ಕನ್ನಡದಲ್ಲೆ ಉನ್ನತ ಶಿಕ್ಷಣ ಪಡೆಯುವಂತಾಗಬೇಕು: ಡಾ. ಲಕ್ಷ್ಮೀ ಪ್ರಸಾದ್ ಬೆಂಗಳೂರು

Upayuktha
0

ಮಂಜೇಶ್ವರ: ನಮಗೆ ಮಾತೃಭಾಷೆ ಯಲ್ಲೆ ಶಿಕ್ಷಣ ಬೇಕು. ಈಗ ಕನ್ನಡಕ್ಕೆ ಕುತ್ತು ಬಂದಿದೆ. ಇದು ಇಲ್ಲಿ ಮಾತ್ರವಲ್ಲ ವಿಶ್ವದ 200 ಭಾಷೆಗಳು ಕೆಂಪು ಪಟ್ಟಿಯಲ್ಲಿವೆ. ಇದು ತುಂಬ ಆತಂಕದ ವಿಚಾರ. ಇನ್ನು ಕೆಲವೇ ಸಮಯದಲ್ಲಿ ಈ ಭಾಷೆಗಳು ಮಾಯವಾಗಲಿವೆ. ಆ ಪಟ್ಟಿಯಲ್ಲಿ ತುಳು, ಕನ್ನಡ ಕೂಡಾ ಇದೆ. ಯಾಕೆ ಹೀಗಾಗುತ್ತಿದೆ ಎಂದು ನಾನು ಯೋಚಿಸಿದೆ ಎಂದು ಬೆಂಗಳೂರಿನ ಸಂಶೋಧಕಿ ಡಾ. ಲಕ್ಷ್ಮೀ ಪ್ರಸಾದ್ ಹೇಳಿದರು.


ಅವರು ಶನಿವಾರ (ಜೂ.24) ಕರ್ನಾಟಕ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸಹಯೋಗದೊಂದಿಗೆ ರಾಷ್ಟ್ರೀಯ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ  (NSCDF) ಮಂಜೇಶ್ವರ ರಾಷ್ಟ್ರ ಕವಿ ಗೋವಿಂದ ಪೈ ಕಾಲೇಜಿನ ಸಭಾಭವನದಲ್ಲಿ ಆಯೋಜಿಸಿದ್ದ ಒಂದು ದಿನದ "ಗಡಿನಾಡಿನಲ್ಲಿ ಕನ್ನಡೋತ್ಸವ" ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. 


ಕನ್ನಡದ ಕುತ್ತಿಗೆ ಆ ಭಾಷೆ ಕಾರಣ ಈ ಭಾಷೆ ಕಾರಣವೆಂದು ನಾನು ಭಾವಿಸಿದ್ದೆ. ಕೇರಳದಲ್ಲಿ ಕನ್ನಡಕ್ಕೆ ಆಶ್ರಯವೇ ಇಲ್ಲವೆಂದು ಕೊಂಡಿದ್ದೆ. ಬೇರೆಯವರ ಬಗ್ಗೆ ಬೆರಳು ತೋರಿಸಿದಾಗ ನಾಲ್ಕು ಬೆರಳು ನಮ್ಮನ್ನು ತೋರಿಸುತ್ತದೆ. ಮುಂಚೆ ಶ್ರೀಮಂತ ವರ್ಗದವರಲ್ಲಿದ್ದ ಭಾಷಾ ಸಂಸ್ಕೃತಿ ಮಧ್ಯಮವರ್ಗ, ಇದೀಗ ಸಾಮಾನ್ಯ ವರ್ಗದವರಲ್ಲಿ ಕಂಡು ಬರುತ್ತಿದೆ. ಇಂದು ತಂದೆ ತಾಯಿಗಳು ಮಕ್ಕಳಲ್ಲಿ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ವಾಡಿಕೆಯಾಗುತ್ತಿದೆ. ಇದು ಇಂಗ್ಲೀಷಿನ ಕುರುಡು ಅಭಿಮಾನವಲ್ಲ.  ಹೊಟ್ಟೆಪಾಡು. ಭಾರತದ ಬಹುದೊಡ್ಡ ಸಮಸ್ಯೆ ಎಂದರೆ ಆಹಾರವನ್ನು ಪಡೆದುಕೊಳ್ಳುವುದು. ಅದಕ್ಕಾಗಿ ಒಂದು ಕೆಲಸ ಬೇಕು. ಕೆಲಸ ಸಿಗಬೇಕಾದರೆ ಇಂಗ್ಲಿಷ್ ಬೇಕು. ಇದರ ಪರಿಣಾಮವಾಗಿ ಇಂದು ಕನ್ನಡಕ್ಕೆ ತೊಂದರೆಯಾಗಿದೆ. 


