ವಿವಿ ಕಾಲೇಜಿನ 118ನೇ ವಾರ್ಷಿಕೋತ್ಸವ
ಮಂಗಳೂರು: ನಾವು ಬೆಳೆಸಿಕೊಳ್ಳುವ ಸ್ವಯಂಶಿಸ್ತು ನಮ್ಮ ಬದುಕಿನುದ್ದಕ್ಕೂ ನೆರವಾಗುತ್ತದೆ. ಇದರೊಂದಿಗೆ ಎಂತಹ ಸಂದರ್ಭದಲ್ಲಿಯೂ ಚೈಚೆಲ್ಲಿ ಕೂರದೆ ಸ್ವಪ್ರಯತ್ನದ ಮೇಲೆ ನಂಬಿಕೆಯಿಡಬೇಕು, ಎಂದು ನಿವೃತ್ತ ಪೊಲೀಸ್ ಅಧೀಕ್ಷಕ (ಸೆಲೆಕ್ಷನ್ ಗ್ರೇಡ್) ರಾಮದಾಸ ಗೌಡ ಎಸ್. ಅಭಿಪ್ರಾಯಪಟ್ಟರು.
ವಿವಿ ಕಾಲೇಜಿನ ರವಿಂದ್ರ ಕಲಾಭವನದಲ್ಲಿ ಬುಧವಾರ ನಡೆದ 118ನೇ ವಾರ್ಷಿಕೋತ್ಸವದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ನಾವು 'ವಸುಧೈವ ಕುಟುಂಬಕಂ'ಎಂಬ ತತ್ವದ ಮೇಲೆ ನಂಬಿಕೆಯಿಟ್ಟವರು, ಯೋಚನೆಗಳಲ್ಲಿ ಅಲ್ಪರಾಗುವುದು ಬೇಡ, ಎಂದರು. ಮಂಗಳೂರು ವಿಶ್ವವಿದ್ಯಾನಿಲಯದ ಪ್ರಭಾರ ಕುಲಪತಿ ಪ್ರೊ. ಜಯರಾಜ್ ಅಮೀನ್ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ, “ನಿಮ್ಮ ಮನಸ್ಸು ವಿಚಾರಧಾರೆಗಳಿಗೆ ಮುಕ್ತವಾಗಿರಲಿ, ಆದರೆ ಯಾವುದೇ ಒಂದು ವಿಚಾರಧಾರೆಗೆ ಕುರುಡಾಗಿ ಅಂಟಿಕೊಳ್ಳಬೇಡಿ. ನಿಮ್ಮಲ್ಲಿ ಸ್ವಂತಿಕೆಯಿರಲಿ” ಎಂದರಲ್ಲದೆ ಸಂವಿಧಾನದ ಮೇಲಿನ ನಂಬಿಕೆ, ವೈಯಕ್ತಿಕ ಇಚ್ಛೆ ಮತ್ತು ಸಾಮಾಜಿಕ ಅಗತ್ಯಗಳನ್ನು ಸರಿದೂಗಿಸುತ್ತದೆ, ಎಂದು ಸಲಹೆ ನೀಡಿದರು.
ವಿದ್ಯಾರ್ಥಿಸಂಘದ ಅಧ್ಯಕ್ಷ ಪ್ರಜನ್ ವಿ. ಶೆಟ್ಟಿ ಅತಿಥಿಗಳ ಮಾತಿಗೆ ಉತ್ತರಿಸಿದರು. ಪ್ರಾಂಶುಪಾಲೆ ಡಾ. ಅನಸೂಯ ರೈ ತಮ್ಮ ಸ್ವಾಗತ ಭಾಷಣದಲ್ಲಿ, ಕಾಲೇಜಿನಲ್ಲಿ ನಡೆಯುವ ಇಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವವಿಕಸನಕ್ಕೆ ನೆರವಾಗುತ್ತಿವೆ, ಎಂದರು. ವಿದ್ಯಾರ್ಥಿಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್ ಅತಿಥಿಗಳ ಪರಿಚಯ ಮಾಡಿದರು. ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಗಾಯತ್ರಿ ಎನ್ ಮತ್ತು ಭೌತಸಾಸ್ತ್ರ ವಿಭಾಗದ ಮುಖ್ಯಸ್ಥೆ ಅರುಣಾಕುಮಾರಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಸಂಘದ ಕಾರ್ಯದರ್ಶಿ ತಶ್ವಿತ್ ಎ ಧನ್ಯವಾದ ಸಮರ್ಪಿಸಿದರು.
ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಕೆ ಎ ನಾಗರತ್ನ ಕಾಲೇಜಿನ ವಾರ್ಷಿಕ ವರದಿ ಓದಿದರು. ಕಲಿಕೆಯಲ್ಲಿ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ವೈಯಕ್ತಿಕವಾಗಿ ಮತ್ತು ತಂಡವಾಗಿ ಅಸಾಧಾರಣ ಪ್ರದರ್ಶನ ನೀಡಿದ ವಿದ್ಯಾರ್ಥಿಗಳಿಗೆ ನೆನಪಿನ ಕಾಣಿಕೆಗಳನ್ನು ವಿತರಿಸಲಾಯಿತು. ಸಮಗ್ರ ಪ್ರಶಸ್ತಿಗಳನ್ನು ಹಸ್ತಾಂತರಿಸಲಾಯಿತು. ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ಕುಮಾರ ಸುಬ್ರಹ್ಮಣ್ಯ ಭಟ್ ಕಾರ್ಯಕ್ರಮ ನಡೆಸಿಕೊಟ್ಟರು.
ವಿದ್ಯಾರ್ಥಿಗಳೇ ನಡೆಸಿಕೊಟ್ಟ 'ಸುದರ್ಶನ ವಿಜಯ'ಯಕ್ಷಗಾನ ಪ್ರಸಂಗ ದೊಡ್ಡಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು. ವಾರ್ಷಿಕೋತ್ಸವ ಪ್ರಯುಕ್ತ ದಿನವಿಡೀ ಸಾಂಸ್ಕೃತಿಕ ವೈವಿಧ್ಯ ನಡೆಯಿತು. ಕಾಲೇಜಿನ ಬೋಧಕ- ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ರ‍್ಯಾಂಕ್ ವಿಜೇತರಿಗೆ ಸನ್ಮಾನ
ಮಂಗಳೂರು ವಿಶ್ವವಿದ್ಯಾನಿಲಯ 2021-22 ನೇ ಸಾಲಿನಲ್ಲಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಬಿ.ಎಯಲ್ಲಿ 9 ನೇ ರ‍್ಯಾಂಕ್ ಗಳಿಸಿದ ಲಿಖಿತಾ ಜಿ ಎನ್, ಬಿ.ಎಸ್ಸಿ ಮೈಕ್ರೋಬಯಾಲಜಿಯಲ್ಲಿ ಅತೀಹೆಚ್ಚು ಅಂಕಗಳಿಸಿದ ಸುಶ್ಮಿತಾ ಕೆ, ಐದು ಮತ್ತು ಆರನೇ ಸೆಮಿಸ್ಟರ್‍ನಲ್ಲಿ ಬಿ.ಕಾಂನಲ್ಲಿ ಅತ್ಯಧಿಕ ಅಂಕಗಳಿಸಿದರು ಷಾಲಿ ಹಾಗೂ ಹಿಂದಿಭಾಷೆಯಲ್ಲಿ ಅತ್ಯಧಿಕ ಅಂಕಗಳಿಸಿದ ಅಂಜಲಿ ಬಾಬು ಜುಬ್ರೆಯವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಿ ಪ್ರಾಯೋಜಿತ ನಗದು ಬಹುಮಾನಗಳನ್ನು ವಿತರಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