ಮತದಾನ ಮಹಾದಾನ- ಆಯ್ಕೆ ಸೂಕ್ತವಾಗಿರಲಿ

Upayuktha
0

 


ವಿಶ್ವದ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದಲ್ಲಿ ಇದೀಗ ಮತ್ತೊಂದು ಬಾರಿ ಚುನಾವಣೆ ಎಂಬ ಪ್ರಜಾಪ್ರಭುತ್ವದ ಮಹಾಯಜ್ಞ ಪ್ರಾರಂಭವಾಗಿದೆ. ಭಾರತ ಒಂದು ಸಾಂವಿಧಾನಿಕ ರಾಷ್ಟ್ರವಾಗಿದ್ದು ಇಲ್ಲಿ ಗಣತಂತ್ರ ವ್ಯವಸ್ಥೆಯು ಜಾರಿಯಲ್ಲಿದೆ. 29 ರಾಜ್ಯಗಳ 550ಕ್ಕೂ ಹೆಚ್ಚು ಲೋಕಸಭಾ ಸೀಟುಗಳು ಮತ್ತು ನಮ್ಮ ಕರ್ನಾಟಕ ರಾಜ್ಯದಲ್ಲಿ 230ಕ್ಕೂ ಹೆಚ್ಚು ವಿಧಾನಸಭಾ ಸೀಟುಗಳನ್ನು ಹೊಂದಿರುವ ವಿಶ್ವದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಪ್ರಜಾಪ್ರತಿನಿಧಿಗಳ ಆಯ್ಕೆ ನಡೆಯುತ್ತದೆ. ವಿವಿಧ ರಾಷ್ಟ್ರೀಯ ಪಕ್ಷಗಳು ತಮ್ಮ ಪಕ್ಷದ ಪ್ರಣಾಳಿಕೆಗಳೊಂದಿಗೆ ಜನರ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಪಣತೊಟ್ಟು ಚುನಾವಣೆಯ ಅಖಾಡಕ್ಕೆ ಇಳಿಯುತ್ತವೆ.


ಗ್ರಾಮ ಪಂಚಾಯತಿ, ಜಿಲ್ಲಾ ಪಂಚಾಯತಿ, ಪುರಸಭೆ, ನಗರ ಸಭೆ, ಮಹಾನಗರಪಾಲಿಕೆ ವಿಧಾನಸಭಾ ಸದಸ್ಯರು ಮೆಂಬರ್ ಆಫ್ ಲೆಜಿಸ್ಲೇಟಿವ್ ಅಸೆಂಬ್ಲಿ (ಮೇಲ್ಮನೆ ಮತ್ತು ಕೆಳಮನೆ ಸದಸ್ಯರು) ಮೆಂಬರ್ ಆಫ್ ಲೆಜಿಸ್ಲೇಟಿವ್ ಕೌನ್ಸಿಲ್ ಸದಸ್ಯರು ರಾಜ್ಯದಲ್ಲಿ ಆಡಳಿತದ ಭಾಗವಾಗಿ ಚುನಾಯಿಸಲ್ಪಟ್ಟರೆ ಲೋಕಸಭೆಯಲ್ಲಿ ಲೋಕಸಭಾ ಮತ್ತು ರಾಜ್ಯಸಭಾ ಸದಸ್ಯರಾಗಿ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಪದವೀಧರ ಕ್ಷೇತ್ರ, ಶಿಕ್ಷಕರ ಕ್ಷೇತ್ರ ಎಂದು ವಿವಿಧ ಸದಸ್ಯರನ್ನು ಆಯ್ಕೆ ಮಾಡಲಾಗುತ್ತದೆ. ಮೇಲ್ಮನೆ ಸದಸ್ಯರು ಮತ್ತು ಕೇಂದ್ರದಲ್ಲಿ ರಾಜ್ಯಸಭಾ ಸದಸ್ಯರು  ವಿವಿಧ ರಂಗಗಳಲ್ಲಿ ಸಾಧನೆ ಮಾಡಿದ ಜನರಿಗಾಗಿಯೇ ಕೆಲವು ಸೀಟುಗಳನ್ನು ಹೊಂದಿವೆ.


