ಸರಳವಾದ ನಾಲಿಗೆ ನುಲಿಗೆ (TONGUE TWISTERಗೆ) ಪುಟ್ಟಣ್ಣ ಕಣಗಾಲ್ ನಿರ್ದೇಶನದ ಉಪಾಸನೆ ಚಿತ್ರದ ಈ ಜನಪ್ರಿಯ ಗೀತೆಯ ಮೊದಲ ಎರಡು ಸಾಲು ಉದಾಹರಣೆ. ಇವು ರ ಅಕ್ಷರ ಹೊರಳಿಸಲು ನಾಲಿಗೆಗೆ ನೆರವಾಗುತ್ತವೆ. ರ ಕೆಲವು ಮಕ್ಕಳ ನಾಲಿಗೆಯು ಸುಲಭವಾಗಿ ಉಚ್ಚರಿಸಲು ಸಾಧ್ಯವಾಗದ ಅಕ್ಷರ.
ಈಗ ನೇರವಾಗಿ ಈ ಗೀತೆಯ ಕುರಿತು ಗಮನಹರಿಸೋಣ. ಹತ್ತಿರ ಹತ್ತಿರ ಅರ್ಧಶತಮಾನದಿಂದ ಕೇಳಿ, ಕೇಳಿ ಪರವಶವಾಗುತ್ತಿರುವ ಕನ್ನಡ ಹಾಡಿದು. ಬಹುತೇಕ ಸಂಸ್ಕೃತ ಪದಗಳೇ ತುಂಬಿರುವ ರಚನೆಯಿದು. ಆದರೆ ಎಲ್ಲೂ ಹಾಗನಿಸದು. ಕವಿ ವಿಜಯನಾರಸಿಂಹ ಅವರ ಈ ರಚನೆಗೆ ರಾಷ್ಟ್ರಕವಿ ಕುವೆಂಪು ಅವರೇ ತಲೆದೂಗಿದ್ದರು. ಚಿತ್ರಗೀತೆಯೊಂದು ಈ ರೀತಿ ಶ್ರೇಷ್ಠಮಟ್ಟದ ಪದಸಂಯೋಜನೆ ಪಡೆದು ಎತ್ತರಕ್ಕೆ ಜಿಗಿಯಬಲ್ಲದು ಎಂದು ಕುವೆಂಪು ಅವರಿಗೆ ಮನವರಿಕೆ ಮಾಡಿಸಿದ ಗೀತೆಯಿದು. ಇದರಲ್ಲಿನ ನಾದಬ್ರಹ್ಮನ ಓಂಕಾರನಾದದಂತಹ ಆಧ್ಯಾತ್ಮಿಕ ವಿಚಾರಸ್ಪರ್ಶವಿರುವ ಸಾಲು ಕುವೆಂಪುರವರ ಗಮನ ಸೆಳೆದಿತ್ತು.
ಕನ್ಯಾಕುಮಾರಿಯಲ್ಲಿ 'ಶ್ರೀ ವಿವೇಕಾನಂದ ಶಿಲಾ ಸ್ಮಾರಕ' ನಿರ್ಮಾಣವಾದದ್ದು 1970ರಲ್ಲಿ. 1973ರಲ್ಲಿ ಅಲ್ಲಿಗೆ ಹೋಗಿ ಚಿತ್ರೀಕರಿಸಿದ ಮೊದಲ ಕನ್ನಡ ಚಿತ್ರವಿದು. ಬಿಡುಗಡೆ 1974ರಲ್ಲಿ. ಭಾರತೀಯರ ಧಮನಿ-ಧಮನಿಯಲ್ಲಿ ದೇಶಪ್ರೇಮ ಮಿಡಿಸುವಂತಹ ಆ ಭವ್ಯ ಸ್ಮಾರಕ ನಿರ್ಮಾಣದ ಮೊದಲ ಹಂತದ ನೋಟ ಈ ಹಾಡನ್ನು ತೆರೆಯ ಮೇಲೆ ವೀಕ್ಷಿಸುವಾಗ ಲಭ್ಯ!
