ಅವಲೋಕನ: ಡಾ. ಎಚ್.ಆರ್. ಲೀಲಾವತಿ ಅವರ ಆತ್ಮಕಥನ 'ಹಾಡಾಗಿ ಹರಿದಾಳೆ'

Upayuktha
0

ಹಿರಿಯ ಗಾಯಕಿ, ಲೇಖಕಿ ಎಚ್.ಆರ್. ಲೀಲಾವತಿ ಅವರು ಭಾವಗೀತೆಗಳಿಗೆ ಸ್ವಂತಿಕೆಯ ಛಾಪು ಒತ್ತಿದವರು. ಇಂದು ಸುಗಮ ಸಂಗೀತವು ವಾದ್ಯಗಳ ಅಬ್ಬರದಲ್ಲಿ ಮುಳುಗಿ, ಅದು ಭಾವಗೀತೆಯೋ, ಚಿತ್ರಗೀತೆಯೋ ಅಥವಾ   ಟಪ್ಪಾಂಗುಚ್ಚಿ ಎಂಬ ಅಪಸವ್ಯವೋ ಎಂದು ರೋದಿಸುವಂತಹ ಸ್ಥಿತಿಗೆ ಬಂದು ತಲಪಿದೆ. ಆದರೆ ಲೀಲಾವತಿಯವರ ಸಂಯೋಜನೆ, ಗಾಯನ ಎಂದೂ ಕೇಳುಗರನ್ನು ಅಂತಹ ಗೊಂದಲಕ್ಕೆ ದೂಡಲಿಲ್ಲ. ಅವರು ಸದಾ ಮಾಧುರ್ಯಕ್ಕೆ, ಲಾಲಿತ್ಯಕ್ಕೆ ಒತ್ತುಕೊಟ್ಟವರು. ಅವರ ಸಂಯೋಜನೆಗಳಲ್ಲಿ ಲಯವು ಗೀತೆಯ ಜೊತೆಗೆ ಹಿತಮಿತವಾಗಿ ಸಾಗಿತೇ ಹೊರತು ಅದೇ ಪ್ರಧಾನವಾಗಲಿಲ್ಲ. ಲಯವು ಮಾಧುರ್ಯದ ಗೋಣು ಮುರಿದು ವಿಕಟಾಟ್ಟಹಾಸ ಮೆರೆಯಲಿಲ್ಲ. ಅದೇ ಅವರ ಅಸ್ಮಿತೆ; ಹೆಚ್ಚುಗಾರಿಕೆ. ಅವರು 90ರ ಏರಿನಲ್ಲಿದ್ದರೂ ಸರಾಗವಾಗಿ ನಡೆಯಬಲ್ಲ, ನೆಲದ ಮೇಲೆ ಕೂರಬಲ್ಲ ನಮ್ಮ ನಡುವಿನ ಬೆರಗು. ಅವರೊಂದು ಬೆಳಕಿನ ಕವಿತೆ.  ಕವಿತೆಯಷ್ಟೇ ಅಲ್ಲ; ಅವರೊಂದು ಹಾಡುಹಕ್ಕಿ. ಈ ಹಾಡುಹಕ್ಕಿ ಎಂದೂ ಪ್ರಶಸ್ತಿಗಾಗಿ ಯಾರ ಕದವನ್ನೂ ಬಡಿಯಲಿಲ್ಲ.  ರಾಷ್ಟ್ರೀಯ ಪುರಸ್ಕಾರವೇ ಅವರ ಮುಡಿಗೆ ಒಲಿದು ಬಂದಿತು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಪ್ರಶಸ್ತಿಯನ್ನು ಇತ್ತೀಚೆಗೆ ಮಾನ್ಯ ರಾಷ್ಟ್ರಪತಿ ದ್ರೌಪದಿ ಮುರ್ಮು ಪ್ರದಾನ ಮಾಡಿದರು. ಇದೀಗ ಅವರ ಆತ್ಮಕಥನವೂ ಪ್ರಕಟಗೊಂಡಿದೆ. ಹಲವು ಕಾರಣಗಳಿಂದಾಗಿ ವಿಶಿಷ್ಟವಾದ ದಾಖಲೆಯಿದು. ಅದನ್ನು ಪರಿಶೀಲಿಸಿ ವಾಚಕರ ಓದಿಗಾಗಿ ನನ್ನ ಅನಿಸಿಕೆಗಳನ್ನು ದಾಖಲಿಸಿರುವೆ. 


ಆತ್ಮಕಥನಗಳಿಗೊಂದು ನಿಖರ ತೋರುಗಂಬ:

ಸಾಮಾನ್ಯವಾಗಿ ಆತ್ಮಕಥನವೆಂದರೆ ತನ್ನ  ಬಣ್ಣಿಸಿ, ಇದಿರ ಹಳಿಯಲು ತೆರೆದಿಟ್ಟ ಕೃತಿ. ಬಹುತೇಕ ಸಂದರ್ಭಗಳಲ್ಲಿ ತನ್ನ ಸಾಧನೆಗಳನ್ನು ಉತ್ಪ್ರೇಕ್ಷಿಸಿ ಸಾರುವ ಆತ್ಮರತಿಯೂ ಹೌದು. 


