ಕಾರವಾರ-ಬೆಂಗಳೂರು ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸೇವೆ ಯಾವಾಗ?

Upayuktha
0

ಈಗಿನ ಎತ್ತಿನ ಬಂಡಿ ಸೇವೆಯಲ್ಲೇ ಕರಾವಳಿಯ ಜನ ಇನ್ನೆಷ್ಟು ಕಾಲ ತೃಪ್ತಿಪಟ್ಟುಕೊಳ್ಳಬೇಕು?



ಭಾರತದ ಅತಿ ವೇಗದ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರ ಸೇವೆ ಕರ್ನಾಟಕದಲ್ಲಿ ಇದೀಗ ಎರಡನೇ ಮಾರ್ಗದಲ್ಲಿ ಪ್ರಾರಂಭವಾಗಿದೆ. ಚೆನ್ನೈ-ಮೈಸೂರು ನಡುವೆ ಸಂಚಾರ ಆರಂಭಿಸಿ, ಯಶಸ್ವಿಯಾಗಿ ಮುಂದುವರಿದಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆ ಇದೀಗ ಧಾರವಾಡ-ಬೆಂಗಳೂರು ನಡುವೆ ಪ್ರಾರಂಭವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಈ ರೈಲು ಸೇವೆಗೆ ಇಂದು ಬೆಳಗ್ಗೆ ಹಸಿರು ನಿಶಾನೆ ತೋರಿ ಉದ್ಘಾಟಿಸಿದರು.


ಬರೀ ಎರಡು ಮಾರ್ಗಗಳಲ್ಲಿ ವಂದೇ ಭಾರತ್ ಸೇವೆ ಆರಂಭವಾದರೆ ಸಾಲದು. ಕರ್ನಾಟಕದ ಕರಾವಳಿ ನಗರಗಳಾದ ಕಾರವಾರ, ಮಂಗಳೂರು- ಬೆಂಗಳೂರು ನಡುವೆಯೂ ವಂದೇ ಭಾರತ್ ರೈಲು ಸೇವೆ ಆರಂಭವಾಗಬೇಕು ಎಂಬುದು ಈ ಭಾಗದ ಜನರ ಬಹುಕಾಲದ ಬೇಡಿಕೆ. ಪ್ರಸ್ತುತ ಕಾರವಾರದಿಂದ ಬೆಂಗಳೂರಿಗೆ ಇರುವ ರೈಲು ಪ್ರಯಾಣಕ್ಕೆ 16-18 ಗಂಟೆಗಳ ಸಮಯ ಬೇಕಾಗುತ್ತದೆ. ಹೆಸರಿಗೆ ಎಕ್ಸ್‌ಪ್ರೆಸ್‌ ರೈಲು ಎಂದಿದ್ದರೂ ನಿಧಾನಗತಿಯ ಚಲನೆ, ಅನಗತ್ಯ ನಿಲುಗಡೆ- ಮುಂತಾದ ಸಮಯ ಕೊಲ್ಲುವ ನಡವಳಿಕೆಗಳಿಂದ ಈ ರೈಲಿನಲ್ಲಿ ಪ್ರಯಾಣವೇ ಒಂದು ಹಿಂಸೆ ಎನ್ನುವಂತಾಗಿದೆ. ರಾತ್ರಿ ರೈಲು ಪ್ರಯಾಣದ ಅವಧಿಯ ಅರ್ಧ ಭಾಗ ಹೇಗೋ ನಿದ್ರೆಯಲ್ಲಿ ಕಳದುಹೋಗಬಹುದು. ಆದರೆ ಹಗಲು ರೈಲು ಪ್ರಯಾಣವಂತೂ ಅತ್ಯಂತ ಹಿಂಸೆ ಅನಿಸುವುದು ಪ್ರಯಾಣಿಕರೆಲ್ಲರ ಅನುಭವ. ಸೈಕಲ್‌ನಲ್ಲಿ ಬೇಕಾದರೂ ಈ ರೈಲಿಗಿಂತ ವೇಗವಾಗಿ ಸಂಚರಿಸಿ ಬೆಂಗಳೂರು ತಲುಪಬಹುದು ಎಂಬುದು ತೀರ ಅಸಮಾಧಾನದಿಂದ ಪ್ರಯಾಣಿಕರು ಆಡಿಕೊಳ್ಳುವ ಮಾತು.


