ಲೋಕೋಭಿನ್ನ ರುಚಿಃ ಎಂಬ ಮಾತಿನಂತೆ ಈ ಜಗತ್ತಿನಲ್ಲಿ ಹಲವು ವಿಧದ ಹಲವು ಭಾವಗಳ ವಿವಿಧ ರೀತಿಯ ಬುದ್ಧಿಮತ್ತೆಯನ್ನು ಹೊಂದಿರುವ ಜನರಿದ್ದಾರೆ. ಒಬ್ಬರಿಗೆ ಸರಿ ಎನಿಸಿದ್ದು ಮತ್ತೊಬ್ಬರಿಗೆ ತಪ್ಪಾಗಿ ಕಾಣಬಹುದು ಒಬ್ಬರಿಗೆ ಇಷ್ಟವಾದದ್ದು ಇನ್ನುಳಿದವರಿಗೂ ಇಷ್ಟವಾಗಬೇಕೆಂದಿಲ್ಲ. ಇದಕ್ಕೆ ಕಾರಣ ಅವರವರು ಬೆಳೆದು ಬಂದ ಪರಿಸರ ಅವರು ಆಯ್ಕೆ ಮಾಡಿಕೊಂಡ ಜೀವನಶೈಲಿ ಮತ್ತು ಅವರ ಬುದ್ಧಿಮತ್ತೆ.
ಬುದ್ಧಿ ಮತ್ತೆಯಲ್ಲಿ ಹಲವಾರು ವಿಧಗಳನ್ನು ಮನೋವಿಜ್ಞಾನಿಗಳು ಸೂಚ್ಯಂಕಗಳ ಮೂಲಕ ಗುರುತಿಸುತ್ತಾರೆ. ಇಂಗ್ಲಿಷಿನಲ್ಲಿ ಇದನ್ನು ಕೋಷೆಂಟ್ (quotient) ಎಂದು ಕರೆಯುತ್ತಾರೆ.
ಸೂಚ್ಯಂಕಗಳಲ್ಲಿ ಐದು ವಿಧ
1 ಜಾಣ್ಮೆಯ ಸೂಚ್ಯಂಕ (IQ intelligence quotient)
2 ಭಾವನಾತ್ಮಕ ಸೂಚ್ಯಂಕ (EQ emotional quotient)
3 ಸಾಮಾಜಿಕ ಸೂಚ್ಯಂಕ (SQ social quotient)
4 ಪ್ರತಿಕೂಲ ಸೂಚ್ಯಂಕ (AQ adversity
quotient)
5. ನೈತಿಕತೆಯ ಸೂಚ್ಯಂಕ (MQ moral quotient)
ಜಾಣ್ಮೆಯ ಸೂಚ್ಯಂಕ: ನೀವು ವಿಷಯವನ್ನು ಹೇಗೆ, ಎಷ್ಟು ಮತ್ತು ಯಾವ ರೀತಿ ಗ್ರಹಿಸುತ್ತೀರಿ ಎಂಬುದನ್ನು ಸೂಚಿಸುತ್ತದೆ. ಗ್ರಹಿಕೆ ಮನುಷ್ಯನಿಗೆ ಅತ್ಯವಶ್ಯಕವಾಗಿ ಬೇಕಾಗುವ ಬುದ್ಧಿಮಟ್ಟ. ಯಾವುದೇ ವಿಷಯಗಳನ್ನು ಸ್ಪಷ್ಟವಾಗಿ ಕಾರ್ಯಗತಗೊಳಿಸುವಲ್ಲಿ ಗ್ರಹಿಕೆ ಮಹತ್ವದ ಪಾತ್ರ ವಹಿಸುತ್ತದೆ. ಹಲವಾರು ಕ್ಲಿಷ್ಟಕರ ವಿಷಯಗಳನ್ನು ನೆನಪಿಟ್ಟುಕೊಳ್ಳಲು ಗಣಿತದ ಪ್ರಮೇಯಗಳನ್ನು ಅರ್ಥಮಾಡಿಕೊಳ್ಳಲು ಕಠಿಣವಾದ ಪ್ರಶ್ನೆಗಳನ್ನು ಬಿಡಿಸಲು ಬುದ್ಧಿಮತ್ತೆಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಗ್ರಹಿಕೆಯ ಜಾಣ್ಮೆಅತ್ಯಂತ ಅಗತ್ಯವಾದುದು. ಅಂತಹ ಜಾಣ್ಮೆಯನ್ನು ಸೂಚಿಸುವ ಸೂಚ್ಯಂಕವೇ ಇಂಟಲಿಜನ್ಸ್ ಕೋಶೆಂಟ್. ಬುದ್ಧಿಮತ್ತೆ, ಸ್ವಯಂ ಶಿಸ್ತು, ಆತ್ಮವಿಶ್ವಾಸ, ಕೆಲಸದಲ್ಲಿ ಶ್ರದ್ಧೆ, ಸಹಕಾರ ಮನೋಭಾವ, ಪ್ರಾಮಾಣಿಕತೆ ಮತ್ತು ಸೃಜನಶೀಲತೆಗಳು ಬುದ್ಧಿಮತ್ತೆಯ ಸೂಚ್ಯಂಕದ ಸಾಮಾನ್ಯ ಲಕ್ಷಣಗಳು. ಸಾಮಾನ್ಯವಾಗಿ 85 ರಿಂದ 115 ಬುದ್ಧಿಮತ್ತೆಯ ಸೂಚ್ಯಂಕವಾಗಿದ್ದು 75ಕ್ಕಿಂತ ಕಡಿಮೆ ಸೂಚ್ಯಂಕವು ಕೆಳಮಟ್ಟದ ಬುದ್ಧಿಮತ್ತೆಯನ್ನು 130 ಕ್ಕಿಂತ ಹೆಚ್ಚಿನ ಸೂಚ್ಯಂಕವು ಅತ್ಯಧಿಕ ಜಾಣ್ಮೆಯನ್ನು ಸೂಚಿಸುತ್ತದೆ.