ಈ ಗೀತೆ ಸಾರಮತಿ (ಚಾರುಮತಿ) ರಾಗವನ್ನಾಧರಿಸಿದೆ. ಸನ್ನಿವೇಶದ ಭಾವತೀವ್ರತೆಯನ್ನು ಸೃಷ್ಟಿಸಲು ಅತ್ಯಂತ ಸಮರ್ಥವಾಗಿದೆ. ವೀಣೆ ಮತ್ತು ಮೃದಂಗದ ದನಿ ದಿವ್ಯಾನುಭೂತಿ ಉಂಟುಮಾಡುತ್ತದೆ. ಎಪ್ಪತ್ತರ ದಶಕದಲ್ಲಿ ಹಾಡಲು ಬರಲಿ, ಬರದಿರಲಿ ಎಲ್ಲೆಲ್ಲೂ ಇದರದೇ ಚಮಕ್. ಇದರದೇ ದಮಕ್. ಈ ಹಾಡು ಬಂದ ಮೇಲೆ ಇದರದೇ ಹವಾ. ಇದರದೇ ಜಾದು. ಹೆಣ್ಣು ನೋಡಲು ಬಂದಾಗಲೂ ಇದೇ ಹಾಡನ್ನು ಹಾಡಿಸುವಷ್ಟರ ಮಟ್ಟಿಗೆ ಇದು ಜನಮನವನ್ನು ಆವರಿಸಿಕೊಂಡಿತ್ತು. ಶಾಲಾ, ಕಾಲೇಜುಗಳ ಚಿತ್ರಗೀತೆ ಸ್ಪರ್ಧೆಯಿರಲಿ, ಅಂತ್ಯಾಕ್ಷರಿ ಆಟವಿರಲಿ ಇದರದೇ ಗುನುಗು, ಇದರದೇ ಪುನುಗು.
ಗಾಯಕಿ ಎಸ್. ಜಾನಕಿಯವರು ಈ ಹಾಡನ್ನು ಹಾಡಲೆಂದೇ ಹುಟ್ಟಿಬಂದರೇನೋ ಎಂಬಂತೆ ತನುತುಂಬಿ, ಮನತುಂಬಿ, ಚಿತ್ತಚೇತನ ತುಂಬಿ ಹಾಡಿದ್ದಾರೆ. ಅವರದು ಬಣ್ಣನೆಗೆಟುಕದ ಭಾವಪರವಶಗೊಳಿಸುವ ಗಾಯನ. ಗಾನಸರಸ್ವತಿ ನಿವಸಿಸಲು ಸೂಕ್ತ ತಾಣ ಹುಡುಕಿ, ಹುಡುಕಿ ಕಡೆಗೆ ಜಾನಕಿಯವರ ಶಾರೀರಕ್ಕಿಂತ ಉತ್ತಮ ಸ್ಥಳ ಸಿಗದೆಂದು ಅಲ್ಲೇ ನೆಲೆಗೊಂಡಳೇನೋ ಎಂದು ಭಾವಿಸುವಂತಿದೆ. ಅಷ್ಟು ಪರಿಪಕ್ವ ಗಾಯನ. ಆ ಸಂಗೀತ ಶಾರದೆಗೆ ಅಕ್ಷರದ ಅಭ್ಯುತ್ಥಾನ ಗೌರವ (STANDING OVATION OF LETTERS) ಸಲ್ಲಲೇಬೇಕು. ಆಭೇರಿ ರಾಗದಲ್ಲಿ "ಸಿಂಗಾರ ವೇಲನೆ ದೇವ" ಎಂದ ಸಿರಿಕಂಠದ ಒಡತಿಗೆ ಇದು ಅಕ್ಷರದಾರತಿ.
