(ಲಘು ಹಾಸ್ಯ ಬರಹ)
ಗಗನಮುಖಿಯಾಗಿ ಏರುತ್ತಿರುವ ಟೊಮೆಟೊ ಬೆಲೆಯಿಂದ ಹೈರಾಣಾದ ಸಾರ್ವಜನಿಕರು, ಉಚಿತ ಟೊಮೆಟೋವನ್ನು ಸರಕಾರ ಕೊಡಬೇಕೆಂದು ತೀವ್ರ ಹೋರಾಟಕ್ಕೆ ಇಳಿದಿದ್ದು, ಇದಕ್ಕೆ ಸ್ಪಂದಿಸಿದ ಸರಕಾರ, ಕೆಲವು ಕಂಡಿಷನ್‌ಗಳನ್ನು ವಿಧಿಸಿ, ರಾಜ್ಯಾದ್ಯಂತ ಪ್ರತೀ ಮನೆಗೂ ವಾರಕ್ಕೊಂದು ಕೆಜಿ ಟೊಮೆಟೋ ಉಚಿತ ಹಂಚಿಕೆಗೆ ಆದೇಶ ನೀಡಿದೆ. ಈ ಉಚಿತ ಟೊಮೆಟೋ ಯೋಜನೆಯನ್ನು ಮುಂದಿನ ಆಗಸ್ಟ್‌ನಿಂದಲೇ ಜಾರಿಗೆ ತರುವ ಉದ್ದೇಶ ಇದೆ ಎಂದು ಜಂಟಿ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.
ಕಂಡಿಷನ್‌ಗಳು:
1) ಟೊಮೆಟೋ ದರ ಅತ್ಯಂತ ಕೆಳಕ್ಕೆ ಇಳಿದಾಗ, ಸಾರ್ವಜನಿಕರು, ಸಾರ್ವಜನಿಕ ಸಮಾರಂಭಗಳಲ್ಲಿ ಜನ ಪ್ರತಿನಿಧಿಗಳ ಭಾಷಣಕ್ಕೆ 'ಗಳಿತ' ಟೊಮೆಟೋ ಫಲವನ್ನು ನೇರವಾಗಿ 'ಮಂತ್ರಾಕ್ಷತೆ' ರೀತಿಯಲ್ಲಿ ಅರ್ಪಿಸುತ್ತಿದ್ದ 'ಕ್ರಮವನ್ನು' ನಿಲ್ಲಿಸಬೇಕು ಮತ್ತು ಉಚಿತ ಟೊಮೆಟೋ ನಿರೀಕ್ಷಿಸುವ ಪ್ರತೀ ಫಲಾನುಭವಿಯೂ ಮುಚ್ಛಳಿಕೆಯಾಗಿ 'ಇನ್ನೂರು' ರೂಪಾಯಿ ಸ್ಟ್ಯಾಂಪ್ ಪತ್ರದಲ್ಲಿ "ನಾನು ಟೊಮೆಟೋವನ್ನು ಯಾವುದೇ ಕಾರಣಕ್ಕೂ ಜನಪ್ರತಿನಿಧಿಗಳಿಗೆ ಮಂತ್ರಾಕ್ಷತೆಯಂತೆ ಹಾಕಲು ಬಳಸುವುದಿಲ್ಲ" ಎಂದು ಬರೆದು ನೊಂದಾಯಿಸಿ, ನಿಗದಿತ ಆ್ಯಪ್‌ಗೆ ಲಿಂಕ್ ಮಾಡಬೇಕು.
2) ಪ್ರತೀ ವಾರ ಉಚಿತ ಟೊಮೆಟೋ ನಿರೀಕ್ಷಿಸುವ ಫಲಾನುಭವಿಗಳು ವ್ಯವಸ್ಥೆ ಜಾರಿಯಾದ ಹದಿನೈದು ದಿನಗಳಲ್ಲಿ ಟೊಮೆಟೋ ಫಲಾನುಭವಿ ಕಾರ್ಡ್ ಮಾಡಿಸಕೊಳ್ಳಬೇಕು.
