ನಾನು ಚಿಕ್ಕವನಿದ್ದಾಗ ಹುಟ್ಟಿ ಬೆಳೆದದ್ದು ನೆಡೂರಿನ ಅಪ್ಪಯ್ಯನ ಮನೆಯಲ್ಲಿ. ಅವರದ್ದು ಕೃಷಿ ಕುಟುಂಬ. ಕೃಷಿ ಜಾನುವಾರುಗಳೇ ಅವರ ಪ್ರೀತಿಯ ಆಸ್ತಿ. ಅವರದ್ದು ಲಾಭ ನಷ್ಟದ ಕೃಷಿ ವೃತ್ತಿಯಲ್ಲ; ಬದಲಾಗಿ ಅದೊಂದು ಬದುಕಿನ ಅವಿಭಾಜ್ಯ ಅಂಗವೆಂದು ನಂಬಿ ಬದುಕಿದವರು. ಬೆಳಿಗ್ಗೆಯಿಂದ ಹಿಡಿದು ರಾತ್ರಿಯ ತನಕ ಹಟ್ಟಿ ಹೇೂರಿ ದನಕರುಗಳ ಜೊತೆಗೆ ಒಡನಾಟ.
ಗದ್ದೆ ಉಳುವ ಸಮಯದಲ್ಲೂ ನಾನು ಅಪ್ಪಯ್ಯನ ಜೊತೆ ಗದ್ದೆಗೂ ಹೇೂಗುತ್ತಿದ್ದೆ. ಅದು ನನ್ನ ಆಟದ ಪ್ರಾಯವಾದ ಕಾರಣ ಗದ್ದೆ ಹೂಡಿದ ನಂತರ (ಉಳುವುದು) ಗೇೂರಿ ಹಾಕಿ ಸಮತಟ್ಟು ಮಾಡುವಾಗ ಕೇೂಣಗಳಿಗೆ ಕಟ್ಟಿದ ಗೇೂರಿಯ ಮೇಲೆ ಕೂತು ಹೇೂಗುವುದೇ ಸಾಹಸದ ಕೆಸರಿನ ಆಟ. ಹೊಳೆಯಲ್ಲಿ ಕೇೂಣಗಳನ್ನು ಮೀಯಿಸುವಾಗ ಕೂಡ ಕೇೂಣಗಳ ಬಾಲ ಹಿಡಿದು ಈಜು ಕಲಿತಿದ್ದು ಹೇಗೆ ಮರೆಯಲು ಸಾಧ್ಯ?
ನಮ್ಮ ಅಪ್ಪಯ್ಯ ಹೆಸರಿಗಾಗಿ ಎಂದೂ ಕೆಲಸ ಮಾಡಿದವರಲ್ಲ. ಅವರಾಯಿತು ಅವರ ಕೆಲಸವಾಯಿತು. ಯಾರಿಗೂ ತೊಂದರೆ ಮಾಡಿದವರು ಅಲ್ಲ. ಅಪ್ಪಯ್ಯನ ದಿವ್ಯ ನಾಮ ಪರಮೇಶ್ವರ ಶೆಟ್ಟ್ರ ಆದರೆ ಪ್ರತಿಯೊಬ್ಬರು ಅವರನ್ನು ಕೊಂಗಾಟದಿಂದ ಕರೆಯುವುದು "ಪಕ್ಕು" ಶೆಟ್ಟ್ರ. ಹಾಗಾಗಿ ಈ ಹೆಸರಿನಲ್ಲಿಯೇ ಗುರುತಿಸಿಕೊಂಡರು.