ಭಾವನಾತ್ಮಕ ಸೂಚ್ಯಂಕ: ಭಾವನಾತ್ಮಕತೆಯನ್ನು ಹೊಂದಿರುವ ಜನರು ಸಾಮಾನ್ಯವಾಗಿ ಉತ್ತಮ ನಾಯಕತ್ವ ಗುಣವನ್ನು ಹೊಂದಿರುತ್ತಾರೆ. ಇಬ್ಬರ ನಡುವಿನ ತಪ್ಪು ನಂಬಿಕೆಗಳನ್ನು ಪೂರ್ವಾಗ್ರಹಗಳನ್ನು ಸ್ಪಷ್ಟವಾಗಿ ಮತ್ತು ಸೌಹಾರ್ದಯುತವಾಗಿ ಕೊನೆಗಾಣಿಸುವ ಹೊಂದಾಣಿಕೆ ಸ್ವಭಾವವನ್ನು ಹೊಂದಿರುತ್ತಾರೆ. ಇವರಲ್ಲಿ ನಾಯಕತ್ವ ಗುಣವಿದ್ದು ಎಲ್ಲರನ್ನೂ ತನ್ನೊಂದಿಗೆ ಕರೆದೊಯ್ಯುವ, ಉತ್ತಮ ಗುಂಪನ್ನು ರಚಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಕ್ಲಿಷ್ಟ ಸಮಸ್ಯೆಗಳಿಗೆ ಇವರಲ್ಲಿ ಯಾವಾಗಲೂ ಉತ್ತರಗಳಿರುತ್ತವೆ. ಬೇರೊಬ್ಬರ ಮನಸ್ಥಿತಿಯನ್ನು ಗ್ರಹಿಸಿ ಅವರಿಗೆ ಸಮಾಧಾನ ಮಾಡುವ, ಅವರ ಸಮಸ್ಯೆಗಳನ್ನು ಪರಿಹರಿಸುವ ಗುಣವನ್ನು ಇವರು ಹೊಂದಿರುತ್ತಾರೆ. ಬೇರೊಬ್ಬರ ವೈಯುಕ್ತಿಕತೆಯನ್ನು ಗೌರವಿಸುವ, ಅವರ ನೋವು, ನಲಿವುಗಳನ್ನು ಆಲಿಸುವ ತಾಳ್ಮೆ ಸಹಾನುಭೂತಿಯನ್ನು ಇಂತಹವರು ಹೊಂದಿರುತ್ತಾರೆ. ಭಾವನಾತ್ಮಕ ಸೂಚ್ಯಂಕವು 27ರಿಂದ 108 ರವರೆಗೆ ಇರುತ್ತದೆ. 57ಕ್ಕಿಂತ ಹೆಚ್ಚಿನ ಮಟ್ಟದ ಸೂಚ್ಯಂಕವು ಅಪೇಕ್ಷಣೀಯವಾದುದು.
