ಆಗಲಿ ಯೋಗ- ಜೀವನದ ಭಾಗ

Upayuktha
0

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ


ಯೋಗವು ಒಂದು ವಿಜ್ಞಾನವಾಗಿದ್ದು ಮನುಷ್ಯ ಸಂಕುಲವು ಅನುಭವಿಸುತ್ತಿರುವ ಎಲ್ಲಾ ದುಃಖ ನಿರಾಶೆ ನೋವು ಜಂಜಡಗಳಿಗೆ, ಮಾನಸಿಕ ಸಂಕಷ್ಟಗಳಿಗೆ ರಾಮಬಾಣವಾಗಿದೆ. ಆದ್ದರಿಂದಲೇ ಯೋಗಃ ಚಿತ್ರವೃತ್ತಿ ನಿರೋಧಃ ಎಂದು ಹೇಳುತ್ತಾರೆ. ಚಿತ್ತದ ಹಲವಾರು ವೃತ್ತಿಗಳನ್ನು ಅಂದರೆ ವಿವಿಧ ಬಗೆಯ ಮಾನಸಿಕ ಕ್ಲೇಶಗಳನ್ನು ಕಳೆಯುವ ಶಕ್ತಿ ಯೋಗಕ್ಕಿದೆ.


"ಯೋಗೇನ ಚಿತ್ತಸ್ಯ ಪದೇನ ವಾಚಾ

ಮಲಂ ಶರೀರಸ್ಯಚ ವೈದ್ಯಕೇನಾ

ಯೋಪಾಕರೋತ್ತಮ  ಪ್ರವರಂ ಮುನೀನ

ಪತಂಜಲಿಂ ಪ್ರಾಂಜಲಿಂ ರಾನತೋಸ್ಮಿ"


ಎಂಬುದು ಭಾರತ ದೇಶಕ್ಕೆ ಅಷ್ಟೇ ಏಕೆ ಇಡೀ ವಿಶ್ವಕ್ಕೆ ಯೋಗದ ಜ್ಞಾನವನ್ನು ಕೊಟ್ಟ ಪತಂಜಲಿ ಮಹರ್ಷಿಯನ್ನು ಕುರಿತಾದ ಪ್ರಾರ್ಥನಾ ಮಂತ್ರ.


2014ರಲ್ಲಿ ವಿಶ್ವಸಂಸ್ಥೆಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆಯು ಅನುಮೋದಿಸಲ್ಪಟ್ಟಿತು. 2015 ಜೂನ್ 21ರಂದು ಮೊತ್ತ ಮೊದಲ ಬಾರಿಗೆ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಇಡೀ ಜಗತ್ತಿನಲ್ಲಿಯೇ ಆಚರಿಸಲಾಯಿತು. ತನ್ಮೂಲಕ ಜಗತ್ತಿನ ಹಲವಾರು ರಾಷ್ಟ್ರಗಳು ಅಂತರಾಷ್ಟ್ರೀಯ ಯೋಗ ದಿನವನ್ನು ಆಚರಿಸುತ್ತವೆ. ಜೂನ್ 21ರಂದೇ ಯೋಗ ದಿನವನ್ನು ಆಚರಿಸಲು ಕಾರಣ ಅದು ಆಯಣಗಳು ಬದಲಾಗುವ ಸಮಯ. ಸೂರ್ಯನೂ ತನ್ನ ಪಥವನ್ನು ಬದಲಿಸುತ್ತಾನೆ ಮತ್ತು ಅದು ಅತ್ಯಂತ ದೀರ್ಘವಾದ ಹಗಲನ್ನು ಹೊಂದಿರುವ ದಿನ. ಹೀಗೆ ಯೋಗ ದಿನವನ್ನು ಆಚರಿಸಲು ಜೂನ್ 21 ಅತ್ಯಂತ ಪ್ರಶಸ್ತ ದಿನವಾಗಿ ಪರಿಗಣಿಸಲ್ಪಟ್ಟಿತು.


