‘ಸುದ್ದಿಯ ಮೂಲ ಶೋಧಿಸಿ, ಸತ್ಯಾಸತ್ಯತೆ ಪರಿಶೀಲಿಸಿ’-ಸಾಹಿತಿ ಬೆನೆಟ್ ಜಿ. ಅಮ್ಮನ್ನ

Upayuktha
0


ವಿದ್ಯಾಗಿರಿ: ‘ಮೂಲವನ್ನು ಶೋಧಿಸಿ, ಸತ್ಯಾಸತ್ಯತೆಯನ್ನು ಪರಿಶೀಲಿಸಿ, ನಿಖರತೆಯನ್ನು ದೃಢಪಡಿಸಿಕೊಂಡ ಬಳಿಕ ಸುದ್ದಿ ಮಾಡಬೇಕು’ ಎಂದು ನಿವೃತ್ತ ಪತ್ರಗಾರ ಸಹಾಯಕ, ಸಾಹಿತಿ ಬೆನೆಟ್ ಜಿ. ಅಮ್ಮನ್ನ  ಹೇಳಿದರು.


ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದಲ್ಲಿ ಬುಧವಾರ ನಡೆದ ‘ಪತ್ರಿಕಾ ದಿನಾಚರಣೆ’ಯಲ್ಲಿ ಅವರು ಮಾತನಾಡಿದರು. 


ಸುದ್ದಿಯ ಮೂಲವನ್ನು ಶೋಧಿಸುವ ಪ್ರವೃತ್ತಿ ಕಡಿಮೆಯಾದ ಕಾರಣ, ಸುಳ್ಳು ಸುದ್ದಿಗಳು ಮೇಳೈಸುತ್ತವೆ. ಅದಕ್ಕಾಗಿ ಸುದ್ದಿಯ ಕಾಲಮಾನ, ಸತ್ಯಾಸತ್ಯತೆ ಹಾಗೂ ಅಧಿಕೃತ ಮೂಲವನ್ನು ಪರಿಶೀಲಿಸಬೇಕು ಎಂದು ಸಲಹೆ ನೀಡಿದರು. 


ಭಾರತದಲ್ಲಿ ಮುದ್ರಣ ಮಾಧ್ಯಮದ ಬೆಳವಣಿಗೆಯನ್ನು ಸವಿವರವಾಗಿ ವಿವರಿಸಿದ ಅವರು, ಚರ್ಮ, ತಾಳೆಗರಿ, ಸುಣ್ಣದ ಕಲ್ಲು, ಕಲ್ಲಚ್ಚು, ಪೆನ್ಸಿಲ್  ಆಟ್ರ್ಸ್, ಮೊಳೆ ಸೇರಿದಂತೆ ಮುದ್ರಣ ಮಾಧ್ಯಮದ ಹಂತಗಳನ್ನು ಕಾಲಮಾನ ಸಹಿತ ವಿವರಿಸಿದರು. 


ಹಿಂದೆ ಕರಾವಳಿ ಸೇರಿದಂತೆ ದೇಶದಲ್ಲಿ ಸಾರ್ವತ್ರಿಕ ಶಿಕ್ಷಣ ಮರೀಚಿಕೆಯಾಗಿದ್ದು, ಮಹಿಳೆ ಮತ್ತು ತಳ ಸಮುದಾಯಗಳು ಶಿಕ್ಷಣ ವಂಚಿತವಾಗಿದ್ದವು. 19ನೇ ಶತಮಾನದಲ್ಲಿ ಶಿಕ್ಷಣವು ಸಾರ್ವತ್ರಿಕರಣಗೊಳ್ಳಲು ಆರಂಭಿಸಿತು ಎಂದು ದಾಖಲೆಗಳನ್ನು ತೆರೆದಿಟ್ಟರು.  


ಕನ್ನಡದ ಮೊದಲ ಪತ್ರಿಕೆ ‘ಮಂಗಳೂರ ಸಮಾಚಾರ’ ಪಾಕ್ಷಿಕವಾಗಿದ್ದು, ಅದರಲ್ಲಿನ ಪ್ರಮುಖ ವಿಷಯಗಳು, ಮುದ್ರಣ ಶೈಲಿ, ಕೇವಲ 200 ಪ್ರತಿ ಮುದ್ರಿಸುತ್ತಿದ್ದ ವಿವರಗಳನ್ನು ಅವರು ನೀಡಿದರು.  