ತನ್ನನ್ನು ತಾನು ಇರುವಂತೆ ತೆರೆದಿಟ್ಟುಕೊಳ್ಳುವ ಆತ್ಮಚರಿತ್ರೆಗಳು ಅಪರೂಪ. ಚರಿತ್ರಹೀನರೂ ಆತ್ಮಕಥನಗಳನ್ನು ರಚಿಸಿ ತಮ್ಮನ್ನು ತಾವು ಸ್ವಯಂ ವೈಭವೀಕರಿಸಿಕೊಂಡು ಪುನೀತರಾಗಲು ಯತ್ನಿಸಿರುವುದುಂಟು. ಇದಕ್ಕೆ ಅಪವಾದ ಎಂಬಂತೆ ಕನ್ನಡದಲ್ಲಿ ಇತ್ತೀಚೆಗೆ ಒಂದು ಅಪರೂಪದ ಬೃಹತ್ ಆತ್ಮಕಥನವೊಂದು ಪ್ರಕಟವಾಗಿದೆ.


ಕನ್ನಡದ ಹಿರಿಯ ಗಾಯಕಿ, ಲೇಖಕಿ  ಡಾ. ಎಚ್.ಆರ್. ಲೀಲಾವತಿ ಅವರ 'ಹಾಡಾಗಿ ಹರಿದಾಳೆ' ಬೃಹತ್ ಆತ್ಮಕಥನ ಈ ಆರೋಪಗಳಿಗೆ ಎಡೆಯೇ ಇಲ್ಲದಂತೆ ಹೊರಬಂದಿದೆ!


ಇದರಲ್ಲಿನ ಪುಟಪುಟವೂ, ಪದಪದವೂ ನೇರ, ನಿರ್ಭಿಡ, ಪಾರದರ್ಶಕ.  ಸಾಂಸ್ಕೃತಿಕ ಲೋಕದ ಹಿರಿಯ ಲಲನೆಯೊಬ್ಬರು ಹೀಗೆ ಖುಲ್ಲಂ ಖುಲ್ಲ ಆಗಿ ತಮ್ಮನ್ನು ಅಭಿವ್ಯಕ್ತಿಸಿಕೊಂಡಿರುವುದು ಕನ್ನಡಕ್ಕೆ ಹೊಸದು.


ಸಂತೋಷದ ಸಂಗತಿ ಎಂದರೆ ಒಂದು ಕಾಲದಲ್ಲಿ ಮಹಿಳೆಯರ ಆತ್ಮಕಥನಗಳು ಕನ್ನಡದಲ್ಲಿ ಅಪರೂಪವಾಗಿದ್ದವು. ಆದರೆ ಇತ್ತೀಚಿನ ವರ್ಷಗಳಲ್ಲಿ ಡಾ. ವಿಜಯಾ, ಡಾ. ಗಿರಿಜಮ್ಮ, ಡಾ. ಪ್ರತಿಭಾ ನಂದಕುಮಾರ್, ಮಾಜಿ ಸಚಿವೆ ಮೋಟಮ್ಮ ಮುಂತಾದವರ ಆತ್ಮಕಥನಗಳು ತಮ್ಮ ಗಂಭೀರ ಹಾಗೂ ಭಿನ್ನ ನಡೆಯಿಂದಾಗಿ ಓದುಗರ  ಗಮನ ಸೆಳೆದಿವೆ. ನಮ್ಮ ಲೇಖಕಿಯರು ಅಡುಗೆ ಮನೆಯ ಆಚೆಗೆ ಸಾಗಿಬಂದು ತಮ್ಮ ಸಂಕೀರ್ಣ ಅನುಭವಗಳಿಗೆ ಕ್ಷರವಿಲ್ಲದ ಅಕ್ಷರಗಳಾಗಿದ್ದಾರೆ.  


ಈ ಕೃತಿಯಲ್ಲಿ ಲೇಖಕಿ ಹಾಡಾಗಿ ಅಷ್ಟೇ ಹರಿದಿಲ್ಲ; ಅಕ್ಷರಗಳಾಗಿ ಅಭಿವ್ಯಕ್ತಿ ಸಾಧಿಸಿದ್ದಾರೆ. ಸರಳ ಪ್ರಸ್ತುತಿ. ನಿರಾಡಂಬರ ಶೈಲಿ. ಒಂದೇ ಗುಕ್ಕಿಗೆ ಓದಿಸಿಕೊಳ್ಳುವ ಗುಣ ಇದರ ಕೆಲವು ಧನಾತ್ಮಕ ಅಂಶಗಳು. ಆತ್ಮಚರಿತ್ರೆಯಂತಹ ಬರೆಹದಲ್ಲಿ ಪ್ರಾಮಾಣಿಕತೆ ಇರಬೇಕು ಎಂಬ ನಿರೀಕ್ಷೆ ಸಹಜ. ಅಂತಹ ಅಪೇಕ್ಷೆ ಇಲ್ಲಿ "ಹಸಿಗೋಡೆಯ ಹರಳಿನಂತೆ ಹುಸಿಹೋಗದೆ" ಕಚ್ಚಿಕೊಂಡಿದೆ.