ಸಾಮಾನ್ಯವಾಗಿ ಕೋಪ ಬಂದಾಗ ತನ್ನ ಮಾತೃಭಾಷೆಯಲ್ಲಿ ಬೈಯುತ್ತಾರೆ. ಆದರೆ ಈಗ ಬೈಗುಳ ಕೂಡ ಆಂಗ್ಲಮಯವಾಗಿದೆ. ಅಂದರೆ ಇಂಗ್ಲಿಷ್ ಅದೆಷ್ಟು ಪರಿಣಾಮಕಾರಿಯಾಗಿ ಮಾತೃಭಾಷೆಯನ್ನು ಆಕ್ರಮಿಸಿಕೊಂಡಿದೆ ಎಂದು ಅರಿವಾಗುತ್ತದೆ. ಇದು ಮೂಲದಿಂದ ಬದಲಾಗಬೇಕಾದರೆ ಕನ್ನಡದಲ್ಲಿ ಶಿಕ್ಷಣ ಪಡೆಯುವವರಿಗೆ ಉದ್ಯೋಗ ಮತ್ತು ಕನ್ನಡದಲ್ಲಿ ಉನ್ನತ ಶಿಕ್ಷಣ ಪಡೆಯುವಂತಾಗಬೇಕು ಎಂದ ಅವರು ಇಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ಆಗಬೇಕು ಇಂತಹ ಕಾರ್ಯಕ್ರಮವನ್ನು ಆಯೋಜಿಸಿದ ಗಂಗಾಧರ್ ಗಾಂಧಿಯವರು ಅಭಿನಂದನಾರ್ಹರು ಎಂದರು.


ಮುಖ್ಯ ಅತಿಥಿಯಾಗಿದ್ದ ರಾಷ್ಟ್ರಕವಿ ಗೋವಿಂದ ಪೈ ಕಾಲೇಜಿನ ಪ್ರಾಂಶುಪಾಲ ಡಾ. ಮಹಮ್ಮದ್ ಅಲಿ ಕೆ. ಮಾತನಾಡಿ, ಕಾಸರಗೋಡು ಸಪ್ತ ಭಾಷಾ ಸಂಗಮ ಭೂಮಿ ಎಂದು ಯಾರೋ ಹೇಳಿದ್ದರು. ಇದು ತಪ್ಪು. ಯಾರೋ ಪ್ರಾಸ ಒಪ್ಪಿಸಲು ಬರೆದಿರುವ ವಿಚಾರವಿದು. ಇದು ಬಹುಭಾಷಾ ಸಂಗಮ ಭೂಮಿ.  ಆದರೆ ಇಲ್ಲಿ ಕನ್ನಡ ಮತ್ತು ತುಳು ಮಾತನಾಡಲು ಜನರು ಹಿಂಜರಿಕೆ ಮಾಡುತ್ತಾರೆ. ಇಂಗ್ಲೀಷು ಅಥವಾ ಮಳಯಾಲಂನಲ್ಲಿ ಮಾತನಾಡುವುದು ಎಂದರೆ ಹೆಮ್ಮೆ.  


