ಅಬ್ಬೂರು ಕ್ಷೇತ್ರ- ಶ್ರೀ ಬ್ರಹ್ಮಣ್ಯ ತೀರ್ಥರ ಆರಾಧನೆ

Upayuktha
0


(ಮೇ 15 ರಿಂದ 18ರ ವರೆಗೆ ಗುರುಗಳ ಆರಾಧನೆಯ ಪ್ರಯುಕ್ತ ಈ ಲೇಖನ)


|| ಕಂಸಧ್ವಂಸಿ ಪದಾಂಭೋಜ ಸಂಸಕ್ತೋ ಹಂಸ ಪುಂಗವ: | 

ಬ್ರಹ್ಮಣ್ಯ ಗುರುರಾಜಾಖ್ಯೋ ವರ್ತತಾಂ ಮಮ ಮಾನಸೇ ||


ಶ್ರೀ ಗುರುಭ್ಯೋ ನಮಃ ಪರಮ  ಗುರುಭ್ಯೋ ನಮಃ ಶ್ರೀಮದಾನಂದತೀರ್ಥ ಭಗವತ್ಪಾದಾಚಾರ್ಯ ಗುರುಭ್ಯೋನಮಃ ಶ್ರೀ ವೇದವ್ಯಾಸಾಯ ನಮ:


ಕಂಸನನ್ನು ಸಂಹರಿಸಿದ ಶ್ರೀ ಕೃಷ್ಣನ ಪಾದವೆಂಬ ಕಮಲದಲ್ಲಿ ಆಸಕ್ತರಾದ ಹಂಸ ಪುಂಗವ ಯತಿ ಶ್ರೇಷ್ಠರಾದ ಬ್ರಹ್ಮಣ್ಯ ತೀರ್ಥರು ನನ್ನ ಮನದಲ್ಲಿ ನಿಲ್ಲಲಿ ಎಂದು ಶ್ರೀ ವ್ಯಾಸರಾಜರು ತಾತ್ಪರ್ಯ ಚಂದ್ರಿಕಾ ಗ್ರಂಥದಲ್ಲಿ ಹೇಳಿದ್ದಾರೆ.

ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯರ ಬೃಹತ್ ಪೀಠದಲ್ಲಿ ಬಂದ ಗಣ್ಯ ವ್ಯಕ್ತಿಗಳೆಂದರೆ ಜಯತೀರ್ಥರು, ಪುರುಷೋತ್ತಮ ತೀರ್ಥರು. ಇವರ ವರ ಕುಮಾರರೇ ಸೂರ್ಯಾಂಶ ಸಂಭೂತರಾದ ಶ್ರೀ ಶ್ರೀ ಬ್ರಹ್ಮಣ್ಯತೀರ್ಥ ಶ್ರೀಪಾದಂಗಳವರು.  ಶ್ರೀಮದಾಚಾರ್ಯರಿಂದ ಹನ್ನೊಂದನೆಯ ಯತಿಗಳು. ಶ್ರೀ ವ್ಯಾಸರಾಜ ಮಠವೆಂದು ಪ್ರಸಿದ್ಧವಾದ ಮಠಕ್ಕೆ ಮೂಲಪುರುಷರಾದ ವ್ಯಾಸರಾಜ ಗುರುಸಾರ್ವಭೌಮರನ್ನು ಜಗತ್ತಿಗೆ ನೀಡಿದ ಮಹನೀಯರು.