3) ಬ್ಯಾಂಕ್ ಪಾಸ್‌ಬುಕ್, ಆಧಾರ್ ಪ್ರತಿ, ರೇಷನ್ ಕಾರ್ಡ್, ಪಾನ್ ಕಾರ್ಡ್, ಮನೆ ಯಜಮಾನ ಕಾರ್ಡ್‌ಗಳ ಪ್ರತಿಗಳನ್ನು ಗ್ರಾಮ ಒನ್, ಗಲ್ಲಿ ಒನ್, ಹೋಬಳಿ ಒನ್, ತಾಲೋಕ್ ಒನ್, ಪಟ್ಟಣ ಒನ್, ನಗರ ಒನ್‌ಗಳಲ್ಲಿ ತೆರೆದ ವಿಶೇಷ ಟೊಮೆಟೋ ಕೌಂಟರ್‍ಗಳಲ್ಲಿ ಸಲ್ಲಿಸಿ, ಟೊಮೆಟೋ ಫಲಾನುಭವಿ ಕಾರ್ಡ್ ಪಡೆಯಬೇಕು.
4) ಟೊಮೆಟೋ ಫಲಾನುಭವಿ ಕಾರ್ಡ್‌ದಾರರು ಹತ್ತಿರದ ತರಕಾರಿ ಅಂಗಡಿಗಳಲ್ಲಿ ಕಾರ್ಡ್ ತೋರಿಸಿ, ಲಿಂಕ್ ಆದ ಮೊಬೈಲ್‌ಗೆ ಬಂದ OTP ನಂಬರ್ ಕೊಟ್ಟು, ಒಂದು ಕೆಜಿ ಟೊಮೆಟೋವನ್ನು ಸಂಪೂರ್ಣ ಉಚಿತವಾಗಿ ವಾರಕ್ಕೊಮ್ಮೆ ಪಡೆಯಬಹುದಾಗಿರುತ್ತೆ.
ಟೊಮೆಟೋ ಕಾರ್ಡ್ ಮಾಡಿಸಲು ಆಗಷ್ಟ್ 15ರ ಸ್ವಾತಂತ್ರ್ಯ ದಿನದಿಂದ ಎಲ್ಲಾ 'ಒನ್' ಗಳಲ್ಲಿ ಪ್ರಾರಂಭಿಸಲಾಗುವುದೆಂದು ಸರಕಾರ ತಿಳಿಸಿದೆ!! ಆ ದಿನವೆ ಟೊಮೆಟೋ ಕಡಿಮೆ ಬೆಳೆಯುವ ಜಿಲ್ಲೆಯಲ್ಲಿ ದೊಡ್ಡ ಮಟ್ಟದ ಕಾರ್ಯಕ್ರಮ ಆಯೋಜಿಸಿ, ಕೇಂದ್ರ ಕೃಷಿ ಮಂತ್ರಿಗಳನ್ನೂ ಆಹ್ವಾನಿಸಲಾಗುವುದೆಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಲಾಗಿದೆ!!
ಇದಲ್ಲದೆ, ಬೆಲೆ ಏರಿಕೆಯ ಹಿನ್ನಲೆಯಲ್ಲಿ, ಮುಂಬರುವ ದಿನಗಳಲ್ಲಿ, ಲಿಂಬೆಹಣ್ಣು, ಕೋತಿಮರಿಸೊಪ್ಪು, ಸಾಸಿವೆ, ಜೀರಿಗೆ ಮುಂತಾದ ದಿನ ಬಳಕೆಯ ವಸ್ತುಗಳನ್ನೂ ಉಚಿತವಾಗಿ ಕೊಡುವುದಕ್ಕೆ ಸರಕಾರ ಶಾಸನ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸುವ ಬಗ್ಗೆ ಪರಿಶೀಲನೆ ಮಾಡುತ್ತಿದೆ ಎಂದು ಆಹಾರ ಖಾತೆ ಸಚಿವರು ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.