ಇದೀಗ ಒಂಬತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನವನ್ನು ನಾವು ಆಚರಿಸುತ್ತಿದ್ದೇವೆ. ಯೋಗವು ನಮ್ಮನ್ನು ಹಲವಾರು ಮನೋದೈಹಿಕ ಕಾಯಿಲೆಗಳಿಂದ ದೂರವಿಡುತ್ತದೆ. ನಮ್ಮ ಸ್ನಾಯುಗಳಲ್ಲಿ ಬಲವನ್ನು ವೃದ್ಧಿಸಲು, ದೇಹದಲ್ಲಿ ರಕ್ತ ಸಂಚಾರ ಸರಾಗವಾಗಿ ನಡೆಯಲು, ದೇಹದಲ್ಲಿ ಹೆಚ್ಚಾದ ಕೊಬ್ಬನ್ನು ಕರಗಿಸಲು ನಿಯಮಿತ ಜೀವನ ಶೈಲಿಯನ್ನು ನಡೆಸಿಕೊಂಡು ಹೋಗಲು ಯೋಗದ ಮೊರೆ ಹೋಗಲೇಬೇಕು.


ಯೋಗದಲ್ಲಿ ಅಷ್ಟ ಅಂಗಗಳನ್ನು ಪತಂಜಲಿ ಮಹರ್ಷಿಯು ಗುರುತಿಸಿದ್ದಾರೆ. 

* ಅಷ್ಟಾಂಗ ಯೋಗದ ಮೊದಲ ಎರಡು ಅಂಗಗಳಾದ ಯಮ ಮತ್ತು ನಿಯಮಗಳು ಮನುಷ್ಯನ ವೈಯುಕ್ತಿಕ ಸ್ವಚ್ಛತೆ ಮತ್ತು ಸಾಮಾಜಿಕ ಸ್ವಚ್ಛತೆ ಮತ್ತು ಜೀವನ ಶೈಲಿಯ ಕುರಿತು ತಿಳಿಸಿಕೊಡುತ್ತದೆ.

* ಮೂರನೇ ನಿಯಮವಾದ ಆಸನದಲ್ಲಿ ಯೋಗದ ವಿವಿಧ ಬಗೆಯ ಆಸನಗಳನ್ನು ಅಭ್ಯಾಸ ಮಾಡಬಹುದು.

* ನಾಲ್ಕನೇ ನಿಯಮವಾದ ಪ್ರಾಣಾಯಾಮದಲ್ಲಿ ಉಸಿರಾಟದ ಮೂಲಕ ಹಲವಾರು ಹೃದಯ ಸಂಬಂಧಿ ಶ್ವಾಸಕೋಶ ಸಂಬಂಧಿ ಕಾಯಿಲೆಗಳ ಮೇಲೆ ಹತೋಟಿ ಮತ್ತು ಮಾನಸಿಕ ತುಮುಲಗಳನ್ನು ಕಳೆದುಕೊಳ್ಳಬಹುದು. ಪ್ರತಿದಿನ ಪ್ರಾಣಾಯಾಮದ ಅಭ್ಯಾಸದಿಂದ ಮನಸ್ಸು ಪ್ರಶಾಂತತೆ ಮತ್ತು ಸ್ಥಿತಪ್ರಜ್ಞತೆಯನ್ನು ಪಡೆದುಕೊಳ್ಳುತ್ತದೆ.

* ಐದನೆಯ ಅಂಗವಾದ ಪ್ರತ್ಯಾಹಾರವು ನಮ್ಮ ಪಂಚೇಂದ್ರಿಯಗಳ ಮೇಲೆ ಉತ್ತಮವಾದ ನಿಯಂತ್ರಣವನ್ನು ಹೊಂದಲು ಮತ್ತು ಧ್ಯಾನದ ಪೂರ್ವ ತಯಾರಿಗೆ ಸಹಾಯಕ.