ಹಣದ ಲೆಕ್ಕಾಚಾರ ಎಂದೂ ಇಟ್ಟು ಕೊಂಡವರಲ್ಲ. ಅವರಿಗೆ ಹಣಕಾಸಿನ ಮಂತ್ರಿ ಅಂದರೆ ನಮ್ಮ ಅಮ್ಮನೇ. ಅವಳು ಲೆಕ್ಕಾಚಾರದಲ್ಲಿ ಬಾರಿ ಜಾಣೆ. ಹಾಗಾಗಿ ನಮಗೆ ಶಾಲೆಗೆ ಹಬ್ಬಕ್ಕೆ ಹೇೂಗುವಾಗ ಅಮ್ಮನ ಸೀರೆಯ ಸೆರಗಿನಲ್ಲಿ ಕಟ್ಟಿಟ್ಟ ಹಣವೇ ನಮಗೆ ಪ್ರೀತಿಯ ಉಡುಗೊರೆ. ಇಂದಿಗೂ ಅಮ್ಮನ ವಾತ್ಸಲ್ಯದ ಮುಷ್ಟಿಯ ಹಣ ನೆನಪಾಗುತ್ತದೆ. ಇದರ ಹಿಂದೆ ಕಾಣದ ಅಪ್ಪಯ್ಯ ಶ್ರಮವೂ ಇದೆ.
ನನ್ನ ಅಪ್ಪಯ್ಯನಿಗೆ ಕಾಯಕವೇ ಒಂದು ದುಶ್ಚಟ ಅನ್ನುವುದು ಬಿಟ್ಟರೆ ಬೇರೆ ಯಾವ ಕೆಟ್ಟ ಅಭ್ಯಾಸವಿರಲಿಲ್ಲ. ಅಪರೂಪಕ್ಕೆ ದೀಪಾವಳಿ ಸಮಯಕ್ಕೆ ಕೇೂಳಿ ಪಡೆಗೆ ತಾವೇ ಕಟ್ಟಿ ಸಾಕಿ ಬೆಳೆಸಿದ ಕೇೂಳಿ ಹುಂಜವನ್ನು ತೆಗೆದುಕೊಂಡು ಹೇೂಗುವ ಅಭ್ಯಾಸ. ಆಗ ನಾನು ಬಾರಿ ಚಿಕ್ಕವ ಅಂದು ದೀಪಾವಳಿಯ ಮಾರನೇ ದಿನ. ಅಪ್ಪಯ್ಯನ ಕುಕ್ಕುಟದ ಕದನ ಜಾನುವಾರ ಕಟ್ಟೆಯಲ್ಲಿ. ನಾನು ಅವರ ಜೊತೆಗೆ ಹೇೂಗಿದ್ಧೆ. ಅಂದು ಅಪ್ಪಯ್ಯ ಕಬ್ಬರದ ಕೇೂಳಿ ಗೆದ್ದಿತು. ಆದರೆ (ವಟ್ಬಂಟ್) ರಿಸಲ್ಟ್ ಬರುವಾಗ ರಾತ್ರಿಯಾಗಿತ್ತು. ಅಂದು ಇಂದಿನ ಹಾಗೆ ಬಸ್ಸು ಕಾರುಗಳಿರಲಿಲ್ಲ. ನಡೆದೇ ಬರಬೇಕಿತ್ತು. ಜಾನುವಾರು ಕಟ್ಟೆಯಿಂದ ನಡೂರಿಗೆ. ಸುಮಾರು 8ರಿಂದ 10 ಮೈಲು. ಅಂದು ಸಂಜೆ ಎಲ್ಲಿಲ್ಲದ ಜೇೂರು ಮಳೆ ಬಂದು ನಾವು ದಾಟಿ ಬರಬೇಕಾದ ಆಲ್ತಾರು ಹೊಳೆ ತುಂಬಿ ಹೇೂಗಿತ್ತು. ಹೊಳೆಗೆ ಹಾಕಿದ ಸಂಕಕ್ಕೆ ಹಿಡಿಗಾಳವೂ ಇರಲಿಲ್ಲ. ಅಂದು ಆ ನದಿಯನ್ನು ಅಪ್ಪಯ್ಯನ ಜೊತೆ ಹೇಗೆ ಧಾಟಿ ಬಂದಿದ್ದೆ ಅನ್ನುವುದನ್ನು ನೆನಪಿಸಿಕೊಂಡರೆ ಇಂದಿಗೂ ಮೈ ಜುಮ್ಮೆನಿಸುತ್ತದೆ.
