ಬೆಂಗಳೂರು: ‘ಮನುಜಕುಲ ಒಂದೇ’ ಎಂಬ ಧ್ಯೇಯದಿಂದ ಸ್ಥಾಪಿತವಾದ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ (World Constitution and Parliament Association) ಅಮೆರಿಕೆಯ ವರ್ಜೀನಿಯಾ ರಾಜ್ಯದ ಪೀಸ್ ಪೆಂಟಗಾನ್‍ನಲ್ಲಿರುವ ಪ್ರಧಾನ ಕಛೇರಿಯು, 47ನೇ ಪೃಥ್ವಿ ಸಂವಿಧಾನ ದಿನಾಚರಣೆಯ ಅಂಗವಾಗಿ ವಿಶ್ವದೆಲ್ಲೆಡೆ ಆಯ್ದ ಸಾಧಕರಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಿದೆ. 27ನೇ ಜೂನ್ 1977, ‘ಪೃಥ್ವಿ ಸಂವಿಧಾನ’ ರಚನೆಗೊಂಡು ವಿಶ್ವಸಂಸ್ಥೆಗೆ ಸಲ್ಲಿಕೆಯಾದ ದಿನ.
ಕರ್ನಾಟಕ ರಾಜ್ಯದಲ್ಲಿ ಈ ಅಪೂರ್ವ ಗೌರವಕ್ಕೆ ಪಾತ್ರರಾದವರು ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಈರ್ವರು ಸಾಧಕರು. ಈ ಪ್ರಶಸ್ತಿಗಳನ್ನು ನಿನ್ನೆ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ ಜಾಗತಿಕ ಉಪಾಧ್ಯಕ್ಷ ಪ್ರೊ. ಇ.ಪಿ. ಮೆನನ್ ಅವರು ಪ್ರದಾನ ಮಾಡಿದರು.
‘ವಿಶ್ವದ ಶೈಕ್ಷಣಿಕ ರೂವಾರಿ’ ವಿಭಾಗದಲ್ಲಿ ‘ಜೀವಮಾನ ಸಾಧನೆಯ ಪ್ರಶಸ್ತಿ’ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾಧಿಪತಿ ಹಾಗೂ ನಿಟ್ಟೆ ಸಮೂಹ ವಿದ್ಯಾಸಂಸ್ಥೆಗಳ ಹಿರಿಯ ಸಲಹೆಗಾರ ಪ್ರೊ. ಎನ್.ಆರ್. ಶೆಟ್ಟಿ ಅವರಿಗೆ ಲಭಿಸಿದೆ. ‘ವಾಷಿಂಗ್‍ಟನ್‍ನಲ್ಲಿರುವ ವಿಶ್ವ ತಾಂತ್ರಿಕ ಶಿಕ್ಷಣ ಮಂಡಳಿಯ ಉಪಾಧ್ಯಕ್ಷರಾಗಿ, ಭಾರತದ ತಾಂತ್ರಿಕ ಶಿಕ್ಷಣ ಮಂಡಳಿಯ ಅಧ್ಯಕ್ಷರಾಗಿ ಹಾಗೂ ವಿಶ್ವವಿದ್ಯಾಲಯದ ಕುಲಪತಿ ಹಾಗೂ ಕುಲಾಧಿಪತಿಗಳಾಗಿ ಪ್ರೊ. ಎನ್.ಆರ್. ಶೆಟ್ಟಿ ಅವರು ಸಲ್ಲಿಸಿರುವ ಅನುಪಮ ಸೇವೆಗಾಗಿ ಈ ಪ್ರಶಸ್ತಿ ಪ್ರದಾನ ಮಾಡಲು ವರ್ಜೀನಿಯಾದ ಪೀಸ್ ಪೆಂಟಗಾನ್‍ನಲ್ಲಿರುವ ನಮ್ಮ ಪ್ರಧಾನ ಕಛೇರಿ ನಿರ್ಧರಿಸಿದೆ’, ಎಂದು ಪ್ರೊ. ಇ.ಪಿ. ಮೆನನ್ ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ನುಡಿದರು.
ಇದೇ ಸಂದರ್ಭದಲ್ಲಿ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’, ನಿಟ್ಟೆ ಮೀನಾಕ್ಷಿ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಹೆಚ್.ಸಿ. ನಾಗರಾಜ್ ಅವರಿಗೆ, ‘ಟೀಚರ್-ಚೇಂಜ್ ಮೇಕರ್’ (ಶಿಕ್ಷಕ-ಬದಲಾವಣೆಯ ರೂವಾರಿ) ವಿಭಾಗದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ‘ವಿಶ್ವಾದ್ಯಂತ ತಮ್ಮ ವಿದ್ಯಾರ್ಥಿ ಬಳಗವನ್ನು ಹೊಂದಿರುವ ಡಾ. ಹೆಚ್.ಸಿ. ನಾಗರಾಜ್ ಅವರ ಹೆಸರನ್ನು ಹತ್ತಾರು ದೇಶಗಳಲ್ಲಿ ನೆಲೆನಿಂತಿರುವ ಅವರ ಶಿಷ್ಯರು ಸೂಜಿಸಿದ್ದರು. ಇದನ್ನು ಪೀಸ್ ಪೆಂಟಗಾನ್‍ನಲ್ಲಿರುವ ಮಾತೃ ಸಂಸ್ಥೆ ಪರಿಗಣಿಸಿದೆ’, ಎಂದು ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ ಕರ್ನಾಟಕದ ಪ್ರತಿನಿಧಿ ಪಿ. ನರಸಿಂಹಮೂರ್ತಿ ಅವರು ಪ್ರಶಸ್ತಿ ಪ್ರದಾನ ಸಂದರ್ಭದಲ್ಲಿ ತಿಳಿಸಿದರು.
27ನೇ ಜೂನ್ 1977ರಲ್ಲಿ ಅಸ್ತಿತ್ವಕ್ಕೆ ಬಂದ ‘ವಿಶ್ವಸಂವಿಧಾನ ಮತ್ತು ಸಂಸತ್ತು ಸಂಘ’ದ ಪೃಥ್ವಿ ಸಂವಿಧಾನದ ಅನುಮೋದನೆಗೆ ಜಗತ್ತಿನ 25 ರಾಷ್ಟ್ರಗಳ 138 ಹಿರಿಯ ಮಾನವತಾವಾದಿಗಳು ಸಹಿಹಾಕಿದ್ದಾರೆ. ಮಾನವೀಯತೆಯನ್ನು ಎತ್ತಿ ಹಿಡಿಯುವ ಹಾಗೂ ರಾಜಕೀಯ ಕಾರಣಕ್ಕಾಗಿ ನಡೆಯುವ ಪರಸ್ಪರ ಯುದ್ಧಗಳನ್ನು ಕೊನೆಗೊಳಿಸುವ ಮಹದೋದ್ದೇಶ ಪೃಥ್ವಿಸಂವಿಧಾನದ ಆಂತರ್ಯವಾಗಿದೆ.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