2,000 ವರ್ಷಗಳ ಇತಿಹಾಸವಿರುವ ಕನ್ನಡವನ್ನು ಬಿಟ್ಟು ಒಂದು ಸಾವಿರ ವರ್ಷ ಇತಿಹಾಸವಿರುವ ಮಲಯಾಳಂ ಹಾಗೂ 500 ವರ್ಷಗಳ ಇತಿಹಾಸವಿರುವ ಇಂಗ್ಲಿಷ್ ಭಾಷೆಯನ್ನು ಅನುಸರಿಸುವುದು ಮತ್ತು ಒಪ್ಪಿಕೊಳ್ಳುವುದು ದುರಂತದ ವಿಚಾರ ಎಂದ ಅವರು ಇಂತಹ ಕನ್ನಡ ಕಾರ್ಯಕ್ರಮಗಳು ನಡೆಯಬೇಕು.  ಆ ಮೂಲಕ ಕನ್ನಡದ ಜಾಗೃತಿ ಹೆಚ್ಚಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ NSCDF ಅಧ್ಯಕ್ಷ ಗಂಗಾಧರ್ ಗಾಂದಿ ಮಾತನಾಡಿ ಕನ್ನಡದ ನೆಲ, ಜಲ, ಕನ್ನಡದ ಗಾಳಿಯನ್ನು ಉಸಿರಾಡುವ ನಾವು ಕನ್ನಡದ ಅಸ್ಮಿತೆ, ಅನನ್ಯತೆಯನ್ನು ಗಟ್ಟಿಗೊಳಿಸುವ ಪ್ರಯತ್ನ ನಮ್ಮದು. ಈ ಕಾರಣದಿಂದಾಗಿ ನಾವು ಎಲ್ಲಾ ಕಡೆಗಳಲ್ಲಿ ಕನ್ನಡದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದ್ದೇವೆ ಎಂದರು.


ಕಾಸರಗೋಡು ಕನ್ನಡ ಹೋರಾಟ ಸಾಹಿತ್ಯ ಸಂಸ್ಕೃತಿ ಇತಿಹಾಸ ಕುರಿತಾಗಿ ಶ್ರೀಮತಿ ಆಯಿಷ ಪೆರ್ಲ ಉಪನ್ಯಾಸ ನೀಡಿದರು.


ಕಾರ್ಯಕ್ರಮದಲ್ಲಿ GPMC ಪ್ರಾಧ್ಯಾಪಕ ಪ್ರೊ. ಶಿವಶಂಕರ್ ಹಾಸನದ ಸಾಮಾಜಿಕ ಚಿಂತಕಿ, ಸಾಹಿತಿ ಶ್ರೀಮತಿ ಎಚ್ ಎಸ್ ಪ್ರತಿಮಾ ಹಾಸನ್, GPMC ಹಿರಿಯ ಮೇಲ್ವಿಚಾರಕ ದಿನೇಶ್ ಕೆ, ಕವಿ ಬರಹಗಾರ ಡಾ. ಫ್ರಾನ್ಸಿಸ್ ಕ್ಸೇವಿಯರ್ ಮತ್ತು ಹಿತೇಶ್ ಕುಮಾರ್ ಉಪಸ್ಥಿತರಿದ್ದರು.


ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ, ಕನ್ನಡಕ್ಕಾಗಿ ಕಾನೂನು  ಹೋರಾಟ ಮಾಡಿ ಜಯಗಳಿಸಿದ  ಸುಂದರ ಬಾರಡ್ಕ, ಕಳೆದ 20 ವರ್ಷಗಳಿಂದ ಅನಾಥ ಶವ ಸಂಸ್ಕಾರ ನೆರವೇರಿಸಿದ ಕುಶಲ್ ಕುಮಾರ್, ಕಳೆದ 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಜಗದೀಶ್ ಕೂಡ್ಲು ಇವರನ್ನು ಸನ್ಮಾನಿಸಲಾಯಿತು.


ಬಬಿತಾ ಲತೀಶ್ ಮತ್ತು ಚಿತ್ರ ರೇಖಾ ಎಸ್ ರಾವ್ ಕಾರ್ಯಕ್ರಮ ನಿರೂಪಿಸಿದರು.  ರಾಣಿ ಪುಷ್ಪಲತಾ ದೇವಿ ವಂದಿಸಿದರು. 25ಕ್ಕೂ ಹೆಚ್ಚು ಕವಿಗಳು ಗಡಿನಾಡಿನಲ್ಲಿ ಕನ್ನಡ ಕುರಿತಾದ ತಮ್ಮ ಸ್ವರಚಿತ ಕವನ ವಾಚಿಸಿದರು. ನಂತರ ವಿವಿಧ ಕಲಾ ತಂಡಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top