ಸಾಮಾಜಿಕ ಸೂಚ್ಯಂಕ: ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿ ಸೌಹಾರ್ದಯುತವಾಗಿ ಸಂಬಂಧಗಳನ್ನು ನಿಭಾಯಿಸುತ್ತಾನೆ. ಎಲ್ಲರೊಂದಿಗೂ ಹೊಂದಾಣಿಕೆ ಸ್ವಭಾವವನ್ನು ಹೊಂದಿರುವ ವ್ಯಕ್ತಿತ್ವ ಹೊಂದಿರುವನು. ಪ್ರೀತಿ ವಿಶ್ವಾಸದಿಂದ ಎಲ್ಲರೊಂದಿಗೆ ನಡೆದುಕೊಳ್ಳುವ, ಎಲ್ಲರ ಭಾವನೆಗಳನ್ನು ಗೌರವಿಸುವ, ಅರ್ಥ ಮಾಡಿಕೊಳ್ಳುವ ಸ್ವಭಾವ ಇವರದಾಗಿರುತ್ತದೆ. ಕಾರ್ಪೊರೇಟ್ ಹುದ್ದೆಗಳಲ್ಲಿ ಇಂತಹ ವ್ಯಕ್ತಿಗಳ ಅವಶ್ಯಕತೆ ಬಹಳ ಹೆಚ್ಚು. ಮಾನವ ಸಂಪನ್ಮೂಲಗಳ ಬಳಕೆಯಲ್ಲಿ ಇವರನ್ನು ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಕಂಪನಿಗಳ ಮಾಲೀಕರ ಮತ್ತು ಕಂಪನಿಯ ನೌಕರರ ಮಧ್ಯದ ಸೌಹಾರ್ದಯುತ ಸಂಬಂಧಗಳನ್ನು ನಿರ್ವಹಿಸುವ, ಕಚೇರಿ ನಿರ್ವಹಣೆ, ಮಾನವ ಸಂಪನ್ಮೂಲ ನಿರ್ವಹಣೆ ವಿಷಯಗಳನ್ನು ಮ್ಯಾನೇಜ್ಮೆಂಟ್ ಪದವಿಯಲ್ಲಿ ಕಲಿಸಲಾಗುತ್ತದೆ. ಈ ಎಲ್ಲ ಜಾಣ್ಮೆಯನ್ನು ಕಲಿಯುವುದರ ಮೂಲಕ ಉತ್ತಮ ಮಾನವ ಸಂಪನ್ಮೂಲ ಅಧಿಕಾರಿಗಳಾಗಿ ಅಧಿಕಾರಿಗಳು ಮತ್ತು ಸಾರ್ವಜನಿಕರ ಮಧ್ಯದ ಕೊಂಡಿಯಾಗಿ ಕಾರ್ಯ ನಿರ್ವಹಿಸುವಲ್ಲಿ ಯಶಸ್ವಿಯಾಗಬಹುದು. ಸಾಮಾಜಿಕವಾಗಿ ಎಲ್ಲರೊಂದಿಗೆ ಬೆರೆಯುವ ವ್ಯಕ್ತಿಗಳ ಸಾಮಾಜಿಕ ಸೂಚ್ಯಂಕ 85 ರಿಂದ 115 ರವರೆಗೆ ಇರುತ್ತದೆ.
ಪ್ರತಿಕೂಲ ಸೂಚ್ಯಂಕ: ಪ್ರತಿಕೂಲ ಬುದ್ಧಿಮತ್ತೆ ಯನ್ನು ಹೊಂದಿರುವವರು ಎಂತದ್ದೇ ಕ್ಲಿಷ್ಟಕರ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿಭಾಯಿಸುವ ಶಕ್ತಿಯನ್ನು ಹೊಂದಿರುತ್ತಾರೆ. ಎಲ್ಲರೂ ಕೈಕಟ್ಟಿ ಕುಳಿತಾಗ ಇವರು ಸರಳವಾಗಿ ಸುಲಭವಾಗಿ ಪರಿಸ್ಥಿತಿ ನಿಭಾಯಿಸುತ ಮತ್ತು ಅದನ್ನು ಲಾಭದಾಯಕವಾಗಿ ಪರಿವರ್ತಿಸುವ ಜಾಣ್ಮೆಯನ್ನು ಹೊಂದಿರುತ್ತಾರೆ ಇವರ ಪ್ರೆಸೆನ್ಸ ಆಫ್ ಮೈಂಡ್ ಅದ್ಬುತ. ಯಾವ ಜಾಗದಲ್ಲಿ ಎಲ್ಲರ ಬುದ್ಧಿ ಕೈ ಕೊಡುತ್ತದೆಯೋ ಅಲ್ಲಿಂದ ಇವರು ಕಾರ್ಯ ನಿರ್ವಹಿಸಲು ಆರಂಭಿಸುತ್ತಾರೆ. ಆದ್ದರಿಂದಲೇ ಇವರನ್ನು ಚಾಣಾಕ್ಷರ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಕಂಪನಿಗಳ ಕಾರ್ಯನಿರ್ವಹಣೆಯ ನಾಯಕತ್ವ ಹುದ್ದೆಗಳಲ್ಲಿ ಇಂತಹವರು ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಾರೆ. ಪ್ರತಿಕೂಲ ಸೂಚ್ಯಂಕವು 65ಕ್ಕಿಂತ ಕಡಿಮೆ ಇದ್ದರೆ ಅತ್ಯಂತ ಕೆಳಮಟ್ಟವೆಂದು, 95 ರಿಂದ 134ರ ವರೆಗೆ ಇದ್ದರೆ ಮಧ್ಯಮವೆಂದು 35 ರಿಂದ 160 ರವರೆಗೆ ಹೆಚ್ಚಿನ ಮತ್ತು 160 ರಿಂದ 200 ರವರೆಗೆ ಸೂಚಂಕವು ಅತಿ ಹೆಚ್ಚಿನ ಪ್ರತಿಕೂಲ ಜಾಣ್ಮೆಯನ್ನು ತೋರುತ್ತದೆ.