ಕಡಿಮೆ ದರದಲ್ಲಿ ಪ್ರಯಾಣಿಸಿ ಬೆಂಗಳೂರು-ಮಂಗಳೂರು ತಲುಪಬಹುದು ಅನ್ನುವುದು ಬಿಟ್ಟರೆ, ಆಮೆ ಗತಿಯಲ್ಲಿ ಓಡುವ ಈ ರೈಲುಗಳ ಸಂಚಾರ ಖಂಡಿತವಾಗಿಯೂ ತೃಪ್ತಿಕರವಾಗಿಲ್ಲ. ಜನರ ಅನುಭವ ಹೀಗಿದ್ದರೂ ನಮ್ಮ ಜನಪ್ರತಿನಿಧಿಗಳು ಇದಕ್ಕೊಂದು ಪರಿಹಾರ ದೊರಕಿಸುವ ನಿಟ್ಟಿನಲ್ಲಿ ಧ್ವನಿಯೇ ಎತ್ತುತ್ತಿಲ್ಲ. ಕೇಂದ್ರ ಸರಕಾರ ಕರಾವಳಿ ಭಾಗಕ್ಕೂ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಒದಗಿಸಲು ಸಿದ್ಧವಿದ್ದರೆ ನಮ್ಮ ಜನಪ್ರತಿನಿಧಿಗಳು ಅದನ್ನು ಬಾಯಿಬಿಟ್ಟು ಕೇಳುತ್ತಿಲ್ಲ. ಯಾವ್ಯಾವ ಲಾಬಿಗಳ, ಅಡ್ಜಸ್ಟ್‌ಮೆಂಟ್ ರಾಜಕಾರಣದ ಸುಳಿಗಳಲ್ಲಿ ಸಿಲುಕಿದ್ದಾರೋ ಸಾಮಾನ್ಯ ಪ್ರಯಾಣಿಕರಿಗೆ ತಿಳಿಯದು.


ಕೇಂದ್ರ ಸರಕಾರ ಕೇರಳಕ್ಕೆ ಕೊಟ್ಟಿರುವ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ತಿರುವನಂತಪುರದಿಂದ ಕಾಸರಗೋಡಿನ ವರೆಗೆ ಸಂಚರಿಸುತ್ತದೆ. ಅದನ್ನು ಮಂಗಳೂರಿಗೆ ವಿಸ್ತರಿಸಿ ಎಂದು ಕೇರಳದ ಸಂಸದರು ಬೇಡಿಕೆ ಇಡುತ್ತಾರೆ. Of Course ಅದರಿಂದ ಕೇರಳದ ಪ್ರಯಾಣಿಕರಿಗೇ ಹೆಚ್ಚಿನ ಅನುಕೂಲ ಇರಬಹುದು. ಆದರೂ ಆ ರೈಲು ಮಂಗಳೂರಿಗೆ ವಿಸ್ತರಣೆಯಾದರೆ ಕರಾವಳಿ ಜನರಿಗೂ ಅನುಕೂಲ ಇದ್ದೇ ಇದೆ. ಆದರೆ ನಮ್ಮ ಸಂಸದರು ಈ ಬಗ್ಗೆ ತುಟಿ ಬಿಚ್ಚುತ್ತಿಲ್ಲ.


ಪ್ರಸ್ತುತ ಮಂಗಳೂರು-ಬೆಂಗಳೂರು ಮಾರ್ಗದಲ್ಲಿ ಸುಮಾರು 30 ಕಿ.ಮೀಯಷ್ಟು ರೈಲ್ವೇ ಮಾರ್ಗದ ವಿದ್ಯುದೀಕರಣ ಬಾಕಿಯಿದೆ. ಅದು ಪೂರ್ಣಗೊಂಡ ಬಳಿಕ ಇಲ್ಲೂ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆರಂಭವಾಗಬಹುದು ಎನ್ನುವುದು ಈ ಭಾಗದ ಸಂಸದರಿಂದ ಬರುವ ತೋರಿಕೆಯ ಸಮಜಾಯಿಷಿ. ಆದರೆ ಈ ಪ್ರಕ್ರಿಯೆಯನ್ನು Speed up ಮಾಡಲು ಒತ್ತಡ ಹೇರಬೇಕಾದವರು ಯಾರು? ಜನ ಸಾಮಾನ್ಯರು ತಮ್ಮಷ್ಟಕ್ಕೆ ತಾವೇ ಮಾತನಾಡಿಕೊಂಡರೆ ಈ ಕೆಲಸವಾಗದು. ಜನಪ್ರತಿನಿಧಿಗಳಿಗೆ ಚಾಟಿ ಬೀಸಿ ಎಚ್ಚರಿಸುವವರು ಯಾರು?


