
ಕಾಣುವ ಕನಸಿಗೆ, ಚಿಗುರಿನ ಚಿಗುರಿಗೆ ನೀರೆರೆದು. ಬಿದ್ದಾಗ ನೊಂದ ಮನಕ್ಕೆ ಎದ್ದಾಗ ಈ ಜೀವಕ್ಕೆ ಸೋತಾಗ ಈ ಭಾವನೆಗಳ ಸಾರಕ್ಕೆ ಹಳಿ ತಪ್ಪಿದ ಗುರಿಯ ಸರಿಪಡಿಸಿ ನೀನಾದೆ ವಿಶ್ವಕರ್ಮಿ. ಅಮ್ಮಾ..... ನೀನೆಂದರೆ ಆಗಸ ಅಲ್ಲಿ ಕಾಣುವ ಧ್ರುವತಾರೆಗಳ ಬಳಗ ಸೂರ್ಯ ಚಂದ್ರರ ತೇಜಸ್ಸು ಕಂಡೆ ನಿನ್ನ ಮೊಗದಲ್ಲಿ. ದಣಿದ ಈ ತನುವು ವಿಶ್ರಾಂತಿಗಾಗಿ ತವಕಿಸುವ ಹಾತೊರೆಯುವ ಗಳಿಗೆಯಲ್ಲಿ ನಿನ್ನ ಮಡಿಲೇ ಆಸರೆ ಆಯ್ತು. ಅಂಗೈಯಲ್ಲಿ ತಲೆಯ ಸವರುತ್ತಾ ಲಾಲಿ ಹಾಡನ್ನು ಕೇಳುತ್ತಾ ಒಮ್ಮೆ ನಿದ್ರೆಗೆ ಜಾರಿದರೆ ಸ್ವರ್ಗವೇ ಧರಗಿಳಿದು ಸುತ್ತಾಡಿದಂತೆ ತೋರುತ್ತದೆ. ನೆಮ್ಮದಿಯು ನಿನ್ನ ಕಂಡಾಗ ಚಿಗುರಲು. ನೀನು ಕಣ್ಣಿಗೆ ಕಾಣದೆ ಹೋದರೆ ಕಾರ್ಮೋಡದ ಕತ್ತಲು ಸುತ್ತಲೂ ಮನವ ಸುತ್ತಲು. ಒಮ್ಮೆ ನಿನ್ನ ಚೆಲುವಿನ ವದನ ಕಂಡರೆ ಸಾಕು ಕಾರ್ಮೋಡ ಕರಗಿ ಮಳೆ ಸುರಿದು ಆಗಸವು ತಿಳಿ ನೀಲಿ ಆದಂತೆ ಮನವು ತಿಳಿಯಾಗುತ್ತದೆ.
ಹಗಲಿರುಳಿನ ಸಮಯದಿ ನಿನಗಾಗಿ ಮೀಸಲಿಟ್ಟ ಸಮಯ ಅರೆ ನಿಮಿಷಗಳು. ಹಸಿದ ಈ ಹೊಟ್ಟೆಯ ತಣಿಸಿ, ಶಿಶುವಾಗಿದ್ದಾಗ ಎದೆಹಾಲ ಉಣಿಸಿ, ನವಮಾಸದ ವೇದನವ ಸಹಿಸಿ ಈ ಜೀವಕ್ಕೆ ಜೀವ ತುಂಬಿ ಭಾವನೆಗಳಿಗೆ ಬಣ್ಣವ ಬಳಿದು ಸದಾ ಪ್ರೀತಿಯ ಕಡಲಲ್ಲಿ ನನ್ನ ತೇಲಿಸಿ. ತಪ್ಪಿಗೆ ಯಾವ ಮುಲಾಜು ಇಲ್ಲದೆ ಏಟನ್ನು ಹೊಡೆವೆ. ಅಪ್ಪನ ಕೋಪಕ್ಕೆ ನಾನೇ ಕಾರಣವೆಂದು ಅರಿತು ಅವರ ಏಟಿನ ಕಾಟವನ್ನು ತಡೆದವಳು ನೀನಲ್ಲದೆ ಮತ್ಯಾರು?.
ನಿನ್ನ ಮೇಲಿನ ಅತಿಯಾದ ಪ್ರೀತಿಗೋ, ಅತಿಯಾದ ಕಾಳಜಿಗೋ ಗೊತ್ತಿಲ್ಲ. ನನಗರಿಯದೆ ಕೆಲವು ಸಾರಿ ಬೈಗುಳ ನನ್ನ ನಾಲಗೆಯಿಂದ ಉರುಳುತ್ತದೆ. ಮಾತು ಆಡಿದರೆ ಹೋಯಿತು ಮುತ್ತು ಒಡೆದರೆ ಹೋಯಿತು ಎಂಬಂತೆ ಆಡಿದ ಮಾತು ಮಾತಾಗಿಯೇ ಉಳಿದು ಬಿಡುತ್ತದೆ. ಈ ಸನ್ನಿವೇಶದ ನಂತರ ನನ್ನಲ್ಲಿ ಉಂಟಾಗುವ ಪಶ್ಚಾತ್ತಾಪ, ನಿನ್ನ ಮನಸಿಗಾದ ನೋವಿಗೆ ನನ್ನ ವಚನವೇ ಕಾರಣವಾಯಿತೆಂದು ತಿಳಿದಾಗ ಯಾಕಾದ್ರೂ ಆ ಮಾತಾನ್ನು ಆಡಿದೆ ಅನಿಸುತ್ತದೆ. ನಾನು ಎಷ್ಟೋ ಬಾರಿ ಕಾರಣ ಇದ್ದು ಇಲ್ಲದೆಯೇ ಬೈದಿರಬಹುದು, ಜಗಳ ಮಾಡಿರಬಹುದು, ಆದರೆ ನಿನ್ನೊಂದಿಗೆ ನಾನೆಂದು ಮಾತು ಬಿಟ್ಟಿಲ್ಲ ನೀನು ಕೂಡ ಅದಕ್ಕೆ ದಾರಿ ಮಾಡಿಕೊಟ್ಟವಳಲ್ಲ. ಒಮ್ಮೆಗೆ ಸಿಟ್ಟು ಬಂದಂತೆ ನಟಿಸಿ ಬಾ ಮಗ ತಿಂಡಿ ತಿನ್ನು ಎನ್ನುತ್ತಾ ನಡೆದ ಘಟನೆ ಅರೆ ಕ್ಷಣದಿ ಮರೆತು ಘಟಿಸಿಯೇ ಇಲ್ಲವೆಂಬಂತೆ ನಡೆವೆ.