ಇದೆಲ್ಲಕ್ಕೂ ಮುಖ್ಯವಾದದ್ದು ನಮ್ಮ ಸಂವಿಧಾನದಲ್ಲಿ ಸರ್ವ ಜನರಿಗೂ ಸಮಾನವಾಗಿ ಕಲ್ಪಿಸಲ್ಪಟ್ಟ ಮತದಾನ ಪ್ರಕ್ರಿಯೆ. ಪ್ರಜೆಗಳಿಂದ, ಪ್ರಜೆಗಳಿಗಾಗಿ ಮತ್ತು ಪ್ರಜೆಗಳಿಗೋಸ್ಕರ ಎಂಬ ಧ್ಯೇಯ ವಾಕ್ಯವನ್ನು ಹೊಂದಿರುವ ನಮ್ಮ ಭಾರತ ದೇಶದಲ್ಲಿ ವಿವಿಧ ಹಂತಗಳಲ್ಲಿ ಪ್ರಜೆಗಳೇ ತಮ್ಮ ಪ್ರತಿನಿಧಿಗಳನ್ನು ಚುನಾಯಿಸುತ್ತಾರೆ. ಹೀಗೆ ಅತಿ ಹೆಚ್ಚು ಸಂಖ್ಯೆಯಲ್ಲಿ ಚುನಾಯಿಸಲ್ಪಟ್ಟ ಪಕ್ಷವು ಅಧಿಕಾರಕ್ಕೆ ಬಂದು ಅದಕ್ಕಿಂತ ಕಡಿಮೆ ಸೀಟುಗಳನ್ನು ಗಳಿಸಿದ ಪಕ್ಷವು ವಿರೋಧ ಪಕ್ಷವಾಗಿ ಕಾರ್ಯನಿರ್ವಹಿಸುತ್ತವೆ. ಆಡಳಿತ ಪಕ್ಷವು ರಾಜ್ಯದ ಅಧಿಕಾರ ವರ್ಗದ ಸಹಯೋಗದೊಂದಿಗೆ ಆಡಳಿತಾತ್ಮಕ ನಿರ್ಣಯಗಳನ್ನು ಕೈಗೊಂಡರೆ ವಿರೋಧ ಪಕ್ಷವು ಕಾವಲು ನಾಯಿಗಳ ರೀತಿಯಲ್ಲಿ ಸರ್ಕಾರದ ಆಡಳಿತವನ್ನು ವಿಮರ್ಶೆ ಮಾಡುವ,  ಟೀಕಿಸುವ ಮತ್ತು ಸರ್ಕಾರದ ಆಡಳಿತ ವಿರೋಧಿ ಧೋರಣೆಗಳ ವಿರುದ್ಧ ಅಹವಾಲು ಸಲ್ಲಿಸುವ ಕಾರ್ಯನಿರ್ವಹಿಸುತ್ತದೆ. ಹೀಗೆ ಒಂದಕ್ಕೊಂದು ಪೂರಕವಾಗಿ ಆಡಳಿತ ಮತ್ತು ವಿರೋಧಪಕ್ಷಗಳು ದೇಶದ, ರಾಜ್ಯದ ಅಭಿವೃದ್ಧಿಗೆ ತಮ್ಮ ಕಾಣಿಕೆಯನ್ನು ಸಲ್ಲಿಸುತ್ತವೆ.


ಇದು ಚುನಾವಣೆಯ ಮತ್ತು ಸರ್ಕಾರದ ಕುರಿತ ಮಾತಾದರೆ ಮತದಾನ ಎಂಬುದು ಪ್ರಜೆಗಳಿಗಿರುವ ಅತ್ಯಂತ ಮಹತ್ವದ ಹಕ್ಕು ಮತ್ತು ಕರ್ತವ್ಯವೂ ಹೌದು. ಅದರಲ್ಲೂ ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ಯಾವುದೇ ತಂಟೆ ತಕರಾರುಗಳಿಲ್ಲದೆ ಗೌಪ್ಯ ಮತದಾನದ ಮೂಲಕ ಆಯ್ಕೆ ಮಾಡುವ ಹಕ್ಕು, ಮತದಾರರಿಗೆ ಇದೆ. ಮತದಾನವು ಪ್ರಜಾಪ್ರತಿನಿಧಿ ಸರ್ಕಾರದ ಆಧಾರ ಸ್ತಂಭ. ತನಗೆ ಸೂಕ್ತವೆನಿಸಿದ, ಮೆಚ್ಚುಗೆಯಾದ ನಾಯಕತ್ವವನ್ನು ಆಡಳಿತಕ್ಕೆ ತರುವಲ್ಲಿ ಮತದಾನ ಪ್ರಮುಖ ಪಾತ್ರ ವಹಿಸುತ್ತದೆ. ಮತದಾನವು ಪ್ರಜಾ ಸಮ್ಮತಿಯ ಹಕ್ಕನ್ನು ಪ್ರತಿಪಾದಿಸುತ್ತದೆ ಮತ್ತು ಸರ್ಕಾರ ರಚಿಸುವಲ್ಲಿ ನ್ಯಾಯಬದ್ಧ ನಿರ್ಣಯವನ್ನು ಮಂಡಿಸುತ್ತದೆ. ನಿಯಮಿತವಾಗಿ ನಿಗದಿತ ಸಮಯದಲ್ಲಿ ಚುನಾವಣೆಗಳು ನಡೆದರೆ ಆ ಸರ್ಕಾರವನ್ನು ನ್ಯಾಯಯುತ ಸರ್ಕಾರ ಎಂದು ಕರೆಯಬಹುದು.