ನೈತಿಕ ಸೂಚ್ಯಂಕ: ತಪ್ಪು ಮತ್ತು ಸರಿಗಳ ಸರಿಯಾದ ತಿಳುವಳಿಕೆ, ಅರಿವು ಮತ್ತು ಗ್ರಹಿಕೆಯನ್ನು ನೈತಿಕ ಜಾಣ್ಮೆ ಎಂದು ಹೇಳುತ್ತೇವೆ. ಇಲ್ಲಿ ವ್ಯಕ್ತಿಯು ವೈಯಕ್ತಿಕವಾಗಿಯೂ ಸಾಮಾಜಿಕವಾಗಿ ತಪ್ಪಿರುವುದನ್ನು ತಪ್ಪೇ ಎಂದು ಅದನ್ನು ಸರಿಪಡಿಸಿಕೊಳ್ಳುವುದರ ಕುರಿತು ಮಾತ್ರ ಯೋಚಿಸುತ್ತಾನೆ. ಯಾವುದೇ ರೀತಿಯ ಪೂರ್ವಗ್ರಹಕ್ಕೆ ಒಳಗಾಗದೆ ಸಕಾರಾತ್ಮಕವಾಗಿ ಮತ್ತು ಶಾಂತವಾಗಿ ತೀರ್ಮಾನಗಳನ್ನು ಕೈಗೊಳ್ಳುವ ವ್ಯಕ್ತಿಯ ನೈತಿಕ ಮೌಲ್ಯ ಅತ್ಯಂತ ಹೆಚ್ಚಾಗಿರುತ್ತದೆ. ಮಕ್ಕಳಲ್ಲಿ ಬಾಲ್ಯದಿಂದಲೇ ನೈತಿಕ ಮೌಲ್ಯಗಳನ್ನು ಬಿತ್ತುವುದು ಈ ಕಾರಣಕ್ಕಾಗಿಯೇ. ಪಂಚತಂತ್ರದ ಕಥೆಗಳು, ಈಸೋಪನ ಕಥೆಗಳು, ಮಹಾಭಾರತ ಮತ್ತು ಉಪನಿಷತ್ ನ ಕಥೆಗಳು ನೈತಿಕ ಮೌಲ್ಯಗಳನ್ನು ಹೊಂದಿರುವ ಮಗುವಿನ ಮನಸಿನಲ್ಲಿ ಜಾಗೃತ ಪ್ರಜ್ಞೆಯು ಬೇರೂರಿ ಫಲ ನೀಡುತ್ತವೆ. ವ್ಯಕ್ತಿಯು ತಾನು ತಪ್ಪು ಮಾಡುವುದಿಲ್ಲ ಮತ್ತು ಮತ್ತೊಬ್ಬರಿಗೂ ತಪ್ಪು ಮಾಡದಿರಲು ಆಗ್ರಹಿಸುತ್ತಾನೆ.
ಕೊನೆಯ ಕೊಸರು: ಇಂದಿನ ಸಾಮಾಜಿಕ ಜೀವನದಲ್ಲಿ ಉತ್ತಮ ನಾಗರಿಕರಾಗಿ ಬಾಳಲು ನಮ್ಮ ಎಲ್ಲಾ ರೀತಿಯ ಸೂಚ್ಯಂಕಗಳು ಅಪೇಕ್ಷಣೀಯ ಮಟ್ಟವನ್ನು ಹೊಂದಿದ್ದರೆ ಬದುಕು, ಸುಗಮವಾಗಿ ಸಾಗುತ್ತದೆ. ನಮ್ಮಲ್ಲಿರುವ ಕೊರತೆಗಳನ್ನು ಸೂಕ್ತ ಜ್ಞಾನ ಮತ್ತು ಕೌಶಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ನೀಗಿಸಿಕೊಂಡು ಸಮಾಜಮುಖಿಯಾಗಿ ಬಾಳೋಣ.
- ವೀಣಾ ಹೇಮಂತ್ ಗೌಡ ಪಾಟೀಲ್ ಮುಂಡರಗಿ ಗದಗ್
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