* ಅಷ್ಟಾಂಗ ಯೋಗದ ಆರನೆಯ ಅಂಗವಾದ ಧಾರಣವು ಧ್ಯಾನದ ಪೂರ್ವಸ್ಥಿತಿಯಾಗಿದ್ದು ಧ್ಯಾನಕ್ಕೆ ಮುಂಚೆ ಬರುವ ಎಲ್ಲಾ ರೀತಿಯ ಯೋಚನೆಗಳನ್ನು ಚಟುವಟಿಕೆಗಳನ್ನು ನಿಯಂತ್ರಿಸುವ ಸ್ಥಿತಿ ಇದಾಗಿರುತ್ತದೆ. ಧಾರಣ ಎಂಬುದರ ಅರ್ಥ ಕ್ಷಮತೆ ಎಂದು ಕೂಡ ಆಗಿದೆ.

* ಅಷ್ಟಾಂಗ ಯೋಗದ 7ನೇ ಅಂಗವಾದ ಧ್ಯಾನವು ತನು, ಮನಗಳನ್ನು ಏಕತ್ರದೆಡೆಗೆ ನೆಲೆಸುವಂತೆ ಮಾಡಿ ಸಂಪೂರ್ಣ ಮನಸ್ಸನ್ನು ಅಭೂತಪೂರ್ವ ಧ್ಯಾನಸ್ತ ಸ್ಥಿತಿಗೆ ಒಯ್ಯುತ್ತದೆ. ತನು ಮನಗಳ ಕ್ಲೇಶವನ್ನು ಕಳೆದು ಮನಸ್ಸನ್ನು ಶುಭ್ರ, ನಿರಾಳ ಮತ್ತು ನಿರ್ಮಲ ಸ್ಥಿತಿಗೆಳಸುತ್ತದೆ.

* ಅಷ್ಟಾಂಗ ಯೋಗದ ಎಂಟನೆಯ ಅಂಗ ಸಮಾಧಿ ಸ್ಥಿತಿ. ಅದೊಂದು ಅದ್ಭುತವಾದ ಸಾಧನಾ ಪಥ. ಯೋಗದ ಉಳಿದೆಲ್ಲ ಅಂಗಗಳನ್ನು ಅಭ್ಯಸಿಸುತ್ತ ಮನುಷ್ಯ ಧ್ಯಾನಪೂರ್ವಕವಾಗಿ ಈ ಸ್ಥಿತಿಯಲ್ಲಿ ಉಳಿದು ಹೋಗುತ್ತಾನೆ. ಇದೊಂದು ದೈವಿಕ ಅನುಭವದ ಸ್ಥಿತಿ.


ಯೋಗಾಭ್ಯಾಸದ ಸಮಯ:

ಪ್ರಾತಃಕಾಲದ ಬ್ರಾಹ್ಮಿ ಮುಹೂರ್ತ ಯೋಗಾಭ್ಯಾಸಕ್ಕೆ ಅತ್ಯಂತ ಪ್ರಶಸ್ತವಾದ ಸಮಯ. ಈ ಸಮಯವು ನಿರ್ಮಲ ಮತ್ತು ನಿಶ್ಯಬ್ದವಾಗಿದ್ದು ಯೋಗಭ್ಯಾಸ ಮಾಡಲು ಉತ್ತಮ. ಯೋಗಭ್ಯಾಸಕ್ಕೆ ಮುನ್ನ ನಮ್ಮ ಪ್ರಾತಃಕಾಲದ ನಿತ್ಯ ವಿಧಿಗಳನ್ನು ಪೂರೈಸಿಕೊಂಡಿರಬೇಕು. ಹಗುರವಾದ, ಸಡಿಲವಾದ ಮತ್ತು ಮೆದುವಾದ ಹತ್ತಿಯ ಬಟ್ಟೆಗಳನ್ನು ಧರಿಸಿರಬೇಕು. ಯೋಗಾಭ್ಯಾಸದ ಸಮಯದಲ್ಲಿ ಮನಸ್ಸು ಸಂಪೂರ್ಣ ತನ್ಮಯತೆಯನ್ನು ಬಯಸುತ್ತದೆ. ಸ್ವಚ್ಛ, ಶುದ್ಧ ಪರಿಸರದಲ್ಲಿ ಸಮನಾದ ನೆಲದ ಮೇಲೆ ಯೋಗ ಮ್ಯಾಟ್ ಇಲ್ಲವೇ ಜಮಖಾನವನ್ನು ಹಾಸಿ ಯೋಗಾಭ್ಯಾಸವನ್ನು ಮಾಡಬೇಕು. ಕಣ್ಣು ಮುಚ್ಚಿ, ಕರ ಮುಗಿದ ಸ್ಥಿತಿಯಲ್ಲಿ ಪ್ರಾರ್ಥನೆಯನ್ನು ಮಾಡುತ್ತಾ ಯೋಗಾಭ್ಯಾಸದ ಆರಂಭ ಮಾಡಬೇಕು. ನಿಧಾನವಾಗಿ ಉಸಿರಾಟದ ಕ್ರಮಬದ್ಧ ಒಳ ತೆಗೆದುಕೊಳ್ಳುವಿಕೆ ಮತ್ತು ಹೊರ ಹಾಕುವಿಕೆಯನ್ನು ಅಂದರೆ ಕ್ರಮಬದ್ಧವಾಗಿ ಉಚ್ವಾಸ ಮತ್ತು ನಿಃಶ್ವಾಸಗಳನ್ನು ಮಾಡುತ್ತಾ ಒಂದೊಂದೇ ಆಸನಗಳನ್ನು ನಿಧಾನವಾಗಿ, ಪಾಂಗಿತವಾಗಿ ಮಾಡಬೇಕು.


ಮೊದಲು ಸ್ಥೂಲ ವ್ಯಾಯಾಮಗಳನ್ನು ಮಾಡಿ ದೇಹವನ್ನು ಸಡಿಲಗೊಳಿಸಿ ನಂತರ ಸೂರ್ಯ ನಮಸ್ಕಾರ, ನಿಂತು ಮಾಡುವ, ಕುಳಿತು ಮಾಡುವ, ಮಲಗಿ ಮಾಡುವ ಎಲ್ಲಾ ಆಸನಗಳನ್ನು ಪೂರೈಸಿದ ಮೇಲೆ ಶವಾಸನ ಮಾಡಬೇಕು. ಶವಾಸನ ಸ್ಥಿತಿಯಲ್ಲಿಯೇ ಮಲಗಿ ಸೃಷ್ಟಿ ಸ್ಥಿತಿ ಮತ್ತು ಲಯಗಳ ಸಂಕೇತವಾದ ಅ, ಉ, ಮ ಕಾರಗಳನ್ನು ಮತ್ತು ಓಂಕಾರಗಳ ನಾದಾನುಸಂಧಾನ ಮಾಡುವುದು ಅತ್ಯಂತ ಅವಶ್ಯಕ. ನಂತರದ ಶವಾಸನದ ಸ್ಥಿತಿಯಲ್ಲಿ ದೇಹದ ಪ್ರತಿಯೊಂದು ಅಂಗಗಳನ್ನು ವಿಶ್ರಾಂತ ಸ್ಥಿತಿಗೆಳಸಬೇಕು. ಶವಾಸನದ ನಂತರ ನಿಧಾನವಾಗಿ ದೇಹವನ್ನು ಸಚೇತನಗೊಳಿಸಿ ಬಲಗಡೆ ಮಗ್ಗುಲಿಗೆ ಹೊರಳಿ ಎದ್ದು ಕುಳಿತು ಪದ್ಮಾಸನ ಇಲ್ಲವೇ ಸುಖಾಸನದಲ್ಲಿ ಕುಳಿತು ಪ್ರಾಣಾಯಾಮದ ಅಭ್ಯಾಸ ಮಾಡಬೇಕು. ಪ್ರಾಣಾಯಾಮದಲ್ಲಿಯೂ ಕಪಾಲಬಾತಿ, ಬಸ್ತ್ರಿಕ, ಅನುಲೋಮ-ವಿಲೋಮ ಪ್ರಾಣಾಯಾಮ ಮತ್ತು ಭ್ರಮರಿ ಪ್ರಾಣಾಯಾಮಗಳನ್ನು ಸರ್ವತ್ರ ಸಮಯದಲ್ಲಿಯೂ ಅಭ್ಯಾಸ ಮಾಡಬಹುದು, ಆದರೆ ಉಜ್ಜಾಯಿ ಪ್ರಾಣಾಯಾಮ, ಶೀತಲೀ ಮತ್ತು ಶೀತ್ಕಾರಿಗಳನ್ನು ವಿವಿಧ ಋತುಗಳಿಗೆ ಅನುಸಾರವಾಗಿ ಮಾತ್ರ ಅಭ್ಯಾಸ ಬೇಕು. ಅಂತಿಮವಾಗಿ ಮತ್ತೊಂದು ಬಾರಿ ಶಾಂತಿ ಮಂತ್ರದ 