ಮತ ಚಲಾವಣೆಯು-

  • ಸರ್ಕಾರದ ಆಡಳಿತಾತ್ಮಕ ಸಫಲತೆ ಮತ್ತು ವಿಫಲತೆಯನ್ನು, ಸರ್ಕಾರದ ನೀತಿ ನಿಯಮಾವಳಿಗಳಿಂದ ಉಂಟಾಗುವ ಸಾಧಕ- ಬಾಧಕಗಳನ್ನು ಮೌಲ್ಯಮಾಪನ  ಮಾಡುವ ಮಹತ್ತರ ಜವಾಬ್ದಾರಿಯಾಗಿದೆ.
  • ಮತದಾನವು ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸಲು ಅವಕಾಶ ನೀಡುತ್ತದೆ.
  • ಮತದಾನದ ಮೂಲಕ ಸೂಕ್ತ ವ್ಯಕ್ತಿಯನ್ನು ಆರಿಸುವ ಮೂಲಕ ಆಡಳಿತಾತ್ಮಕ ಜವಾಬ್ದಾರಿಯನ್ನು ಸುಸೂತ್ರವಾಗಿ ಚುನಾಯಿತ ಪಕ್ಷಕ್ಕೆ ವರ್ಗಾಯಿಸಲು ಅನುಕೂಲವಾಗುತ್ತದೆ.
  • ವಿದ್ಯುನ್ಮಾನ ಮತಯಂತ್ರದಲ್ಲಿ ಚುನಾವಣೆಗೆ ಸ್ಪರ್ಧಿಸಿರುವ ಉಮೇದುವಾರರನ್ನು ಪಕ್ಕದಲ್ಲಿಯೇ ಇರುವ ಕೆಂಪು ಗುಂಡಿಯನ್ನು ಒತ್ತುವ ಮೂಲಕ ನಮ್ಮ ಮತವನ್ನು ಚಲಾಯಿಸಬಹುದು.ಮತದಾರರು ತನಗೆ ಸೂಕ್ತವೆನಿಸಿದ ವ್ಯಕ್ತಿಯನ್ನು ಚುನಾಯಿಸುವ ಇಲ್ಲವೇ ಯಾರನ್ನೂ ಚುನಾಯಿಸದೆ ಇರುವ (ನೋಟ) ಅಧಿಕಾರವನ್ನು ಹೊಂದಿರುತ್ತಾರೆ.


 ಎಲ್ಲರಿಗೂ ಮತದಾನದ ಹಕ್ಕನ್ನು ಕೊಡುವುದರ ಕುರಿತು ಅಂಬೇಡ್ಕರ್ ಮತ್ತು ಗಾಂಧಿಯವರ ಮಧ್ಯದಲ್ಲಿ ಭಿನ್ನಾಭಿಪ್ರಾಯ ಇತ್ತು. ಅಂಬೇಡ್ಕರ್ ಎಲ್ಲರಿಗೂ ತಮ್ಮ ನಾಯಕನನ್ನು ಚುನಾಯಿಸುವ ಹಕ್ಕು ದೊರೆಯಲಿ ಎಂದು ವಾದಿಸಿದರೆ ಅಶಿಕ್ಷಿತ ಜನರಿಂದ ಈ ಹಕ್ಕಿನ ಉಲ್ಲಂಘನೆ ಯಾಗುವುದು ಎಂಬುದು ಗಾಂಧಿಯವರ ವಾದವಾಗಿತ್ತು. ಕೊನೆಗೂ ಅಂಬೇಡ್ಕರ್ ಅವರ ವಾದಕ್ಕೆ ಮನ್ನಣೆ ದೊರೆತು ಭಾರತ ದೇಶದ ಪ್ರತಿಯೊಬ್ಬ ಪ್ರಜೆಗೂ ಸೂಕ್ತ ವಯಸ್ಸಿನಲ್ಲಿ ಮತದಾನ ಮಾಡುವ ಹಕ್ಕು ದೊರೆತಿತ್ತು. ಆದರೆ ಇಂದು ಮತದಾನ ಕುರಿತಾದ ಜನರ ಉಪೇಕ್ಷಿತ ಭಾವವನ್ನು ಕಂಡಾಗ ಗಾಂಧಿಯವರ ವಾದ ಸರಿಯಾಗಿತ್ತು ಎಂಬ ಭಾವ ಮನದಲ್ಲಿ ಕ್ಷಣ ಕಾಲ ಮೂಡಿ ಮರೆಯಾಗುತ್ತದೆ. 