**
ಉಚಿತ ಟೊಮೇಟೋ ಹಂಚಿಕೆಗೆ ವಿರೋಧ ಪಕ್ಷದ ಕಿಡಿ, ವಾಗ್ದಾಳಿ!!
ಈ ಉಚಿತಗಳ ಬಗ್ಗೆ 'ಸುಸ್ತಿನ ಪಕ್ಷ' ಎಂದು ಹೆಸರಾಗಿರುವ ವಿರೋಧ ಪಕ್ಷ ತೀವ್ರ ಆಕ್ಷೇಪ ವ್ಯಕ್ತ ಪಡಿಸಿದೆ ಮತ್ತು ಪಕ್ಷದ ಎಲ್ಲರೂ ಸಾದ್ಯವಾದರೆ ಒಟ್ಟಾಗಿ (!!?) ಪ್ರತಿಭಟನೆಗೆ ಇಳಿಯುವುದಾಗಿ ತಿಳಿಸಿದೆ.
ಹೀಗೆ ಟೊಮೆಟೋ ಉಚಿತ ಕೊಡುವುದು ರೈತರಿಗೆ ಮಾಡಿದ ಅವಮಾನ ಎಂದು ಲೇವಡಿ ಮಾಡಿದೆ. ಉಚಿತ ಟೊಮೆಟೋ ಹಂಚಿಕೆಯಿಂದ ಟೊಮೆಟೋ ದುರ್ಬಳಿಕೆ ಆಗುವ ಸಾಧ್ಯತೆ ಬಗ್ಗೆ ವಿರೋಧ ಪಕ್ಷ ತೀವ್ರ ಆತಂಕ ವ್ಯಕ್ತಪಡಿಸಿದೆ. "ಹೀಗೆ ಉಚಿತಗಳನ್ನು ಕೊಡುವುದು ದೇಶದ ಅರ್ಥವ್ಯವಸ್ಥೆಗೆ ಮಾರಕ ಮತ್ತು ದೇಶದ ಜನರ ಮತ್ತು ರಾಜಕಾರಣಿಗಳ 'ಅಭಿವೃದ್ದಿಗೆ' ತೊಡಕಾಗಲಿದೆ" ಎಂದು ಕಿಡಿ ಕಾರಿದೆ!!!
ಆಶ್ಚರ್ಯದ ಇನ್ನೊಂದು ಬೆಳವಣಿಗೆಯಲ್ಲಿ ಅದೇ ವಿರೋದ ಪಕ್ಷದ 'ವಲಸೆ ನಿರಾಶ್ರಿತರು' "ಟೊಮೇಟೋ ಸೇರಿದಂತೆ, ಈಗಾಗಲೆ ಘೋಷಣೆ ಮಾಡಿದ ಎಲ್ಲ ಉಚಿತಗಳನ್ನೂ ಸರಕಾರ ಕೂಡಲೆ ಜಾರಿಗೊಳಿಸಬೇಕು, ಆಗಸ್ಟ್, ಸೆಪ್ಟೆಂಬರ್ ಅಂತೆಲ್ಲ ಹೇಳುತ್ತ, ಅನುಷ್ಠಾನವನ್ನು ಮುಂದೂಡುವುದು ಸರಿಯಲ್ಲ" ಎಂದು ಆಗ್ರಹಿಸಿದೆ.