ಸರ್ವೇ ಭವಂತು ಸುಖಿನಃ

ಸರ್ವೇ ಸಂತು ನಿರಾಮಯಃ

ಸರ್ವೇ ಭದ್ರಾಣಿ ಪಶ್ಯಂತು

ಮಾಕಶ್ಚಿತ್ ದುಃಖ ಭಾಗ ಭವೇತ


ಎಂದು ಪ್ರಾರ್ಥನೆಯ ಮೂಲಕ ಯೋಗಾಭ್ಯಾಸಕ್ಕೆ ಕೊನೆ ಹಾಡಿ ಎರಡು ಕೈಗಳನ್ನು ಬಲವಾಗಿ ಉಜ್ಜಿ ಕಣ್ಣುಗಳು, ಮುಖ ಮತ್ತು ಕುತ್ತಿಗೆಯ ಭಾಗದವರೆಗೆ ಅಂಗೈಗಳಿಂದ ಸವರುತ್ತಾ ನಿಧಾನವಾಗಿ ಎರಡು ಕೈಗಳನ್ನು ಎದೆಯ ಮುಂಭಾಗದಲ್ಲಿ ಅಂಜಲಿ ಮುದ್ರೆಯಲ್ಲಿ ಹಿಡಿದು ಕಣ್ಣುಗಳನ್ನು ನಿಧಾನವಾಗಿ ತೆರೆಯುತ್ತಾ


ಕರಾ ಗ್ರೇ ವಸತೇ ಲಕ್ಷ್ಮಿ, ಕರಮಧ್ಯೇ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೇ ಕರ ದರ್ಶನಂ ಶುಭಂ ಕರೋತಿ


ಎಂದು ಹೇಳುತ್ತಾ ಎರಡು ಕೈಗಳನ್ನು ದಿಟ್ಟಿಸಿ ನೋಡಬೇಕು. ಭಾರತೀಯ ಸಭ್ಯತೆಯಲ್ಲಿ ಇದುವರೆಗೂ ನಮ್ಮ ಯೋಗಾಭ್ಯಾಸದ ಸಮಯದಲ್ಲಿ ಭೂಮಿ ತಾಯಿಯನ್ನು ನಾವು ಮೆಟ್ಟಿರುವುದರಿಂದ ಆಕೆಯನ್ನು


ಸಮುದ್ರ ವಸನೆ ದೇವಿ ಪರ್ವತಸ್ಥನ ಮಂಡಲೆ,

ವಿಷ್ಣು ಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವಮೇ


ಎಂದು ಕ್ಷಮೆ ಯಾಚಿಸುವ ಪ್ರಾರ್ಥನೆಯನ್ನು ಮಾಡಿ ಅಭ್ಯಾಸವನ್ನು ಮುಗಿಸಬೇಕು.