ಇದೇ ಉಪಾಸನೆ ಚಿತ್ರದಲ್ಲಿ ಅಳವಡಿಸಲ್ಪಟ್ಟ ಪುರಂದರದಾಸರ ರಚನೆ "ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ" ಎಂಬ ಹಾಡು ಸಹ ಸಾರಮತಿಯೇ. ಪುಟ್ಟಣ್ಣ ಕಣಗಾಲ್, ಸಂಗೀತ ನಿರ್ದೇಶಕ ವಿಜಯಭಾಸ್ಕರ್, ವಿಜಯನಾರಸಿಂಹ, ಎಸ್. ಜಾನಕಿ ಅವರಂತಹ ದಿವ್ಯ ಪ್ರತಿಭೆಗಳ ರಸಸಂಗಮವನ್ನು ಕನ್ಯಾಕುಮಾರಿಯನ್ನು ಕುರಿತಾದ ಈ ಗೀತೆಯಲ್ಲಿ ಕಾಣಬಹುದು. ಈ ಹಾಡಿಗೆ ಇದೀಗ 48ರ ನಡುವಯಸ್ಸು. ಆದರೂ ಹದಿಹರೆಯದ ಉತ್ಸಾಹ-ಹುಮ್ಮಸ್ಸನ್ನು ಇನ್ನೂ ಉಳಿಸಿಕೊಂಡಿದೆ. ಇಂತಹ ಹಾಡುಗಳೇ ನಮ್ಮ ಗಾನಪರಂಪರೆಯ ಬಲಿಷ್ಠ ಕೊಂಡಿಗಳು. ಭಾವನೆಗಳ ರಸಾಭಿವ್ಯಕ್ತಿಗೆ ಸಂಗೀತ ಹೇಗೆ ಮಾಧ್ಯಮವಾಗಬಹುದು ಎಂಬುದನ್ನು ಇಂತಹ ಗೀತೆಗಳು ದೃಢಪಡಿಸುತ್ತವೆ. ಅಂತರಂಗದಲ್ಲಿ ಮಡುಗಟ್ಟಿ ನಿಂತಿರುವ ನೋವು ಹಾಡಾಗಿ ಹರಿದು ಮನವನ್ನು ನಿರುಮ್ಮಳವಾಗಿಸಿ ಸಂಗೀತಕ್ಕಿರುವ ಚಿಕಿತ್ಸಕ ಗುಣವನ್ನು ಸಾಬೀತುಪಡಿಸುತ್ತವೆ.
ಒಂದು ಮಾತು. ಈ ಹಾಡು ಚಿತ್ರದ ಕ್ಲೈಮ್ಯಾಕ್ಸ್‌ನಲ್ಲಿ ಬರುವಂತಹುದು. ಸಾಮಾನ್ಯವಾಗಿ ಕ್ಲೈಮ್ಯಾಕ್ಸ್ ಎಂದರೆ ಒಂದು ಕಾದಾಟ/ಫೈಟಿಂಗ್ ಇರಲೇಬೇಕೆನ್ನುವ ಚಿತ್ರರಂಗದ ಪೂರ್ವನಿರ್ಧಾರಿತ ನಿಲುವನ್ನು ಹಾಡಿನ ಮೂಲಕ ತೊಡೆದು ಹಾಕಿದ ಗೀತೆಯಿದು. "ಸಾಕಾರ ಷಡ್ಜದ ಶರಧಿ ತರಂಗಿಣಿ. ಸಾಗರ ಸಂಗಮ ಸರಸ ವಿಹಾರಿಣಿ" ಎಂಬಂತಹ ಸಾಲುಗಳು ಸಮರ್ಥವಾಗಿ ಆ ಕೆಲಸವನ್ನು ನಿರ್ವಹಿಸಿವೆ. ಅಲೆಗಳ ಉಬ್ಬರವಿಳಿತದಲ್ಲಿ ಹೊಯ್ದಾಡುತ್ತ ಬರುವ ದೋಣಿ, ಅದರಲ್ಲಿನ ಪಯಣಿಗರ ಆತಂಕವು, ಕ್ಲೈಮ್ಯಾಕ್ಸ್‌ನಲ್ಲಿ ಬೇಕಾದ ಭಾವತೀವ್ರತೆಯನ್ನು ಸೃಷ್ಟಿಸುತ್ತವೆ.
ಮತ್ತೊಂದು ಮಾತು. ಈ ಹಾಡು ಭಾವತೀವ್ರತೆಯಿಲ್ಲದೆ ಚಿತ್ರದ ನಡುವೆಯೂ ಒಮ್ಮೆ ಬರುತ್ತದೆ. ಹಾಗಾಗಿ ಆರತಿಯವರ ಸಂಯಮ ಮತ್ತು ಭಾವತಪ್ತ ಅಭಿನಯಕ್ಕೆ ಎರಡು ಅವಕಾಶಗಳನ್ನು ಇದೇ ಗೀತೆ ಒದಗಿಸಿಕೊಟ್ಟಿದೆ.