ವಿದ್ಯಾವಂತರು, ಸುಶಿಕ್ಷಿತರು ಎಂದು ನಾವು ಕರೆಯುವ ಸೋ ಕಾಲ್ಡ್ ನಾಗರಿಕರು ಮತಗಟ್ಟೆಗೆ ಬಂದು ತಮ್ಮ ಹಕ್ಕನ್ನು ಚಲಾಯಿಸುವುದಿಲ್ಲ. ನಾವು ಹಾಕವ ಒಂದು ಮತದಿಂದ ದೇಶದ ಭವಿಷ್ಯವೇನು ಬದಲಾಗದು ಎಂಬ ಉಪೇಕ್ಷೆ, ಅಧಿಕಾರ ದೊರೆತ ನಂತರ ಬದಲಾಗುವ ರಾಜಕಾರಣಿಗಳ ಗೋಸುಂಬೆತನ ಚುನಾವಣಾ ಪ್ರಕ್ರಿಯೆಯ ಕುರಿತಾದ ತಪ್ಪು ಸಂದೇಶಗಳು, ಅಧಿಕಾರದ ಲಾಲಸೆಗಾಗಿ ಹಣ, ಹೆಂಡ ಮತ್ತು ಹೆಣ್ಣು ಮಕ್ಕಳಿಗೆ ಸೀರೆ ಬಟ್ಟೆಗಳ ಆಮಿಷ ಒಡ್ಡುವ ರಾಜಕಾರಣಿಗಳು, ಶತಾಯಗತಾಯ ಅಧಿಕಾರ ದೊರೆಯಲೇಬೇಕೆಂಬ ಹಪಹಪಿತನ ಅಸಹ್ಯ ಭಾವನೆಯನ್ನು ಉಂಟುಮಾಡುತ್ತದೆ. ತಿಳಿವಳಿಕೆ ಇಲ್ಲದ ಮತ್ತು ಮತದಾನದ ಮಹತ್ವ ಅರಿಯದ ಜನ ಒಂದು ದಿನದ ಮೋಜಿನ ನೋಟಿಗಾಗಿ ತಮ್ಮ ವೋಟನ್ನು ಮಾರಿಕೊಳ್ಳುತ್ತಾರೆ. ಇನ್ನು ಪ್ರಜ್ಞಾವಂತ ಜನ ಮತ ಹಾಕಲು ಸಿಗುವ ಒಂದು ರಜೆಯ ಜೊತೆ ಇನ್ನೊಂದೆರಡು ರಜೆಗಳನ್ನು ಕ್ರೋಢೀಕರಿಸಿ ಪ್ರವಾಸ ಮತ್ತು ರಜೆಯ ಮಜಾ ಅನುಭವಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಯಾರು ರಾಜ್ಯವಾಳಿದರೆ ತಮಗೆ ಬರುವ ಕಿರೀಟವಾದರೂ ಏನು ಎಂದು ಹೇಳುವ ಈ ಜನ ಮುಂದೆ ಲೋಕಭಿರಾಮವಾಗಿ ಮಾತನಾಡುವಾಗ ಈ ದೇಶದ ವ್ಯವಸ್ಥೆಯನ್ನು, ರಸ್ತೆಯ ದುರವಸ್ಥೆಗಳನ್ನು ಅನಾರೋಗ್ಯಕರ ರಾಜಕೀಯ ಬೆಳವಣಿಗೆಗಳನ್ನು ದೂಷಿಸುತ್ತಾರೆ. ಮಿಂಚಿಹೋದ ಕಾರ್ಯಕ್ಕೆ ಚಿಂತಿಸಿ ಫಲವೇನು ಎಂಬ ಮಾತಿನಂತೆ ಮತದಾನ ಮಾಡಬೇಕಾದ ಸಮಯದಲ್ಲಿ ಇಲ್ಲದ ನೆವಗಳನ್ನು ಹೂಡುವ ಜನ ಸರ್ಕಾರ ರಚನೆಯ ನಂತರ ಜನಪ್ರತಿನಿಧಿಗಳಿಂದ ನಿರೀಕ್ಷಿತ ಕಾರ್ಯ ಆಗದೇ ಇದ್ದಾಗ ಅವರನ್ನು ಟೀಕಿಸುತ್ತಾರೆ.