ಯೋಗಾಭ್ಯಾಸ ಮಾಡುವವರು ಹಿತಭುಕ್, ಮಿತಭುಕ್ ಮತ್ತು ಋತುಭುಕ್ ಎಂಬ ಮೂರು ನಿಯಮಗಳನ್ನು ಹಾಕಿಕೊಳ್ಳಬೇಕು. ಹಿತ, ಮಿತವಾದ ಮತ್ತು ಋತು ಅನುಸಾರವಾಗಿ ಆಹಾರವನ್ನು ಸೇವಿಸುವುದು ಅಪೇಕ್ಷಣೀಯ. ಸಾತ್ವಿಕ ಆಹಾರ ಸೇವನೆಯೂ ಕೂಡ ಯೋಗ ಅಭ್ಯಾಸಗಳಿಗೆ ಉತ್ತಮ ಫಲವನ್ನು ತಂದುಕೊಡುತ್ತದೆ.

ಯೋಗದಲ್ಲಿ ಆಸನ ಮತ್ತು ಪ್ರಾಣಾಯಾಮಗಳನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ವ್ಯಕ್ತಿಯು ದೈಹಿಕವಾಗಿ ಸದೃಢನಾಗುತ್ತಾನೆ. ನೋವುಗಳು ಬರುವುದಿಲ್ಲವೆಂದಲ್ಲ ಆದರೆ ಆ ನೋವುಗಳನ್ನು ಸಹಿಸಿಕೊಳ್ಳುವ ಕ್ಷಮತೆಯು ಆತನಲ್ಲಿ ಹೆಚ್ಚಾಗುತ್ತದೆ. ಹೆಣ್ಣು ಮಕ್ಕಳು  ಅತ್ಯವಶ್ಯಕವಾಗಿ ಯೋಗದ ಅಭ್ಯಾಸವನ್ನು ಮಾಡಲೇಬೇಕು. ತನ್ನ ಜೀವನದ ಹಲವಾರು ಘಟ್ಟಗಳಲ್ಲಿ ಅನೇಕ ಮನೋದೈಹೀಕ ಸ್ಥಿತ್ಯಂತರಗಳನ್ನು ಕಾಣುವ ಹೆಣ್ಣು ಜೀವ ತನ್ನ ಋತು ಸ್ರಾವದ ಸಮಯದಲ್ಲಿ ಉಂಟಾಗುವ ಕಿಬ್ಬೊಟ್ಟೆಯ ನೋವಿಗೆ ಕೈಕಾಲುಗಳ ಸೆಡೆತಕ್ಕೆ, ಸೊಂಟದ ನೋವಿಗೆ ಪರಿಹಾರವನ್ನು ಯೋಗಾಭ್ಯಾಸದ ಮೂಲಕ ಕಂಡುಕೊಳ್ಳಬಹುದು. ಯೋಗಾಭ್ಯಾಸವನ್ನು ಮಾಡುವುದರ ಮೂಲಕ ದೈಹಿಕ ಕ್ಷಮತೆಯನ್ನು ಹೆಚ್ಚಿಸಿಕೊಂಡು ನೋವುಗಳನ್ನು ನಿವಾರಿಸಿಕೊಳ್ಳುವ ಅವಶ್ಯಕತೆ ದೈಹಿಕ ಶ್ರಮ ಪಡದ ಇಂದಿನ ಹೆಣ್ಣು ಮಕ್ಕಳಿಗೆ ಹಿಂದೆಂದಿಗಿಂತಲೂ ಹೆಚ್ಚಾಗಿದೆ.


ಕಾರಣ ಯೋಗ ಮಾಡುವ ಭಾಗ್ಯವನ್ನು ಹೊಂದೋಣ. ಯೋಗವೇ ಭಾಗ್ಯ ಎಂಬುದರ ಅರಿವನ್ನು ಪಡೆದುಕೊಂಡು ಯೋಗದ ಅಭ್ಯಾಸವನ್ನು ಮುಂದುವರಿಸೋಣ. ಸತ ಚಿತ್ ಆನಂದ ಮೂರ್ತಿಯಾದ ಆದಿ ಯೋಗಿ ಶಂಕರನ ಅನುಗ್ರಹ ಪಡೆಯೋಣ. ಎಲ್ಲರಿಗೂ ಒಂಬತ್ತನೇ ಅಂತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು.


- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top