ಪ್ರಸ್ತುತ ಪ್ರಗತಿಯಲ್ಲಿರುವ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿ ಕೂಡ ಅತಿ ನಿಧಾನವಾಗಿ ನಡೆಯುತ್ತಿದೆ. ಈಗ ನಡೆಯುತ್ತಿರುವ ವೇಗದಲ್ಲೇ ಮುಂದುವರಿದರೆ ಅದು ಪೂರ್ಣಗೊಳ್ಳಲು ಕನಿಷ್ಠ 4-5 ವರ್ಷಗಳಾದರೂ ಬೇಕು. ಅಲ್ಲಿಯವರೆಗೂ ಕರಾವಳಿ ಭಾಗದ ಜನರಿಗೆ ಹೆದ್ದಾರಿ ಪ್ರಯಾಣವೂ ಸುಗಮವಲ್ಲ, ರೈಲು ಪ್ರಯಾಣವೂ ತೃಪ್ತಿಕರವಲ್ಲ.


ಪರಿಸ್ಥಿತಿ ಹೀಗಿರುವಾಗ, ಮುಂದಿನ 6 ತಿಂಗಳ ಒಳಗಾದರೂ ಕಾರವಾರದಿಂದ ಬೆಂಗಳೂರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್‌ ಸಂಚಾರ ಪ್ರಾರಂಭಿಸುವ ನಿಟ್ಟಿನಲ್ಲಿ ಈಗಿನಿಂದಲೇ ಪ್ರಕ್ರಿಯೆಗಳನ್ನು ಚುರುಕುಗೊಳಿಸಬೇಕು. ಇದನ್ನು ಈ ಭಾಗದ ಸಂಸದರಿಂದ ಜನತೆ ನಿರೀಕ್ಷಿಸುತ್ತಿದ್ದಾರೆ. ರಾಜಕೀಯ ಏರಿಳಿತದಿಂದ ಕರ್ನಾಟಕದಲ್ಲಿ ಅಧಿಕಾರ ಕಳೆದುಕೊಂಡಿರುವ ಬಿಜೆಪಿ, ಮುಂದಿನ ಲೋಕಸಭೆ ಚುನಾವಣೆಗೆ ಈಗಿನಿಂದಲೇ ಸಿದ್ಧತೆ ನಡೆಸುವುದಾದರೆ ಜನರ ಈ ಬೇಡಿಕೆಯನ್ನು ತುರ್ತಾಗಿ ಈಡೇರಿಸಲೇಬೇಕಾದ ಒತ್ತಡ ಸೃಷ್ಟಿಯಾಗಬೇಕು. ಆ ಕೆಲಸವನ್ನು ನಮ್ಮ ಜನತೆಯೇ ಮಾಡಬೇಕಾಗಿದೆ.


ಈಗ ದಕ್ಷಿಣ ಕನ್ನಡದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಬಿಜೆಪಿ ರಾಜ್ಯಾಧ್ಯಕ್ಷರಾಗಿ ಅಧಿಕಾರಾವಧಿ ಪೂರ್ಣಗೊಳಿಸಿ ದ್ದಾರೆ. ಇನ್ನೇನಿದ್ದರೂ ಹೊಸಬರಿಗೆ ಆ ಹುದ್ದೆಯನ್ನು ಕೊಟ್ಟು ಕೆಳಗಿಳಿಯುವುದಷ್ಟೇ ಬಾಕಿ. ಹಾಗಿರುವಾಗ ಪಕ್ಷದ ಚುಕ್ಕಾಣಿಯ ಹೊಣೆಗಾರಿಕೆ ಅವರ ಹೆಗಲಿನಿಂದ ಈಗ ಇಳಿದಿದೆ. ಲೋಕಸಭೆ ಚುನಾವಣೆಗೆ ಇನ್ನು ಉಳಿದಿರುವುದು ಒಂದೇ ವರ್ಷ. ಈ ಅಮೂಲ್ಯವಾದ ಅವಧಿಯಲ್ಲಿ ಕನಿಷ್ಠ ಪಕ್ಷ, ಕಾರವಾರ-ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲಿನ ಆರಂಭಕ್ಕೆ ಶ್ರಮಿಸಿ ತಮ್ಮ ಅವಧಿಯನ್ನು ಸಾರ್ಥಕಪಡಿಸಿಕೊಳ್ಳಲಿ ಎಂಬುದು ಅವರಿಗೆ ಮತಹಾಕಿದ ಎಲ್ಲ ಮತದಾರರ ಒತ್ತಾಸೆ.


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top