"ಮೂರು ಸಾಗರ, ನೂರು ಮಂದಿರ, ದೈವ ಸಾಗರವಿದ್ದೊಡೆ,
ಗಂಗೆಯಿದ್ದೊಡೆ, ಸಿಂಧುಯಿದ್ದೊಡೆ, ಘನ ಹಿಮಾಲಯವಿದ್ದೊಡೆ,
ವೇದಯಿದ್ದೊಡೆ, ಶಾಸ್ತ್ರಯಿದ್ದೊಡೆ, ಘನಪರಂಪರೆಯಿದ್ದೊಡೆ,
ಏನು ಸಾರ್ಥಕ ಮನೆಯ ಮಕ್ಕಳೇ ಮಲಗಿ ನಿದ್ರಿಸುತ್ತಿದ್ದರೆ?"
ಎಂಬ ಕವಿವಾಣಿಯಂತೆ ಇಂದಿನ ಯುವಜನತೆಗೆ ತಮ್ಮ ಅಮೂಲ್ಯವಾದ ಪರಂಪರೆಯನ್ನು ಮುನ್ನಡೆಸಿಕೊಂಡು ಹೋಗಲು ನೈತಿಕ ಶಿಕ್ಷಣದ ಅಗತ್ಯವಿದೆ. ಆದರೆ ಇಂದು ಎಲ್ಲೆಡೆಯೂ ನೈತಿಕತೆಯ ಕೊರತೆಯನ್ನು ಕಾಣಬಹುದು. ಇದಕ್ಕೆ ಮುಖ್ಯ ಕಾರಣ ಇಂದಿನ ಶಿಕ್ಷಣ ಕೇವಲ ಪಠ್ಯ ಕೇಂದ್ರಿತವಾಗಿರುವುದು. ಆಧುನಿಕ ಶಿಕ್ಷಣ ಪದ್ಧತಿಯು ವಿದ್ಯಾರ್ಥಿಗಳನ್ನು ನೈತಿಕ ಮೌಲ್ಯಗಳಿಂದ ದೂರವಾಗಿಸಿವೆ. ತಂದೆ- ತಾಯಿಯರನ್ನು ವೃದ್ಧಾಶ್ರಮಕ್ಕೆ ಸೇರಿಸುವಂತಹ ಕ್ರೂರ ಮನೋಭಾವನೆ ಇಂದಿನ ಯುವಜನತೆಯದ್ದು. ನೊಂದವರ ಕಣ್ಣೀರೊರೆಸುವ, ಗುರು ಹಿರಿಯರನ್ನು ಗೌರವಿಸುವ, ಆದರದಿಂದ ಸ್ವೀಕರಿಸುವ, ಕಷ್ಟದಲ್ಲಿದ್ದವರಿಗೆ ಸಹಕಾರ ನೀಡುವ, ತಂದೆ- ತಾಯಿಯರನ್ನು ಪ್ರೀತಿಯಿಂದ ನೋಡಿಕೊಳ್ಳುವುದು, ಮುಂತಾದ ಜೀವನ ಮೌಲ್ಯಗಳು ಇಂದು ಮಾಸಿಹೋಗಿದೆ.
ಇಂದಿನ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಲ್ಲಿ ನಡೆಸುವ ಪಠ್ಯ ಆಧಾರಿತ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿ, ಉನ್ನತ ಹುದ್ದೆಯನ್ನು ಅಲಂಕರಿಸಿ, ಕೈ ತುಂಬಾ ಸಂಬಳ ಸಂಪಾದಿಸುತ್ತಿದ್ದಾರೆ. ಆದರೆ ಜ್ಞಾನದ ಕೊರತೆ ಎದ್ದು ಕಾಣಿಸುತ್ತಿವೆ. ಸಮಾಜಘಾತಕ ಕಾರ್ಯಗಳತ್ತ ಹೆಜ್ಜೆ ಹಾಕುತ್ತಿದ್ದಾರೆ. ಕಿರಿಯರು, ಹಿರಿಯರನ್ನು ಗೌರವದಿಂದ ಕಾಣುತ್ತಿದ್ದ ಕಾಲದಿಂದ, "ನೀ ಗೌರವ ಕೊಟ್ಟರೆ ನಾ ನಿನಗೆ ಗೌರವ ಕೊಡುವೆ" ಎನ್ನುವಲ್ಲಿಗೆ ಬಂದು ತಲುಪಿದ್ದೇವೆ.
