ಕೈದಿಗಳ ಪರಿವರ್ತನಾ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ
ಮಂಗಳೂರು: ಕ್ಷಣಿಕ ಉದ್ವೇಗದ ಕೃತ್ಯಕ್ಕೆ ಬಲಿಯಾಗಿ ಈಗ ಜೈಲಿನಲ್ಲಿರಬೇಕಾದಂತಹ ಪರಿಸ್ಥಿತಿಯಲ್ಲಿರುವವರಿಗೆ ಸಮಾಜದಲ್ಲಿ ಮರು ಸೇರ್ಪಡೆಯಾಗಲು ಅವಕಾಶ ಬೇಕಾಗಿದ್ದಲ್ಲಿ ನಿಮ್ಮಲ್ಲಿ ಪರಿವರ್ತನೆ ಬೇಕಾಗುತ್ತದೆ ಎಂದು ಪರಿವರ್ತನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಹಿರಿಯ ಪತ್ರಕರ್ತ ರೇಮಂಡ್ ಡಿಕೂನಾ ತಾಕೊಡೆ ರವರು ನಿವಾಸಿಗಳಿಗೆ ಹೇಳಿದರು.
ಅವರು ಇಂದು (ಮಂಗಳವಾರ ಮೇ 23) ದ.ಕ ಜಿಲ್ಲಾ ಕಾರಾಗೃಹದಲ್ಲಿ ಪರಿವರ್ತನಾ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದರು.
ತಾವು ತಪ್ಪು ಮಾಡಲು ಹಾಗೂ ಈ ಸ್ಥಿತಿಯಲ್ಲಿ ಇರಲು ಆ ಕ್ಷಣಕ್ಕೆ ಪ್ರೋತ್ಸಾಹ ನೀಡಿದವರು ಈಗಿನ ತಮ್ಮ ಪರಿಸ್ಥಿತಿಯನ್ನು ಅನುಭವಿಸುವುದಿಲ್ಲ. ಅವರು ಸ್ವತಂತ್ರವಾಗಿ ಕುಟುಂಬದ ಜೊತೆಯಲ್ಲಿ ಇದ್ದಾರೆ. ಆದರೆ ತಾವು ತಮ್ಮ ಕುಟುಂಬದ ನೆಮ್ಮದಿ ಹಾಳು ಮಾಡಿ ಜೈಲಿನಲ್ಲಿದ್ದೀರಿ. ನೀವೆಲ್ಲರೂ ತಮ್ಮ ತಮ್ಮಲ್ಲಿ ಸಂಕಲ್ಪ ಮಾಡಿ ಶುದ್ದವಾದ ಮನಸ್ಸಿನಿಂದ ಇರೋಣ ಎಂದು ತೀರ್ಮಾನಿಸಿದ್ದಲ್ಲಿ ನಿಮ್ಮ ಸಹಕಾರಕ್ಕೆ ನೀವು ನಂಬುವ ದೈವ ನಿಲ್ಲುತ್ತಾನೆಂದು ಭಾವಿಸುತ್ತೇನೆಂದು ಹಾಗೂ ಇಲ್ಲಾಗುವ ಪರಿವರ್ತನೆ ಮುಂದೆ ಬಿಡುಗಡೆಯಾದಾಗ ಸಮಾಜದಲ್ಲಿ ಗುರುತು ಸಿಗುವಂತಿರಬೇಕು ಎಂದು ಅವರು ತಿಳಿಸಿ ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ವಕೀಲರು, ಪ್ರಾಧ್ಯಾಪಕರಾದ ಕವಿತಾ ಮುರುಗೇಶ್ ಮಾತನಾಡಿ, ಯಾವುದೋ ಕಾರಣಕ್ಕೆ ತಪ್ಪಾಗಿರಬಹುದು. ಮಾನವೀಯತೆಯ ಆಧಾರದಲ್ಲಿ ಜೈಲಿನಲ್ಲಿ ತಮಗೆ ಪರಿವರ್ತನೆಯ ಪರಿ ದೊರಕಿಸಿ ಕೊಡಲು ಪ್ರಯತ್ನಿಸುವುದು ಸಹಜವಾದರೂ ತಾವು ಮಾಡಿದ ಅಪರಾಧದ ವಿಷಯದಲ್ಲಿ ನ್ಯಾಯ ದೊರಕಿಸಿ ಕೊಡಲು ಒಂದು ಸುದೀರ್ಘ ವ್ಯವಸ್ಥೆ ಇರುತ್ತದೆ ಎಂಬುದನ್ನು ಮರೆಯುವಂತಿಲ್ಲ. ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತ ಮತ್ತು ತಮ್ಮಲ್ಲಾಗುವ ವರ್ತನಾ ಬದಲಾವಣೆಗಳನ್ನೇ ಸಮಾಜವು ನಿರೀಕ್ಷಿಸುತ್ತದೆ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು.
ಜಿಲ್ಲಾ ಕಾರಾಗೃಹ, ಮಂಗಳೂರಿನ ಅಧೀಕ್ಷಕರಾದ ಬಿ.ಟಿ. ಓಬಳೇಶಪ್ಪ ರವರು ಮಾತನಾಡಿ, ಕಾರಾಗೃಹ ನಿವಾಸಿಗಳು ತಮ್ಮ ವರ್ತನೆಯನ್ನು ತಿದ್ದಿಕೊಳ್ಳದ ಹೊರತು ಪರಿವರ್ತನೆಗೆ ಅರ್ಥ ಸಿಗುವುದಿಲ್ಲ. ಮಾನವೀಯ ಮೌಲ್ಯಗಳ ಪ್ರಕಾರ ಇಲ್ಲಿ ತಮ್ಮೆಲ್ಲರನ್ನು ಪರಿಗಣಿಸುವುದಷ್ಟೇ ಅಲ್ಲದೆ ನಿಮ್ಮ ನಡವಳಿಕೆಯನ್ನು ತಿದ್ದುವುದು ಸಹ ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು.
ವೇದಿಕೆಯಲ್ಲಿ ಜೈಲರುಗಳಾದ ರಾಜೇಂದ್ರಸಿಂಗ್ ಕೋಪರ್ಡೆ, ಶಿದ್ಧರಾಮಪ್ಪ, ವಿಜಯಕುಮಾರ್ ಸಂಕಾ, ಚೆನ್ನಮ್ಮ ಬಿದರಿ ಉಪಸ್ಥತರಿದ್ದರು.
ಜೈಲುವಾಸಿಗಳು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಜೈಲುವಾಸಿಗಳು ಕನ್ನಡ, ತುಳು, ಕೊಂಕಣಿ, ಮಳಿಯಾಳಿ ಭಾಷೆಯಲ್ಲಿ ದೇವರ ನಾಮ ಹಾಗೂ ವಿವಿಧ ಪದ್ಯಗಳನ್ನು ಹಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