ಇಡೀ ಕೃತಿಯ ತುಂಬಾ ಒಂದು ಸ್ವಸ್ಥ ಮನಸ್ಸು ತನ್ನನ್ನು ತಾನು ವಾಸ್ತವ ಆಕಾರ ಮತ್ತು ಗಾತ್ರದಲ್ಲಿ ತೆರೆದುಕೊಂಡಿದೆ. ಅದು ತನ್ನ ಸಾಧನೆ, ಯಶಸ್ಸು ಮತ್ತು ಗೆಲುವುಗಳನ್ನಷ್ಟೇ ಬಿಂಬಿಸಿಕೊಂಡಿಲ್ಲ. ಸೋಲು, ಕೊರತೆ, ಮಿತಿಗಳಿಗೂ ಕನ್ನಡಿ ಹಿಡಿದಿದೆ.


ಓದತೊಡಗಿದರೆ ಚಕಚಕನೆ ಸಾಗುವ ಶತಾಬ್ದಿ ರೈಲಿನಂತೆ ಓಡತೊಡಗುತ್ತದೆ. ಇದರ ರಚನೆಯನ್ನು "ಹಿಂದಕೆ ನೋಡುತ ಮುಂದಕೆ ದುಡುಕುವ ನದಿಯಂತಿದರ ವಿಹಾರ" ಎನ್ನಬಹುದು. ತನ್ನ ಹರಿವಿನಲ್ಲಿ ಈ ಕೃತಿ ನಮ್ಮ ನಡುವಿನ ಒಂಬತ್ತು ದಶಕಗಳ ಸಾಂಸ್ಕೃತಿಕ, ಸಾಮಾಜಿಕ ಸಂಗತಿಗಳನ್ನು ಅನಾವರಣಗೊಳಿಸಿದೆ. ಹಾಗಾಗಿ ಇದೊಂದು ಆತ್ಮಚರಿತ್ರೆಯಷ್ಟೇ ಅಲ್ಲ; ಚರಿತ್ರೆಯೂ ಹೌದು.


ಘೋಷಣೆ ಅಥವಾ ಬರೆಹವಷ್ಟೇ ಸ್ತ್ರೀವಾದವಲ್ಲ; ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಸಂಕೀರ್ಣ ಸವಾಲುಗಳನ್ನು ಎದುರಿಸಿ ಈಸಿ ಜಯಿಸುವುದೂ ಸ್ತ್ರೀವಾದವೇ ಎಂಬುದನ್ನು ಈ ಹೊತ್ತಗೆ ಮನಗಾಣಿಸುತ್ತದೆ.


ಇಂತಹ ಮಹತ್ತ್ವದ ಕೃತಿ ರಚಿಸಿದ ಲೇಖಕಿ ಎಲ್ಲರ ಅಭಿನಂದನೆಗೆ ಪಾತ್ರರು ಎಂಬ ನುಡಿ ಇಲ್ಲಿ ಸವಕಲು ಮಾತಾಗದೆ, ಕ್ಲೀಷೆಯಾಗದೆ, ಚರ್ವಿತ ಚರ್ವಣವಾಗದೆ ಅಕ್ಷರಶಃ ನಿಜ ಎಂದಾಗಿದೆ. ಇಂತಹ ಮಹತ್ತ್ವದ ಕೃತಿ ಪ್ರಕಟಿಸಿದ ವಿಕಾಸ ಪ್ರಕಾಶನದ ಆರ್. ಪೂರ್ಣಿಮಾ ಅವರು ಅಭಿನಂದನಾರ್ಹರು. ಆತ್ಮರತಿಯ ಉಮೇದಿನಲ್ಲಿ   ಹಾದಿತಪ್ಪಿದ ಆತ್ಮಕಥನಗಳಿಗೆ ಇದು ಸರಿದಾರಿ ತೋರುವ ನಿಖರ ತೋರುಗಂಬ.  


'ಹಾಡಾಗಿ ಹರಿದಾಳೆ' ಕೃತಿಯ ಆಯ್ದ ಭಾಗವನ್ನು ಕರ್ನಾಟಕ ಮಹಿಳಾ ವಿಶ್ವವಿದ್ಯಾಲಯವು ಪದವಿ ತರಗತಿಗಳ ಪಠ್ಯವನ್ನಾಗಿ ನಿಗದಿಪಡಿಸುವ ವಿಚಾರವನ್ನು ಪರಿಶೀಲಿಸಲಿ.  


 

-  ಕೆ. ರಾಜಕುಮಾರ್, ಬೆಂಗಳೂರು


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top