ಬೆಂಗಳೂರು ಜಿಲ್ಲೆಯ ರಾಮನಗರದಲ್ಲಿ ಶ್ರೀ ರಾಮಾಚಾರ್ಯರೆಂಬ ಶ್ರೋತ್ರಿಯ ಬ್ರಾಹ್ಮಣನಿಗೆ ಸಂತಾನವಿರಲಿಲ್ಲ. ಶ್ರೀಮದಾಚಾರ್ಯರ ಪೀಠದಲ್ಲಿ ಆಗ ಶ್ರೀಪುರುಷೋತ್ತಮ ತೀರ್ಥರು ವಿರಾಜಮಾನರಾಗಿದ್ದರು. ಅವರ ಸೇವೆಯನ್ನು ಮಾಡಿ ರಾಮಾಚಾರ್ಯರು ಮಗನನ್ನು ಪಡೆದರು. ಶ್ರೀ ಲಕ್ಷ್ಮೀನರಸಿಂಹನ ಪ್ರಸಾದದಿಂದ ಜನಿಸಿದ ಶಿಶುವಿಗೆ ನರಸಿಂಹಚಾರ್ಯ ಎಂದು ನಾಮಕರಣ ಮಾಡಿದರು. ನಂತರ ಸಕಾಲಕ್ಕೆ ಉಪನಯನ ಮಾಡಿ ಪುರುಷೋತ್ತಮ ತೀರ್ಥರಲ್ಲಿ ವ್ಯಾಸಂಗಕ್ಕೆ ಕಳಿಸಿದರು. ವಿದ್ಯಾಭ್ಯಾಸ ಮುಗಿದ ನಂತರ ಅವರಿಗೆ ಸನ್ಯಾಸ ಆಶ್ರಮವನ್ನು ಕೊಟ್ಟ ಪುರುಷೋತ್ತಮ ತೀರ್ಥರು ಬ್ರಹ್ಮಣ್ಯತೀರ್ಥ ಎಂದು ನಾಮಕರಣ ಮಾಡಿದರು. ಅನಂತರ ಕೆಲಕಾಲ ಶಿಷ್ಯರೊಡನೆ ಇದ್ದು ಒಂದು ದಿನ ಗುರುಗಳಾದ ಪುರುಷೋತ್ತಮ ತೀರ್ಥರು ಸಮೀಪದಲ್ಲಿರುವ ಗುಹೆಯನ್ನು ಪ್ರವೇಶಿಸಿ ಅದೃಶ್ಯರಾದರು. ಇಂದಿಗೂ ಅಬ್ಬೂರು ಕ್ಷೇತ್ರದಲ್ಲಿ ಪುರುಷೋತ್ತಮ ತೀರ್ಥರ ಗುಹೆಯನ್ನು ಕಾಣಬಹುದು. ಶ್ರೀ ಬ್ರಹ್ಮಣ್ಯತೀರ್ಥರು ಶಿಷ್ಯರಿಗೆ ಪಾಠ ಪ್ರವಚನಗಳನ್ನು ಹೇಳಿ ಶ್ರೀಮದಾಚಾರ್ಯರ ಕರಾರ್ಚಿತ ಶ್ರೀ ಯೋಗ ಪಟ್ಟಿಕ ನರಸಿಂಹಾದಿ ದೇವತಾರ್ಚನೆ ಯನ್ನು ಮಾಡಿ ಸರ್ವಜ್ಞರ ಶಾಸ್ತ್ರವನ್ನು ಬೋಧನೆ ಮಾಡುತ್ತಿದ್ದರು. ಬುದ್ಧಿಯಲ್ಲಿ ಬೃಹಸ್ಪತಿ ಗಳಂತೆ ಭಕ್ತಿಯಲ್ಲಿ ಪ್ರಹ್ಲಾದನಂತೆ ವಿರಕ್ತಿಯಲ್ಲಿ ಸನಕಾದಿ ಗಳಂತೆ ಶೋಭಿಸುತ್ತಿದ್ದರು. ತಪೋನಿಷ್ಟ ಗರಿಷ್ಟರಾದ ಬ್ರಹ್ಮಣ್ಯತೀರ್ಥರು ಸಕಲ ತೀರ್ಥಯಾತ್ರೆಗಳನ್ನು ಮುಗಿಸಿ ಬದರಿಕಾಶ್ರಮವನ್ನು ಸೇರಿ ನಾರಾಯಣನ ದರ್ಶನವನ್ನು ಮಾಡಿ ತಮಗೆ ಯೋಗ್ಯ ಶಿಷ್ಯನನ್ನು ಕರುಣಿಸಲು ಪ್ರಾರ್ಥಿಸಿ, ಅಪ್ಪಣೆ ಪಡೆದು ಹಿಂತಿರುಗಿ ಬರುವಾಗ ಧಾರವಾಡ ಜಿಲ್ಲೆಯ ಸಾತೇನಹಳ್ಳಿ ಎಂಬ ಗ್ರಾಮದಲ್ಲಿ ಮುಖ್ಯಪ್ರಾಣನನ್ನು ಪ್ರತಿಷ್ಠಾಪಿಸಿದರು. 