**
ಉಚಿತ ಟೊಮೆಟೋ ಹಂಚಿಕೆ- ಸರಕಾರದ ಸಮರ್ಥನೆ
ಸುದ್ದಿಗೋಷ್ಟಿ ನೆಡೆಸುವುದೇ ಸರಕಾರದ ಪ್ರಮುಖ ಕೆಲಸ ಎಂದು ಭಾವಿಸಿದ ಆಡಳಿತ ಪಕ್ಷ, ತಕ್ಷಣ *'ಅವಧಿ ಮುಖ್ಯಮಂತ್ರಿಗಳ' ಜಂಟಿ ಸುದ್ದಿಗೋಷ್ಟಿ ನೆಡೆಸಿ "ವಿರೋಧ ಪಕ್ಷಕ್ಕೆ ಟೀಕೆ ಮಾಡಲು ಬೇರೆ ಯಾವ ವಿಷಯವೂ ಸಿಗದೆ, ಟೊಮೇಟೋ, ಲಿಂಬೇಹಣ್ಣು, ಸಾಸಿವೆ, ಜೀರಿಗೆ, ಕೊತ್ತಿಮರಿಸಪ್ಪುಗಳ ಜೀವನಾವಶ್ಯಕ 'ಉಚಿತ' ಕೊಡುಗೆಗಳ ಬಗ್ಗೆ ಬಗ್ಗೆ ದ್ವಂದ್ವ ನೀತಿಯನ್ನು ಹೊಂದಿದೆ" ಎಂದು ಟೀಕಿಸಿದೆ!!. ಹಾಲು ಉತ್ಪಾದಕರಿಗೂ ಸೇರಿದಂತೆ ಎಲ್ಲರಿಗೂ ಒಂದು ಲೀಟರ್ ಹಾಲು ಮತ್ತು ಕ್ರಮವಾಗಿ ಮಾಲಾಯ ಅಮವಾಸ್ಯೆ, ಶ್ರಾದ್ದ-ಪಿತೃ ಕಾರ್ಯ, ವೈಕುಂಠ ಸಮಾರಂಭಗಳಿಗೆ ವರ್ಷಕ್ಕೆ ಮೂರು ಗ್ಯಾಸ್ ಸಿಲಿಂಡರ್ ಕೊಡುವ ಆಶ್ವಾಸನೆಯನ್ನು ಇದೇ ವಿರೋಧಿ 'ಸುಸ್ತಿನ' ಪಕ್ಷ ಹಿಂದಿನ ಪ್ರಣಾಳಿಕೆಯಲ್ಲಿ ಸೇರಿಸಿದ್ದನ್ನು ಆಡಳಿತದ ಜಂಟಿ ಸುದ್ದಿಗೋಷ್ಟಿಯಲ್ಲಿ ನೆನಪಿಸಿ ವ್ಯಂಗ್ಯವಾಡಿದೆ.
**
ಬಾಕ್ಸ್ ಐಟಮ್ ಸುದ್ದಿ!!!
ಉಚಿತ ಟೋಮೇಟೋ ಬಗೆಗಿನ ಕಂಡಿಷನ್‌ಗಳನ್ನು "ಇದೊಂದು ರಕ್ಷಣಾತ್ಮಕ ವ್ಯವಸ್ಥೆ" ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ!!!. ಮುಂದಿನ ದಿನಗಳಲ್ಲಿ ಮೊಟ್ಟೆ ಮಾರಾಟದಲ್ಲೂ ಸರಕಾರ 'ರಕ್ಷಣಾತ್ಮಕ ಕ್ರಮವಾಗಿ' ಕೆಲವಷ್ಟು ಷರತ್ತುಗಳನ್ನು ಅಳವಡಿಸುವ ಸಾಧ್ಯತೆಗಳ ಬಗ್ಗೆ ತಜ್ಞರು ವಿಶ್ಲೇಷಣೆ ಮಾಡಿದ್ದಾರೆ!!!
ವರದಿ: ಅರವಿಂದ ಸಿಗದಾಳ್, ಮೇಲುಕೊಪ್ಪ
ಚಿತ್ರಕೃಪೆ: ಶ್ರೀ ರಘುಪತಿ, ಶೃಂಗೇರಿ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