ಅಂತೂ ಇಂತೂ ನಮ್ಮದು ಅಳಿಯ ಸಂತಾನ ನೇೂಡಿ. ನಮ್ಮ ಅಪ್ಪಯ್ಯ ಕೊನೆಗೂ ಅಮ್ಮನ ಮನೆಗೆ ಬಂದ್ರು. ಕೇೂಟಂಬೈಲಿನಲ್ಲಿ ವಾಸ್ತವ. ತಕ್ಷಣವೇ ಅಪ್ಪಯ್ಯನಿಗೆ ಹೊಸ ಜವಾಬ್ದಾರಿ. 1978/ 80ರ ಕಾಲ ಭೂಮಸೂದೆ ಬಂದು ಭೂಮಿ ಕಳೆದುಕೊಳ್ಳಬೇಕಾದ ಕಾಲ. ನಮ್ಮ ಅಮ್ಮನ ಪಾಲಿಗೆ ಬಂದ ಸುಮಾರು 10 ಎಕ್ರೆ ಜಾಗ ಪೇತ್ರಿ ಕೆಳಗಿನ ಸಾಸ್ತಾವಿನಲ್ಲಿ ಅದಾಗಲೇ ನಮ್ಮ ಒಕ್ಕಲು ಗಳನ್ನು ಎಬ್ಬಿಸಿ ಭೂಮಿಯನ್ನು ಸ್ವಾಧೀನ ಪಡಿಸಿಕೊಂಡಿದ್ದರು ನಮ್ಮ ಅಣ್ಣಂದಿರು. ಆ ಭೂಮಿಯನ್ನು ಅಪ್ಪಯ್ಯನೇ ನೇೂಡಿ ಕೊಳ್ಳಬೇಕಾದ ಕಾಲ. ಪ್ರತಿನಿತ್ಯ ಬೆಳಿಗ್ಗೆ 5 ಗಂಟೆಗೆ ಎದ್ದು ಸುಮಾರು 5 ಮೈಲು ನಡೆದು ಹೇೂಗಿ ಸಂಜೆ ವಾಪಾಸು ಬರಬೇಕಿತ್ತು. ಈ ಸಾಹಸವನ್ನು ಕೂಡಾ ಅಪ್ಪಯ್ಯನೇ ಮಾಡಿ ಮುಗಿಸಿದ್ದರು.
ಕಾಯಕವೇ ಕೈಲಾಸ ಎಂದು ನಂಬಿದ್ದ ಅಪ್ಪಯ್ಯ ಅಲ್ಪಕಾಲದ ಅಸೌಖ್ಯಕ್ಕೆ ತುತ್ತಾಗಿ ನಿಧನರಾದರು. ಅಪ್ಪಯ್ಯನ ದೇಹ ಕೃಷಿ ಭೂಮಿಯಲ್ಲಿ ಲೀನಾವಾಗಿ ಹೇೂಗಿತ್ತು. ನಮ್ಮ ಅಪ್ಪಯ್ಯನ ಪ್ರಾಮಾಣಿಕ ಕೃಷಿ ದುಡಿಮೆ ಕೃಷಿ ಸಂಸ್ಕೃತಿ ಕೃಷಿ ಬದುಕು ಇಂದು ನಮಗೆ ಅನ್ನ ನೀಡಿದೆ. ನಮ್ಮ ನಿಮ್ಮೆಲ್ಲರ ಬದುಕಿನಲ್ಲಿ ನಮ್ಮ ನಿಮ್ಮ "ಅಪ್ಪಯ್ಯ"ನೆಂಬ ಮಾದರಿ ವ್ಯಕ್ತಿತ್ವದ ಪ್ರಭಾವ ಚಿರ ಸ್ಮರಣಿಯ ಅಲ್ವೇ?
-ಪ್ರೊ. ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ, ಉಡುಪಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