ಇವರ ಮೃತ್ತಿಕಾ ಮಹಿಮೆಯಂತೂ ಹೇಳಲು ಅಸಾಧ್ಯ. ಆಗಿನ ಕಾಲದಲ್ಲಿ ಚನ್ನಪಟ್ಟಣವು ಚಿತ್ತಗಂಗವಾಡಿ ಎಂಬ ಸಂಸ್ಥಾನದ ರಾಜಧಾನಿಯಾಗಿತ್ತು. ಆ ರಾಜನಿಗೆ ವಯಸ್ಸಾಗಿತ್ತು. ಆತನಿಗೆ ತರುಣಿಯಾದ ಸುಂದರಿಯಾದ ಹೆಂಡತಿ ಇದ್ದಳು. ಆ ರಾಜನಿಗೆ ಸುಂದರವಾದ ಮಗ ಕೂಡ ಇದ್ದನು. ಅವಳು ಆ ರಾಜಕುಮಾರನಿಗೆ ಮೋಹಿತಳಾದಳು. ಆಗ ಆ ರಾಜಕುಮಾರ ನೀನು ನನ್ನ ತಾಯಿ ಎಂದು ಹೇಳಿದಾಗ ತನಗೆ ಕಾಮೇಚ್ಚೆಯು ಪೂರ್ಣವಾಗದಿರಲು ರಾಜನಿಗೆ ಅವನ ವಿರುದ್ಧ ದೂರು ಕೊಟ್ಟಳು. ರಾಜನು ಅವನ ಕಾಲುಗಳನ್ನು ಕತ್ತರಿಸಲು ಆದೇಶ ಮಾಡಿದನು. ರಾಜಕುಮಾರ ಕಾಲುಗಳನ್ನು ಕಳೆದುಕೊಂಡು ಚಿಂತಾಕ್ರಾಂತನಾಗಿ ಬ್ರಹ್ಮಣ್ಯತೀರ್ಥರಲ್ಲಿ ಮರೆಹೊಕ್ಕನು. ಬ್ರಹ್ಮಣ್ಯತೀರ್ಥರು ಅನುಗ್ರಹವನ್ನು ಮಾಡಿ ಮೃತ್ತಿಕೆಯನ್ನು ನೀಡಿ ಇದನ್ನು ಕಾಲುಗಳಿಗೆ ಲೇಪಿಸಿಕೊಳ್ಳಲು ಹೇಳಿದರು. ಆಗ ಪ್ರತಿದಿನವೂ ಮೃತ್ತಿಕೆಯನ್ನು ಕಾಲುಗಳಿಗೆ ಲೇಪಿಸಿದ ಫಲವಾಗಿ ಕಾಲುಗಳು ಬೆಳೆಯತೊಡಗಿತು. ಕ್ರಮೇಣ ಕಾಲುಗಳನ್ನು ಪಡೆದು ಮೊದಲಿನಂತೆ ನಡೆಯಲು ಆರಂಭಿಸಿದನು. ಅದೇ ಇಂದಿನ ಮಳೂರು. ಮಳೆತ್ತೂರು ಹೋಗಿ ಮಳೂರು ಎಂದು ಆಗಿದೆ. ಅನಂತರ ಯುವರಾಜನು ಬ್ರಹ್ಮಣ್ಯತೀರ್ಥರಲ್ಲಿಗೆ ಬಂದು ಸಾಷ್ಟಾಂಗ ಪ್ರಣಾಮ ಮಾಡಿ ತನ್ನ ಕೃತಜ್ಞತೆಯನ್ನು ತಿಳಿಸಿ ತಂದೆಯ ಬಳಿಗೆ ಬಂದು ವಾಸ್ತವ ವಿಷಯವನ್ನು ತಿಳಿಸಿ ತಂದೆಯ ಪ್ರಸನ್ನತೆಯನ್ನು ಪಡೆದು ಪಟ್ಟಾಭಿಷೇಕವನ್ನು ಹೊಂದಿ ಯುವ ರಾಜನಾದನು. ಆನಂತರ ಬ್ರಹ್ಮಣ್ಯ ತೀರ್ಥರಲ್ಲಿ ಕಾಣಿಕೆಯನ್ನು ಸ್ವೀಕರಿಸಬೇಕೆಂದು ಬೇಡಿಕೊಂಡನು. ಪರಮ ವಿರಕ್ತರಾದ ಬ್ರಹ್ಮಣ್ಯತೀರ್ಥರು ಮಾತ್ರ ರಾಜ ಕೋಶಾಗಾರದಲ್ಲಿದ್ದ ಶ್ರೀವಿಠ್ಠಲ ಪ್ರತಿಮೆಯನ್ನು ಮಾತ್ರ ಸ್ವೀಕರಿಸಿದರು. ಶ್ರೀ ಮಠದಲ್ಲಿ ಇಂದಿಗೂ ಈ ಪ್ರತಿಮೆಯನ್ನು ಶ್ರೀ ಬ್ರಹ್ಮಣ್ಯತೀರ್ಥ ಕರಾರ್ಚಿತ ಶ್ರೀ ವಿಠಲ ದೇವರು ಎಂದು ಹೇಳುವುದು ರೂಢಿಯಲ್ಲಿದೆ.


