ಮಂಗಳೂರು: ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ನಿಖರವಾದ ಗುರಿಯಿದ್ದಾಗ ಮಾತ್ರ ಯಶಸ್ಸು ಪಡೆಯಲು ಸಾಧ್ಯ. ಗುರಿ ಸ್ಪಷ್ಟವಾಗಿದ್ದರೆ ಯಾರೂ ನಮ್ಮನ್ನು ಗೊಂದಲಕ್ಕೀಡು ಮಾಡುವಂತಿಲ್ಲ. ಅರ್ಹರ ಜೊತೆ ಮಾತುಕತೆ, ವಿಶ್ಲೇಷಣೆ ನಮ್ಮ ಗುರಿಯನ್ನು ನಿಖರವಾಗಿಸಬಹುದು, ಎಂದು ಮಂಗಳೂರಿನ ಪೊಲೀಸ್ ಆಯುಕ್ತ ಕುಲದೀಪ್ ಆರ್.ಜೈನ್ ಹೇಳಿದರು.
ನಗರದ ವಿಶ್ವವಿದ್ಯಾಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಶುಕ್ರವಾರ, ಮಂಗಳೂರು ವಿಶ್ವವಿದ್ಯಾನಿಲಯದ ಅಂಬಿಗರ ಚೌಡಯ್ಯ ಅಧ್ಯಯನಪೀಠ ಹಾಗೂ ವಿವಿ ಕಾಲೇಜಿನ ಕನ್ನಡ ವಿಭಾಗ ಮತ್ತು ಕನ್ನಡ ಸಂಘಗಳ ವತಿಯಿಂದ ಆಯೋಜಿಸಲಾಗಿದ್ದ ‘ಅಂಬಿಗರ ಚೌಡಯ್ಯ:ವಚನ ಮೀಮಾಂಸೆ’ ಎಂಬ ಒಂದು ದಿನದ ರಾಷ್ಟ್ರಮಟ್ಟದ ವಿಚಾರಸಂಕಿರಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಯಶಸ್ಸು ಸಾಧಿಸಲಾಗದಿದ್ದರೆ ನಮ್ಮ ಋಣಾತ್ಮಕ ಅಂಶಗಳೆಡೆಗೆ ಗಮನಹರಿಸಬೇಕು, ಯಾವುದೇ ನೆಪವೊಡ್ಡದೆ ನಮ್ಮ ಕೊರತೆಯನ್ನು ಒಪ್ಪಿಕೊಳ್ಳಬೇಕು, ಎಂದರು.
ತಮ್ಮ ಆಶಯ ನುಡಿಗಳಲ್ಲಿ ಮದರಾಸು ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದ ಅಧ್ಯಕ್ಷೆ, ಕನ್ನಡ ಸಾಹಿತ್ಯಪರಿಷತ್ ನ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷೆ ಡಾ. ತಮಿಳ್ ಸೆಲ್ವಿ, 12 ನೇ ಶತಮಾನದ ಶರಣಕ್ರಾಂತಿಯಲ್ಲಿ ವಚನಕಾರರು ಢಂಭಚಾರವನ್ನು ತಿರಸ್ಕರಿಸಿ, ಅಂತರಂಗದ ಭಕ್ತಿಯನ್ನು ಎತ್ತಿ ಹಿಡಿದರು. ಇಂತಹ ಬಂಡಾಯ ಮನೋಧರ್ಮದ ವಚನಕಾರರಲ್ಲಿ ಅಂಬಿಗರ ಚೌಡಯ್ಯ ಪ್ರಮುಖರು, ಎಂದರು.
ಅಧ್ಯಕ್ಷೀಯ ಮಾತುಗಳನ್ನಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ, ವಿದ್ಯಾರ್ಥಿಗಳು ತಮ್ಮ ಗೆಲುವಿನ ಹೊಣೆಯನ್ನು ಸ್ವೀಕರಿಸುವ ಹಾಗೆಯೇ ಸೋಲಿನ ಹೊಣೆಯನ್ನೂ ಸ್ವೀಕರಿಸುವ ಮನೋಭಾವವನ್ನು ಬೆಳೆಸಿಕೊಳ್ಳಬೇಕೆಂದು ಹೇಳಿದರು. ತಮ್ಮ ಪ್ರಾಸ್ತಾವಿಕ ಮಾತುಗಳಲ್ಲಿ ಅಂಬಿಗರ ಚೌಡಯ್ಯ ಅಧ್ಯಯನ ಪೀಠದ ಸಂಯೋಜಕ ಪ್ರೊ. ಸೋಮಣ್ಣ, ವಚನ ಸಾಹಿತ್ಯದ ಪ್ರಮುಖರಾದ ಬಸವಣ್ಣ, ಅಲ್ಲಮಪ್ರಭು ಹಾಗೂ ಅಂಬಿಗರ ಚೌಡಯ್ಯನಂತಹ ವಚನಕಾರರು ಸಾಮಾಜಿಕ ಸುಧಾರಣೆಯ ಕಾಯಕದ ಮಹತ್ವವನ್ನು ಎತ್ತಿ ಹಿಡಿದರು, ಎಂದರು.
ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ,ಕನ್ನಡ ಸಂಘದ ಸಂಯೋಜಕ ಡಾ.ಮಧು ಬಿರಾದಾರ್ ಸೇರಿದಂತೆ ವಿವಿಧ ವಿಭಾಗಗಳ ಉಪನ್ಯಾಸಕರು ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ಕನ್ನಡವಿಭಾಗದ ಮುಖ್ಯಸ್ಥ ಡಾ.ಮಾಧವ ಎಂ.ಕೆ ಅತಿಥಿಗಳನ್ನು ಸ್ವಾಗತಿಸಿದರೆ, ಕನ್ನಡಸಂಘದ ವಿದ್ಯಾರ್ಥಿಕಾರ್ಯದರ್ಶಿ ಧನ್ಯಶ್ರೀ ವಂದಿಸಿದರು. ವಿದ್ಯಾರ್ಥಿ ವಿಕಾಸ್ರಾಜ್ ಕಾರ್ಯಕ್ರಮ ನಿರೂಪಿಸಿದರು.
ಮೊದಲ ಗೋಷ್ಠಿಯಲ್ಲಿ ʼಅಂಬಿಗರ ಚೌಡಯ್ಯನವರ ವಚನಗಳಲ್ಲಿ ಕಾಯಕದ ಪರಿಕಲ್ಪನೆʼ ಕುರಿತು ಉಜಿರೆ ಎಸ್.ಡಿ.ಎಂ ಕಾಲೇಜಿನ ಪ್ರಾಧ್ಯಾಪಕ ಡಾ. ರಾಜಶೇಖರ ಹಳೆಮನೆ ಮಾತನಾಡಿದರು. ಎರಡನೇ ಗೋಷ್ಠಿಯಲ್ಲಿ ʼಅಂಬಿಗರ ಚೌಡಯ್ಯನವರ ವಚನಗಳಲ್ಲಿ ಸಾಮಾಜಿಕ ಪರಿಕಲ್ಪನೆʼ ಕುರಿತು ಕಾಸರಗೋಡಿನ ಸರಕಾರಿ ಕಾಲೇಜಿನ ಸ್ನಾತಕೋತ್ತರ ಕನ್ನಡಅಧ್ಯನ ಕೇಂದ್ರದ ಸಹ ಪ್ರಾಧ್ಯಾಪಕ ಡಾ. ರತ್ನಾಕರ ಮಲ್ಲದ ಮೂಲೆ ಮಾತನಾಡಿದರು.
ʼವಿಕಾಸʼದ ಅಧ್ಯಕ್ಷೆ ಡಾ. ನಾಗವೇಣಿ ಮಂಚಿ, ಆಳ್ವಾಸ್ ಕಾಲೇಜಿನ ಪ್ರಾಧ್ಯಾಪಕ ಹರೀಶ್ ಟಿಜಿ ಸಮನ್ವಯಕಾರರಾಗಿದ್ದರು. ಎಸ್.ಡಿ.ಎಂ ಕಾನೂನು ಕಾಲೇಜಿನ ಕಾನೂನು ವಿದ್ಯಾರ್ಥಿನಿ ಶ್ರೀಲಕ್ಷ್ಮಿಮಠದ ಮೂಲೆ, ವಿವಿ ಕಾಲೇಜಿನ ಪತ್ರಿಕೋದ್ಯಮ ವಿದ್ಯಾರ್ಥಿ ಲತೇಶ್ ಸಾಂತ ವಿದ್ಯಾರ್ಥಿ ಪ್ರತಿಕ್ರಿಯೆ ನೀಡಿದರು. ಅಭಿಜಾತ ಕನ್ನಡ ಸಂಶೋಧನಾ ಪತ್ರಿಕೆಯ ಡಾ. ಕೊಟ್ರಸ್ವಾಮಿ ಎ.ಎಂ.ಎಂ ಸಮಾರೋಪ ಭಾಷಣ ಮಾಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