ಕಠೋಪನಿಷತ್ತಿನ ಪ್ರಕಾರ "ಯಾವ ನಡತೆಯಿಂದ ನನಗೆ ಮತ್ತು ಪ್ರಪಂಚಕ್ಕೆ ಒಳ್ಳೆಯದಾಗುತ್ತೋ ಆ ನಡತೆಯನ್ನು ನೈತಿಕ ನಡತೆ ಎಂದು ಕರೆಯುತ್ತಾರೆ." ಇಂದಿನ ಯುಗದಲ್ಲಿ "ನನಗೆ ಮಾತ್ರ ಒಳೆಯದಾದರೆ ಸಾಕು" ಎಂಬ ಸ್ವಾರ್ಥ ಯೋಚನೆ ಸುಳಿದಾಡುತ್ತಿವೆ. ಕೋಮುವಾದದಂತಹ ದೇಶದ್ರೋಹಿ ಕಾರ್ಯಗಳತ್ತ ಯುವಕರ ಮನಸ್ಸು ವಾಲಿರುವುದು ನಿಜಕ್ಕೂ ಬೇಸರದ ಸಂಗತಿ. ವಿದ್ಯಾರ್ಥಿಗಳ ಅಂತಃಕರಣ ಕಲುಷಿತಗೊಳ್ಳುತ್ತಿವೆ ಎಂದರೆ ಅತಿಶಯೋಕ್ತಿಯೇನಲ್ಲ. "ಸತ್ಯನಿಷ್ಠೆ, ಪವಿತ್ರತೆ,ಮತ್ತು ನಿಸ್ವಾರ್ಥತೆ ಈ ಮೂರು ಗುಣ ಯಾರಲ್ಲಿರುತ್ತದೆಯೋ ಅವರನ್ನು ಈ ಜಗತ್ತಿನ ಯಾವ ಶಕ್ತಿಯೂ ನಿಗ್ರಹಿಸಲಾರದು. ಇವುಗಳಿಂದ ಸಂಪನ್ನನಾದವನು, ಇಡೀ ಜಗತ್ತಿನ ವಿರೋಧವನ್ನೇ ಎದುರಿಸಬಲ್ಲ" ಎಂಬ ವಿವೇಕಾನಂದರ ವಾಣಿಯಂತೆ ಉತ್ತಮ ಜೀವನವನ್ನು ನಡೆಸಲು ನೈತಿಕ ಶಿಕ್ಷಣವು ಅಗತ್ಯ. ಆಧುನಿಕ ಶಿಕ್ಷಣದ ಜೊತೆಗೆ ನೈತಿಕ ಶಿಕ್ಷಣವನ್ನು ಬೋಧಿಸುವುದರಿಂದ ಯುವಕರಲ್ಲಿ ಪ್ರಾಮಾಣಿಕತೆ, ಸತ್ಯಸಂಧತೆ, ನೈತಿಕ ಸ್ಥಿರತೆ ಮೊದಲಾದ ಜೀವನ ಮೌಲ್ಯಗಳನ್ನು ಬೆಳಗಬಹುದು. ಆದ್ದರಿಂದ ವಿದ್ಯಾರ್ಥಿಗಳಿಗೆ ನೈತಿಕ ಶಿಕ್ಷಣವನ್ನು ಬೋಧಿಸುತ್ತಾ, ಯುವಜನತೆಯನ್ನು ದೇಶದ ಆಸ್ತಿಯನ್ನಾಗಿ ಮಾಡುವತ್ತ ಗಮನ ಹರಿಸೋಣ.
-ಸಂಶೀನ ಸೂರ್ಯ,
ಪ್ರಥಮ ಪತ್ರಿಕೋದ್ಯಮ,
ವಿವೇಕಾನಂದ ಕಾಲೇಜು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