ಮಾಧ್ಯಮ ಕಿಟಕಿಯಂತೆ. ಮನೆಗೆ ಕಿಟಕಿ ಬೆಳಕನ್ನು ತಂದು ಜಗತ್ತನ್ನು ಪರಿಚಯಿಸುವ ರೀತಿ ಮಾಧ್ಯಮ ಕಾರ್ಯನಿರ್ವಹಿಸುತ್ತದೆ ಎಂದರು.


ಸಂಪರ್ಕ, ಸಂವಹನ ಮಾಧ್ಯಮಗಳು ಇಲ್ಲದ 1840ರ ದಶಕದಲ್ಲಿ ಸುದ್ದಿ ಹೇಗೆ ಸಂಗ್ರಹಿಸುತ್ತಿದ್ದರು, ಪತ್ರಿಕೆ ಹೇಗೆ ಮುದ್ರಿಸುತ್ತಿದ್ದರು ಎಂಬುದೇ ಅಚ್ಚರಿ ಎಂದರು. 

ಪತ್ರಕರ್ತರಾದವರು ಆಧಾರ ರಹಿತ ಇತಿಹಾಸವನ್ನು ನಂಬಬಾರದು. ನಿಖರ ಮಾಹಿತಿಗೆ ಆಧ್ಯತೆ ನೀಡಬೇಕು. ಸ್ಪಷ್ಟ ಸಂಪನ್ಮೂಲವನ್ನು ಅಗತ್ಯವಾಗಿ ಅವಲಂಬಿಸಬೇಕು ಎಂದರು.


ಮೂಡುಬಿದಿರೆ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಯಶೋಧರ ವಿ. ಬಂಗೇರ ಮಾತನಾಡಿ, ‘ಪತ್ರಕರ್ತರು ವರದಿಗಾರರೇ ಹೊರತು ನ್ಯಾಯಾಧೀಶರಲ್ಲ. ಉತ್ತಮ ಪತ್ರಕರ್ತ ಭಾಷಣಗಾರ ಆಗಬಾರದು. ಇತರರಿಗೆ ಬೋಧನೆ ಮಾಡುವುದು, ದೂರುವುದು ಆತನ ಕೆಲಸವಲ್ಲ. ಆತ ಉತ್ತಮ ಕೇಳುಗನಾಗಬೇಕು. ನಿಖರ ಸುದ್ದಿಯನ್ನು ನೀಡಬೇಕು. ಉತ್ತಮ ಬರಹ ಹಾಗೂ ಸಂವಹನ ತಂತ್ರಜ್ಞಾನದ ಅರಿವು ಇರಬೇಕು ಎಂದರು.   ದ್ವೇಷ ಬಿತ್ತುವ, ವಾಣಿಜ್ಯೀಕರಣದ ಸುದ್ದಿಗಳಿಗೆ ಆದ್ಯತೆ ನೀಡಬೇಡಿ ಎಂದರು.  

 

ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ ಮಾತನಾಡಿ, ಪತ್ರಿಕಾರಂಗದಲ್ಲಿ ಬೆಳೆಯಬೇಕಾದರೆ ಪತ್ರಿಕಾ ಧರ್ಮವನ್ನು ಪಾಲಿಸಬೇಕು. ಪತ್ರಕರ್ತರು ಯಾವುದೇ ಪ್ರಭಾವಕ್ಕೆ ಒಳಗಾಗದೆ ವಾಸ್ತವಿಕತೆಯನ್ನು, ಸತ್ಯಾಂಶಗಳನ್ನು ಜನರಿಗೆ ತಲುಪಿಸಬೇಕು. ಜೀವನದ ಪ್ರತಿಯೊಂದು ಅನುಭವವೂ ನಮ್ಮ ವ್ಯಕ್ತಿತ್ವವನ್ನು ರೂಪಿಸುತ್ತದೆ ಎಂದರು.

 

ಕಾಲೇಜಿನ ಪ್ರಾಚಾರ್ಯ ಡಾ ಕುರಿಯನ್, ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ನಿರೂಪಿಸಿ, ಕವನಾ ಕಾಂತಾವರ ಸ್ವಾಗತಿಸಿದರು. ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ.ಆರ್. ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top