ಪೋಕ್ಸೋ ಪ್ರಕರಣದಲ್ಲಿ ಕರ್ತವ್ಯ ಲೋಪ: ಮೂವರು ಹಿರಿಯ ಪೊಲೀಸ್ ಅಧಿಕಾರಿಗಳಿಗೆ 5 ಲಕ್ಷ ರೂ. ದಂಡ

Upayuktha
0



ಮಂಗಳೂರು: ಪೋಕ್ಸೋ ಪ್ರಕರಣದಲ್ಲಿ ಆರೋಪಿಗಳನ್ನು ರಕ್ಷಿಸಿ ನಿರಪರಾಧಿಗಳ ಮೇಲೆ ಕೇಸು ಜಡಿದ ಪೊಲೀಸ್ ಅಧಿಕಾರಿಗಳಿಗೆ ಭಾರೀ ದಂಡ ವಿಧಿಸಿರುವ ಮಂಗಳೂರು ಜಿಲ್ಲಾ ಹೆಚ್ಚುವರಿ ಮತ್ತು ಪೋಕ್ಸೋ ವಿಶೇಷ ನ್ಯಾಯಾಲಯ ಪೊಲೀಸರು ಮತ್ತು ಸಮಾಜಕ್ಕೆ ದಿಟ್ಟ ಸಂದೇಶ ರವಾನಿಸಿದೆ.


ಪೋಕ್ಸೊ ಪ್ರಕರಣದ ಸಾಕ್ಷಿಗಳ ವಿಚಾರಣೆ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲಿಸಿ ಪ್ರಕರಣದ ತನಿಖೆ ಮಾಡುವಲ್ಲಿ ಮಂಗಳೂರಿನ ಮೂವರು ಹಿರಿಯ ಪೊಲೀಸ್ ಅಧಿಕಾರಿಗಳು ವಿಫಲರಾಗಿದ್ದರು.


ನ್ಯಾಯಾಲಯಕ್ಕೂ ತಪ್ಪು ಮಾಹಿತಿ ನೀಡಿದ ಹಾಗೂ ದಾಖಲೆಗಳನ್ನು ನೀಡುವಲ್ಲೂ ಕರ್ತವ್ಯ ಲೋಪ ಎಸಗಿರುವ ಸರ್ಕಲ್ ಇನ್ಸ್‌ಪೆಕ್ಟರ್ ಲೋಕೇಶ್ ಎ.ಸಿ., ಸಬ್‌ ಇನ್ಸ್‌ಪೆಕ್ಟರ್ ಶ್ರೀಕಲಾ ಹಾಗೂ ಮತ್ತೋರ್ವ ಸಬ್‌ ಇನ್ಸ್‌ಪೆಕ್ಟರ್ ಪುಷ್ಪಾರಾಣಿ ಅವರ ವಿರುದ್ಧ ನ್ಯಾಯಾಲಯ ಕೆಂಡಾಮಂಡಲವಾಗಿದೆ.


ಆರೋಪಿಗಳು ನೈಜ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸದೆ ನಿರಪರಾಧಿಗಳಾದ ಚಂದ್ರಪ್ಪ ಮತ್ತು ಪ್ರಸಾದ್ ಎಂಬ ಕೂಲಿ ಕಾರ್ಮಿಕರ ಮೇಲೆ ಯಾವುದೇ ಸಾಕ್ಷ್ಯಾಧಾರ ಇಲ್ಲದಿದ್ದರೂ ಪ್ರಕರಣ ದಾಖಲಿಸಿರುವ ಈ ಮೂವರು ಪೊಲೀಸ್ ಅಧಿಕಾರಿಗಳಿಗೆ ಒಟ್ಟು ಐದು ಲಕ್ಷ ರೂ. ದಂಡ ವಿಧಿಸಿದೆ. ಈ ಪೈಕಿ ನಿರ್ದೋಷಿ ಎಂದು ಸಾಬೀತಾದ ಚಂದ್ರಪ್ಪ ಎಂಬವರಿಗೆ ನಾಲ್ಕು ಲಕ್ಷ ಹಾಗೂ ನಿರ್ದೋಷಿ ಪ್ರಸಾದ್ ಅವರಿಗೆ ಒಂದು ಲಕ್ಷ ರೂ.ಗಳನ್ನು 40 ದಿನಗಳ ಒಳಗಾಗಿ ಪಾವತಿಸಬೇಕು. ಈ ದಂಡವನ್ನು ನ್ಯಾಯಾಲಯದಲ್ಲಿ ಪಾವತಿಸಬೇಕು ಎಂದು ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಎಂ. ರಾಧಾಕೃಷ್ಣ ಅವರು ಆದೇಶ ಹೊರಡಿಸಿದ್ದಾರೆ.


ಗಂಭೀರ ಅಪರಾಧ ಪ್ರಕರಣವಾದ ಈ ಪ್ರಕರಣದ ತೀರ್ಪಿನ ಮಾಹಿತಿಯನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಮತ್ತು ಮಂಗಳೂರು ಪೊಲೀಸ್ ಕಮಿಷನರ್ ಅವರಿಗೆ ಕಳುಹಿಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ನಿರ್ದೇಶಿಸಿದೆ.


ಪ್ರಕರಣದಲ್ಲಿ ಆರೋಪಿಯ ಪರವಾಗಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಮುಖ್ಯ ಕಾನೂನು ಅಭಿರಕ್ಷಕರಾದ (ಚೀಫ್ ಲೀಗಲ್ ಏಡ್ ಡಿಫೆನ್ಸ್‌ ಕೌನ್ಸಿಲ್) ನ್ಯಾಯವಾದಿ ಜಿ. ವಾಸುದೇವ ಗೌಡ ಅವರು ವಾದಿಸಿದ್ದರು.

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top