ಬ್ರಹ್ಮಣ್ಯತೀರ್ಥರಿಗೆ ಯಾಕೆ ವೈಶಿಷ್ಟ್ಯ ಎಂದರೆ ಸದಾ ವಿಷ್ಣುಪಾದಾಸಕ್ತ ಸೂರ್ಯಾಂಶ ಸಂಭೂತರು. ಬ್ರಹ್ಮಣ್ಯ ತೀರ್ಥರು ಎಲ್ಲಾ ವ್ಯಾಧಿಗಳನ್ನು ಪರಿಹಾರ ಮಾಡುತ್ತಾರೆ. ಭೂತಪ್ರೇತಗಳನ್ನು ಬಿಡಿಸುತ್ತಾರೆ. ಶ್ರೀ ವ್ಯಾಸರಾಜರು ತಮ್ಮ ಪಂಚರತ್ನ ಮಾಲಿಕ ಸ್ತೋತ್ರದಲ್ಲಿ ಈ ವಿಷಯಗಳನ್ನೆಲ್ಲಾ ಕ್ರೋಢೀಕರಿಸಿದ್ದಾರೆ. ಶ್ರೇಯಸ್ಸು ಕೊಡುತ್ತಾರೆ ಎಂದು ಹೇಳಿದ್ದಾರೆ. ಶ್ರೇಯಸ್ಸು ಎಂದರೆ ಮೋಕ್ಷ. ಮೋಕ್ಷ ಸುಖದ ಸಾಧನೆಗಾಗಿ ಆರೋಗ್ಯವನ್ನು ಬ್ರಹ್ಮಣ್ಯತೀರ್ಥರ ಬೇಡಬೇಕು.


ಬ್ರಹ್ಮಣ್ಯತೀರ್ಥರು ಪುರುಷೋತ್ತಮತೀರ್ಥರ ಶಿಷ್ಯರು, ವ್ಯಾಸರಾಯರ ಗುರುಗಳು. ಶ್ರೀಪಾದರಾಜರ ಪೂರ್ವಾಶ್ರಮದ ಅಣ್ಣಂದಿರು. ಅತ್ಯದ್ಭುತವಾದ ಜ್ಞಾನಿಗಳು ಪರಮ ಶಾಂತರು. ಶಾಂತರು ಎಂಬ ಪದಕ್ಕೆ ಬುದ್ಧಿ ದೇವರ ಪಾದ ಕಮಲದಲ್ಲಿ ಲಗ್ನವಾದವರು ಎಂದು ಅರ್ಥ.


ಎಲ್ಲರ ದುರ್ಮತಗಳನ್ನು ಖಂಡನೆ ಮಾಡಿದವರು. ಇಂತಹ ಮಹನೀಯರು ವೈಶಾಖ ಶುದ್ಧ ಏಕಾದಶಿ ಅಬ್ಬೂರು ಗ್ರಾಮದಲ್ಲಿ ಬೃಂದಾವನಸ್ಥರಾದರು. ಆರಾಧನಾ ದಿನತ್ರಯಗಳಲ್ಲಿ ವಿಶೇಷವಾಗಿ ಧರೆಗೆ ಬಂದು ಭಕ್ತರಿಗೆ ಅನುಗ್ರಹವನ್ನು ಮಾಡುತ್ತಾರೆ. ಆದ್ದರಿಂದಲೇ ಆರಾಧನಾ ದಿನತ್ರಯಗಳಲ್ಲಿ ಅವರ ದರ್ಶನವನ್ನು ಮಾಡಿ ಅವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ.

ಇಂತಹ ಮಹನೀಯರ ಬಗ್ಗೆ ನನ್ನ ವಾಕ್ ಶುದ್ಧಿಗಾಗಿ 4 ನುಡಿಗಳನ್ನು ಬರೆದು ಸಮರ್ಪಣೆ ಮಾಡುತ್ತಿದ್ದೇನೆ.

ಶ್ರೀಕೃಷ್ಣಾರ್ಪಣಮಸ್ತು

ನಾಹಂ ಕರ್ತಾ ಹರಿಃ ಕರ್ತಾ

- ಹೇಮಾ ಶ್ರೀಧರಾಚಾರ್

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top