ಇಲ್ಲಿ ಪ್ರಜ್ಞಾವಂತ ನಾಗರಿಕರು ಗಮನಿಸಬೇಕಾದದ್ದು ಇಷ್ಟು. ಸರಿಯಾದ, ಸೂಕ್ತವೆನಿಸಿದ ವ್ಯಕ್ತಿಯನ್ನು ಆಯ್ಕೆ ಮಾಡದೇ ಇದ್ದಾಗ ಸೂಕ್ತವಲ್ಲದ ವ್ಯಕ್ತಿಗೆ ಅವಕಾಶ ದೊರೆತು ಅವಘಡಗಳಿಗೆ ಕಾರಣವಾಗುತ್ತದೆ. ಕಾರಣ ಮತ ಚಲಾಯಿಸುವ ನಮ್ಮ ಪರಮೋಚ್ಚ ಅಧಿಕಾರವನ್ನು ಚಲಾಯಿಸಿ ದೇಶದ ಭವ್ಯ ಭವಿಷ್ಯಕ್ಕೆ ತಮ್ಮ ಕಾಣಿಕೆಯನ್ನು ಸಲ್ಲಿಸಲಿ. ಮತ ಚಲಾಯಿಸುವ ಮೂಲಕ ತಮ್ಮ ಹಕ್ಕು ಮತ್ತು ಕರ್ತವ್ಯವನ್ನು ನಿರ್ವಹಿಸಲೇಬೇಕಾದ ಅನಿವಾರ್ಯತೆಯನ್ನು ಮನಗಾಣಿಸಲು ವಿವಿಧ ಸರಕಾರಿ ಕಚೇರಿಗಳ ನೌಕರರು ಸಂಘ ಸಂಸ್ಥೆಗಳು ಮತದಾನದ ಹಕ್ಕಿನ ಅರಿವನ್ನು ಮನವರಿಕೆ ಮಾಡಿಕೊಡಲು ಮೆರವಣಿಗೆಗಳನ್ನು ಜಾಥಾಗಳನ್ನು, ಮಕ್ಕಳ ಶಿಬಿರಗಳಲ್ಲಿ ಪಾಲಕರಿಗೆ ವಿಶೇಷವಾಗಿ ಹಮ್ಮಿಕೊಳ್ಳುತ್ತಿದ್ದಾರೆ.


ಜಗತ್ತಿನ ಅತಿ ದೊಡ್ಡ ಪ್ರಜಾತಂತ್ರ ರಾಷ್ಟ್ರವಾದ ಭಾರತದ ಈ ಚುನಾವಣಾ ಸಮರದಲ್ಲಿ ನಮ್ಮ ಹಕ್ಕನ್ನು ಚಲಾಯಿಸಿ ಸೂಕ್ತ ವ್ಯಕ್ತಿಯ ಆಯ್ಕೆ ಮಾಡುವುದು ನಮ್ಮದೇ ಹೊಣೆ, ಕರ್ತವ್ಯವೂ ಕೂಡ. ಭಾರತ ದೇಶವೆಂಬ ಬೃಹತ್ ಸಾಗರವನ್ನು ದಾಟುವ ಚುನಾವಣೆ ಎಂಬ ಮಹಾ ಹಡಗನ್ನು ನಡೆಸುವ ನಾವಿಕನ ಆಯ್ಕೆ ಕೇವಲ ನಮ್ಮದು ಮಾತ್ರ. ಸೂಕ್ತ ವ್ಯಕ್ತಿಯ ಆಯ್ಕೆ ಮಾಡಿ ಪ್ರಜಾತಂತ್ರವನ್ನು ಉಳಿಸೋಣ; ನಾಳಿನ ಭವಿಷ್ಯವನ್ನು ಉನ್ನತವಾಗಿ ಬರೆಯೋಣ.


- ವೀಣಾ ಹೇಮಂತ್ ಗೌಡ ಪಾಟೀಲ್

   ಮುಂಡರಗಿ, ಗದಗ್



ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter



Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top