ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ, ಈಗ 20ನೇ ವರ್ಷದ ಸಂಭ್ರಮದಲ್ಲಿ ಬೇರೆ ಬೇರೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಸಮಾಜಕ್ಕೆ ಬಹಳ ಅಗತ್ಯವಾದ ರಕ್ತದಾನ ಶಿಬಿರವನ್ನು ಆಯೋಜಿಸಿದೆ ಎಂದು ಶ್ಲಾಘಿಸಿದರು.
ಜಮಾಅತೆ ಇಸ್ಲಾಮೀ ಹಿಂದ್ ಅಧ್ಯಕ್ಷ ಅಬ್ದುಲ್ ಕರೀಮ್, ಯುವವಾಹಿನಿ ಅಧ್ಯಕ್ಷ ಸುಂದರ್ ಸುವರ್ಣ, ರೋಟರಿ ಸಮುದಾಯ ದಳ ಕೊಲ್ಯ ಅಧ್ಯಕ್ಷ ಆನಂದ್ ಮಲೆಯಾಳ ಕೋಡಿ, ನವೋದಯ ಫ್ರೆಂಡ್ಸ್ ಉಳ್ಳಾಲಬೈಲ್ ಗೌರವಾಧ್ಯಕ್ಷ ಪದ್ಮನಾಭ ಉಳ್ಳಾಲ್ ಬೈಲ್, ಲಯನ್ಸ್ ಲಿಯೋ ಪೆರ್ಮನ್ನೂರು ಮತ್ತು ಕೆಥೋಲಿಕ್ ಸಭಾ ಪೆರ್ಮನ್ನೂರು ಅಧ್ಯಕ್ಷ ಪ್ರಶಾಂತ್ ಡಿಸೋಜ, ಬೆನಕ ಬಿಲ್ಡಿಂಗ್ ಕಟ್ಟಡದ ಮಾಲಕ ಪ್ರೀತಮ್ ಸುವರ್ಣ ಕೊಲ್ಯ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಕೋಶಾಧಿಕಾರಿ ಮೊಹಮ್ಮದ್ ಇಂತಿಯಾಝ್, ರಕ್ತ ಪೂರೈಕೆ ವಿಭಾಗದ ಮುಖ್ಯಸ್ಥ ಮುಸ್ತಫ ಕೆ.ಸಿ.ರೋಡ್, ಶಿಬಿರದ ಉಸ್ತುವಾರಿ ಖಾದರ್ ಮುಂಚೂರು ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದರು. ಸೋಮೇಶ್ವರ ರಕ್ತೇಶ್ವರೀ ಬಳಗ, ಬೀರಿ ಶ್ರೀ ಸಿದ್ಧಿ ವಿನಾಯಕ ಮಂದಿರ, ಕೊಲ್ಯ ಕ್ರಿಕೆಟರ್ಸ್ ಮುಂತಾದ ಸಂಘ ಸಂಸ್ಥೆಗಳ ಸದಸ್ಯರು ರಕ್ತದಾನಿಗಳಾಗಿ ಬಂದು ಸಹಕಾರ ನೀಡಿದರು.
ಪೊಸಕುರಲ್ ನಿರ್ದೇಶಕ ವಿದ್ಯಾಧರ್ ಶೆಟ್ಟಿ ಸ್ವಾಗತಿಸಿ, ಪ್ರಾಸ್ತವಿಕವಾಗಿ ಮಾತನಾಡಿದರು, ಬ್ಲಡ್ ಹೆಲ್ಪ್ ಕೇರ್ ಕರ್ನಾಟಕದ ಮಾಧ್ಯಮ ಮುಖ್ಯಸ್ಥ ಹಮೀದ್ ಗೋಲ್ತಮಜಲ್ ಕಾರ್ಯಕ್ರಮ ನಿರ್ವಹಿಸಿದರು, ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಸತ್ತಾರ್ ವಂದಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