ಅರಿತು ಅರಿಯದೆಯೋ ನನ್ನ ಕಾರಣಕ್ಕೆ ಉಳಿದವರಿಂದ ಹೊಗಳಿಕೆ ತೆಗಳಿಕೆಗೆ ಕಿವಿ ನೀನಾಗಿರಬಹುದು. ಅವುಗಳನ್ನೆಲ್ಲ ನನ್ನಲ್ಲಿ ಹೇಳಿ ಹೊಗಳಿಕೆಗೆ ಹುಬ್ಬೇರಿಸ ಬೇಡ. ಹೊಗಳಿ ಅಟ್ಟಕೇರಿಸುವರು ತೆಗಳಿ ಪಾತಾಳಕ್ಕೆ ಬೀಳಿಸುವರು ಇಂಥವರ ಬಗ್ಗೆ ಚಿಂತೆ ಬಿಟ್ಟು ಬಿಡು. ಮೊದಲು ನಿನ್ನ ಗುರಿಯ ಗುರುತು ಮಾಡಿ ಅದರೊಳಗೆ ಬೆರೆತು ಅದು ತಲುಪುವ ಮಾರ್ಗವ ಅರಿತು ಮುನ್ನಡೆದು ಸಾಧನೆಗೆ ಮುನ್ನುಡಿಯ ನೀನೇ ಬರಿ. ನಿನ್ನ ನೋಡಿ ಆಡಿಕೊಂಡು ನಿನ್ನತ್ತ ಬೆರಳು ಮಾಡಿದ ಕೈಗಳು ತನಗರಿಯದೆ ಯಶಸ್ಸನ್ನು ಕಂಡು ಹೊಟ್ಟೆಕಿಚ್ಚು ಪಟ್ಟು ಚಪ್ಪಾಳೆ ತಟ್ಟುವರು. ಆಗ ನಿನ್ನ ಸಾಧನೆಗೆ ನಿಜವಾದ ಅರ್ಥ ಸಿಗುವುದು.
ಹಂಗಿಸುವ ಮನಸ್ಸು, ನೋಯಿಸುವ ಕನಸು ಈ ಸ್ವಾರ್ಥ ಜಗದಲ್ಲಿ ತುಂಬಿದ ಮುನಿಸ್ಸು ಇದೆಲ್ಲವೂ ಬಾಳಿನ ಪಯಣದಲ್ಲಿ ಎದುರಾಗುವ ಜೊತೆಯಾಗುವ ಪಯಣಿಗ. ಇದನ್ನು ನೀನು ಅನುಭವಿಸಲೇಬೇಕು. ಆದರೆ ವ್ಯಥೆ ಪಟ್ಟು ಗುಣವಿಲ್ಲವೆಂದು ಕಿವಿ ಮಾತು ಹೇಳಿ ಆದರ್ಶ ಜೀವನವನ್ನು ರೂಪಿಸಿದ ಮಾತೆಯನ್ನು ಅದಕ್ಕಾಗಿಯೇ ತಾನೆ ಮೊದಲ ಗುರು ಎಂಬುದಾಗಿ ಅರಿತವರ ವಚನಗಳಲ್ಲಿ ಸುವರ್ಣಾಕ್ಷರದಲ್ಲಿ ಬರೆದಿರುವುದು.
ಕೊನೆಯದಾಗಿ ಹೇಳುವುದು ಇಷ್ಟೇ, ತಾಯಿಯ ಮನಸ್ಸನ್ನು ಎಂದೆಂದೂ ನೋಯಿಸಬೇಡಿ, ಕಣ್ಣೀರ ತರಿಸಬೇಡಿ, ಆಕೆ ಆಡುವ ಮಾತುಗಳು ನಮ್ಮ ಒಳಿತಿಗಾಗಿಯೇ ಹೊರತು ಬೇರೆ ಯಾವುದಕ್ಕೂ ಅಲ್ಲ. ಯಾಕೋ ಮನದೊಳಗೆ ಅದೆಷ್ಟೋ ದಿನಗಳಲ್ಲಿ ಗೂಡು ಕಟ್ಟಿದ್ದ ಈ ಮಾತುಗಳು ಇಂದು ಹೇಳಬೇಕೆನ್ನಿಸಿತು.
-ಗಿರೀಶ್ ಪಿಎಂ
ಪ್ರಥಮ ಎಂ ಎ ಇತಿಹಾಸ ಮತ್ತು ಪುರಾತತ್ವಶಾಸ್ತ್ರ
ವಿ ವಿ ಕಾಲೇಜು ಮಂಗಳೂರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