ವಿಜಯಭಾಸ್ಕರ್ ಅವರು ಪ್ರಯೋಗಶೀಲರು. ಅವರೇ ಸಂಯೋಜಿಸಿರುವ ಮಲಯಮಾರುತ ಚಿತ್ರದ "ಎಲ್ಲೆಲ್ಲೂ ಸಂಗೀತವೇ, ಎಲ್ಲೆಲ್ಲೂ ಸೌಂದರ್ಯವೇ" ಗೀತೆ ಸಹ ಚಾರುಮತಿ ರಾಗಾಧಾರಿತವೇ. ಆದರೆ ಭಾರತ ಭೂಶಿರ ಮಂದಿರ ಸುಂದರಿ ಗೀತೆಯ ರಾಗಸಂಯೋಜನೆ ಅವರ ಸುಮೇರು ಸೃಷ್ಟಿ. ಇಂದಿಗೂ ಕೇಳುಗರ ಮೈಮನಗಳನ್ನು ರೋಮಾಂಚನಗೊಳಿಸುವಂತಹ ಗೀತೆಯಿದು. ಭಾರತೀಯ ಚಲನಚಿತ್ರ ಗೀತೆಗಳ ಪೈಕಿ ಚಿರಸ್ಥಾಯಿಯಾಗಿ ಉಳಿಯಬಲ್ಲಂತಹ ಕೆಲವು ಹಾಡುಗಳಲ್ಲಿ ಇದೂ ಒಂದು.
ಜೀವಜೀವದ ಸ್ವರಸಂಚಾರ, ಅಮೃತಚೇತನ ರಸಧಾರ ಎಂದು ವಿಜಯನಾರಸಿಂಹ ಅವರೇ ತಮ್ಮ ಇನ್ನೊಂದು ಗೀತೆಯಲ್ಲಿ ಪ್ರೇಮಕ್ಕೆ ನಿರ್ವಚನ ಬರೆದಿದ್ದಾರೆ. ಇದೇ ವ್ಯಾಖ್ಯೆ ಸಂಗೀತಕ್ಕೂ ಅನ್ವಯಿಸುತ್ತದೆ. ಸಂಗೀತವೆಂಬುದು ಒಂದು ಆರೋಗ್ಯಕರ ಚಿಕಿತ್ಸೆ. ಈ ಕುರಿತಾಗಿ ನಡೆದ ಸಂಶೋಧನೆಗಳು ಇದನ್ನು ದೃಢಪಡಿಸಿವೆ. ಮನಸ್ಸನ್ನು ನಿರಾಳವಾಗಿಸಿ ದುಗುಡ, ಆತಂಕಗಳನ್ನು ನೀಗಿ ಚೈತನ್ಯದಾಯಕವಾಗಿಸುವ ಸಂಜೀವಿನಿ ಶಕ್ತಿ ಅದಕ್ಕಿದೆ.
ಒಮ್ಮೆ ತದೇಕಚಿತ್ತದಿಂದ "ಭಾರತ ಭೂಶಿರ ಮಂದಿರ ಸುಂದರಿ ಭುವನ ಮನೋಹರಿ ಕನ್ಯಾಕುಮಾರಿ" ಎಂದು ನಿಮಗೆ ನೀವೇ ಗುನುಗಿಕೊಳ್ಳಿ. ಅದು ಕೋಟಿ ಕೋಟಿ ಕಂಠ ಕಲಕಲ ನಿನಾದವಾಗುತ್ತದೆ. ಕನ್ಯಾಕುಮಾರಿಗೆ ಮತ್ತೊಮ್ಮೆ ಹೋಗಿಯೇ ಬಿಡೋಣವೆನಿಸುತ್ತದೆ. ಅದು ಈ ಹಾಡಿನ ಅಂತಃಶಕ್ತಿ. ಹೋಗಿ ಬರುವವರಿಗೆ ಒಂದು ಶುಭಹಾರೈಕೆ. ಹಾಡಿನಲ್ಲೇ ನೋಡಿಬಂದ ಖುಶಿ ಅನುಭವಿಸಿದವರಿಗೆ ಶ್ರದ್ಧಾಭಕ್ತಿಯ ನಮನ.
ಭೂಶಿರ ಎಂದರೇನು?:
ಭಾರತ ಭೂಶಿರ ಎಂದಿದೆ. ಆದರೆ ಭಾರತದ ಶಿರ ಕಾಶ್ಮೀರವಲ್ಲವೇ ಎಂದು ಬಹಳ ಜನ ಕೇಳುವುದುಂಟು. ಭೂ ಶಿರವಲ್ಲ. ಒಂದೇ ಪದ. ಭೂಶಿರ. ಭೂಶಿರವೆಂದರೆ ಸಾಗರ, ಸರೋವರ ಅಥವಾ ನದಿಯೊಳಗೆ ಚಾಚಿಕೊಂಡಿರುವ ಎತ್ತರದ ಭೂಭಾಗ. ಇಂಗ್ಲಿಷಿನಲ್ಲಿ CAPE ಎನ್ನುತ್ತಾರೆ.
-ಕೆ. ರಾಜಕುಮಾರ್
ಸನಿಹವಾಣಿ: 9035313490
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